Sunday, March 15, 2026

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ

ಪ್ರಕಾರ : ಕವನ ಸಂಕಲನ

ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು

ಬೆಲೆ : ₹120

ಪುಟಗಳು : 85 + 16 (ಒಟ್ಟು 100 ಪುಟಗಳು)

ಒಳಪುಟ / ಹಿಂಭಾಗದ ಪರಿಚಯ :

ನಮ್ಮ ಬತ್ತದ ತೊರೆ ಸ್ನೇಹ ಬಳಗವು ಕಾರಂತಜ್ಜನ ನೆರಳಿನಡಿಯಲ್ಲಿ ಕಳೆದ ಐದು ವರುಷಗಳಿಂದ  ಕೆಲಸ ಮಾಡುತ್ತಿದೆ. ಕಲೆ ಸಾಹಿತ್ಯ ವಿವಿಧ ಪ್ರಕಾರದ ರಚನೆಗಳು, ಮಕ್ಕಳ ಸಾಹಿತ್ಯ ಚುಟುಕು ಸಾಹಿತ್ಯ, ಕವನ ಕತೆ ಲೇಖನಗಳನ್ನು ಬರೆಯಲು ಉತ್ತೇಜನ ನೀಡುತ್ತ ಬಂದಿದ್ದೇವೆ.

‘ಹೊನ್ನತಂತಿ’ ಸ್ತ್ರೀ ಸಂವೇದನೆ, ಮನದ ನೋವು, ಆಶೆಗಳು ಮತ್ತು ಜೀವನದ ಸತ್ಯಗಳನ್ನು ಒಳಗೊಂಡ ಮಹಿಳಾ ಪ್ರಧಾನ ಕವನಗಳ ಸಂಕಲನವಾಗಿದೆ. ಈ ಕವನ ಸಂಕಲನಚು ಕಾರಂತರ ಆಶೀರ್ವಾದ ಪಡೆದು ಬರೆದಿರುವುದು. ಪ್ರಕಟಗೊಂಡಿರುವುದು. ಅವರಿಗೆ ನುಡಿನಮನ,  ದೇಶಪ್ರೇಮ, ಭಾಷೆಯ ಸೌಂದರ್ಯ, ಪ್ರಕೃತಿಯ ಮಧುರತೆ ಮತ್ತು ಮಣ್ಣಿನ ಘಮಘಮಿಸುವ ಸುವಾಸನೆ ಸ್ಪಷ್ಟವಾಗಿ ಮೂಡಿಬರುತ್ತದೆ. ಜೀವನದ ವಿವಿಧ ಮುಖಗಳನ್ನು ಮನದಾಳದಿಂದ ಹೇಳುವ ಈ ಕವನಗಳು ಓದುಗರ ಮನಸ್ಸಿಗೆ ಸ್ಪರ್ಶಿಸುವಂತಿವೆ.

ಧನ್ಯವಾದಗಳು.

ಸಿಂಧು🍁

9535693213

ಫೋನ್ ಪೇ ನಂಬರ್ ಬೇರೆಯಿದೆ. 

ಮಾಹಿತಿಗಾಗಿ ಸಂಪರ್ಕಿಸಿ





Info In English -

Book Title: Honnatanti

Genre: Poetry Collection

Editor: Mrs. Tulasi (Sindhu Bhargava), Bengaluru

Price: ₹120

Pages: 85 + 16 (Total 100 pages)

About the Book:

“Honnatanti” is a collection of powerful poems centered on women and their emotions. The poems reflect feminine sensitivity, inner strength, and the realities of life. Within these verses, one can feel the fragrance of the nation, the beauty of language, the charm of nature, and the essence of the soil.

These heartfelt poems portray different shades of life and are sure to touch the reader’s mind and soul. Readers are warmly invited to buy and enjoy this meaningful collection of poems.

Thursday, October 2, 2025

ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸ್ಪರ್ಧೆಗಳು ಪ್ರಕಟಣೆ

ಬತ್ತದ ತೊರೆ ಸ್ನೇಹ ಬಳಗ, ಬೆಂಗಳೂರು

ಕಾರಂತಜ್ಜನ ನೆರಳಿನಡಿಯಲ್ಲಿ

(ಕಲೆ ಹಾಗೂ ಸಾಹಿತ್ಯ ವೇದಿಕೆ) 


ನಮ್ಮ ಬಳಗದ ವತಿಯಿಂದ ಪ್ರಕಟಣೆ:

ನಮಸ್ತೆ ಕವಿಮಿತ್ರರೇ, ಇದೇ ಮುಂಬರುವ ಅಕ್ಟೋಬರ್ ೧೦ರಂದು ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ನಮ್ಮ ಬಳಗದಲ್ಲಿ ಅಕ್ಟೋಬರ್ ೦೧ ರಿಂದ ಅಕ್ಟೋಬರ್ ೧೦ ರ ತನಕ ವಿವಿಧ ಸ್ಪರ್ಧೆಗಳು ನಡೆಯಲಿವೆ.


ಅಕ್ಟೋಬರ್ ೦೧ -ಬುಧವಾರ - ಹನಿಗವನ ಸ್ಪರ್ಧೆ

ಅಕ್ಟೋಬರ್ ೦೩ - ಶುಕ್ರವಾರ - ಹಾಸ್ಯ ಲೇಖನ ಸ್ಪರ್ಧೆ

ಅಕ್ಟೋಬರ್ ೦೪ - ಶನಿವಾರ - ಚಿತ್ರಕಲೆ ವಿಭಾಗದಲ್ಲಿ 

ಕೋಟ ಶಿವರಾಮ ‌ಕಾರಂತರ ಭಾವಚಿತ್ರ ಅಥವಾ ಕಾದಂಬರಿಯ ಮುಖಪುಟ ಚಿತ್ರ ಬಿಡಿಸುವುದು

( ನಿಯಮಗಳು - ಕಿರಿಯರು

ತಮ್ಮ ಹೆಸರು ಊರು ತರಗತಿ ಶಾಲೆಯ ಹೆಸರು ನಮೂದಿಸಿರಿ.

ಹಿರಿಯರು 

ತಮ್ಮ  ಹೆಸರು ಊರಿನ ಹೆಸರು ದಿನಾಂಕವನ್ನು ತಪ್ಪದೆ ನಮೂದಿಸಬೇಕು. 

ಬಿಳಿ ಹಾಳೆಯಲ್ಲಿ ಚಿತ್ರ ಬಿಡಿಸಿ ದಿನಾಂಕವನ್ನು, ಕೆ. ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ  ಚಿತ್ರಕಲೆ ಸ್ಪರ್ಧೆ- ೨೦೨೫ ಎಂದು ಬರೆದಿರಬೇಕು.)

ಅಕ್ಟೋಬರ್ ೦೬ - ಕವನ ರಚನೆ

ಅಕ್ಟೋಬರ್ ೦೭ - ರಸಪ್ರಶ್ನೆ ಚಟುವಟಿಕೆ

ಅಕ್ಟೋಬರ್ ೦೮ - ಶಿಶುಗೀತೆ 

ಅಕ್ಟೋಬರ್ ೧೦- ಲೇಖನ ಸ್ಪರ್ಧೆ ನಡೆಯಲಿದೆ. 

ಕವಿಮಿತ್ರರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಿಕೆ.

🌳🌳🌳🌳🌳🌳🌳🌳🌳🌳🌳

ಬಳಗದ ಮುಖ್ಯಸ್ಥರು

ನಿರ್ವಾಹಕರು ಮತ್ತು ತೀರ್ಪುಗಾರರು



Friday, January 17, 2025

ನಾರು ಬೇರು ನೀರು ಆರೋಗ್ಯ ಮಾಹಿತಿ

 



ನಮ್ಮ ಆರೋಗ್ಯ ನಮಗೆ ಮುಖ್ಯವಾದುದು. ಜನನದಿಂದ ಮರಣದವರೆಗೆ ನಾವು ಎದುರಿಸುವ ಅನೇಕ‌‌ ಆರೋಗ್ಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ. ಮಕ್ಕಳು ಮಹಿಳೆಯರೆನ್ನದೇ ಪುರುಷರು ವೃದ್ಧರೆನ್ನದೇ ಎಲ್ಲರನ್ನೂ ಕಾಡುವ ಆರೋಗ್ಯ ಸಮಸ್ಯೆಗೆ ಪ್ರಮುಖ ಕಾರಣ ನಮ್ಮ ಆಹಾರ ಪದ್ದತಿ. ನಾವು ಬದುಕುವ ರೀತಿ.

ಅನಾದಿಕಾಲದಿಂದಲೂ ಅನುಸರಿಸಿಕೊಂಡು ಬಂದಂತಹ ಆಹಾರ ಪದ್ದತಿಯನ್ನು ನಾವೀಗ ದೂರ ತಳ್ಳುತ್ತಿದ್ದೇವೆ. ಅನೇಕ ಪ್ರಶ್ನೆಗಳ ಎತ್ತಿ ಅನುಮಾನ ವ್ಯಕ್ತ ಪಡಿಸುತ್ತಿದ್ದೇವೆ. ಪಾಶ್ಚಿಮಾತ್ಯ ಸಂಸ್ಕೃತಿ ಆಹಾರ ಪದ್ದತಿಯನ್ನು ಅನುಸರಿಸಲು ಹೋಗಿ ಅದಕ್ಕೆ ಮಾರುಹೋಗುತ್ತಿದ್ದೇವೆ. ಇದರಿಂದಲೇ ಕ್ಯಾನ್ಸರ್ ನಂತರ ಮಹಾಮಾರಿ ಎಲ್ಲರ ಮನೆ ಹೊಕ್ಕುತ್ತಿದೆ. ಎಂತಹ ದುಸ್ಥಿತಿಗೆ ನಾವು ತಲುಪುತ್ತಿದ್ದೇವೆ. ಹಿರಿಯರು ಮಾಡಿದ ನಾರು ಬೇರು ನೀರಿನ ಮಹತ್ವ ಅರಿತು ಬಳಸಬೇಕಾಗಿದೆ.

ನಾವು ಸೇವಿಸುವಾಹಾರದಲ್ಲಿ ನೀರಿನಂಶ ಅಧಿಕವಾಗಿರಬೇಕು. ಈ ಭೂಮಿಯಲ್ಲಿ ಮುಕ್ಕಾಲು ಭಾಗ ನೀರು ಕಾಲು ಭಾಗ ನೆಲವಿರುವುದು. ಅದರಂತೆ ನಮ್ಮ ದೇಹದಲ್ಲಿಯೂ ನೀರಿನ ಅಂಶ ಅಧಿಕವಾಗಿರುವಂತೆ ನೋಡಿಕೊಳ್ಳಬೇಕು. ರಾಸಾಯನಿಕವಲ್ಲದ ತಾಜಾ ಹಣ್ಣಿನ ಜ್ಯೂಸ್ ಕುಡಿಯುವುದು. ಬಿಸಿನೀರು ಅಥವಾ ತಣ್ಣೀರು ಕುಡಿಯುವುದು. ದ್ರವೀಯ ಅಂಶವಿರುವ ಸೊಪ್ಪು ತರಕಾರಿಗಳ ಸೇವನೆ ಅತಿ ಮುಖ್ಯ.
ಇಲ್ಲಿ ಹೆಚ್ಚು ನೀರಿನ ಅಂಶ ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳ ಪಟ್ಟಿಯಾಗಿದೆ:
---

ಹೆಚ್ಚು ನೀರಿನ ಅಂಶವಿರುವ ಹಣ್ಣುಗಳು:

1. ಕಲ್ಲಂಗಡಿ (92%)
2. ಸ್ಟ್ರಾಬೆರಿ (91%)
3. ಮಸ್ಕಮೆಲನ್ (ಕಂತಾಲೂಪ್) (90%)
4. ಪೀಚ್‌ಗಳು (89%)
5. ಕಿತ್ತಳೆ (88%)
6. ಅನಾನಸ್ (86%)
7. ಚಕೋಟೆ (ಗ್ರೇಪ್‌ಫ್ರೂಟ್) (88%)
8. ಸೇಬು (85%)
9. ಬ್ಲೂಬೆರಿ (84%)
10. ಅಲೂಬುಖಾರ (ಪ್ಲಮ್) (85%)
---
ಹೆಚ್ಚು ನೀರಿನ ಅಂಶವಿರುವ ತರಕಾರಿಗಳು:

1. ಸೌತೆಕಾಯಿ (96%)
2. ಸಲಾಡ್ ಎಲೆ (ಲೆಟ್ಯೂಸ್) (95%)
3. ಜೀಕಾಯಿ (ಜುಕಿನಿ) (94%)
4. ಮೂಲಂಗಿ (95%)
5. ಸೋಂಪಿನ ತಂದು (ಸೆಲರಿ) (95%)
6. ಟೊಮಾಟೋ (94%)
7. ಕಾಪ್ಸಿಕಂ (ಬೆಳ್ಳಣ ಮೆಣಸಿನಕಾಯಿ) (92%)
8. ಸೊಪ್ಪು (ಸ್ಪಿನಾಚ್) (91%)
9. ಹೂಕೋಸು (ಬ್ರೊಕೊಲಿ) (90%)
10. ಕೆರೆಯ ಗಜ್ಜರಿ (ಕ್ಯಾರಟ್) (88%)

ಇನ್ನು ನಾರಿನಾಂಶವಿರುವ ತರಕಾರಿಗಳು ಒಣಹಣ್ಣುಗಳ ಸೇವನೆ.
ನಾರಿನಾಂಶ ಹೆಚ್ಚುವರಿ ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳ ಪಟ್ಟಿಯನ್ನು ಕನ್ನಡದಲ್ಲಿ ನೀಡಲಾಗಿದೆ:

ನಾರಿನಾಂಶ ಹೆಚ್ಚಿರುವ ಹಣ್ಣುಗಳು:

1. ಸೇಬು
2. ಕಿತ್ತಳೆ
3. ಸೀತಾಫಲ
4. ಪೆರಲೆ (ಪಪಾಯ)
5. ಅನಾನಸ್
6. ಬಾಳೆಹಣ್ಣು
7. ಅಲೂಬುಖಾರ (ಪ್ಲಮ್)
8. ಸ್ಟ್ರಾಬೆರಿ
9. ಬ್ಲೂಬೆರಿ
10. ಕಲ್ಲಂಗಡಿ
---

ನಾರಿನಾಂಶ ಹೆಚ್ಚಿರುವ ತರಕಾರಿಗಳು:
1. ಸೊಪ್ಪು (ಸ್ಪಿನಾಚ್)
2. ಹಸಿರು ಬಟಾಣಿ
3. ಕೋಸು (ಕ್ಯಾಬೇಜ್)
4. ಬೀನ್ಸ್
5. ಮೂಲಂಗಿ
6. ಕ್ಯಾರಟ್
7. ಬೆಳ್ಳುಳ್ಳಿ
8. ಕೋಸುಕಡಲೆ (ಚಿಕ್‌ಪೀಸ್)
9. ಅವರೆಕಾಯಿ
10. ಹೀರೆಕಾಯಿ (ರೆಡಿಷ್)

ನಾರಿನಾಂಶವು ಪಚನಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಆರೋಗ್ಯಕರ ಜೀರ್ಣತಂತ್ರಕ್ಕಾಗಿ ಅತ್ಯಗತ್ಯವಾಗಿದೆ.
-----

ಮಣ್ಣಿನಡಿಯಲ್ಲಿ ಬೆಳೆಯುವ ಬೇರು ಅಂದರೆ ಕ್ಯಾರೇಟು ಬೀಟ್ ರೂಟು ಸಿಹಿಗೆಣಸು ಆಲೂಗಡ್ಡೆ ಕ್ಯಾಬೇಜ್ ಸೇವನೆ ಅತೀಮುಖ್ಯ.

ಬೇರು ತರಕಾರಿಗಳು (Root Vegetables):

1. ಮೂಲಂಗಿ (Radish)
2. ಆಲೂಗಡ್ಡೆ (Potato)
3. ಗೆಣಸು ಗಡ್ಡೆ (Sweet Potato)
4. ಕ್ಯಾರಟ್ (Carrot)
5. ಮೂಲ ಗಜ್ಜರಿ (Parsnip)
6. ಬೆಳ್ಳುಳ್ಳಿ (Garlic)
7. ಹಸಿರು ಈರುಳ್ಳಿ (Spring Onion)
8. ಸುವರ್ಣಗಡ್ಡೆ
9. ಮೂಲ ಎಳುಬು (Turnip)
10. ಹೀರೆಕಾಯಿ ಬೇರು (Beetroot)
ಬೇರು ಹಣ್ಣುಗಳು (Root Fruits):
ಬೇರು ಸುತ್ತುವರೆದೇ ಹೆಚ್ಚಾಗಿ ಬೆಳೆಯುವ ಹಣ್ಣುಗಳ ಸಂಖ್ಯಾ ಅಲ್ಪವಾಗಿರುತ್ತದೆ. ಹೀಗೆ, ಜಿಡ್ಡು ಬೇರುಗಳ ಮೂಲಕ ಬೆಳೆಯುವ ಹಣ್ಣುಗಳ ಉದಾಹರಣೆ:
1. ಮಜ್ಜಿಗೆಹಣ್ಣು (Tamarind fruit grows on roots occasionally).
2. ಸುತ್ತುಹಣ್ಣು (Figs occasionally propagate through underground roots).
---
ಬೇರು ತರಕಾರಿಗಳು ಪೋಷಕಾಂಶಗಳ ದೀರ್ಘಕಾಲೀಕ ಶ್ರೋತವಾಗಿದ್ದು, ವಿವಿಧ ಖನಿಜಗಳು ಮತ್ತು ನಾರಿನಾಂಶದ ಉತ್ತಮ ಮೂಲ.

