Wednesday, January 12, 2022

ಬುದ್ಧಿವನದ ಕತೆಗಳು ಸಂಚಿಕೆ ೨: ಕಾಡಿನ ಹೊಸ ಆಯುಧಗಳು

 ಬುದ್ಧಿವನದ ಕತೆಗಳು: 

ಸಂಚಿಕೆ ೨: ಕಾಡಿನ ಹೊಸ ಆಯುಧಗಳು

Google Images


   .........ಮನುಷ್ಯರ ಜೊತೆ ಹೋರಾಡಲು ಪ್ರಾಣಿಗಳು ಸಿದ್ಧವಾಗುತ್ತಿದ್ದಾಗ ಕಾವ್ಯರಾಜ ಚತುರಮತಿಗೆಂದನು, " ಮಹಾರಾಜ ನಮ್ಮ ಪ್ರಾಣಿಗಳ ಹಳೆ ಅಸ್ತ್ರಗಳಾದ ಕೊಕ್ಕು, ರೆಕ್ಕೆ, ವಿಷ, ಇತ್ಯಾದಿಗಳ ಸಹಾಯ ಮಾತ್ರದಿಂದ ನಾವು ಮನುಷ್ಯರನ್ನು ಸೋಲಿಸಲಾಗದು. ನಮಗೆ ಇದಕ್ಕಾಗಿ ಅನೇಕ ತರಹದ ಹೊಸ ಅಸ್ತ್ರಗಳ ಸಹಾಯವು ಬೇಕಾಗುತ್ತದೆ". ಕಾವ್ಯರಾಜನ ಮಾತು ಚತುರಮತಿಗೆ ಸರಿ ಅನಿಸಿತು. ಅವನು ತನ್ನ ಸೇನಾಪತಿಯಾದ ವಾಯುವೇಗಿಎಂಬ ಚಿರತೆಯನ್ನು ಕರೆದು ಅಂದ, " ಓ, ವಾಯುವೇಗಿಯೇ ನಮ್ಮ ಕಾಡಿನ ಸಂಪತ್ತನ್ನು ರಕ್ಷಿಸಲು ನಮಗೆ ಆಧುನಿಕ ಶಸ್ತ್ರಾಸ್ತ್ರಗಳ ಅವಶ್ಯಕತೆ ಇದೆ. ನೀನು ಇವುಗಳ ವ್ಯವಸ್ಥೆಯನ್ನು ಮಾಡು". ವಾಯುವೇಗಿಯು ಚತುರಮತಿಯ ಅಪ್ಪಣೆಯಿಂದ ತನ್ನ ಬಳಗದವರನ್ನು ಕೆರದುಕೊಂಡು ಆದಿ ಮಾನವರಿದ್ದ ಅರಣ್ಯಕ್ಕೆ ಹೋಗಿ ಅವರ ಬಳಿ ಇದ್ದ ಪರಮಾಣು ಬಾಂಬ್, ಎ.ಕೆ.47, ಗನ್, ಯುದ್ಧ ವಿಮಾನಗಳು, ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಬುದ್ಧಿವನಕ್ಕೆ ಬಂದನು. ವಾಯುವೇಗಿಯು ತಂದ ಆಯುಧಗಳನ್ನು ಉಪಯೋಗಿಸುವ ತರಭೇತಿಯನ್ನು ಸೈನ್ಯಗುರುವೆಂಬ ಚಿರತೆಯು ನೀಡಿತು. ಹಕ್ಕಿಗಳು ಯುದ್ಧ ವಿಮಾನವನ್ನು ಓಡಿಸುವುದನ್ನು ಕಲಿತುಕೊಂಡವು. ಮೊಲ, ಅಳಿಲು, ಕರಡಿ, ಮಂಗಗಳು ಗನ್ ಅನ್ನು ಬಳಸುವುದನ್ನು ಕಲಿತುಕೊಂಡರು. ಹಾವುಗಳು ತಮ್ಮ ಬಾಯಲ್ಲಿ ಪರಮಾಣು ಬಾಂಬ್ ಗಳನ್ನು ಇಟ್ಟುಕೊಂಡು ಅದನ್ನು ಎಸೆಯುವ ತರಭೇತಿಯನ್ನು ಪಡೆದರು. 