ಸಿಂಧು ಭಾರ್ಗವ ಬೆಂಗಳೂರು.
ಆರೋಗ್ಯಸಿಂಧು


Friday, January 10, 2025

ಭಕ್ತಿಗೀತೆ ವೈಕುಂಠ ಏಕಾದಶಿಯ ಅಂಗವಾಗಿ



Google image source

ಯಾವ ಚಿಂತೆಯು ನಿನಗೆ ಶೇಷಶಯನನೇ


ಯಾವ ಚಿಂತೆಯು ನಿನಗೆ ಶೇಷಶಯನನೇ

ಮಂದಸ್ಮಿತದಲ್ಲಿಯೇ ಲೋಕ ನಡೆಸುವೆ ದೇವ //ಯಾವ//


ನಾರಾಯಣ ನಿನ್ನ ನಾಮದಲ್ಲಿಹ ಮಹಿಮೆ

ಪೇಳಿದರೆ ಸಾಲದು ಪಾಡಿ ಪೊಗಳುವೆ ದೇವ

ಸಿಂಧುಸುತೆ ಪತಿ ಎನ್ನ ಮುಂದೆಯೂ ಕಾಯುತಿರು

ಮಂದವಾಗಿಹ ಮತಿಯ ಚಂದದಿ ಹೊಳವಂತೆ ಮಾಡು


ಕಷ್ಟಗಳ ಕೊಡಬೇಡ ಎನಲಾರೆ ನಾ

ನಷ್ಟಗಳ ಸಹಿಸಿ ಹೆಜ್ಜೆಯಿಡುತಿರುವೆನು

ಕಿಚ್ಚನು ಕೊಡು ದೇವ ಹೊಟ್ಟೆಕಿಚ್ಚಿನ ಜನರೆದುರು

ಮೊಟ್ಟೆಯೊಡೆದ ಮರಿಯಂತೆ ಜಗವ ಕಾಣುತಿರುವೆ..


ಕೆಟ್ಟದು ನಡೆದಿದೆ ತಪ್ಪನು ಕ್ಷಮಿಸು

ಕೊಟ್ಟ ಮಾತನು ಉಳಿಸಿಕೊಳ್ಳದೆ ಮರುಗಿದೆನು

ತಪ್ಪನು ತಿದ್ದಿ ನಡೆಯಲವಕಾಶ ನೀಡು

ಒಪ್ಪತ್ತು ಉಪವಾಸ ಮಾಡಿ ಜಪಿಸುವೆ ದೇವ..


ಸಿಂಧು ಭಾರ್ಗವ, ಬೆಂಗಳೂರು

ಪರೀಕ್ಷೆ ಭಯ ಬೇಡ ಕಿರುಲೇಖನ

ಬತ್ತದ ತೊರೆ ಸ್ನೇಹ ಬಳಗ, ಬೆಂಗಳೂರು

ಕಾರಂತಜ್ಜನ ನೆರಳಿನಡಿಯಲ್ಲಿ..

(ಕಲೆ ಹಾಗೂ ಸಾಹಿತ್ಯ ವೇದಿಕೆ)


Google image source


ಶೀರ್ಷಿಕೆ : ಆತ್ಮವಿಶ್ವಾಸ ಬೆಳೆಸಿರಿ


ಪರೀಕ್ಷೆಯ ಭಯ ಎಂದರೆ ಪರೀಕ್ಷೆಯ ಆತಂಕ ಅಥವ  ಪರೀಕ್ಷಾ ಆತಂಕ ಎಂದು ಹೇಳಬಹುದು. ಇದು ಪರೀಕ್ಷೆಗಳು ಸಮೀಪಿಸಿದಾಗ ವಿದ್ಯಾರ್ಥಿಗಳನ್ನು  ಮತ್ತು ಮಕ್ಕಳ ಪೋಷಕರನ್ನು   ಕಾಡುವ  ದೊಡ್ಡ ಸಮಸ್ಯೆಯಾಗಿದೆ.  ಈ  ಸಮಸ್ಯೆಯನ್ನು  ಸಾಧಾರಣ  ಶೇಖಡಾ ಎಪ್ಪತ್ತರಷ್ಟು  ವಿದ್ಯಾರ್ಥಿಗಳು ಹೊಂದಿದ್ದಾರೆ ಎಂಬುದು ಅಕ್ಷರಶ ಸತ್ಯವಾಗಿದೆ.


ಪರೀಕ್ಷೆಯ ಭಯಕ್ಕೆ ಕಾರಣ 

ಕ್ರಮಬದ್ಧವಾದ ಕಲಿಯುವಿಕೆ ಇಲ್ಲದಿರುವುದು,ಶಿಕ್ಷಕರು ಪಾಠವನ್ನು ಕಲಿಸುವಾಗ ಗಮನ ಕೊಡದೇ ಬೇರೆ ವಿಚಾರದಲ್ಲಿ ಮಗ್ನರಾಗುವುದು,ಅಂದಿನ ಪಾಠವನ್ನು  ಅಂದೇ ಕಲಿಯುವ ಪರಿಪಾಠ  ಇಲ್ಲದಿರುವುದು, ಪರೀಕ್ಷೆ ಬಂದಾಗ ನೋಡೋಣ ಎಂಬ ಹುಂಬತನ,ಪಾಠವನ್ನು ಓದುವ, ಅದರ ಮುಖ್ಯಾಂಶಗಳನ್ನು ಬರೆಯುವ ಮತ್ತು ಅರ್ಥೈಸಿಕೊಳ್ಳುವ ಅಭ್ಯಾಸ  ಇಲ್ಲದಿರುವುದು.ಏಕಾಗ್ರತೆಯ ಕೊರತೆ,ಓದುವ ಬದಲು ಇತರ ಚಟುವಟಿಕೆಯಲ್ಲಿ  ಲೀನವಾಗುವುದು, ಮೊಬೈಲ್ ಬಳಕೆ, ದೂರದರ್ಶನದ  ವೀಕ್ಷಣೆ, ವೀಡಿಯೋ ಆಟಗಳನ್ನು ಆಡುವ ಮೋಜು, ಆಟೋಟಗಳು, ಕ್ರಿಕೇಟು  ಎಂದು ಸಮಯವನ್ನು  ಕಳೆಯುವುದು, ಹೀಗೆ ವಿದ್ಯಾರ್ಥಿಗಳು ಓದುವುದನ್ನು ನಿರ್ಲಕ್ಷಿಸುತ್ತಾರೆ. ಪರೀಕ್ಷೆಗಳು ಸಮೀಪಿಸಿದಾಗ  ಆತಂಕ, ಕಳವಳ ಎದುರಾಗಿ  ನಿದ್ರೆ ವಿಶ್ರಾಂತಿಯನ್ನು  ಮರೆತು ಒಂದೇ ಸಮನೆ  ಓದಲು ಪ್ರಾರಂಭಿಸುತ್ತಾರೆ. ಇದರಿಂದ  ದೈಹಿಕ,  ಮಾನಸಿಕ ಒತ್ತಡ,  ಯಾವ ವಿಷಯಗಳನ್ನು  ಕಲಿಯಬೇಕು ಎಂಬ  ಗೊಂದಲದಲ್ಲಿ ಒದಿದ ಪಾಠಗಳು ನೆನಪಿನಲ್ಲಿ ಉಳಿಯುವುದಿಲ್ಲ. ಅದಕ್ಕೆ ಸರಿಯಾಗಿ ಪೋಷಕರು  ಸಹ ಹೆಚ್ಚಿನ ಅಂಕ ಗಳಿಸಬೇಕೆಂದು ಒತ್ತಡ  ಹೇರುತ್ತಾರೆ. ಬುದ್ದಿವಂತ  ಮಕ್ಕಳಿಗೆ  ಹೋಲಿಸಿ  ಮಕ್ಕಳಿಗೆ  ಇನ್ನಷ್ಟು ಮಾನಸಿಕವಾಗಿ  ಬಳಲುವಂತೆ  ಮಾಡುತ್ತಾರೆ. ಆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ  ಆತಂಕ ಉಂಟಾಗಿ ಪರೀಕ್ಷೆಯ ಕೊಠಡಿಯಲ್ಲಿ ಎದೆಬಡಿತ ಹೆಚ್ಚಳ,  ಪ್ರಶ್ನೆ ಪತ್ರಿಕೆ ಕಂಡೊಡನೆ ಬೆವರುವಿಕೆ, ತಲೆ ತಿರುಗುವಿಕೆ,  ಕಲಿತ ವಿಷಯಗಳು ಮರೆತು ಹೋಗಿ ನೆನಪು  ಬಾರದೇ ಕಳವಳ,  ಏಕಾಗ್ರತೆಯ ಕೊರತೆಯಿಂದ  ಮಕ್ಕಳು ಪರೀಕ್ಷೆಯನ್ನು  ಅದೈರ್ಯದಿಂದ  ಎದುರಿಸುತ್ತಾರೆ. 


ಪರಿಹಾರಗಳು

ತರಗತಿಯ ಪ್ರಾರಂಭದಿಂದಲೇ ನಿರಂತರವಾದ ಕಲಿಯುವಿಕೆ,ಶಿ ಕ್ಷಕರು ಪಾಠ ಮಾಡುವ ಸಮಯದಲ್ಲಿ ಏಕಾಗ್ರತೆ,ವಿಷಯಗಳನ್ನು ಬಾಯಿಪಾಠ ಮಾಡದೇ ವಿಷಯಗಳನ್ನು ಅರ್ಥೈಸಿಕೊಂಡು  ಮನದಟ್ಟು ಮಾಡಿಕೊಳ್ಳುವ ಕ್ರಮಬದ್ಧವಾದ  ಕಲಿಯುವಿಕೆ,ದಿನವೂ ಪಾಠಗಳನ್ನು ಓದುವ ಬರೆಯುವ ಹವ್ಯಾಸ,ಕಟ್ಟುನಿಟ್ಟಿನ ವೇಳಾಪಟ್ಟಿಯ ಪ್ರಕಾರ  ಓದುವಿಕೆ, ನಿಗದಿತ ಸಮಯದಲ್ಲಿ ಊಟ, ನಿದ್ರೆ,  ಮತ್ತು ಮೊಬೈಲ್, ದೂರದರ್ಶನದ ವೀಕ್ಷಣೆ ಕಡಿತಮಾಡುವುದು,ಅಕ್ಷರಗಳನ್ನು ಆದಷ್ಟು ಸ್ಪುಟವಾಗಿ ಬರೆಯುವುದು,ಪ್ರಾಣಾಯಾಮದಿಂದ  ಏಕಾಗ್ರತೆಯನ್ನು  ಹೆಚ್ಚಿಸುವುದು, ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮತ್ತು ಮಕ್ಕಳಿಗೆ  ಓದಲು  ಮನೆಯಲ್ಲಿ ಒಳ್ಳೆಯ ವಾತಾವರಣ ನಿರ್ಮಿಸುವುದು,ಪರೀಕ್ಷೆಗೆ ತೆರಳುವಾಗ ದೇವರ, ಹಿರಿಯರ  ಆಶೀರ್ವಾದವನ್ನು  ಪಡೆದು ಆತ್ಮ ವಿಶ್ವಾಸದಿಂದ  ಶಾಂತಚಿತ್ತರಾಗಿ  ಪರೀಕ್ಷೆಗಳನ್ನು ಎದುರಿಸುವುದರಿಂದ  ಪರೀಕ್ಷಾ ಆತಂಕವನ್ನು  ತಡೆಗಟ್ಟಬಹುದು. 


ಬರೆದವರು 

ಸುರೇಖ. ಶೇಟ್, ಬೆಂಗಳೂರು

Monday, October 16, 2023

Drawing art about Kota shivarama karanth

 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ನಮ್ಮ ಬತ್ತದ ತೊರೆ ಸ್ನೇಹ ಬಳಗದಲ್ಲಿ ನಡೆಸಿದ ಚಿತ್ರಕಲಾ ಸ್ಪರ್ಧೆ...

ಭಾಗವಹಿಸಿದ ಚಿತ್ರಗಳು... ಹಿರಿಯರ ಹಾಗೂ ಕಿರಿಯರ ವಿಭಾಗದಲ್ಲಿ ವಿಜೇತರ ಆಯ್ಕೆ ಮಾಡಲಾಯಿತು. ವಿಜೇತರಿಗೆ ಬಹುಮಾನವನ್ನು ನೀಡಲಾಯಿತು..

 ಭಾಗವಹಿಸಿದ ಪ್ರತಿಯೊಬ್ಬರಿಗೂ ಇ-ಪ್ರಮಾಣಪತ್ರವನ್ನು ನೀಡಿ ಪ್ರೋತ್ಸಾಹಿಸಲಾಯಿತು. 

ತುಳಸಿ ( ಸಿಂಧು ಭಾರ್ಗವ ಬೆಂಗಳೂರು)

ಸಂಸ್ಥಾಪಕರು. 

        



















Thursday, March 16, 2023

ಅರಸಿ ಬಂದವರನ್ನು ಅಳಿಸಿ ಕಳುಹಿಸಬಾರದು ಗಾದೆಮಾತು

 ಬತ್ತದ ತೊರೆ... ಸ್ಪರ್ಧೆಗಾಗಿ

ಅರಸಿ ಬಂದವರನ್ನು ಅಳಿಸಿ ಕಳುಹಿಸಬಾರದು



Google images.



ಅದೊಂದು ಊರಿನಲ್ಲಿ ಶಂಕರ ಎಂಬ ಧನಿಕನಿದ್ದ. ಅವನಿಗೆ ದೇವರ ಮೇಲೆ ಅಪಾರ ನಂಬಿಕೆ ಮತ್ತು ಭಕ್ತಿ ಇತ್ತು. ಆದರೆ ಮನುಷ್ಯರನ್ನು ಅಷ್ಟು ಸುಲಭವಾಗಿ ನಂಬುತ್ತಿರಲಿಲ್ಲ. ಶ್ರೀಮಂತಿಕೆಯ ಅಹಂಕಾರವು ಇತ್ತು. ಬಡವರನ್ನು ತಾತ್ಸಾರ ಮಾಡುತಿದ್ದ. ಸಹಾಯ ಬೇಡಲು ಬಂದವರನ್ನು ಅನೇಕ ಪ್ರಶ್ನೆಗಳನ್ನು ಹಾಕಿ ಅವಮಾನಿಸಿ ಮತ್ತೆ ಸ್ವಲ್ಪ ಸಹಾಯ ನೀಡಿ ಕಳುಹಿಸುತ್ತಿದ್ದ. ಹೀಗಿರಲು ಒಂದು ದಿನ ಶಂಕರನ ಕಾಲಿಗೊಂದು ಹುಣ್ಣ ಯಿತು ಹುಣ್ಣು ದೊಡ್ಡದಾಗಿ ದೊಡ್ಡ ಗಾಯವೆ ಆಯಿತು ಅದೆಷ್ಟು ಮದ್ದು ಮಾಡಿದರೂ ಗುಣವಾಗಲಿಲ್ಲ. ಅರು ತಿಂಗಳು ಕಳೆಯಿತು ಗಾಯ ದೊಡ್ಡದಾಗುತ್ತಾ ಹೋಯಿತು ಹೀಗಿರಲು ದೇವರಲ್ಲಿ ಭಾರೀ ದೊಡ್ಡ ಹರಕೆ ಇಟ್ಟು ಬೇಡಿಕೊಂಡ. ದೇವರಿಗೂ ಆತನ ಭಕ್ತಿಯನ್ನು ಕಡೆಗಣಿಸಲಾಗಲಿಲ್ಲ. ದೇವರು ಒಬ್ಬ ಪಕೀರನನ್ನು ಆತನ ಮನೆಗೆ ಕಳುಹಿಸಿದ. ಮನೆಯ ಆಳು ಪಕೀರ ಬಂದ ವಿಷಯ ಧನಿಕನಿಗೆ ತಿಳಿಸಿದ. ಹೊರಗೆ ಬಂದ ಶಂಕರನ ಕಾಲು ಕಂಡ ಪಕೀರ ತಾನು ಪಂಡಿತ ನಿನ್ನ ಗಾಯ ಒಂದು ವಾರದೊಳಗೆ ಗುಣ ಪಡಿಸುವೆ ನನಗೆ ಒಂದು ವಾರ ಇಲ್ಲಿರಲು ಆವಕಾಶ ಕೊಡುವಂತೆ ಕೇಳಿಕೊಂಡ. ಶಂಕರ ಆತನ ಮಾತನ್ನು ನಂಬಲಿಲ್ಲ ದೊಡ್ಡ ದೊಡ್ಡ ವೈದ್ಯರಿಂದ ಗುಣಪಡಿಸಲಾಗದ ಗಾಯ ಈತ ಒಂದು ವಾರದೊಳಗೆ ಹೇಗೆ ಗುಣಪಡಿಸುವ ... ಹೋಗು ಹೋಗು ನಿನ್ನಂಥವರನ್ನು ತುಂಬಾ ನೋಡಿದ್ದೇನೆ.. ಒಂದು ವಾರ ಇಲ್ಲಿ ನಿಂತು ನನ್ನ ಸಂಪತ್ತು ಲೂಟಿ ಮಾಡುವ ಯೋಚನೆಯೇ. ಕಳ್ಳ ಎಂದು ಅವಮಾನಿಸಿ ಕಳುಹಿಸಿದ. 

ದಿನಕಳೆದಂತೆ ಗಾಯ ಉಲ್ಬಣಗೊಂಡಿತು ಯಾವ ಮದ್ದು ತಾಗಲಿಲ್ಲ ಈಗ ಶಂಕರ ಕೊರಗಲಾರಂಬಿಸಿದ ಅಹಂಕಾರ ಸ್ವಲ್ಪ ಸ್ವಲ್ಪವೇ ಇಳಿಯಿತು. ಬಡವರ ಬಗ್ಗೆ ಪ್ರೀತಿ ತೊರಲಾರಂಬಿಸಿದ . ಸಂಪತ್ತು ದಾನ ಮಾಡಲು ಶುರು ಮಾಡಿದ. ಒಂದು ದಿನ ಕನಸಿನಲ್ಲಿ ಪಕೀರನೊಬ್ಬ ತನ್ನ ಗಾಯಕ್ಕೆ ಮದ್ದು ಹಚ್ಚುತಿದ್ದಂತೆ ಹಾಗೂ ಒಂದು ವಾರದಲ್ಲಿ ಗಾಯ ಗುಣವಾದಂತೆ ಕನಸು ಕಂಡ . ಕೆಲವು ತಿಂಗಳ ಹಿಂದೆ ತಾನು ಅವಮಾನಿಸಿ ಕಳುಹಿಸಿದ ಪಕೀರನೇ ಅವನು ಎಂದು ಎದ್ದು ಕುಳಿತ ಅ ದಿನ ಆತನನ್ನು ಅವಮಾನಿಸಿ ತಪ್ಪು ಮಾಡಿದೆನೆಂದು ದುಃಖ ಪಟ್ಟ. ಮರುದಿನ ಬೆಳ್ಳಿಗೆ ತನ್ನ ಆಳುಗಳನ್ನು ಕಳುಹಿಸಿ ಪಕೀರ ನನ್ನು ಹುಡುಕಿಸಿದ ಆದರೆ ಪಕೀರ ಎಲ್ಲೂ ಸಿಗಲಿಲ್ಲ. ದೇವರಲ್ಲಿ ತನ್ನ ತಪ್ಪಿನ ಬಗ್ಗೆ ಕ್ಷಮೆ ಕೋರಿ ಬೇಡಿಕೊಂಡ. ಮತೊಂದ್ದು ವಾರದಲ್ಲಿ ಊರ ಹೊರಗಿನ ದೇವಸ್ಥಾನದ ಮರದಡಿಯಲಿ ಪಕೀರನಿರುವ ವಿಷಯ ಶಂಕರನಿಗೆ ತಿಳಿಯಿತು. ಕೂಡಲೇ ಆತನನ್ನು ತನ್ನಲ್ಲಿಗೆ ಕರೆ ತರುವಂತೆ ಆಳುಗಳನ್ನು ಕಳುಹಿಸಿದ. ಆದರೆ ಪಕೀರ ಬರಲು ಒಪ್ಪಲಿಲ್ಲ. ಬಳಿಕ ಶಂಕರನೆ ಆತನ ಬಳಿಗೆ ಹೋಗಿ ತನ್ನ ತಪ್ಪಿನ ಬಗ್ಗೆ ಕ್ಷಮೆ ಯಾಚಿಸಿದ. ಈಗ ಪಕೀರನಿಗೆ ಆತನ ಮೇಲೆ ಕರುಣೆ ಬಂದು ಆತನೊಂದಿಗೆ ಬರಲು ಒಪ್ಪಿಗೆ ಸೂಚಿಸಿ ಆತನ ಮನೆಯಲ್ಲಿ ಉಳಿದು ಒಂದು ವಾರ ಮದ್ದು ಹಚ್ಚಿ ಗಾಯ ಗುಣಪಡಿಸಿದ. ಶಂಕರನಿಗೆ ಬಹಳ ಸಂತೋಷವಾಯಿತು. ಸಕಲ ಮರ್ಯಾದೆಯೊಂದಿಗೆ ಪಕೀರನನ್ನು ಕಳುಹಿಸಿದ  ಅಂದಿನಿಂದ ಯಾರು ಅರಸಿ ಬಂದರೂ ಅವನು ಅವಮಾನಿಸದೆ ಸತ್ಕರಿಸಿ ಕಳುಹಿಸುತ್ತಿದ್ದ.


ಶೋಭಾ ದಿನೇಶ್ ಉದ್ಯಾವರ


2) 

ಬತ್ತದ ತೊರೆ ಸ್ನೇಹ ಬಳಗ ಮಕ್ಕಳ ಸಾಹಿತ್ಯ

ಶೀರ್ಷಿಕೆ- ಕೆಟ್ಟ ಮೇಲೆ ಬುದ್ಧಿ ಬಂತು


ಮಕ್ಕಳೇ ಕೇಳಿ ನಮ್ಮ ಭಾರತೀಯ ಸಂಸ್ಕೃತಿ ಬಹಳ ಅರ್ಥಪೂರ್ಣವಾದದ್ದು. ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸುವುದು ನಮ್ಮ ಕರ್ತವ್ಯವು. ಅವರ ತೃಪ್ತಿಯೇ ನಮ್ಮ ಏಳಿಗೆಗೆ ಕಾರಣವು. ನಿಮಗೆ ಒಂದು ಕಥೆಯ ಮೂಲಕ ಮೇಲಿನ ಗಾದೆಯ ಮಾತನ್ನು ತಿಳಿಸುತ್ತೇನೆ.

ಅನಿಲ ಮತ್ತು ರವಿ  ಬಾಲ್ಯಸ್ನೇಹಿತರಾಗಿದ್ದರು .ಇಬ್ಬರು ಒಟ್ಟಿಗೆ ಇರುತ್ತಿದ್ದರು .ಒಂದೇ ಶಾಲೆ ,ಮುಂದೆ ಒಂದೇ ಕಾಲೇಜಿನಲ್ಲಿ ಓದಿದ್ದರು. ಒಂದೇ ಬೀದಿಯಲ್ಲಿ ಅವರ ಮನೆ ಸಹ ಇದ್ದಿದ್ದರಿಂದ ಇಬ್ಬರ ಸ್ನೇಹವೂ ಭದ್ರವಾಗಿತ್ತು .ಕೆಲಸವೂ ಸಹ ಒಂದೇ ಕಂಪನಿಯಲ್ಲಿ ಸಿಕ್ಕಿತು .ಇದರಿಂದ ಒಬ್ಬರಿಗೊಬ್ಬರು ಮತ್ತಷ್ಟು ಹತ್ತಿರವಾಗಿದ್ದರು.

ಹೀಗೆ ಕಾಲ ಉರುಳುತ್ತಿತ್ತು ಇಬ್ಬರಿಗೂ ಮದುವೆಯಾಗಿ ಮಕ್ಕಳು ಸಹ ಆಗಿದ್ದರು. ಆದರೂ ಅವರ ಸ್ನೇಹಕ್ಕೆ ಯಾವ ಧಕ್ಕೆ ಬಂದಿರಲಿಲ್ಲ .ಅನಿಲನ ಹೆಂಡತಿ ಸ್ವಲ್ಪ ಗರ್ವಿಷ್ಠೆ ಆಗಿದ್ದಳು. ಏಕೆಂದರೆ ಶ್ರೀಮಂತ ಮನೆತನದಿಂದ ಬಂದವಳಾಗಿದ್ದಳು. ರವಿಯ ಹೆಂಡತಿ ಒಳ್ಳೆಯ ಸ್ವಭಾವದವಳು.ಅವಳು ಯಾವ ತಂಟೆಗೆ ಹೋಗದೆ ತನ್ನ ಪಾಡಿಗೆ ತಾನು ಇರುತ್ತಿದ್ದಳು .ಒಂದು ದಿನ ಒಂದುಕಾರ್ಯಕ್ರಮಕ್ಕೆ ಅನಿಲ ಅನಿಲನ ಹೆಂಡತಿ ಮತ್ತು ರವಿ ರವಿ ಹೆಂಡತಿ ಕೂಡಿ ಹೋಗಬೇಕಾದ ಪ್ರಸಂಗ ಬಂದಿತು .ಒಟ್ಟಿಗೆ ಹೋಗುವಾಗ ಅನಿಲನ ಹೆಂಡತಿ ತನ್ನ ಶ್ರೀಮಂತಿಕೆಯನ್ನು ಪ್ರದರ್ಶನ ಮಾಡುತ್ತಿದ್ದಳು. ರವಿಯ ಹೆಂಡತಿಗೆ ಸ್ವಲ್ಪ ಬೇಸರವಾಗಿದ್ದರೂ ನಗು ನಗುತ್ತಲೇ ಇರುತ್ತಿದ್ದಳು.

ಅನಿಲಗಾದರೆ ಮಾವನ ಸಹಾಯದಿಂದ ಬಹಳಷ್ಟು ಹಣ ದೊರೆಯುತ್ತಿತ್ತು. ಹೀಗಾಗಿ ಆತ ದೊಡ್ಡದೊಂದು ಮನೆಯನ್ನು ಕಟ್ಟಿದ್ದನ್ನು. ರವಿಯ ತನ್ನ ಸಂಬಳದಲ್ಲಿ ಮಕ್ಕಳನ್ನು ಸಾಕುವುದೇಸರಿ ಹೋಗುತ್ತಿತ್ತು. ಈಗ ಇನ್ನೊಂದು ಸಣ್ಣ ಕೆಲಸಕ್ಕೆ ಸೇರಿಕೊಂಡಿದ್ದನು .ಈಗಲಾದರೂ ಮನೆಯನ್ನು ಕಟ್ಟುವ ಎಂಬ ಯೋಚನೆಯನ್ನು ಗಂಡ ಹೆಂಡತಿಯರು ಮಾಡಿದ್ದರು. ಸ್ವಲ್ಪ ಮಟ್ಟಿಗೆ ಹಣವು ಕಡಿಮೆಯಾಗಿತ್ತು .ಅನಿಲ ನನ್ನು ಕೇಳಿದಾಗ ಅವನು ಕೊಡಲು ಒಪ್ಪಿದನು. ತಿಂಗಳಿಗೆ ಸ್ವಲ್ಪಸ್ವಲ್ಪ ಕೊಟ್ಟು ತೀರಿಸುವೆ ಎಂದನು. ಅದಕ್ಕೆನು ಸಂಜೆ ಮನೆ ಹತ್ತಿರ ಬಾ ಹಣವನ್ನು ಕೊಡುವೆನು ಎಂದನು. ಈ ವಿಷಯ ಅನಿಲನ ಹೆಂಡತಿಗೂ ತಿಳಿದಿತ್ತು. ಸಂಜೆ ರವಿ ಮನೆಗೆ ಬಂದಾಗ ಅನಿಲನಹೆಂಡತಿ ಅವನನ್ನು ಸರಿಯಾಗಿ ಮಾತನಾಡಿಸದೆ ನೋಡಿ ನೋಡದ ಹಾಗೆ ಒಳಗೆ ಹೊರಟು ಹೋದಳು. ಇದರಿಂದ ರವಿಯ ಮನಸ್ಸಿಗೆ ಬೇಸರವಾದರೂ ತನ್ನ ಕಷ್ಟದ ಸಮಯದಲ್ಲಿ ಸ್ನೇಹಿತನ ಹಣ ಬೇಕಲ್ಲವೇ ಎಂದು ಹಣವನ್ನು ಪಡೆದೆ ಮನೆಗೆ ಹೋದನು. ಇಷ್ಟರಲ್ಲೇ ಮನೆ ಪೂರ್ಣವಾಯಿತು. ರವಿಯ ಮಕ್ಕಳು ಚೆನ್ನಾಗಿ ಓದಿ ಮುಂದೆ ಒಳ್ಳೆಯ ಕೆಲಸಕ್ಕೆ ಸೇರಿ ತಂದೆ ಮಾಡಿದ ಸಾಲವನ್ನು ತೀರಿಸಿದರು. ಶ್ರೀಮಂತಿಕೆಯ ಮದದಲ್ಲಿ ಅನಿಲನ ಮಕ್ಕಳು ಓದದೆ ಇದ್ದಿದ್ದರಿಂದ ಮನೆಯನ್ನು ಮಾರುವ ಪರಿಸ್ಥಿತಿಯು ಬಂದಿತ್ತು . ತನ್ನ ಪರಿಸ್ಥಿತಿ ನೋಡಿ ಅನಿಲನ ಹೆಂಡತಿಗೆ ಬುದ್ಧಿ ಬಂದಾಯಿತು. ತಾನು ತನ್ನ ಗಂಡನ ಸ್ನೇಹಿತ ಮನೆಗೆ ಬಂದಾಗ ತಾನು ಆತನನ್ನು ಅವಮರ್ಯಾದೆ ಮಾಡಿದ್ದುದರಿಂದಲೇ ಈ ರೀತಿ ಆಯಿತು ಎಂದು ನನ್ನ ಮನದಲ್ಲಿ ಅಂದುಕೊಂಡಳು. ಮನೆಗೆ ಬಂದ ಅತಿಥಿಗಳ ಮನ ನೋಯಿಸಬಾರದು ನೊಂದ ಮನದಿಂದ ನಮಗೆ ಎಂದಿಗೂ ಒಳ್ಳೆಯದೋ ಆಗುವುದಿಲ್ಲ ಎಂದು ಈ ಕಥೆಯಿಂದ ತಿಳಿಯಬಹುದಲ್ಲವೇ ಮಕ್ಕಳೇ.

ಅರಸಿ ಬಂದವರನ್ನು ಅಳಿಸಿ ಕಳಿಸಬಾರದು ಎಂದೆಂದಿಗೂ ಎಂದು  ತಿಳಿದುಕೊಳ್ಳಬೇಕು ಮಕ್ಕಳೇ.

.

ಕೆ ಆರ್ ಉಷಾ ದಿದ್ದಿಗಿ (ಹೈದರಾಬಾದ್)

Saturday, March 4, 2023

ದ.ರಾ. ಬೇಂದ್ರೆ ಅವರ ಜನ್ಮದಿನದ ಅಂಗವಾಗಿ ನುಡಿನಮನ‌ ಕನ್ನಡ ಕವಿತೆಗಳು

 

ಗೂಗಲ್‌ ಇಮೇಜ್ಸ್ 

[31/01, 8:00 AM] Sujatha Ravish Madam: ೧೨೭ನೇ ಜನ್ಮದಿನಾಚರಣೆಯ ಸವಿಸ್ಮರಣೆ ಮತ್ತು ಭಕ್ತಿನಮನಗಳು

ಅವರ ಕವನಗಳ ಸಂಕಲನಗಳ ಶೀರ್ಷಿಕೆಗಳಿಂದ ಹೆಣೆದ ಕವನ 

ಬೇಂದ್ರೆ ನುಡಿ ನಮನ 

ಬೆಳಕು ಮೂಡಿಸಿದ  ಸುಂದರ ರಾಗರತಿಯಲಿ
ಪಾತರಗಿತ್ತಿ ಪಕ್ಕಾ ಹಾಡಿದ ನಾದಲೀಲೆ ಉಲಿ
ಶ್ರಾವಣ  ವೈಭವ ಯುಗಾದಿಗಳ ಸಂಭ್ರಮದಲಿ
ಹಕ್ಕಿ ಹಾರುತಿದೆ ನೋಡಿದಿರಾ ಎಂದ ಧಾರವಾಡದವಾ.

ಚಿತ್ತಿಯ ಮಳೆಯ ಸಂಜೆಯಲ್ಲಿ ಉಲ್ಲಾಸ
ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ 
ನೀ ಹೀಂಗ ನೋಡಬ್ಯಾಡಾ ನನ್ನ ಎಂಬ ಆ ಶೋಕ 
ಓಂ ಸಚ್ಚಿದಾನಂದ ಘೋಷವದು ಅಲೌಕಿಕ .

ಬಡವ ಬಡವಿ ಎನ್ನುತ್ತಾ ಕಾವ್ಯಲೋಕವಾಯ್ತು ಶ್ರೀಮಂತ 
ಅಮೂಲ್ಯ ರತ್ನಗಳು ನೀವನುವಾದಿಸಿದ ಮೇಘದೂತ
ಗಂಗಾವತರಣ ತಂದ ಆ ದೈವೀಕ ಅದ್ಭುತ 
ಅಚ್ಚರಿಯಲ್ಲ ನಾಕುತಂತಿಯಾದ್ದು ಜ್ಞಾನಪೀಠ ವಿಜೇತ  .
                              ಸುಜಾತಾ ರವೀಶ್
[31/01, 12:09 PM] Annapoorna Madam: *ಜನುಮದಿನದ ಶುಭಾಶಯಗಳು*

                  *ದ ರಾ ಬೇಂದ್ರೆ*
ಧರೆಗಿಳಿದ ಕನ್ನಡ ಕುವರನು
ಜ್ಞಾನಪೀಠ ಪುರಸ್ಕೃತ ಧಿರನು
ಪ್ರಶಸ್ತಿ-ಪುರಸ್ಕಾರಗಳ ಆಗರ
ಜ್ಞಾನಭಂಡಾರದ ಶಾಂತಿಸಾಗರನಿವನು//

ಮನದ ಭಾವದಿ ಕನ್ನಡ ಕವನ
ತುಡಿತಗಳಾ ಪದಗಳಾಗಿ ಅಲಂಕರಿಸಿ
ಕೀರ್ತಿ ಶಿಖರವಾ ನಗುತ ಚುಂಬಿಸಿ
ಕನ್ನಡ ಸಾಹಿತ್ಯ ಶ್ರೀಮಂತವಾಗಿಸಿದ//

ಕವನದಿ ಕನ್ನಡ ಪದಗಳಾ ಸ್ಪುರಿಸಿ
ಕರುನಾಡ ಸೌಂದರ್ಯ ಆಲ್ಹಾಧಿಸಿ
ಕವನಗಳಲಿ ಸಿರಿ ಮಾಧುರ್ಯ ಹರಿಸಿ
ಓದುಗರ ಮನದಿ ನಿತ್ಯ ಕನ್ನಡವಾ ಇರಿಸಿ/

ಕನ್ನಡ ನಾಡು-ನುಡಿಯ ಕೊಂಡಾಡಿ
ಭುವನೇಶ್ವರಿಯ ಕಳಸದಿ ಮೂಡಿ
ಸವಿಗನ್ನಡವಾ ನಿತ್ಯ ಆರಾಧನೆ ಮಾಡಿ
ರಸಋಸಿ ಕವಿಗಳೊಡನೆ ಒಡನಾಡಿ/

ಅಂಬಿಕಾತನಯನೆಂಬ ಕಾವ್ಯನಾಮ 
ಕನ್ನಡ ಅಕ್ಷರಗಳ ನಲಿಸಿದ ಸುಧಾಮ
ಎಲ್ಲ ಪ್ರಾಕಾರಗಳಲಿ ಕವನಗಳು ಅಪ್ರತಿಮ
ಸುಂದರ ಕವನಗಳು ಹೃದಯಂಗಮ//

ಅಕ್ಷರ ಅಕ್ಷರಗಳಲ್ಲಿ ಕನ್ನಡ ಅಭಿಮಾನ
ಪದ ಪದಗಳಲಿ ಕರುನಾಡ ವರ್ಣನ
ಕವನಗಳಲಿ ಕನ್ನಡ ಪದಗಳ ನರ್ತನ
ನಿರುತ ಕರುನಾಡ ತಾಯಿಗೆ ನಮನ//

*ಡಾ ಅನ್ನಪೂರ್ಣ ಹಿರೇಮಠ ಶಿಕ್ಷಕಿ ಬೆಳಗಾವಿ*/
[31/01, 12:33 PM] Irappa Bijali SirNP: *ದ.ರಾ.ಬೇಂದ್ರೆಯವರಿಗೆ ನುಡಿ ನಮನ*

*ಯಕ್ಷಯಕ್ಷಿಣಿ ಪ್ರಣಯ*

ಸಖೀಗೀತದ ಸವಿಯನುಣಿಸಿ
ಹೃದಯ ಸಮುದ್ರ ಕಲಕಿದೆ
ನಾಕುತಂತಿಯ ನಾದ ನುಡಿಸಿ
ಅರಳು ಮರುಳು ಮಾಡಿದೆ ||

ಮೇಘದೂತನ ಹಾಡುಪಾಡಿಗೆ
ಸೂರ್ಯ ಪಾನ ಅರಳಿದೆ
ಮುಗಿಲ ಮಲ್ಲಿಗೆ ಬಿರಿದು ಮೆಲ್ಲಗೆ
ಕಂಪು ಸೂಸಿ ಮೆರೆದಿದೆ ||