Google images




         ಹೀಗೆ ಎಲ್ಲ ಪ್ರಾಣಿಗಳು ಯುದ್ಧಕ್ಕೆ ತಯಾರಿ ನಡೆಸಿದರು. ಒಂದು ದಿನ ಮಾನವರ ಒಂದು ಗುಂಪು ಬುದ್ಧಿವನಕ್ಕೆ ಬಂದು ಅಲ್ಲಿನ ಮರಗಳನ್ನು ಕಡಿಯಲು ಹೋದರು. ಆದರೆ ಅವರು ನೋಡುವುದೇನು ದಷ್ಟಪುಷ್ಟವಾಗಿ ಬೆಳೆದಿರುವ ಆನೆಗಳು ಹಾಗೂ ಕಾಡೆಮ್ಮಗಳು ಮರಗಳ ಸುತ್ತ ನಿಂತಿದ್ದರು. ಆ ಪ್ರಾಣಿಗಳ ಮೇಲೆ ಮನುಷ್ಯರು ಹೊಡೆಯಲು ಹೋದರು. ತಮ್ಮನ್ನು ಹೊಡೆಯಲು ಬಂದ ಮನುಷ್ಯರನ್ನು ಕಾಡೆಮ್ಮೆಗಳು ಒದ್ದವು. ಆನೆಗಳು ಅವರನ್ನು ತಮ್ಮ ಸೊಂಡಿಲಿನಲ್ಲಿ ಎತ್ತಿ ನದಿಗೆ ಹೋಗಿ ಮುಳುಗಿಸಿದರು. ಪ್ರಾಣಿಗಳ ಅಚಾನಕ್ ದಾಳಿಯಿಂದ ಮನುಜರು ಹೆದರಿ ತಮ್ಮ-ತಮ್ಮ ನಗರಗಳಿಗೆ ಮರಳಿದರು. ಕಾಡಿನಲ್ಲಿ ನಡೆದ ಸಂಗತಿಯನ್ನು ಅವರು ತಮ್ಮ ನಾಯಕರಿಗೆ ಹೇಳಿದರು. ಆ ನಾಯಕರು ಎಲ್ಲ ಪ್ರಾಣಿಗಳನ್ನು ಹಿಡಿಯಲು ಬಲೆಗಳನ್ನು, ನಿದ್ರೆ ಔಷಧಿಗಳನ್ನು ತೆಗೆದುಕೊಂಡು ಅವರು ಬುದ್ಧವನಕ್ಕೆ ಬಂದರು. ತಮ್ಮ ಸೆರೆಹಿಡಿಯಲು ಬರುತ್ತಿರುವ ಮನುಷ್ಯರನ್ನು ಕರಡಿಗಳು ಗನ್ನಿನಿಂದ ಹೊಡೆದು ಕೊಂದರು. ನಾಗಗಳು ಹಲ್ಲಿನಿಂದ ಬಾಂಬನ್ನು ಕಚ್ಚಿ ಮನುಷ್ಯರ ಮೇಲೆ ಬಿಟ್ಟರು. ಅನೇಕ ಮಾನವರು ಸಾವನ್ನಪ್ಪಿದರು. 