ಕೃಷ್ಣ ಕುಮಾರಿ ಗರಿ ಬಿಚ್ಚಿ 
ನವಿಲಿನಂತೆ ಕುಣಿದಳು
ಯಕ್ಷಯಕ್ಷಿ ಇಳೆಗೆ ಇಳಿದು
ಒಲವೇ ಬದುಕು ಎಂದರು ||

ಜೀವಲಹರಿ ಹೊನಲು ಹರಿದು 
ಪ್ರೀತಿ ಸಂಚಯ ಆಯಿತು
ಯಕ್ಷಯಕ್ಷಿಣಿ ಮಧುರಮೈತ್ರಿಗೆ 
ಮತ್ತೆ ಶ್ರಾವಣ ಬಂದಿತು ||

ಉತ್ತರಾಯಣ ಪುಣ್ಯಕಾಲದಿ
ನಭೋವಾಣಿ ತೇಲಿತು 
ಯಕ್ಷಯಕ್ಷಿಣಿ ಜೋಡಿ ವಿನಯದಿ 
ಧರೆಗೆ ನಮನವ ಹೇಳಿತು ||

*ಈರಪ್ಪ ಬಿಜಲಿ. ಕೊಪ್ಪಳ*
[31/01, 1:19 PM] Shankarananda Hebbala: ಬೇಂದ್ರೆ ಜನ್ಮ ದಿನದ ಪ್ರಯುಕ್ತ

ಗಝಲ್ ೧೬೧೭

ಮುಗಿಲ ಮಲ್ಲಿಗೆಯಲ್ಲಿ ಯಕ್ಷ ಯಕ್ಷಿಯ 
ಕರೆಸಿದವರು ಬೇಂದ್ರೆ
ನಾದಲೀಲೆಯಲ್ಲಿ ಉಯ್ಯಾಲೆಯಾಡಿ 
ಮೆರೆಸಿದವರು ಬೇಂದ್ರೆ

ಹೃದಯ ಸಮುದ್ರದಲ್ಲಿ ಸಖಿಗೀತೆಯನ್ನು 
ಅರುಹಿದರೇಕೆ
ಮುಕ್ತಕಂಠದಲ್ಲಿ ನಾಕುತಂತಿಗೆ ಗರಿಗಳನ್ನು
ಬರೆಸಿದವರು ಬೇಂದ್ರೆ

ಗಂಗಾವತರಣದಿ ನಮನ ಸಲ್ಲಿಸುತಲಿ
ಸಂಚಯ ಮೂಡಿಸಿದರಲ್ಲ
ಒಲವೆ ನಮ್ಮ ಬದುಕೆಂದು ಪರಾಕಿಯ 
ಹರಸಿದವರು ಬೇಂದ್ರೆ

ಬಾಹತ್ತರ ನೋಡುಬಾ ಮತ್ತೆ ಶ್ರಾವಣ
ಬಂತು ಎಂದರಲ್ಲವೆ
ಚೈತ್ಯಾಲಯದಿ ಕೃಷ್ಣಕುಮಾರಿಯ ಕಂಗಳನು
ತೆರೆಸಿದವರು ಬೇಂದ್ರೆ

ಇದು ನಭೋವಾಣಿಯೆಂದು ಅಭಿನವನ
ಕವಿತೆಯು ಸಾರಿ ಹೇಳಿದೆ
ತಾಲೆಕ್ಕಣಿ ತಾ ದೌತಿಯೆಂದು ಕಾವ್ಯವೈಖರಿ
ಸುರಿಸಿದವರು ಬೇಂದ್ರೆ

ಶಂಕರಾನಂದ ಹೆಬ್ಬಾಳ
[31/01, 1:56 PM] Jyotibha Sir: ನಮ್ಮ ಅಜ್ಜ ಬೇಂದ್ರೆಯವರು 

ನಿಮ್ಮ ಮೊಗದಾಗ ಇರ್ತಿತ್ತು
ಹೊಂಬೆಳಕ ಹೋಳಿನ ಕಾಂತಿ
ಸ್ವರದಾಗ ಉಕ್ಕಿ ಹರಿತಿತ್ತು
ಭಾಷೆಯ ವಿನ್ಯಾಸದ ಪ್ರಗತಿ.l l

ಗೀಚುವ ಹಾಳೆಯು ತರ್ತಿತ್ತು
ಗಾಳಿಗೆ ಗರಬಡಿದ ಚಿಂತಿ
ಕಾರಣವ ಹುಡುಕಾಕ್ ನಿಂತಿತ್ತು 
ಪದಗಳ ಹೆಕ್ಕಿ ಎಲ್ಲಿಂದ ತರ್ತಿ.l l

ಕನ್ನಡವು ಕನ್ನಡಿ ಹಿಡಿದಿತ್ತು 
ಕಾಣಲು ತನ್ನಯ ಮೋತಿ 
ಪ್ರತಿಬಿಂಬ ನೋಡಿ ನಸುನಕ್ಕಿತ್ತು
ಕಂಡಾಗ ಕಾವ್ಯದ ನಾಕುತಂತಿ. I l

ತ್ರಾಸಿನ ಪ್ರಾಸದ ಪದ ಹೇಳ್ತಿತ್ತು 
ಬರೀಲಾಕ್ ಯಾಕರ್ ನಿಂತಿ 
ನಾಲಗ್ಯಾಗ್ ನಲಿದಾಡಿ ಬರ್ತಿತ್ತು
ಸೊಗಡಿನ ಪದಗಳ ಕಂತಿ ಕಂತಿ l l

ಜ್ಞಾನದ ಜೋಳಿಗೆ ತುಂಬಿ ತೆರೆದಿತ್ತು
ಧಾರವಾಡ ಜಿಲ್ಲೆಯೋಳಗಂತಿ
ಸಾಧನಕೇರಿ ಸಾರಿ ಮಳಿ ಸುರಿಸಿತ್ತು
ಆಗಲೇ ಜಗದಗಲ ಜ್ಞಾನವ ಬಿತ್ತಿ l l

ಜ್ಯೋತಿಭಾ. ಎನ್. ಚಿಲ್ಲಣ್ಣವರ.
           ✍️ಪೇಟೆಕವಿ
[31/01, 3:10 PM] +91 90605 47777: ವರಕವಿ ಬೇಂದ್ರೆ. 

ಕನ್ನಡ ಅವಧೂತ ಕವಿ ಎಂದೆ ಪ್ರಸಿಧ್ಧರಾಗಿರುವ,
ಕವಿ ಋಷಿ, ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ಪುಣ್ಯಸ್ಮರಣೆ ಇಂದು. 
ಹುಟ್ಟಿದ್ದು ಹುಬ್ಬಳ್ಳಿಯ ಶಿರಹಟ್ಟಿಯಲಿ, ತಾಯಿ ಅಂಬವ್ವ.ಅವಳ ನೆನಪಿಗೆ ತಮ್ಮ ಕಾವ್ಯ ನಾಮ" "ಅಂಬಿಕಾ ತನಯದತ್ತ" ಎಂದಿಟ್ಟುಕೊಂಡರು. 


ಭೃಂಗದ ಬೆನ್ನೇರಿ ಬಂತು ಕಲ್ಪನಾ ತರಂಗ, ಬೆಳಗು, ಕುಣಿಯೋಣು ಬಾರಾ, ಯಾತಕವ್ವ ಹುಬ್ಬಳ್ಳಿ ಧಾರವಾಡ ನಮ್ಮೂರು ನಮಗ ಪಾಡ,ಅಳಿಯನ ಪತ್ರ ಬಂತು ಗೆಳೆಯನ ಅಕ್ಷರದಾಗ, ಅಂತರಂಗದ ಮೃದಂಗಾ ಅಂತು ತೊಂತು ತಾನನಾ.. ಪಾತರಗಿತ್ತಿ ಪಕ್ಕಾ, ನೀ ಹೀಂಗ ನೋಡಬ್ಯಾಡ ನನ್ನ, ಕುರುಡು ಕಾಂಚಾಣ, ರಾಗರತಿಯಾ, ಹೀಗೇ ಹಲವು ಕಾವ್ಯಗಳು ಇಂದಿಗೂ ಹೊಸ ಹುರುಪಿನಿಂದ ರಿಂಗಣಿಸುತ್ತವೆ. 

ವೈಶ್ಯೆಯೊಬ್ಬಳು ತನ್ನ ಇನಿಯನನ್ನು ನೆನದು  ಹಾಡುವ ಪರಿಯು, ಅವಳ ಭಾವದಲ್ಲೂ ಸಾಹಿತ್ಯಿಕ ಪರಿಭಾಷೆ ತುಂಬುವ ಅವರಾ ಯೋಚನಾಪರಿ,ಎಷ್ಟು ಅಮೋಘ, ಶುದ್ಧ!! 
" ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳಿಯಾವಾ
ವಾರದಾಗ ಮೂರು ಸರತಿ ಬಂದು ಹೋಗಾಂವಾ"
ಎಲ್ಲರಲೂ ಶುದ್ಧ ಭಾವಕಾಣುವ ಕವಿ ಮನಸು ಬೇಂದ್ರೆ. ಬಡತನದ ಗರಗಸಕ್ಕೆ ಬದುಕು ವರೆಗಚ್ಚುತ ಬದುಕಿದವರು. 

ಒಮ್ಮೆ ಬೇಂದ್ರೆಯವರ ಚಪ್ಪಲಿಯ ಅಂಗುಷ್ಟ ಕಿತ್ತಿತ್ತಂತೆ, ಚಪ್ಪಲಿ ಹೊಲೆಯುವನು " ಅಜ್ಜಾರ ಬಿಸಲಾಗ ನಿಂದ ಬ್ಯಾಡ್ರೀ , ಕೂಡರಿ ಅಂತ ತನ್ನ 
ಸಣ್ಣ ಸ್ಟೂಲ ಸರಸಿದ.ಅದಕ್ಕೆ ಬೇಂದ್ರೆಯವರು
“ ಎಂತಹಾ ಬಿಸಲಾಗ ಕೂತಿ, ಛತ್ರಿ ಇಲ್ಲೇನೂ"
ಎಂದು ತನ್ನ ಛತ್ರಿ ಅವನ ತಲೆಗೆ ಅಡ್ಡಲಾಗಿ ಹಿಡಿದರು, ಹೆಂಡತಿ ಮಕ್ಕಳ ಬಗ್ಗೆ ಕೇಳಿ, ಚಪ್ಪಲಿ ಹೊಲೆಯುವದಾದಮೇಲೆ
" ಬಿಸಲಾಗ ಕುಂತ ಹೊಲಿಬ್ಯಾಡ, ಒಂದು ಛಲೋ ಛತ್ರಿ ತಗೋ, ನೀ ಅರಾಮಿದ್ರ ನಿನ್ನ ಪರಿವಾರ ನೂ ಅರಾಮಿರತದ, ದುಡಿಯುವ ಮನುಷ್ಯ ಗಟ್ಟಿರಬೇಕು, ಕೆಲಸ ಯಾವದರ ಇರಲಿ ಅದು ನಮ್ಮ ಹೊಟ್ಟಿಗೆ ಅನ್ನ ಕೊಡುವ ಕಾಯಕ, ಅದರ ಬಗ್ಗೆ ಗೌರವ ವಿರಬೇಕು"
ಹೀಗೆ ಹೇಳುತ್ತಾ ಛತ್ರಿಗೆ ☔ ಕಾಸು ಕೊಟ್ಟ ರಂತೆ. 
ಹೀಗೇ ಎಲ್ಲೆಂದರಲ್ಲಿ ಸ್ನೇಹ ಬೆಳೆಸಿ, ಮನ ಮಿಡಿಯುವ ಕರುಣಾಮಯಿ ನಮ್ಮ ವರಕವಿ ಬೇಂದ್ರೆ. 
ಇಂದು ಅವರ ಪುಣ್ಯ ತಿಥಿ ನಮಿಸೋಣು ಬಾರಾ. 
🙏🙏
ಸಾಕ್ಷಿ ಶ್ರೀಕಾಂತ್ ತಿಕೋಟಿಕರ.
[31/01, 5:20 PM] Ratna K Madam: *ಸಾಧನ ಕೇರಿಯ ಸಾಧಕ ಬೇಂದ್ರೆಯಜ್ಜ*

ಸಾಧನಕೇರಿಯ ಸಾಧಕ ಗೌರವದ ಬೇಂದ್ರೆಯಜ್ಜ
ಕನ್ನಡ ಸಾಹಿತ್ಯ ಸತ್ವದಲಿ ಗೈದಿರಿ ಕಜ್ಜ
ಕನ್ನಡಮ್ಮನ ಮಡಿಲಲಿ ಪದಮಾಲೆಯ ಯಜ್ಞ
ಅಂಬಿಕೆ ರಾಮಚಂದ್ರರ ಹೆಸರ ಬೆಳಗಿದ ಮಹಾಪ್ರಾಜ್ಞ
ಅಂಬಿಕಾತನಯದತ್ತ ವರಕವಿ ದ.ರಾ.ಬೇಂದ್ರೆ ನಮ್ಮಜ್ಜ

ಬಡತನದ ಬವಣೆಯ ಕುಲುಮೆಯಲಿ ನೊಂದು ಬೆಂದಿರಿ
ಕೃಷ್ಣಕುಮಾರಿಯ ಹೊರತಂದು ನಾಕುತಂತಿಯ ಮೀಟಿದಿರಿ
ಉತ್ಕೃಷ್ಟ ಗರಿ ಜ್ಞಾನಪೀಠ ತಮ್ಮ ಮುಡಿಗೇರಿತು
ಪದ್ಮಶ್ರೀ ಜೊತೆಗೆ ಹಲವಾರು ಪ್ರಶಸ್ತಿ ಅರಸಿ ಬಂದಿತು
ಕವನದ ಸಾಲುಗಳಲಿ ನಿಜ ಜೀವನದ ಅಮೃತಧಾರೆಯಿತ್ತು 

ಜಾನಪದ ದೇಸಿಯತೆ ಸರಳ ಪದಗಳ  ಹಾದಿ ತೆರೆದಿಟ್ಟಿರಿ
ಆತ್ಮವಾಣಿಯ ಮಿಂಚಿನ ಸಂಚಾರ ಸತ್ಯಾಂಶ ಬರೆದಿರಿ
ಮಾತು ಮಂತ್ರ ಜೀವನ ಸ್ವತಂತ್ರ ಭಾವಗಳ ನೀಡಿದಿರಿ
ಮಾನವತಾವಾದಿ ಸಾಮಾಜಿಕ ಕಟ್ಟುಪಾಡುಗಳ ಬಿಂಬಿಸಿದಿರಿ
ಉಯ್ಯಾಲೆ ಗರಿ ನಾದಲೀಲೆಯಲಿ ಬೆಂದಷ್ಟೂ ಪಕ್ವತೆಯೆಂದಿರಿ

ಕಾಮಕಸ್ತೂರಿ ಗರಿ ಸೂರ್ಯಪಾನ ನಾದಲೀಲೆ ನೀಡಿದ ಸಾಹಸಿ
ನರಬಲಿಯಿಂದ ನಿಮಗಾಯಿತು ಹಿಂಸೆಯ ಸೆರೆಮಾನವಾಸ
ಇಳಿದು ಬಾ ತಾಯೇ ಜನಮಾನಸದಿ ಬೇರೂರಿತು
ಮೂಡಲ ಮನೆಯಲಿ ಮುತ್ತಿನ ತೋರಣ ಕಟ್ಟಿದಿರಿ
ಸಾಧನಕೆರೆ ನೆಚ್ಚಿನ ತಾಣ ಬೇಂದ್ರೆ ಅಜ್ಜನಿಗೆ ನಮನ🙏
   
*✍️ರತ್ನಾ ಕೆ.ಭಟ್,ತಲಂಜೇರಿ*
[31/01, 6:51 PM] +91 98455 68484: *ಬತ್ತದ ತೊರೆ ಸ್ನೇಹ ಬಳಗ,*
     *ಕಾರಂತಜ್ಜನ ನೆರಳಿನಡಿಯಲ್ಲಿ..*
*( ಕಲೆ ಹಾಗೂ ಸಾಹಿತ್ಯ ವೇದಿಕೆ )*
➖➖➖➖➖➖➖➖➖➖➖
*ಆತ್ಮೀಯ ಕವಿಮನ ಬಂಧುಗಳೇ, ನಮಸ್ಕಾರ* 
🌳🌹🌹🌹✍️🌹🌹🌹🌳✍️📝🍁

*ದಿನಾಂಕ : ೩೧/೦೧/೨೦೨೩ ಮಂಗಳವಾರ*

*ಕವನ ರಚನೆ*

*ವಿಷಯ :  ನಾಕುತಂತಿ ಖ್ಯಾತಿಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ ಬೇಂದ್ರೆ ಅವರ ಜನ್ಮದಿನದ ಅಂಗವಾಗಿ ಕವನ ರಚಿಸಿರಿ*

 ಶೀರ್ಷಿಕೆ-ನಾಡಿನ ವರಕವಿ ದ.ರಾ.ಬೇಂದ್ರೆ...

ದ ರಾ ಬೇಂದ್ರೆ ಕನ್ನಡದ ಪ್ರಸಿದ್ಧ ಕವಿ
ಕಾದಂಬರಿಕಾರನು ಹೌದು ಈ ವರಕವಿ.
1896 ಜನೆವರಿ 31 ರಂದು ಧಾರವಾಡದಲ್ಲಿ ಜನನ
ಶಿಕ್ಷಕರಾಗಿ ಮಕ್ಕಳಿಗೆ ನೀಡಿದರು ಶಿಕ್ಷಣ.
ನಾಕುತಂತಿಗೆ ಜ್ಞಾನಪೀಠ ಒಲಿಯಿತು  
ಜೊತೆಗೆ ಪದ್ಮಶ್ರೀ ಇವರ ಮುಡಿಗೇರಿತು.

ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಪೂರ್ಣ ಹೆಸರು
ಕನ್ನಡ ಸಾಹಿತ್ಯಕ್ಕೆ ಇವರು ಅಜರಾಮರದ ಉಸಿರು.
ಶ್ರೀಯುತರ ಕಾವ್ಯನಾಮ ಅಂಬಿಕಾತನಯದತ್ತ
ನವೋದಯ ಸಾಹಿತ್ಯದತ್ತ ಇವರ ಚಿತ್ತ.
ನಂಬಿದರು ರಾಮಚಂದ್ರ ಅಂಬವ್ವ ಮನದ ದೇವರು
ಲಕ್ಷ್ಮೀಬಾಯಿಗೆ ಬೇಂದ್ರೆ ಪ್ರೀತಿಯ ಪತಿದೇವರು.

ಪ್ರಥಮ ಕವನ ಸಂಕಲನ ಕೃಷ್ಣಕುಮಾರಿ  
ಹಲವು ಕವಿಗಳಿಗೆ ಇವರೇ ರೂವಾರಿ.
ಕನ್ನಡ ಸಾಹಿತ್ಯಕ್ಷೇತ್ರ ಶ್ರೀಮಂತಗೊಳಿಸಿದವರು
ಗೆಳೆಯರ ಗುಂಪು ಸಂಸ್ಥೆ ಕಟ್ಟಿದ ಧಾರವಾಡದ ಅಜ್ಜರು.
ಬ್ರಿಟಿಷರ ಕೆಂಗಣ್ಣಾಯಿತು ಗರಿ ಪುಸ್ತಕದ ನರಬಲಿ ಕವನ
ಇದಕ್ಕಾಗಿ ಅನುಭವಿಸಿದರು ಸೆರೆಮನೆಯಲ್ಲಿ ಕಷ್ಟವನ.

ಉತ್ತಮ ವಾಗ್ಮಿಯ ಉಪನ್ಯಾಸ ಜನರಿಗೆ ಹಿಗ್ಗು
ಕನ್ನಡದ ಜೊತೆಗೆ ಮರಾಠಿಯಲ್ಲೂ ಚಿಗುರಿತು  ಸಾಹಿತ್ಯದ ಮೊಗ್ಗು.
ಅರಳು ಮರಳು,ಮುಗಿಲ ಮಲ್ಲಿಗೆ  ಪ್ರಮುಖ ಕೃತಿಗಳು
ಮತ್ತೆ ಶ್ರಾವಣ ಬಂತು,ಒಲವೇ ಬದುಕು ನೆಚ್ಚಿನ ಕೃತಿಗಳು.
ಬೆಂದು ಬೆಂದು ಆದವರು ನಮ್ಮ ಬೇಂದ್ರೆ
ನೀ ಹಿಂಗ ನೋಡಬೇಡ ನನ್ನ ಎಂದರು ಬೇಂದ್ರೆ....

 ಶ್ರೀ ಮುತ್ತು.ಯ.ವಡ್ಡರ (ಶಿಕ್ಷಕರು)
ಬಾಗಲಕೋಟ❤️❤️❤️
[31/01, 7:03 PM] Saroja Amaathi Mumbai: ಬತ್ತದ ತೊರೆ ಸ್ನೇಹ ಬಳಗದ ಸ್ಪರ್ಧೆಗಾಗಿ

ವಿಷಯ: ದ.ರಾ.ಬೇಂದ್ರೆ ಅವರ ಜನ್ಮದಿನದ ಅಂಗವಾಗಿ ಕವನ ರಚನೆ

*ವರಕವಿ*

ಮೇಘಧೂತನಿಗೊಂದು
ಓಲೆ ಬರೆದೆ ನಾನಿಂದು
ಮುತ್ತ ಹನಿಗಳಾಗಿಸಿ
ಮತ್ತೆ ಇಳೆಗಿಳಿಸಿ 
ಕಳುಹಿಬಿಡು ಹಾಡುತ-ಪಾಡುತ
ಕವಿ ಅಂಬಿಕಾತನಯದತ್ತರ!

ಗರಿಗೆದರಿ ಹಾರುವ
ಹಕ್ಕಿಗಳಿಂಚರ ಮೂಡಿ
ನಾದಲೀಲೆಯಲಿ ತೂಗುಯ್ಯಾಲೆ ತೂಗಿ
ತುಂಬೊಲವಿನಿಂದಲಿ ಕೂಗಿ ಕರೆಯಿರಿ
ಮತ್ತೊಮ್ಮೆ ಹುಟ್ಟಿ ಬರಲೆಂದು
ನಮ್ಮೆಲ್ಲರ ಬೇಂದ್ರೆ 

ಕನ್ನಡದ ಭುವನೇಶ್ವರಿ
ಹರಸು ನೀನೊಮ್ಮೆ
ಸುರಿಸಿ ಕಾವ್ಯ ಸುಧೆ
ಸರಿಸಿ ಸಾವೆಂಬ ಪರದೆ...
ಶ್ರಾವಣದ ಸೊಬಗೆಲ್ಲೆಡೆ ಹರಡುತ್ತ
ಮಗದೊಮ್ಮೆ ಜನಿಸಿ ಬರಲೆಂದು ನಮ್ಮೆಲ್ಲರ ಬೇಂದ್ರೆ 

ಕರೆಯೋಲೆಯ ಕರೆಗೆ ಓಗೊಟ್ಟ ಮೇಘಧೂತ!,ಹಿಡಿಮಣ್ಣ ಗುಡಿಗಟ್ಟಿ ನಿಂತಂತ ಪಿಡಿದವರನ್ನು ನುಡಿಕಟ್ಟಿ ಕರೆಯುತ ನಾಕುತಂತಿಯ ಮೀಟುತ ಬಂದರದೋ ದಿಗಂತದಿಂದಾಚೆಯಿಂದ ಮಿಂಚುತ್ತ 'ವರಕವಿ' ನೇಸರನ ಕೈ ಕುಲುಕುತ್ತ!

ಸರೋಜಾ ಎಸ್.ಅಮಾತಿ,ಮುಂಬೈ
[31/01, 7:24 PM] Mahendra Kurdi Sir: *ಅಂಬಿಕಾತನಯದತ್ತ*

*ಅಂ* ಅಂತರಾಳದ 
*ಬಿ*  ಬಿರು ನುಡಿಗಳನು
*ಕಾ* ಕಾವ್ಯ ಧಾರೆ ಮುಖೇನ
*ತ*  ತತ್ವ ಸಿದ್ಧಾಂತದ
*ನ*  ನವಿರಾದ ನೇರ ನುಡಿಗಳ
*ಯ* ಯತಿ ಯಾಗಿ 
*ದ*   ದ.ರಾ ಬೇಂದ್ರೆ ಎಂಬ
*ತ್ತ*   ತನು ಉದಯಿಸಿ

ಜ್ಞಾನಪೀಠ ಅಲಂಕರಿಸಿ 
ಕಾವ್ಯ ಲೋಕ ಬೆಳಗಿ , 
ಸಾಹಿತ್ಯ ಸಿರಿಯ ಉಣಿಸಿ
ಧ್ರುವತಾರೆಯಾಗಿ ಮಿನುಗಿ.

ನಾಕುತಂತಿಯ ನಾಡಿ ಮಿಡಿಸಿದ 
ಸಾಧನಕೇರಿಯ ಸರದಾರ, 
ಭಾವನೆಗಳಿಗೆ ಜೀವ ತುಂಬಿದ 
ಮಹಾ ಚೇತನ.

ಕನ್ನಡದ ವರಕವಿ
ಕರುನಾಡ ಮುಕುಟ ಮಣಿ
ನಮ್ಮ ಬೇಂದ್ರೆ ಅಜ್ಜನಿಗೆ
ಹೃತ್ಪೂರ್ವಕ ನಮನಗಳು.

*ಎಲ್ಲರಿಗೂ ವರಕವಿ ಬೇಂದ್ರೆ ಅವರ ಜನ್ಮದಿನದ ಹಾರ್ದಿಕ ಶುಭಾಶಯಗಳು🙏🏻🙏🏻💐💐🙏🏻🙏🏻*

   ✍🏻 ಮಹೇಂದ್ರ ಕುರ್ಡಿ
[31/01, 7:41 PM] ಕೊಟ್ರೇಶ ಜವಳಿ: *ಬತ್ತದ ತೊರೆ ಸ್ನೇಹ ಬಳಗ,*
     *ಕಾರಂತಜ್ಜನ ನೆರಳಿನಡಿಯಲ್ಲಿ..*
*( ಕಲೆ ಹಾಗೂ ಸಾಹಿತ್ಯ ವೇದಿಕೆ )*

*ದಿನಾಂಕ : ೩೧/೦೧/೨೦೨೩ ಮಂಗಳವಾರ*

**ಶೀರ್ಷೀಕೆ*:--ಬೇಂದ್ರೇ ಮಾಸ್ತಾರ
(ನಮ್ಮ ಮುತ್ಯಾ ಅಂವ)

*ವಿಷಯ :  ನಾಕುತಂತಿ ಖ್ಯಾತಿಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ ಬೇಂದ್ರೆ ಅವರ ಜನ್ಮದಿನದ ಅಂಗವಾಗಿ ಕವನ ರಚನೆ*

**ಸ್ಪರ್ಧೆಗಾಗಿ*

ಭಾರಿ ತೂಕದ ರುಮಾಲು
ಸುತ್ತಾವ,
ಅಷ್ಟೆ ತೂಕದ ಕವಿ,
ತೂಕದ ಸಾಹಿತ್ಯಾ,
ತೂಕದ ವ್ಯಕ್ತಿತ್ವ,
ಹೊದ್ದಾಂವ,
ಸಾಧನಕೇರಿ ಕಾರಕೂನ,!

ಒಲೆ ಹೊತ್ತದಿದದ್ದರೂ
ಮನೆಗೆ ಬಂದವರಿಗೆ,
ಅನುಭಾವದಡುಗೆಯ,
ಮಾಡಿಸಿ ಉಣ್ಣಿಸಿದಂವ
ನಮ್ಮ ಮುತ್ಯಾ,!

ದುಃಖಿತ ಜನ ಮನೆಗೆ ಬಂದರೆ,
ನಗುವಿನ ನವಿಲು ಹಾರಿಸಿ
ಸಂತೈಸಿದಾಂವ,
ಕುಣಿಸಿದಾಂವ
ನಲಿಸಿದಾಂವ,
ನಮ್ಮ ಮುತ್ಯಾ,!

ನಕ್ಕು ಸಾಯ್ರೇೂ,
ನಕ್ಕು ಸತ್ರ ನಕ್ಷತ್ರ
ಆಕೀರಿ ಅಂದಾಂವ,
ಸರಸ ಜನನ
ವಿರಸ ಮರಣ
ಸಮರಸವೇ ಜೀವನ
ಅಂದಾಂವ,
ನಮ್ಮ ಮುತ್ಯಾ,!

ಒಮ್ಮೊಮ್ಮೆ ಟೂಪ್ಪಿಗೆ
ಹಾಕಾಂವ ತೆಲಿಮ್ಯಾಗ,
ಯಾಕೇೂ ಯಜ್ಜ ಟೊಪ್ಪಿಗಿ ಹಾಕಿ ಅಂದ್ರ,
ನಾ ಹಾಕೇೂಲಿಲ್ಲಂದ್ರ
ಹಾಕೇೂರು ಬಾಳ್
ಮಂದಿ ಅದಾವ್ರು
ಅನ್ನಾಂವ,
ನಮ್ಮ ಅಜ್ಜ,!

ಹೆಂಗ್ ಕಲಿತೇೂ ಯಜ್ಜ
ಈ ಕವನ ಬರಿಯೇೂದ್
ಅಂತ ಕೇಳಿದ್ರ,ಅಂವ ಹೇಳಾವ,
ಬಡತನ ಅನ್ನೇೂ ಮಾಸ್ತಾರ ಕೈಯಾಗ
ಬಾಳ್ ದಿನಾ ಕಲ್ತೀನೇೂ
ಬರಿಲಿಲ್ಲಾಂದ್ರ ಕೇಳಂಗಿಲ್ಲಂವ
ಅನ್ನಾಂವ,
ನಮ್ಮ ಮುತ್ಯಾ,!

ನಾಕು ತಂತಿ ಮೀಟಿದಾಂವ,
ಜ್ಞಾನಪೀಠ ಏರಿದಾಂವ,
ಮುಗಿಲ ಮಾರಿಗೆ
ರಾಗ ತೇೂರಿದಾಂವ,
ಹುಬ್ಬಳ್ಳಿ ಯಾಂವ
ವಾರದಾಗ ಮೂರು ಸತಿ
ಬಂದು ಹೇೂಗಾಂವ,
ನಮ್ಮ ಮುತ್ಯಾ,!!

ಕುರುಡು ಕಾಂಚಾಣ
ಮೆಚ್ಚದಾಂವ,
ನೇೂವು ನಲಿವು ಗಳನ್ನು
ಒರೆಗೆ ಹಚ್ಚಾಂವ,
ಬಡತನವ ಕಂಡು
ಮರಗಾಂವ
ಕೊರಗಾಂವ,
ನಮ್ಮಜ್ಜ,!!

ಮರಣಕ್ಕೂ ಶಾಸನ ಬರದಾಂವ,
ನಾ ಇರೇೂತನಕ ಅದು ಬರಾಂಗಿಲ್ಲ,
ಅದು ಬಂದಾಗ ನಾ ಇರೇೂದಿಲ್ಲ
ಅಂದಾಂವ,
ನಮ್ಮ ಮುತ್ಯಾ,!!

ನಮ್ಮ ಅವ್ವ ಅಂಬವ್ವ
ನಾ ಅವಳ ಮಗ ದತ್ತ
ಹೀಗಾಗಿ ನನ್ನ ಕಾವ್ಯನಾಮ,
ಅಂಬಿಕಾತನಯ ದತ್ತ
ಅನ್ನಾಂವ,
ನಮ್ಮ ಮುತ್ಯಾ,!

ಮುತ್ತ್ಯಾ ರೀ ನಿಮ್ಮ ಬಗ್ಗೆ
ಬರೆಯಲು,ಒಂದು ದಿನ/
ತಿಂಗಳು/ ವರುಷ/ ಯುಗ,ಸಾಕಾಗೇೂದಿಲ್ಲ,
ಬರ್ಕೇೂಂತ ಹೇೂದ್ಹಂಗೆಲ್ಲಾ,
ಬೆಳಕೇೂತ ಹೇೂಗ್ತಿ ನೀ,
ನನ್ಗ ಇಷ್ಟಕ್ಕ ಸುಸ್ತಾಗೈತಿ,
ಕ್ಷಮೆ ಇರಲಿ ಮುತ್ಯಾ,


**ಕೇೂಟ್ರೇಶ ಜವಳಿ**

  ಹಿರೇವಡ್ಡಟ್ಟಿ
[31/01, 7:57 PM] Jayanthi Kannukere: ಬತ್ತದ ತೊರೆ ಸ್ನೇಹ ಬಳಗ,
ಕಾರಂತಜ್ಜನ ನೆರಳಿನಡಿಯಲ್ಲಿ..
(ಕಲೆ ಹಾಗೂ ಸಾಹಿತ್ಯ ವೇದಿಕೆ)
ದಿನಾಂಕ:೩೧/೧/೨೩.
ಮಂಗಳವಾರ.
ಕವನ ರಚನೆ ಸ್ಪರ್ಧೆ
ವಿಷಯ
ನಾಕುತಂತಿ ಖ್ಯಾತಿಯ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ದ ರಾ ಬೇಂದ್ರೆ ಅವರ ಜನ್ಮದಿನದ ಅಂಗವಾಗಿ


         ಶೀರ್ಷಿಕೆ

*ಕನ್ನಡದ ಕೀರ್ತಿ ಕಳಸ*


ಸಾಧನಕೇರಿಯೇ ಶಾಂತಿನಿಕೇತನ,
ಕನ್ನಡ ಸಾಹಿತ್ಯದ ಕಾವ್ಯ ಕಥನ,
ಸ್ವಾತಂತ್ರ್ಯಕಾಗಿ ನರಬಲಿ ಕವನ,
ಬೆಳಗಿನ ಕವನಕೀಗ ಶತಮಾನ.

ವಿಶ್ವಮಾನ್ಯತೆಯ ಕನ್ನಡ ಕೂಟ,
ಸಾವಿರ ಸಾವಿರ ಕವನಗಳ ನೋಟ,
ಸಾಹಿತ್ಯ ಸರದಾರರ ನಾಗಾಲೋಟ,
ಪಾಠದ ಜೊತೆಗೆ ಸಾಹಿತ್ಯದೂಟ,

ಮಹರ್ಷಿ ಅರವಿಂದರ ಪ್ರಭಾವ,
ಆಧ್ಯಾತ್ಮದಲಿ ಪಡೆದ ಅನುಭಾವ,
ಸುಲಲಿತ ಕನ್ನಡದ ಭಾಷಾಭಾವ,
ಯುವಕವಿಗಳಿಗೆ ತುಂಬುತ ಜೀವ.

ನಾಕುತಂತಿಯ ಮೀಟಿದ ಅಜ್ಜಗೆ,
ಜ್ಞಾನಪೀಠದ ಹೆಮ್ಮೆಯ ಕೊಡುಗೆ,
ಪದ್ಮಶ್ರೀಯು ಅಂಬಿಕಾತನಯಗೆ,
ಹಲವಾರು ಪ್ರಶಸ್ತಿಗಳು ವರಕವಿಗೆ.

ನಗುತ ಬಾಳುವ ನೀತಿಯ ಕಲಿಸಿ,
ನಗೆ ಚಟಾಕಿಯ ಮಾತಲಿ ಇರಿಸಿ,
ನಕ್ಕರೆ ನಕ್ಷತ್ರವೇ ಎಂದೆಣಿಸಿ,
ಭಾಷಣಕಲೆಯ ಭೂಷಣನೆನಿಸಿ.

ಧಾರವಾಡದ ಅಮೃತ ಧಾರೆ,
ಕರುನಾಡಿನ ಬತ್ತದಾ ತೊರೆ,
ಬಯಸಿದ ಭುವನೇಶ್ವರಿಯ ತ್ವರೆ,
ಮರಳಿಬಾರನೇ ಆಲಿಸಿ ಮೊರೆ.



ಜಯಂತಿ ಕನ್ನುಕೆರೆ.
[31/01, 8:06 PM] Hamsika shetty: ಬತ್ತದ ತೊರೆ ಸ್ನೇಹ ಬಳಗ ಸ್ಪರ್ಧೆಗಾಗಿ
ವಿಷಯ _ದ ರಾ ಬೇಂದ್ರೆ

    ಬೇಂದ್ರೆ ನುಡಿನಮನ

ಕನ್ನಡದ ನೇಸರ
ಸಾ‌ಹಿತ್ಯದ ಆಗರ
ನಾಕುತಂತಿಯ ಸರದಾರ
ಅಂಬಿಕೆಯ ಕುವರ....