            ಅನೇಕ ವ್ಯಕ್ತಿಗಳು ಸತ್ತದ್ದನ್ನು ಕಂಡ ಮಾನವರಿಗೆ ಆಶ್ಚರ್ಯವಾಯಿತು. ಅವರಿಗೆ ಅನಿಸಿತು ಇತ್ತೀಚೆಗೆ ಈ ಪಶುಗಳು ಕೂಡ ವಿಜ್ಞಾನವನ್ನು ಕಲಿತಿದ್ದಾರೆ. ಇನ್ನು ಇವರನ್ನು ಸೆರೆ ಹಿಡಿಯುವುದು, ಬೇಟೆಯಾಡುವುದು, ಮರಗಳನ್ನು ಕಡಿಯುವುದು ಅಸಾಧ್ಯ. ಆದರಿಂದ ಮನುಷ್ಯರು ಪ್ರಾಣಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಹೋದರು. ಮನುಜರ ಸರದಾರನಾದ ಸುಶೀಲ ಶರ್ಮನು ಚತುರಮತಿಯ ಬಳಿ ಬಂದು ಹೇಳಿದನು, "ಮೃಗರಾಜ, ನಿನ್ನ ಕಾಡಿನ ಪ್ರಾಣಿಗಳ ಯುದ್ಧ ಕೌಶಲ್ಯವನ್ನು ಕಂಡ ನಾವು ಇನ್ನು ನಿಮ್ಮ ಕಾಡಿನ ಸಂಪನ್ಮೂಲವನ್ನು ನಾಶಮಾಡುವುದಿಲ್ಲ. ಆದರೆ ನಮಗೆ ಬೇಕಾದ ಕೆಲವು ವಸ್ತುಗಳು ನಮಗೆ ಕಾಡಿನಿಂದ ನೀವು ಕೊಡಬೇಕು". ಕಾವ್ಯರಾಜ ಕೇಳಿದ, "ಯಾವ ವಸ್ತುಗಳ ಬಗ್ಗೆ ಕೇಳುತ್ತಿದ್ದೀರಿ ನೀವು? ನಾವು ನಿಮಗೆ ಯಾವ ವಸ್ತುಗಳನ್ನು ಒಪ್ಪಿಸಬೇಕು?" ಸುಶೀಲ ಶರ್ಮನೆಂದ, "ಕಾವ್ಯರಾಜ, ನಮಗೆ ಮೃತ ಪ್ರಾಣಿಗಳ ಚರ್ಮ, ಮೂಳೆ, ಮಾಂಸ ಮುಂತಾದ ವಸ್ತುಗಳು ಬೇಕು. ರಬ್ಬರ್ ಮರಗಳ ಹಾಲನ್ನು ನೀವು ನಮಗೆ ಕೊಡುಬೇಕು. ಈ ವಸ್ತುಗಳನ್ನು ನೀವು ನಮಗೆ ವರ್ಷಕ್ಕೊಮ್ಮೆ ಕೊಟ್ಟರೆ ಸಾಕು". "ನಾವು ನಿಮಗೆ ಕೊಡುವಷ್ಟೇ ವಸ್ತುಗಳ ಮೇಲೆ ನಿಮಗೆ ಅಧಿಕಾರ. ನೀವೇ ಬಂದು ನಮ್ಮ ಕಾಡಿನ ವೃಕ್ಷಗಳನ್ನು ಕಡಿಯಬಾರದು. ಪ್ರಾಣಿಗಳನ್ನು ಹಿಡಿದುಕೊಂಡು ಹೋಗಬಾರದು. ಮೃಗಗಳನ್ನು ಬೇಟೆಯಾಡಬಾರದು" ಕಾವ್ಯರಾಜನೆಂದ.  


          ಕಾವ್ಯರಾಜನ ಮಾತಿಗೆ ಸುಶೀಲ ಶರ್ಮನು ಒಪ್ಪಿಕೊಂಡನು. ಚತುರಮತಿಯು ಒಪ್ಪಂದ ಪತ್ರದ ಮೇಲೊಂದು ಮುದ್ರೆ ಒತ್ತಿದನು. ಶರ್ಮನು ತನ್ನ ಜನರೊಡನೆ ನಗರಕ್ಕೆ ವಾಪಾಸಾದನು. ಚತುರಮತಿಗೆ ತನ್ನ ಕಾಡಿನ ಸಮಸ್ಯೆಗಳು ಪರಿಹಾರವಾದದ್ದನ್ನು ಕಂಡು ಖುಷಿಯಾಯಿತು. ಅವನು ತನ್ನ ಕಾಡಿನ ಪ್ರಾಣಿಗಳಿಗೆ ಸಹಾಯ ಮಾಡಲು ಬಂದ ಅನ್ಯ ವನದ ಜೀವಿಗಳಿಗೆ ಕೃತಜ್ಞತೆಯನ್ನು ತಿಳಿಸಿ ಅವರನ್ನು ಬೀಳ್ಕೊಟ್ಟನು. ಚತುರಮತಿಯು ತನ್ನ ಕಾಡಿನಲ್ಲಿ ಸಂಭ್ರಮಾಚರಣೆಯ ಘೋಷಣೆ ಮಾಡಿದನು. ಎಲ್ಲ ಪ್ರಾಣಿಗಳು ಸಂಭ್ರಮಾಚರಣೆಗೆ ತಯಾರಿ ನಡೆಸಿದರು. ಕಾವ್ಯರಾಜನು ಸಂಭ್ರಮಾಚರಣೆಯ ದಿನ ಒಂದಿಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಕೊಂಡನು. ಕಾರ್ಯಕ್ರಮ ಸಮಿತಿಯ ಅಧ್ಯಕ್ಷನಾದ ಅತಿವೇಗಿಗೆ ಆಯಾಯ ಕಾರ್ಯಕ್ರಮಗಳಿಲ್ಲಿ ಯಾವ ಪ್ರಾಣಿಗಳು ಭಾಗವಹಿಸಲು ಒಪ್ಪುವರೋ ಅವರ ಹೆಸರನ್ನು ನೊಂದಾಯಿಸಿಕೊಳ್ಳಲು ಸಲಹೆ ನೀಡಿದನು.