ಧಾರಾವಾಡದ ಮಣ್ಣಿನಲ್ಲಿ
ಜನಿಸಿದ ದ್ರುವತಾರೆ
ನೋವು ನಲಿವಿನಲಿ ಬೆಸೆದ
ಕನ್ನಡದ ಜೀವಧರೆ.....

ಬಾಳ ಅನುಭವದ ಗರಡಿಯಲಿ
ಅಕ್ಷರ ರೂಪದ ಸಾಹಿತ್ಯ
ಗರಿ ,ನಾದಲೀಲೆ , ಉಯ್ಯಾಲೆ
ತೋರಿದ ಸಾಹಿತ್ಯ ವಿರಾಟ್ ಸ್ವರೂಪ

ಸಾಧನಕೇರಿಯ ಮಡಿಲಿನಲ್ಲಿ
ನೇರ ದಿಟ್ಟ ಬರಹಗಳಲ್ಲಿ
ಪ್ರಶಸ್ತಿ ರೂಪದ ಪ್ರಶಂಸೆ
ಜ್ಞಾನಪೀಠ ಕಿರೀಟದ ಜೀವಂತಿಕೆ

ನವೋದಯ ಕಾಲದ ಚಿಂತನೆ
ನವ ಭಾಷ್ಯಬರಹದ ಯೋಚನೆ
ಕವಿ ವಾಗ್ಮಿ ಕಲೆಯೇ ಉಸಿರು
ಕನ್ನಡಮ್ಮನ ಮಡಿಲೇ ತವರು...

ಬೆಂದು ಬೆಂದ ಕವಿ
ಕನ್ನಡದ ವರಕವಿ
ಬೇಂದ್ರೆ ಎಂಬ ಹೆಸರಿನ
ಉನ್ನತ ಮಹರ್ಷಿಗೊಂದು ನುಡಿನಮನ

ಹಂಸರಾಗ ಶೆಟ್ಟಿ...
[31/01, 8:10 PM] Walvekar Sir: ಸ್ಪರ್ಧೆಗಾಗಿ.......
ವಿಷಯ : *ನಾಕುತಂತಿ ಖ್ಯಾತಿಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ.ಬೇಂದ್ರೆ ಅವದ ಜನ್ಮದಿನದ ಅಂಗವಾಗಿ ಕವನ ರಚನೆ*
೩೧/೦೧/೨೩....ಸೋಮವಾರ
..................................................

ಶೀರ್ಷಿಕೆ :  ಭಾವಾಂತರಂಗದ ಖುಷಿ

ಅಂಬವ್ವನ ಮಗನಾಗಿ ಹುಟ್ಟಿದ ಅವನಂದು
ಗುರುತಿರಲಿಲ್ಲಾ ಅವನು ಜ್ಞಾನಪೀಠ ಪಡೆಯುತ್ತಾನೆಂದು
ಸಾಧನಕೇರಿಯ ಈ ಸಾಧಕ
ಸರಳತೆಯ ಪ್ರತೀಕ........

ಕವನದಲಿ ಇವನ ಪರಕಾಯ ಪ್ರವೇಶ
ಅನುಭವದ ವಾಸ್ತವಿಕ ಕಳಸ
ಬಿಚ್ಚಿಟ್ಟರು ಇವರು ಕನ್ನಡದ ಹೊನ್ನ ಕಳಸ
ಕನ್ನಡದ ಆ ರಸ ಋಷಿಯ ಭಾವಾವೇಶ......

ಶಬ್ದಗಾರುಡಿಗ ಎಂಬ ಬಿರುದು ಪಡೆದ
ಶಬ್ದಗಳ ಜೊತೆ ಸರಸವಾಡಿದ
ಕವನಗಳ ಮೇಲೆ ಕವನ ಬರೆದ
ನಲಿದಾಡುವ ಸಾಹಿತಿ ಇವನಾದ.....

ಮನಸಿನೊಳಗೆ ಮೂಡಿದ ಭಾವನೆಗೆ
ಕವನದ ರೂಪ ನೀಡಿ
ಭಾವಾಂತರಂಗವನು ಕೆದಕುವ ಕವಿ ಇವನು
ಕನ್ನಡದ ತೇರಿಗೆ ಹೊನ್ನ ಕಳಸನಿವನು......

ಕನ್ನಡ ತಾಯಿಯ ಅಕ್ಷರ ಪುತ್ರ
ನಾಲ್ಕು ದಿಕ್ಕುಗಳಲಿ ನಿನ್ನ ಚಾರಿತ್ಯ್ರ
ಕವನದ ಹಸಿವನು ಇಂಗಿಸು ನೀ ಪವಿತ್ರ
ಭಾರತಾಂಬೆಯ ಹೆಮ್ಮೆಯ ಪುತ್ರ


ಶ್ರೀ ನರೇಂದ್ರ ನಾ,ವಾಳ್ವೇಕರ
ರಾಮದುರ್ಗ.......


ಗೂಗಲ್ ಇಮೇಜಇಮೇಜ್


[31/01, 8:21 PM] Dr. Sumathi P: *ಬತ್ತದ ತೊರೆ ಸ್ನೇಹ ಬಳಗ,*
     *ಕಾರಂತಜ್ಜನ ನೆರಳಿನಡಿಯಲ್ಲಿ..*
*( ಕಲೆ ಹಾಗೂ ಸಾಹಿತ್ಯ ವೇದಿಕೆ)

*ದಿನಾಂಕ : ೩೧/೦೧/೨೦೨೩ ಮಂಗಳವಾರ*

*ಕವನ ರಚನೆ*

*ವಿಷಯ :  ನಾಕುತಂತಿ ಖ್ಯಾತಿಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ
 ಬೇಂದ್ರೆ ಅವರ ಜನ್ಮದಿನದ ಅಂಗವಾಗಿ ಕವನ ರಚಿಸಿರಿ

**ಶೀರ್ಷಿಕೆ: ಸಾಹಿತ್ಯ ಲೋಕದ ಧ್ರುವತಾರೆ**

ಅದ್ಬುತ ಕವನ ರಚನೆಯ ಮೂಲಕ
ಪ್ರೀತಿ ಪ್ರೇಮವ ಮೂಡಿಸಬಲ್ಲವನು
ಒಲವೇ ನಮ್ಮ ಬದುಕು ಎನ್ನುತ್ತಾ
ಉತ್ಸಾಹ ಚಿಲುಮೆ ಉಕ್ಕಿಸಬಲ್ಲವನು

ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ
ಸಾಹಿತ್ಯ ಲೋಕದ ಅನರ್ಘ್ಯ ರತ್ನನಿವನು 
ರಸವೇ ಜನನ,ವಿರಸವೇ ಮರಣ ಸಮರಸ
ಜೀವನವೆನ್ನುತ್ತ ಪಡೆದನು ಸಾರ್ಥಕ್ಯವನು

ತನ್ನ ಸಾಹಿತ್ಯದ ನುಡಿಗಳಿಂದ ಜಗದಲಿನ
ಜನರ ನಾಡಿಯನ್ನು ನಿತ್ಯ ಮಿಡಿದವನು
ಯುಗದಕವಿ,ಜಗದಕವಿ ,ದಾರ್ಶನಿಕ ಬೇಂದ್ರೆ
ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾದವನು

ಬೆಳಗು ಕವನದ ಮೂಲಕ ದ.ರಾ .ಬೇಂದ್ರೆ
ಮೂಡಲ ಮನೆಯಲಿ ಬೆಳಕು ಬೀರಿದವನು
ಪಾತಾರಗಿತ್ತಿ ಪಕ್ಕ,ನೋಡಿದ್ಯೇನೆ ಅಕ್ಕ ಪದ್ಯದಿ
ಮಕ್ಕಳ ಮುಗ್ಧ ಮನವನು ಸೆಳೆದವನು

ಜ್ಞಾನಪೀಠ ಪ್ರಶಸ್ತಿಯನು ತಂದುಕೊಟ್ಟ ಕೃತಿ
ಬರೆದರು ಬೇಂದ್ರೆಯವರು ನಾಕುತಂತಿಯನು
ಭಕ್ತಿ ಮಾಧುರ್ಯದಲಿನ ಪ್ರೇಮಶಕ್ತಿಯು
ಗೆಲ್ಲುವುದು ಕೋಟಿಕನ್ನಡಿಗರ ಮನವನು

ಡಾ.ಸುಮತಿ ಪಿ



[31/01, 8:26 PM] +91 87225 56136: ಕವನವಾಗು ಬಾ ಭಾವವೇ 



ನಗುವ ಮುಖದೊಳಗೊಂದು ಅಳುವ ಮಗುವಿನ ಛಾಯೆ
ಹಗಲರಳಿ ಬೀಗಿರಲು ಒಂಟಿ ರಾತ್ರಿಯ ಮಾಯೆ
ಮೂಲೆಯೊಳಡಗಿದ ಕಸದಂತೆ ನಲುಗದಿರು ಓ ಮನವೇ
ಮಾತು ಮೌನವ ಮೀರಿ ಕವನವಾಗು ಬಾ ಭಾವವೇ..


ಜಗದಗಲ ಅನವರತ ಕನಸುಗಳು ಓಡುತಿವೆ 
ಹೆಗಲೊಳೆತ್ತಿದ ಭಾರ ಇಡಲೆಲ್ಲಿ ಜಾಗವಿದೆ?
ಮೆದುವೊಮ್ಮೆ ಹದವೊಮ್ಮೆ ಗಡಸುತನ ನಡುನಡುವೆ
ಬಿಗುಮಾನ ತೊರೆಯುತಲಿ ಕವನವಾಗು ಬಾ ಭಾವವೇ...


ಹಿಂದು ಮುಂದಿನ ತವಕ,ಇಂದು ನಾಳೆಯ ಪುಳಕ
ಬಂಧಗಳ ತಕಧಿಮಿತ, ಗಂಧಗಳೆಡೆಗಿನ ಸೆಳೆತ
ಸಂಧಿಯಲಿ ಕಳೆದ್ಹೋದ ಅತ್ಯಾಪ್ತ ಒಲವೇ
ಸಂಭವಿಸು ಮತ್ತೊಮ್ಮೆ ಕವನವಾಗು ಬಾ ಭಾವವೇ...


ವಿದ್ಯಾಶ್ರೀ ಅಡೂರ್
ಮುಂಡಾಜೆ
[31/01, 8:28 PM] I F Malagi Sir: ಭತ್ತದ ತೊರೆ ಸ್ನೇಹ ಬಳಗ  ಕವನ ಸ್ಪರ್ಧೆಗೆ.

🌸 ರಾಷ್ಟ್ರಕವಿ  ದ.ರಾ.ಬೇಂದ್ರೆ 🌸

ಕನ್ನಡ ನಾಡಿನ ಕನ್ನಡ ಕಂಪಿನ ಕುಸುಮ ಅರಳಿತ್ತು..
ಸಾಧಕೇರಿಯಲಿ ಕನ್ನಡ ಸಾಹಿತ್ಯದ
ಸೂಸು ಗಂಧ ಹರಡಿತ್ತು..

ಆಡು ಭಾಷೆಯಲಿ, ಕನ್ನಡ ಭಾಷೆ ಅಂಗೈಯಲ್ಲಿ ಅರಳಿತ್ತು..
ಕನ್ನಡಿಗರ ಮನ ಮನ ದಲ್ಲಿ ನಲಿದಿತ್ತು
ಕರುನಾಡಲಿ ಸಿರಿನಾಡಲ್ಲಿ ಕನ್ನಡದ ಕಂಪ  ಹರಡಿತ್ತು..

ನಾಕುತಂತಿ ನಾಡಿಗರ ಹೃದಯದಲಿ ಮೀಟಿ ಮೀಟಿ ಮೊಳಗಿತ್ತು..
ಕನ್ನಡಿಗರ ತನುಮನ ಕುಣಿದಿತ್ತು.
ಸಾಹಿತ್ಯಕೆ ಜ್ಞಾನಪೀಠ ದೊರಕಿತ್ತು..

ಭರತ ಭೂಮಿಯಲಿ ಕನ್ನಡದ ಕೀರ್ತಿ ಮೊಳಗಿತ್ತು..
ಕನ್ನಡಮ್ಮನ ಕೀರ್ತಿ ಪತಾಕೆ ರಾಷ್ಟ್ರದಲ್ಲಿ ಹಾರಿತ್ತು..

ಬೇಂದ್ರೆ ಅಜ್ಜನ ಸಾಹಿತ್ಯ
ಕನ್ನಡ ರಾಗದಲಿ ನಾಲಿಗೆ ಮೇಲೆ ಕುಣಿದಿತ್ತು
ಹೊಸ ರೂಪ ಹೊಸ ಭಾವದಲ್ಲಿ ಅರಳಿ ಕಂಪ ಹರಡಿತ್ತು..

ವರಕವಿ ಮಹಾಕಾವಿ ರಾಷ್ಟ್ರ ಕವಿಯಾದರೂ..
ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಎಂದರು.
ಬದುಕು ಕಲುಸಿದ ಪಾಠದಲಿ ಹೃದಯ ಶ್ರೀಮಂತರಾದರು..

ಸುಖ ದುಖ್ಖದಲ್ಲಿ ನಗುನಗುತ ಬಾಳಿ ಬದುಕಿದರು..
ಬದುಕಲಿ ಹ್ಯಾಂಗ್ ಬದುಕ ಬೇಕು ಎಂಬ ಪಾಠ ಕಲಿಸಿದರು..
ಬಾಳಿನ ಕಡಲಾಗ ಬದುಕ ಮುಳಿಗಿಸ ಬೇಡ ಎಂಬ ಸಾರ..ಉಣಬಡಿಸಿ ಕನ್ನಡ ವರ ಕವಿಯಾದರು..

🌸ಡಾ. ಇಮಾಮ. ಮಳಗಿ. ಶಿಕಾರಿಪುರ.
[31/01, 8:29 PM] Shankar Kulal Teacher: ಬೇಂದ್ರೆ ಜನ್ಮದಿನ - ಸ್ಪರ್ಧೆಗಾಗಿ

 ಶೀರ್ಷಿಕೆ - ವರಕವಿ ಬೇಂದ್ರೆ

ಶಾರದೆಯ ದಯದಿಂದ ಕನ್ನಡದ ನೆಲದಲ್ಲಿ
ಹುಟ್ಟಿ ಬಂತೊಂದು ಪುಣ್ಯದ ಮುತ್ತು
ಕವಿಗಳ ಕಡಲಿಂದ ಸಾರಸ್ವತ ಲೋಕಕೆ
ಬಂತೊಂದು ಅಪರೂಪದ ಕವಿಮಣಿಯು||

ಗೀತಮಯ ಜನಪದ ಸಂಗೀತಮಯ
ಭಾವಮಯ ನಾದವು ಕರುಣಾಮಯ
ಚೆಲುವಿನ ಸುಂದರ ಪಾತರಗಿತ್ತಿಯು
ನುಡಿಸಲು ಕಾವ್ಯದ ಗುಂಜಾರವನು||

ಚಿಣ್ಣರಿಗಾಗಿ ಕರಡಿಯ ಕುಣಿಸುತ
ಪ್ರೇಮಿಗಳೆದೆಯಲಿ ಮೇಘದೂತ
ಆಂಗ್ಲರ ವಿರೋಧ ನರಬಲಿಯಲ್ಲಿ
ನಾದಲೀಲೆಯ ತೋರುತ ಬೀರುತ||

ಗಂಗಾವತರಣದ ಅದ್ಭುತ ಚೆಲುವು
ಅರಳು ಮರುಳಿಗೆ ಬಿರುದು ಸಂಮಾನ
ವರಕವಿಯೆಂದು ಭೂಷಿತ ಬೇಂದ್ರೆ
ಮರೆಯಲುಂಟೆ ಧಾರವಾಡದೀ ಅಜ್ಜನ||

ತಾಯಿ ಅಂಬಮ್ಮನ ಮರೆಯದೆ ಎಂದೂ
ಕಾವ್ಯನಾಮದಿ ಅಂಬಿಕಾತನಯದತ್ತ ನಾದರು
ನಾಕು ತಂತಿಯ ಮೀಟಿ ರಾಗ ಭಾವದಿ
ಜ್ಞಾನಪೀಠವ ಪಡೆದ ವರಕವಿಯಿವರು||

ಶಂಕರ ಕುಲಾಲ ಪರ್ಕಳ
ಉಡುಪಿ ತಾಲೂಕು ಮತ್ತು ಜಿಲ್ಲೆ.
[31/01, 8:31 PM] +91 91641 49065: ಬತ್ತದ ತೊರೆ ಸ್ನೇಹ ಬಳಗ,
ಕಾರಂತಜ್ಜನ ನೆರಳಿನಡಿಯಲ್ಲಿ..
(ಕಲೆ ಹಾಗೂ ಸಾಹಿತ್ಯ ವೇದಿಕೆ)
ದಿನಾಂಕ:೩೧/೧/೨೩.
ಮಂಗಳವಾರ.
ಕವನ ರಚನೆ ಸ್ಪರ್ಧೆ
ವಿಷಯ
ನಾಕುತಂತಿ ಖ್ಯಾತಿಯ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ದ ರಾ ಬೇಂದ್ರೆ ಅವರ ಜನ್ಮದಿನದ ಅಂಗವಾಗಿ


         ಶೀರ್ಷಿಕೆ

*ಅನನ್ಯ ರತ್ನ*

ಕರುನಾಡಿನ ಶ್ರೇಷ್ಠ ಕವಿಗಳಲೊಬ್ಬರು
ವರಕವಿ ದ. ರಾ. ಬೇಂದ್ರೆ ಯವರು
ಕಾವ್ಯಕ್ಕೆ ಪ್ರೇರಣೆ ನೀಡಿತು ಸಾಧನ ಕೇರಿ 
ಮುಡಿಗೇರಿಸಿತು ಪ್ರಶಸ್ತಿಗಳ ಗರಿ