                                     ಮುಂದುವರೆಯುವುದು....... 


ಅರವಿಂದ ಬಾಯಿರಿ,

ಎಂಟನೇ ತರಗತಿ, 

ಕಾರ್ಮೆಲ್ ಕಾನ್ವೆಂಟ್ ಸ್ಕೂಲ್, 

ಕಾರ್ಮೆಲಾರಾಂ, ಬೆಂಗಳೂರು - ೩೫.

Tuesday, January 11, 2022

ಬುದ್ಧಿವನದ ಕತೆಗಳು ಸಂಚಿಕೆ ೧: ಪ್ರಾಣಿಗಳ ಸಮಸ್ಯೆ

            Google Images


ಬುದ್ಧಿವನದ ಕತೆಗಳು: 

ಸಂಚಿಕೆ ೧: ಪ್ರಾಣಿಗಳ ಸಮಸ್ಯೆ


                'ಬುದ್ಧಿವನ' ಎನ್ನುವ ಒಂದು ಆಧುನಿಕ ಕಾಡು. ಅಲ್ಲಿ ಅನೇಕ ಕಾಡು ಪ್ರಾಣಿಗಳು ವಾಸವಾಗಿದ್ದವು. ಅವುಗಳ ರಾಜ ಚತುರಮತಿ ಎಂಬ ಸಿಂಹ. ಒಂದು ದಿನ ಚತುರಮತಿಯು ತನ್ನ ಪ್ರಜೆಗಳ ಸಭೆಯನ್ನು ಮೊಬೈಲಿನ ಜೂಮ್ ಆಪಿನ ಮೂಲಕ ಸೇರಿಸಿದನು. ಅವರನ್ನು ಉದ್ದೇಶಿಸಿ ಹೀಗೆಂದನು, "ಓ, ನನ್ನ ಪ್ರಾಣಿ ಮಿತ್ರರೇ ನೀವೆಲ್ಲರೂ ಕುಶಲದಿಂದಿರುವಿರಿ ತಾನೆ? ನಿಮಗ್ಯಾರಿಗೂ ಯಾವ ಸಮಸ್ಯೆಯು ಇಲ್ಲವೆಂದು ಭಾವಿಸಿಕೊಳ್ಳುತ್ತೇನೆ. ನಿಮಗೆ ಯಾವುದೇ ಸಮಸ್ಯೆಯಿದ್ದರು ನನ್ನ ಬಳಿ ಹೇಳಿ". ಆಗ ಪ್ರಾಣಿಗಳ ನಡುವೆಯಿದ್ದ ಶ್ರೀಮುಖನೆಂಬ ಕರಡಿಯು ಹೇಳಿತು, "ಮೃಗರಾಜ, ಈ ಮಾನವರು ಆಗಾಗ ನಮ್ಮ ಕಾಡಿಗೆ ಬಂದು ನಮ್ಮ ಬಂಧು-ಬಳಗದವರನ್ನು ಸೇರೆ ಹಿಡಿದುಕೊಂಡು ಹೋಗಿ ತಮ್ಮ ಸರ್ಕಸ್ಗಳಲ್ಲಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಎಷ್ಟೊ ಪ್ರಾಣಿಗಳಿಗೆ ಹಿಂಸೆಯನ್ನು ಕೊಡುತ್ತಾರೆ. ಅವರನ್ನು ಒಂದೇ ಕಾಲಿನಲ್ಲಿ ನಡೆಸುತ್ತಾರೆ. ಅವರ ಕೈಯಲ್ಲಿ ಚೆಂಡುಗಳನ್ನು ಆಡಿಸುತ್ತಾರೆ". ಇದನ್ನು ಕೇಳಿದ ಚತುರಮತಿಗೆ ಕೋಪ ಬರುತ್ತದೆ. ಆಗ ಅತಿವೇಗಿಯೆಂಬ ಮೊಲವೆಂದಿತು, "ಸಿಂಹರಾಯ, ಈ ಮನುಷ್ಯರು ಕರುಣೆ ಇಲ್ಲದವರು. ಅವರು ತಮ್ಮ ಲಾಭಕ್ಕಾಗಿ ತರುಗಳನ್ನು ಕಡಿಯುತ್ತಾರೆ. ಜಿಂಕೆಗಳನ್ನು, ಮೊಲಗಳನ್ನು, ಹುಲಿಗಳನ್ನು ಕಾಡು ಹಂದಿಗಳನ್ನು ಬೇಟೆಯಾಡಿ ಅವರ ಚರ್ಮ, ಮೂಳೆ, ಮಾಂಸ ಮುಂತಾದ ವಸ್ತುಗಳನ್ನು ಮಾರುತ್ತಾರೆ. ಇದರಿಂದಾಗಿ ನಮ್ಮ ಕಾಡಿನ ಪ್ರಾಣಿಗಳ ಹಾಗೂ ವೃಕ್ಷಗಳ ಸಂಖ್ಯೆ ಕಡಿಮೆಯಾಗುತ್ತಿದೆ". 