ಕೃಷ್ಣಕುಮಾರಿ ಗರಿ ಸಖೀಗೀತ
ಕವನ ಸಂಕನಗಳ ಒಡಲಸುತ
ಹುಚ್ಚಾಟ ಹೊಸ ಸಂಸಾರ
ಸುಂದರ ನಾಟಕದ ಸೂತ್ರಧಾರ

ಬಣ್ಣಿಸಿದರು ನಿಸರ್ಗದ ಭವ್ಯತೆ
ಸವಿದೆವು ಆನಂದದ ದಿವ್ಯತೆ
ಅರಳು ಮರಳಿಗೆ ಪದ್ಮ ಭೂಷಣ
ಕಂಬನಿ ಬರಿಸಿದ ಮೌನ ಪಯಣ

ವಿದ್ಯೆ ಕಲಿಸಿದ ಗುರುವು
ನೋವುಂಡ ಮನವು
ಬ್ರಿಟಿಷರ ವಿರುದ್ಧ ನಿಂತ ಪರಿ
ಜೈಲು ಕಂಬಿಗಾದರು ಗುರಿ 

ಜ್ಞಾನಪೀಠ ಬಂತು ನಾಕುತಂತಿಗೆ
ಅದುವೇ ಕರ್ನಾಕದ ಸಿರಿವಂತಿಗೆ
ಸಾಹಿತ್ಯದ ವಿರಾಟ ಸ್ವರೂಪ
ಧಾರವಾಡದ ಅನರ್ಘ್ಯ ರತ್ನದೀಪ

- ಶೋಭಾ ದಿನೇಶ್ ಉದ್ಯಾವರ
[31/01, 8:32 PM] Vijaya G. Madam Wrtr: ಬತ್ತದ ತೊರೆ ಸ್ನೇಹ ಬಳಗ
ದ ರಾ ಬೇಂದ್ರೆಯವರ ಜನ್ಮ ದಿನದ ನಿಮಿತ್ತ ಕವನ ರಚನೆ
****************************
          ವರಕವಿ
****************************
ಕಾವ್ಯ ಪ್ರತಿಭೆಯಲಿ ಜಗವ ಸೆಳೆಯಿತು
ಧಾರವಾಡದ ಸಾಧನಕೇರಿಯು
ಶ್ರಾವ್ಯ ಕವನದ ನಾಕುತಂತಿ ಮೀಟಲು
ಹಾರವಾಯ್ತು ಜ್ಞಾನಪೀಠದ ಸಿರಿಯು

ಬಡತನಕೆ ಸವಾಲಾಗಿ ನಿಂತವರೇ
ನೊಂದು ಬೆಂದು ಬೆಂಡಾದ ಬೇಂದ್ರೆ
ಕಡೆತನಕ ಸಾಧನೆಯ ಹಾದಿಯಲ್ಲಿ
ಮಿಂದು ಕೊಟ್ಟರು ಸಾಹಿತ್ಯದ ಮುದ್ರೆ

ರಸವೇ ಜೀವನ ವಿರಸವೇ ಮರಣ
ಸಮರಸದಲ್ಲಿದೆ ಸಂತಸದ ಜೀವನ
ಖುಷಿಯನ್ನು ಬಿತ್ತರಿಸಿದರು ವರಕವಿ
ತಮವಡಗಿಸಿದ ಶಬ್ಧ ಗಾರುಡಿಗ 

ಮಾತಿನಲ್ಲಿತ್ತು ಮಾಂತ್ರಿಕತೆಯ ಮೋಡಿ
ಅಂಬಿಕಾತನಯರ ಬಾಳ ವೈಖರಿ
ಛಾತಿಯಲಿ ಬರೆದರವರು ನರಬಲಿ
ಕಂಬಿಯೊಳಗೂ ದಿಟ್ಟತೆಯ ತೋರಿ

ಬಾಗಲಿಲ್ಲ ಬೀಗಲಿಲ್ಲ ಸರಳ ಬದುಕು
ಕಂಡದ್ದು ಕಂಡಂತೆ ನುಡಿವ ಶುದ್ಧಮಾತು
ಸಾಗಿಬಂತು ಶ್ರಾವಣದ ಕವಿಗೆ ಪದ್ಮಶ್ರೀ
ತಂಡದೋಪಾದಿಯಲಿ ಸಮ್ಮಾನಗಳ ಸಿರಿ 

ಹೆಮ್ಮೆನೀಡಿ  ಕರುನಾಡ ತಾಯ್ಮಡಿಲಿಗೆ
ಅಮರರಾದರು ಬಿಟ್ಟಿಲ್ಲಿ ನೆನಪಿನಾ ಹೆಜ್ಜೆ
ತಮ್ಮತನವ ಮಾದರಿಯಿತ್ತ ಗುರುವೆ
ನಮನವು ಜನ್ಮದಿನದ ಸವಿನೆನಪಿಗಾಗಿ   

ಶ್ರೀಮತಿ ವಿಜಯಾ ಜಿ ಶೆಟ್ಟಿ
ಸಿರ್ಸಿ(ಉತ್ತರ ಕನ್ನಡ )
[31/01, 8:38 PM] Laxmi V Bhat Wrtr: *ಶಬ್ದ ಗಾರುಡಿಗ ಬೇಂದ್ರೆ*

ನೆರಳನೀಯುವ ದೈತ್ಯವೃಕ್ಷವು 
ಸರಳ ಸಜ್ಜನ ಬೇಂದ್ರೆಯು
ಅರಳು ಮರಳಿನ ಪಂಚ ಕಾವ್ಯದ
ಬರೆಹವಿತ್ತಿಹ ಯೋಗಿಯು ||

ನಾಕು ತಂತಿಯ ವೀಣೆ ಮೀಟಿದ
ನಾಕ ಲೋಕದ ಐಸಿರಿ 
ಬಾಕಿ ಎಲ್ಲವು ಶೂನ್ಯವಿಲ್ಲಿಯು
ಬೇಕು ಶಬ್ದದ ವೈಖರಿ ||

ಹತ್ತು ದಿಕ್ಕಿಗು ಕಾವ್ಯ ಸೌರಭ 
ಸುತ್ತ ಹರಡಿದ ವರಕವಿ
ಮುತ್ತಿನಂತಹ ಮಾತನಾಡಿದ 
ಚಿತ್ತ ಶುದ್ಧದ ರಸಕವಿ ||

ಸರಸ ಜೀವನ ವಿರಸ ಮರಣವು
ಕರೆಯ ಕೊಟ್ಟಿಹ ಸಾರಥಿ 
ಕೊರತೆ ನೂರನು ಕಾಣದಂತೆಯೆ
ಮರೆಯಲಿಟ್ಟಿಹ ಕೀರುತಿ || 

ನೂರು ದುಗುಡವ ಮೆಟ್ಟಿ ನಿಂತಿಹ
ಮೇರು ಹೃದಯದ ಕಣ್ಮಣಿ 
ಸಾರ ಸತ್ತ್ವದ ರಚನೆಯಿತ್ತಿಹ
ಭಾರತಾಂಬೆಯ ದಿನಮಣಿ ||

ಒಲವೆ ಜೀವನ ಸಾಕ್ಷಾತ್ಕಾರವು
ಬಲವು ತುಂಬಿದ ಬದುಕಿಗೆ 
ಕುಲದ ಏಳ್ಗೆಯ ಮರೆತು ಲೋಕಕೆ
ಹಲವು ಕಾಣ್ಕೆಯು ಜಗತಿಗೆ ||


ಲಕ್ಷ್ಮೀ ವಿ ಭಟ್ 
ಮಂಜೇಶ್ವರ 
31- 01-2023
[31/01, 9:07 PM] Manjula Ba: ಬತ್ತದ ತೊರೆ ಸ್ನೇಹ ಬಳಗಕ್ಕೆ ನನ್ನ ಈ ಕವನ " ವರನಾದ ವರಕವಿ "
ಕವನಕ್ಕೆ ಆಗಿರುವಿರಿ ನೀವು ಆಸ್ತಿ           ನಿಮ್ಮ ಕವನದಿಂದ ನಲಿವು ಜಾಸ್ತಿ            ಮನಕಾಗುವುದು ನೆಮ್ಮದಿಯ ತೃಪ್ತಿ         ನಿಮಗೆ ಇನ್ನೂ ಲಭಿಸಲಿ ಗೌರವ ಪ್ರಶಸ್ತಿ 

ನೀಡಿದಿರಿ ನಮಗೆ ನಾಕುತಂತಿಯ ಸವಿ       ನಿಮ್ಮಲ್ಲಿದೆ ಕವನಗಳಿರುವ ಬೃಹತ್ ಗವಿ     ನಮ್ಮೆಲ್ಲರ ಬಾಳಿಗೆ ಬೆಳಕಾಗಿರುವ ರವಿ    ನೀವೆ ನಮ್ಮ ಕನ್ನಡಕ್ಕೆ ವರವಾದ ವರಕವಿ

ಸಖೀಗೀತ,ನಾದಲಿಲೇ,ಗರಿ,ಜೀವಲಹರಿ    ನಮನ,ವಿನಯ,ಪರಾಕಿ,ಕಾಮಕಸ್ತೂರಿ   ಇವೆಲ್ಲವುಗಳು ನಮಗೆ ದೊಡ್ಡ ಮಾದರಿ   ಮುಂದೆ ಇವುಗಳೆ ನಮ್ಮ ಬದುಕಿಗೆ ದಾರಿ

ಕನ್ನಡಕ್ಕೆ ದೊರೆತಂತಹ ಗಣ್ಯಾತಿ ಗಣ್ಯ   ಸಿಕ್ಕಿದೆ ಎಲ್ಲ ಕಡೆಯು ನಿಮಗೆ ಮಾನ್ಯ    ನಿಮ್ಮನ್ನು ಪಡೆದ ನಾವೆಂದಿಗೂ ಧನ್ಯ      ಕನ್ನಡಕ್ಕೆ  ನೀವು ಸಿಕ್ಕಿದ್ದು ನಮ್ಮ ಪುಣ್ಯ

ನಿಮ್ಮ ಕವನ ನಮ್ಮ ಮನದಲ್ಲಿ ಭರ್ತಿ  ನಿಮ್ಮಯ ಕವನಗಳೇ ನಮಗೆ ಸ್ಪೂರ್ತಿ         ನಿಮ್ಮಿಂದ ಕನ್ನಡಕ್ಕೆ ದೊರಕಿದೆ ಕೀರ್ತಿ     ನೀವೆ ಕನ್ನಡಕ್ಕೆ ದೊರೆತ ಸುಂದರ ಮೂರ್ತಿ            
                  -ಮಂಜುಳಾ.ಬ.ಕುರಬೇಟ
[31/01, 9:15 PM] G H ಸಂಕಪ್ಪ: ಬತ್ತದ ತೊರೆ ಸ್ನೇಹ ಬಳಗ
ಕಾರಂತಜ್ಜನ ನೆರಳಿನಡಿಯಲ್ಲಿ
(ಕಲೆ ಹಾಗೂ ಸಾಹಿತ್ಯ ವೇದಿಕೆ)
_________________________
೩೧.೦೧.೨೦೨೩ ಕವನ ರಚನೆ
ದ.ರಾ.ಬೇಂದ್ರೆ ಜನ್ಮದಿನ
_______________________________________________________________________________________________




                                           ಶೀರ್ಷಿಕೆ : ಯುಗದ ಕವಿ ವರಕವಿ
_______________________________________________________________________________

ತುಂಬಿ ಬಂದಿತ್ತಾ ತಂಗಿ ತುಂಬಿ ಬಂದಿತ್ತಾ
ಅಂಬಿಕಾತನಯದತ್ತರ ಗಾನ ಮನವ ತುಂಬಿತ್ತಾ

ವರಕವಿಯ ಒಂದೊಂದೂ ಕವನದ ಚರಣ
ಸ್ವರ ಮಾಧುರ್ಯವೆಂದೂ ಹಸಿರು ತೋರಣ

ಹುಣ್ಣುಮೆ  ಚಂದಿರನ  ಹೆಣ ಬಂತು ಮುಗಿಲಾಗ
ಕಣ್ಣೀರು ತರಿಸುವ ಮಗುವಿನಗಲಿಕೆಯ ರಾಗ
 
ಮುಗಿಲಮಾರಿಗೆ ರಾಗರತಿಯ ರಂಗು ಏರುತ್ತಿತ್ತಾ
ಯುಗ ಯುಗಾದಿ ಕಳೆದರೂ ಬೇಂದ್ರೆ ಗಾನ ಕೇಳುತ್ತಿತ್ತಾ

ಅಂತರಂಗದಾ ಮೃದಂಗ ಅಂತು ಥೋಂ ತನಾನ
ಎಂತಹವರೂ ತಲೆದೂಗುವ ದಿವ್ಯ ಭಾವಾಭಿಮಾನ

ಇಳಿದು ಬಾ ತಾಯೆ ಎಂದು ಬರೆದ ಗಂಗಾವತರಣ
ತಳಿರು ತೋರಣಗಳಿಂದ ಸ್ವಾಗತಿಸಿ ಕರೆದ ಶ್ರಾವಣ 

ಇನ್ನು ಯಾಕೆ  ಬರಲಿಲ್ಲವ್ವಾ  ಹುಬ್ಬಳ್ಳಿಯಾವ  ಗಾನದ ಸೊಗಡು
ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕ ಹಾಡು

ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ
ಮೂಡಿಸಿತು ಧನ್ಯತೆ ಪ್ರಕೃತಿಯ ರಸಾನುಭವದಲ್ಲಿ ತೊಯ್ದು

ಘಮ ಘಮ ಘಮ್ಮಾಡಿಸ್ತಾವ ಮಲ್ಲಿಗೆಯ ಕಂಪು 
ಸುಮ ಸುಮ ಭೃಂಗದ ಬೆನ್ನೇರಿ ಬಂದ ಇಂಪು

ನಾರಿ ನಿನ್ನ  ಮ್ಯಾರಿ ಮ್ಯಾಗ ನಗಿ ನವಿಲು ಆಡುತ್ತಿತ್ತಾ
ಯಾರಿಗೂ ಹೇಳೋಣು ಬ್ಯಾಡ ಗಾನ ಹಾಡುತ್ತಿತ್ತಾ


ಬಂಗಾರ ನೀರ ಕಡಲಾಚೆಗಿದೆ ನೀಲ ನೀಲ ತೀರ
ಸಿಂಗಾರದಾಭರಣ ಕನ್ನಡ ಸಾಹಿತ್ಯಕಿದು ಹೂವಿನಹಾರ

ಕವನ ಸಂಕಲನ  ನಾಕು ತಂತಿಗೆ ಜ್ಞಾನಪೀಠ
 ಭುವನೇಶ್ವರಿ  ಕನ್ನಡ  ತಾಯಿಗೆ ನೀವೆಂದೂ ಶಿರಕೆ ಪೇಟ


___________೩೧.೦೧.೨೦೨೩  ಬೇಂದ್ರೆ ಕವನ ರಚನೆ____________________
✍️
ಜಿ.ಹೆಚ್ .ಸಂಕಪ್ಪ
ಚನ್ನಗಿರಿ 
9066643902
[31/01, 9:22 PM] Usha Dinesh Wrtr: ಬತ್ತದ ತೊರೆ ಕವನ ಸ್ಪರ್ಧೆಗಾಗಿ
ವರಕವಿ ಬೇಂದ್ರೆ-ನುಡಿ ನಮನ
----------------- ------------------
ಕರಮುಗಿಯುವ ಕವಿಕುಲ ತಿಲಕರಿಗೆ
ಸಾಧನೆಯ ಗೈದ ಮಹೋದಯರಿಗೆ
ಸರಳ ವಿರಳ ವ್ಯಕ್ತಿತ್ವದ ಸಿದ್ದಿಪುರುಷರಿಗೆ
ಶ್ರೇಷ್ಠ ಗೌರವಗಳ ಪಡೆದ ಮಹಾಕವಿ ಪ್ರತಿಭೆಗೆ

ಬೇಂದ್ರೆ ಅಜ್ಜನಾಗಿ ಪರಿಚಿತರು ಜನತೆಗೆ
ತಾಯಿ ಅಂಬಕ್ಕರು  ಅಕ್ಕರೆಯು ಅವರಿಗೆ
ಮಾತು ಹರಿತವಾದರೂ ದಾರಿಯು ಅರಿವಿಗೆ
ಮೃದು ಹೃದಯಿ ಇವರು ಆಂತರ್ಯದ ಪ್ರೀತಿಗೆ

ರಚಿಸಿದ ಕೃತಿಗಳು ಅತ್ಯಮೂಲ್ಯವಾದವು
ಅರಳಿದ ಗೀತೆಗಳು ಜಗಜನಿತವಾದವು
ಎಲ್ಲ ಪ್ರಕಾರದಲಿ ಕಾವ್ಯಗಳು ಗೆದ್ದವು
ಕಾವ್ಯ ಲೋಕಕೆ ಕೊಡುಗೆ ಚಿರಸ್ಥಾಯಿಯಾದವು

ಕಡು ಬಡತನದಲ್ಲೂ ಹೃದಯ ಶ್ರೀಮಂತ
ಕರುನಾಡ ಜನತೆಗೆ ವರಕವಿಯು ಈತ
ಕಾವ್ಯನಾಮವು ಇವರದು ಅಂಬಿಕಾತನಯದತ್ತ
ನಾಕುತಂತಿಗಾಗಿ ಜ್ಞಾನಪೀಠ ಪಡೆದಾತ

ಕಾವ್ಯಗಂಗೆಯನ್ನು ಹರಿಸಿ ಮೆರೆಸಿದರು
ಬೆಂದು ಬೆಂದು ಬೇಂದ್ರೆಯಾದರು
ಕನ್ನಡದ ಕಾಳಿದಾಸರೇ ಇವರಾದರು
ಕಾವ್ಯಲೋಕದಲ್ಲಿ ಅಜರಾಮರರಾದರು