Google images


                ಅತಿವೇಗಿಯ ಮಾತನ್ನು ಕೇಳಿದ ಚತುರಮತಿಯೆಂದಿತು, "ಓ, ನನ್ನ ಪಶು ಬಂಧುಗಳೇ ನಿಮ್ಮ ಎಲ್ಲ ಸಮಸ್ಯೆಗಳನ್ನು ನಾನು ಪರಿಹರಿಸುತ್ತೇನೆ. ವನ್ಯಸಿರಿಯನ್ನು ಉಳಿಸಲು ನನ್ನ ಕೈಲಾಗುವ ಪ್ರಯತ್ನವನ್ನು ನಾನು ಮಾಡುತ್ತೇನೆ. ನಿಮ್ಮ ಕೈಲಾಗುವ ಪ್ರಯತ್ನಗಳನ್ನು ನೀವು ಮಾಡಿ". ಇಷ್ಟು ಹೇಳಿ ಸಿಂಹ ತನ್ನ ಸಭೆಯನ್ನು ವಿಸರ್ಜಿಸಿದನು. ತನ್ನ ಮಂತ್ರಿಯಾದ ಕಾವ್ಯರಾಜ ನರಿಯನ್ನು ಕರೆದು ಅವನ ಜೊತೆ ಅರಣ್ಯದ ಸಮಸ್ಯೆಗೆ ಪರಿಹಾರವನ್ನು ಯೋಚಿಸುತ್ತ ಕೂತನು. ಆಗ ಕಾವ್ಯರಾಜನಿಗೆ ಒಂದು ಉಪಾಯ ಹೊಳೆಯಿತು. ಅವನು ಚತುರಮತಿಗೆ ಹೇಳಿದ, "ಮಹಾರಾಜ, ನಾವು ನಮ್ಮ ಸಮಸ್ಯೆಗಳ ಬಗ್ಗೆ ಅನ್ಯ ವನದ ಪ್ರಾಣಿಗಳಿಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ತಿಳಿಸೋಣ. ಅವರಿಂದ ನಮಗೇನಾದರು ಪರಿಹಾರ ಸಿಗಬಹುದು". ಚತುರಮತಿಗೆ ನರಿಯ ಉಪಾಯ ಸೂಕ್ತವೇನಿಸಿತು. ಅವನು ತನ್ನ ಇನ್ಸ್ಟಾಗ್ರಾಮ್ ಹಾಗೂ ಫೇಸ್ ಬುಕ್ ನಲ್ಲಿ ತನ್ನ ಕಾಡಿನ ಸಮಸ್ಯೆಗಳ ಬಗ್ಗೆ ಪೋಸ್ಟ ಮಾಡಿದ. ಬೇರೆ ವನದ ಪ್ರಾಣಿಗಳು ಅವನ ಪೋಸ್ಟನ್ನು ಓದಿ ಅದಕ್ಕೆ ಪ್ರತಿಕ್ರಿಯೆಯಾಗಿ ಚತುರಮತಿಗೆ ಸಹಾಯ ಮಾಡಲು ಬುದ್ಧಿವನಕ್ಕೆ ಬಂದರು. 