ಉಷಾ ದಿನೇಶ್
[31/01, 9:23 PM] +91 97411 94377: *ಬತ್ತದ ತೊರೆ ಸ್ನೇಹ ಬಳಗದ ಸ್ಪರ್ಧೆಗಾಗಿ✍️*
ವಿಷಯ : *ನಾಕುತಂತಿ ಖ್ಯಾತಿಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ.ಬೇಂದ್ರೆ ಅವದ ಜನ್ಮದಿನದ ಅಂಗವಾಗಿ ಕವನ ರಚನೆ*
ದಿನಾಂಕ: *೩೧/೦೧/೨೦೨೩* 
ವಾರ: *ಸೋಮವಾರ* 
ಶೀರ್ಷಿಕೆ: *ದಾರ್ಶನಿಕ ಮಹಾಕವಿ* 
~~~~~~~~~~~~~~~~~~~~~~~~~

ರಾಮಚಂದ್ರ ಅಂಬಿಕಾರವರ ವರ ಪುತ್ರರು
ಗದಗ ಪಟ್ಟಣದ ಶಿರಹಟ್ಟಿ ಗ್ರಾಮದವರು
ಓದನು ಮುಗಿಸಿ ಅಧ್ಯಾಪಕರಾದವರು
ದಾರ್ಶನಿಕ ಮಹಾಕವಿ ಬೇಂದ್ರೆಯವರು//

ಕಾಲಕಾಲಕ್ಕೆ ಬಾಳುವಂತ ಕವನ ರಚಿಸಿದರು
ಕನ್ನಡ ನುಡಿ ನಾಡಿಮಿಡಿತದಂತೆ ಪಸರಿಸಿದರು
ಕಾವ್ಯನಾಮಕೆ ಅಂಬಿಕಾತನಯದತ್ತ ಎಂದರು
ಸಾಹಿತ್ಯ ರಂಗವನ್ನು ಶ್ರೀಮಂತ ಗೊಳಿಸಿದರು//

ನಾಟಕ ,ವಿಮರ್ಶೆ, ಲೇಖನಗಳು ಬರೆದರು
ಪರಭಾಷೆಗೆ ತನ್ನದೇ ಚಾಪು ಮೂಡಿಸಿದರು
ಹಲವಾರು ಕವನ ಸಂಕನಗಳ ಹೊರತಂದರು
ನಾಕುತಂತಿ ಕೃತಿಗೆ ಜ್ಞಾನಪೀಠ ಸ್ವೀಕರಿಸಿದರು//

ಅಪ್ಪಟ ದೇಶಭಕ್ತ ದೇಶಪ್ರೇಮಿ ಇದ್ದವರು
ಸ್ವಾತಂತ್ರ್ಯ ಚಳುವಳಿಯಲ್ಲಿ ಹೆಜ್ಜೆ ಇಟ್ಟವರು
ಕಷ್ಟ ಕಾರ್ಪಣ್ಯಗಳನು ಎದುರಿಸಿ ನಡೆದರು
ಸಮಯ ಪರಿವಿಲ್ಲದೆ ಅವಿರತ ಶ್ರಮಿಸಿದರು//

ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದರು
ಅತ್ತುನ್ನತದ ಪ್ರಶಸ್ತಿಗಳಿಗೆ  ಭಾಜನರಾದರು
ನಾಡ ಸೇವೆಗೆ ಜೀವನ ಮುಡುಪಾಗಿಟ್ಟವರು
ಜನಮನದಿ ಶಾಶ್ವತ ನೀವು ಅಜರಾಮರರು//

 *ರಚನೆ: ಹೆಚ್ ಎಸ್ ಗೌಡರ ಇಳಕಲ್ಲ ...✍️*
[31/01, 9:34 PM] Veena Krishna Murthy: ಬತ್ತದ ತೊರೆ ಸಾಹಿತ್ಯ ಬಳಗಕ್ಕಾಗಿ- ದ.ರಾ.ಬೇಂದ್ರೆ ಕುರಿತ ಸ್ವರಚಿತ ಕವನ.
ಶೀರ್ಷಿಕೆ:-  ಬೇಂದ್ರೆ ಅಂದ್ರೆ ಇವರೆಂದ್ರೇ.
..................................................
ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ಧಾರವಾಡದ ಸಾಧನಾ ಕೇರಿಯವರೆಂದ್ರೇ
*ನಾಕು ತಂತಿ* ಮೀಟಿ ಮಿಡಿದ ಗಾರುಡಿಗ
ಕನ್ನಡಿಗರ ಮನದಲ್ಲಿಹುದಿವರಿಗೆ ಜಾಗ!

ಭಾವ ತರಂಗದಲೆಯಲ್ಲಿ ಅಕ್ಷರದಾಟ
ಕವನ ಕವನದೆಳೆಯಲ್ಲಿ ಸಾಹಿತ್ಯ ಕೂಟ
ಪದ ಪುಂಜಗಳು ರಸ ತುಂಬಿದ ಭಾವದಲ್ಲಿ
ಸಾಹಿತ್ಯ ಸಾರವು ಕಾರಂಜಿಯಂತೆ ಮನದಲ್ಲಿ!

ಮೂಡಲ ಮನೆಯ ಮುತ್ತಿನ ನೀರಿನ
ನೀ ಹಿಂಗಾ......ನೋಡಬ್ಯಾಡ ನನ್ನ..
ಪಾತರಗಿತ್ತಿ ಪಕ್ಕಾ....ನೋಡಿದ್ಯಾನೆ ಅಕ್ಕಾ
ಮರೆಯಲಾಗದೆಂದಿವರನ್ನು ನಾವು ಪಕ್ಕಾ!

ಧಾರವಾಡದ ಪೇಡಾ ಅಂದ್ರೆ ಬೇಂದ್ರೆ
ಸವಿದಷ್ಟು ಬಲು ಮಧುರ ನೀವ್ ಓದಿದ್ರೇ
ಕಾರ್ಪಣ್ಯದ ಬದುಕುಲ್ಲು ಸಾಹಿತ್ಯ ಕಲ್ಲು ಸಕ್ಕರೆ
ಸಂತೈಸಲು ಸಾಕಿತ್ತವರಿಗೆ ಮಡದಿ ನಕ್ಕರೆ!

ಕನ್ನಡದ ಕಣ್ಮಣಿ- ಜ್ಞಾನ ಪೀಠ ಶಿರೋಮಣಿ
ಬದುಕು ಜಟಕಾ ಬಂಡಿಯ ಗಾಲಿಯಲಿ
ವಿಧಿ ಅದರ ಸಾಹೇಬ ಬರೆದಿರುವ ಸಾಹಿತ್ಯ
ಇವರಿಗಿವರೇ ಸರಿಸಾಟಿ ಇದು ನಿತ್ಯ ಸತ್ಯ.

ವೀಣಾ ಕೃಷ್ಣಮೂರ್ತಿ, ದಾವಣಗೆರೆ.
[31/01, 9:34 PM] ಮಾಲತಿ ರಮೇಶ್: ಸ್ಪರ್ಧೆಗಾಗಿ:- ಕವನ ರಚನೆ
ವಿಷಯ:- ನಾಕುತಂತಿ ಖ್ಯಾತಿಯ  ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ದ.ರಾ.ಬೇಂದ್ರೆ ರವರ ಜನ್ಮದಿನದ ಅಂಗವಾಗಿ ಕವನ ರಚನೆ
ಶೀರ್ಷಿಕೆ:- ಕನ್ನಡದ ಮೇರು ಪರ್ವತ

ಕನ್ನಡನಾಡಿನ ಶ್ರೇಷ್ಠ ಕವಿ ಇವರು
ಕನ್ನಡಿಗರ ಮನಮನದಲ್ಲೂ ಇರುವರು
ನಾಕುತಂತಿಗೆ ಜ್ಞಾನಪೀಠ ತಂದವರು
ಇವರೇ ನಮ್ಮ ದ.ರಾ.ಬೇಂದ್ರೆಯವರು

ಅಂಬಿಕಾತನಯ ಎಂಬ ನಾಮಾಂಕಿತ
ಹೆಮ್ಮೆಯ ಜ್ಞಾನ ಪೀಠ ಪುರಸ್ಕೃತ
ಕಾವ್ಯಕ್ಕೆ ಪ್ರೇರಣೆ ನೀಡಿದ ಮಹಾತ್ಮ
ನಾದಲೀಲೆಯ ಜಗಕೆ ತೋರುತ

ಮುಗಿಲ ಮಲ್ಲಿಗೆಯ ಸರದಾರ
ಕೃಷ್ಣ ಕುಮಾರಿಯ ಹರಿಕಾರ
ಕರುನಾಡಿನ ಸೌಂದರ್ಯ ರತ್ನ
ಕನ್ನಡ ಸಾಹಿತ್ಯದ ಮೇರು ಪರ್ವತ

ಸುಂದರ ಕವನಗಳ ಸಂಗಮ
ಸಮರಸವೇ ಜೀವನದ ಜಂಗಮ
ಕನ್ನಡ ಸಾಹಿತ್ಯಕ್ಕೆ ಅಮರರಾದರು
ಕರುನಾಡಿನ ವಿಶ್ವ ಕೋಶರು

ಅದೆಷ್ಟೋ ಕವನ ಸಂಕಲನಗಳು
ಕವಿರತ್ನರಿಗೆ ಶುಭಾಶಯಗಳು
ಹುಟ್ಟು ಹಬ್ಬದ ಸವಿನೆನಪುಗಳು
ನಿಮಗೆ ನಮ್ಮೆಲ್ಲರ ನಮನಗಳು

✍️ ಮಾಲತಿ ರಮೇಶ್ ಕೆಮ್ಮಣ್ಣು

ಹುಟ್ಟು ಹಬ್ಬದ ನೆನಪಿಗಾಗಿ
[31/01, 9:37 PM] +91 99646 77549: ಸ್ಪರ್ಧೆಗಾಗಿ
ಬತ್ತದ ತೊರೆ ಸ್ನೇಹ ಬಳಗ
ಶೀರ್ಷಿಕೆ: ವರಕವಿ             

   
ಅಂಬಿಕಾತನಯರ ಭಾವ ವೀಣೆಯ ಮೀಟಲು
ನಾಕುತಂತಿಯ ನಾದ ಹೊಮ್ಮಿ ಬಂತು
ರಸಋಷಿಯ ತಪಸ್ಸಿಗೆ ಮೆರುಗು ತರಲು
ಜ್ಞಾನಪೀಠದ ಭಾಗ್ಯ ಒಲಿದುಬಂತು……….

ಅವಧೂತರ ಸಾಹಿತ್ಯ ಸೇವೆಯ ಸ್ಮರಿಸಲು
ಸಖೀ ಗೀತಾ ಗರಿಗೆದರಿತು
ಅರಳು ಮರಳು ಮತ್ತೆ ಚಿಗುರಲು
ಜೀವನ ಲಹರಿ ಉಯ್ಯಾಲೆ ತೂಗಿತು…….

ವರಕವಿಯ ಮುಗಿಲ ಮಲ್ಲಿಗೆ ಅರಳಲು
ಚೈತ್ರಾಲಯದಿ ಮತ್ತೆ ಶ್ರಾವಣ ಬಂತು
ಸಾಹಿತ್ಯ ಪ್ರೇಮಿ ತುತ್ತೂರಿ ಊದಲು
ನಿರಾಭರಣ ಸುಂದರಿಯ ಮೊಗ ನಕ್ಕಿತು……

ಶಬ್ದ ಗಾರುಡಿಗನು ಒಲವೇ ಬದುಕೆನ್ನಲು
ಸಾಹಿತ್ಯದ ಮೊಗ್ಗು ಅರಳಿತು
ನೂರೊಂದು ಕವನ ಸಾವಿರ ಭಾವ ಚೆಲ್ಲಲು
ದತ್ತಾತ್ರೇಯನ ಜನುಮ ಪಾವನವಾಯಿತು…..

ಪ್ರಶಸ್ತಿಯ ಸರಮಾಲೆಯ ಧರಿಸಲು
ಮುಕ್ತ ಕಂಠದಿ ಹಾಡಿ ಹೊಗಳಿತು
ಕರ್ನಾಟಕ ಕುಲ ತಿಲಕನ ನೆನೆಯಲು
ಹೃದಯ ಭಾವ ಲಹರಿ ತುಂಬಿ ಬಂತು…..

ಪ್ರಜ್ವಲಾ ಶೆಣೈ
ಕಾರ್ಕಳ
[31/01, 9:49 PM] Rekha G Nayaka Wrtr: ಬತ್ತದ ತೊರೆ ಸ್ನೇಹ ಬಳಗ ಸ್ಪರ್ಧೆಗಾಗಿ ,:ಕವನ 
ವರ ಕವಿದ.ರಾ ಬೇಂದ್ರೆ

ಕನ್ನಡಕ್ಕೆ ಗೌರವದ ಗರಿ ತಂದ ಕವಿ ಎಂದ್ರೆ,
ನಾಕುತಂತಿ ನುಡಿಸಿದ ನಮ್ಮ ದರಾ ಬೇಂದ್ರೆ,
ಹಕ್ಕಿ ಹಾರುತಿದೆ ನೋಡಿದಿರಾ ಇಲ್ಲಾಂದ್ರೆ,
ಅರಳು ಮರುಳಾಗಿಲ್ಲ ಇನ್ನು ಹೇಳುವೆ  ನಾ ನೀವೆಲ್ಲ ಬಂದ್ರೆ//

ಕವಿಯಾಗಿ ಶಿಕ್ಷಕರಾಗಿ ದುಡಿದ ಮಹನೀಯರು,
ಹೆಸರಾದರೂ ಕಾವ್ಯನಾಮದಿ ಅಂಬಿಕಾತನಯದತ್ತರು,
ಯುಗ ಯುಗಾದಿ ಕಳೆದರೂ ಹೊಸ ಯುಗಾದಿ ತಂದರು,
ಮೂಡಲ ಮನೆಯಲ್ಲಿ ಮುತ್ತಿನ ಎರಕವ  ಹೊಯ್ದರು//

ಮೊದಲ ಪ್ರಕಟಿತ ಕವನ ತುತ್ತೂರಿಯಾದರೂ,
ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ ಬಂದರೂ,
ಹಿಗ್ಗದೆ ಕುಗ್ಗದೆ ಸಂಯಮದಿ ಜೀವನ ನಡೆಸಿದರು,
ಕಳೆದುಕೊಂಡು ನೀ ಹಿಂಗ ನೋಡಬ್ಯಾಡ ಎಂದರು//

ಸಾಧನಕೇರಿಯಲ್ಲಿ ಅರಳದ ಅಪ್ರತಿಮ ಸಾಧಕ,
ಸಖಿಗೀತದಿ ತಿಳಿಸಿಹ ವೈವಾಹಿಕ ಜೀವನದ ಜಾತಕ,
ಎಲ್ಲರ ನೆಚ್ಚಿನ ವರ ಕವಿಯಾದ ಕವಿ-ದರ್ಶಕ,
ಕನ್ನಡ ಭಾಷೆಯ ಪುನರುಜ್ಜೀವನಗೊಳಿಸಿದರು ಕಾವ್ಯದ ಮೂಲಕ//

ನಾಗಲೀಲೆಯ ನಾದ ಹೊರಹೊಮ್ಮಿಸಿದರು,
ಮೇಘದೂತವ ಕನ್ನಡದಲ್ಲಿ ಬರೆದರು,
ಗಂಗಾವತರಣದಿ ಎಲ್ಲರ ಮನ ಮುಟ್ಟಿದರು,
ಮರೆಯಲಾರೆವು ನಿಮ್ಮ ಸಾವಿರ ಸಾವಿರ ವರುಷ ಸಂದರೂ//

✍️ ಶ್ರೀಮತಿ ರೇಖಾ ಜಿ ನಾಯಕ ಮುಖ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಕಣಬರ್ಗಿ ಬೆಳಗಾವಿ
[31/01, 9:52 PM] Savita Mudgal: ಸ್ಪರ್ಧೆಗಾಗಿ

ವಿಷಯ 🌺ದ. ರಾ. ಬೇಂದ್ರೆರವರ ಜನ್ಮ ದಿನದ ಅಂಗವಾಗಿ ಕವನ ರಚನೆ 🌺

🌺ನಮ್ಮ ಮುತ್ಯಾ ಬೇಂದ್ರೆ 🌺

ಧಾರವಾಡ ಸೀಮೆಯಲಿ ಜನನವು 
ಧರೆಯಲಿ ಸಾಹಿತ್ಯದ ಪಲ್ಲಕ್ಕಿಯು
ಕನ್ನಡದ ಭಾಷೆಯ ಕೀರಿತಿಯು
ನಮಗೀಗ ಸಂತೋಷದ ಔತಣವು||

ಬೀದ್ಯಾಗ ಹೊರಟರೆ ನಮ್ಮುತ್ಯಾಗಿಂದು 
ದೃಷ್ಟಿಯು ಆಗತಾದ ರತ್ನಕ್ಕಿಂದು
ಬಹಳ ಸುಂದರಾಂಗ ಆಗ್ಯಾರಿಂದು
ಎರಡು ಕಣ್ಣುಬಿಡಬ್ಯಾಡಿ ಮುತ್ಯಾಗಿಂದು ||

ನಾಕುತಂತಿ ಓದದಿದ್ದರೆ ವ್ಯರ್ಥವು
ಸಾಹಿತ್ಯ ಲೋಕದ ಅನರ್ಘ್ಯರತ್ನವು
ಕರ್ನಾಟಕದ ನೆಚ್ಚಿನ ವರಕವಿಯು
ಅಂಬಿಕಾತನದತ್ತ ನಾಮದೇಯ  ಬೇಂದ್ರೆಯವರು ||

ಯುಗದ ದಾರ್ಶನಿಕ ಮಹಾಕವಿಯು
ಉಪನ್ಯಾಸಕವನ್ನು ಮೆಚ್ಚುವಂತೆ ಮಾಡಿದವರು
ಜ್ಞಾನಪೀಠ ಕೊಟ್ಟ ಮಹಾತ್ಮಾರಿವರು
ಮರೆಯದ ಮಾಣಿಕ್ಯದಂತ ಕವಿಯಿವರು ||

ದುಃಖ ಬಂದ್ರು ಚಾಪು ಮೂಡಿಸಿದ ಕವನವು
ನೀ ಹಿಂಗ ನೋಡಬ್ಯಾಡ ಗೀತೆಯದು
ಮೂಡಲ ಮನೆಗಿಂದು ರಂಗು ತಂದವರು
ಅಂಬಿಕಾರಾಮಚಂದ್ರ ಮಗ ಮಹಾನ್ನರು||

125ನೇ ಜನ್ಮ ದಿನವಿದು ಅಜ್ಜನಿಗೆ
ಹೋಳಿಗೆ ತುಪ್ಪ ತಿನ್ನಿರಿ ಮರೆಯದೆ
ಸವಿಯೂಟ ಸವಿದ ಎಲ್ಲರಿಗೂ
ಶುಭಾಶಯಗಳು ತಿಳಿಸುವೆ ಮುತ್ಯಾರಿಗೂ ||

ಧನ್ಯವಾದಗಳು
ಸವಿತಾ ಮುದ್ಗಲ್
ಗಂಗಾವತಿ


ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...