           ಆ ಪ್ರಾಣಿಗಳು ಚತುರಮತಿಗೆ ಹೇಳಿದರು, " ಓ, ಬುದ್ಧಿವನದ ರಾಜನೇ, ನಾವೆಲ್ಲರು ನಿನ್ನ ಕಾಡಿನ ಪ್ರಾಣಿಗಳಿಗೆ ಸಹಾಯ ಮಾಡಲು ಬಂದಿದ್ದೇವೆ. ನಮ್ಮಿಂದ ನಿನಗೆ ಏನು ಸಹಾಯ ಬೇಕು?" ಚತುರಮತಿಯೆಂದ, "ಮಿತ್ರರೇ, ನಮ್ಮ ಕಾಡಿನ ಮರಗಳನ್ನು ಮನುಷ್ಯರು ಕಡಿಯುತ್ತಿದ್ದಾರೆ. ನಮ್ಮ ಕಾಡಿನ ಪ್ರಾಣಿಗಳನ್ನು ಬಳಸಿಕೊಂಡು ಅವರು ಲಾಭ ಪಡೆಯುತ್ತಿದ್ದಾರೆ. ಎಷ್ಟೊ ಪ್ರಾಣಿಗಳನ್ನು ಮಾನವರು ಬೇಟೆಯಾಡುತ್ತಿದ್ದಾರೆ. ಹೀಗೆ ನಡೆದರೆ ನಮ್ಮ ಕಾಡಿನ ಸಂಪತ್ತು ನಾಶವಾಗುತ್ತದೆ. ನಮ್ಮ ಕಾಡನ್ನು ಉಳಿಸಲು ನಾವು ಮನುಷ್ಯರ ದುಷ್ಕೃತ್ಯಗಳನ್ನು ತಡೆಯಬೇಕು. ಅದಕ್ಕಾಗಿ ನಾವೇನೆಲ್ಲವನ್ನು  ಮಾಡಬಹುದೆಂದು ತಾವು ನನಗೆ ಸೂಚಿಸಿ". ಆಗ ಗಿಳಿಗಳ ಕಾಡಿನ ರಾಜನಾದ ತೋತಾರಾಮನೆಂದ, "ಚತುರಮತಿ ಮಹಾರಾಜರೇ ನಾವು ಮನುಜರು ಮರ ಕಡಿಯಲು ಬಂದಾಗ ಅವರು ಕಡಿಯುವ ಮರವನ್ನು ಅಪ್ಪಿಕೊಳ್ಳೊಣ ಆಗ ಅವರಿಗೆ ನಮ್ಮನ್ನು ದಾಟಿದ ಮೇಲೆ ತರುಗಳನ್ನು ಕಡಿಯಬೇಕಾಗಿ ಬರುತ್ತದೆ. ಈ ಕೆಲಸವನ್ನು ನಾವು ಆನೆಗಳಿಗೆ ಹಾಗೂ ಕಾಡೆಮ್ಮೆಗಳಿಗೆ ವಹಿಸೋಣ". ತೋತಾರಾಮನ ಮಾತಿಗೆ ಅನ್ಯ ಪಶುಗಳು ಸಹಮತಿ ನೀಡಿದರು. ನಂತರ ಗಿಡುಗಗಳ ಅಧಿಪತಿಯಾದ ಗೃಧ್ರಪತಿಯೆಂದ, "ನಾನು ನನ್ನ ಬಾಂಧವರಾದ ರಣಹದ್ದುಗಳಿಗೆ ಮತ್ತು ಹದ್ದುಗಳಿಗೆ ಪ್ರಾಣಿಗಳನ್ನು ಹಿಡಿಯಲು ಬರುವ ಮನುಷ್ಯರ ಮೇಲೆ ಕೊಕ್ಕು ಮತ್ತು ರೆಕ್ಕೆಗಳಿಂದ ಪ್ರಹಾರ ಮಾಡಲು ಹೇಳುತ್ತೇನೆ". 


         "ನಾವು ಪ್ರಾಣಿಗಳನ್ನು ಬೇಟೆಯಾಡಲು ಬರುವ ಮನುಜರನ್ನು ಕಚ್ಚಿ ಕಚ್ಚಿ ಕೊಲ್ಲುತ್ತೇವೆ. ನನ್ನ ವನದಲ್ಲಿರುವ ದೊಡ್ಡ ಹೆಬ್ಬಾವುಗಳು ಯಾರನ್ನಾದರು ನುಂಗುವುದರಲ್ಲಿ ನಿಪುಣರು. ಕಾಳಿಂಗ ಸರ್ಪಗಳು ಕಡಿದರೆ ಮತ್ತೆ ಆ ವ್ಯಕ್ತಿಯು ಬದುಕುವುದು ಸಾಧ್ಯವೇ ಇಲ್ಲ" ಎಂದ ಉರಗಾರಣ್ಯದ ನೃಪನಾದ ವ್ಯಾಳೇಶ. ಚತುರಮತಿಯು ಅವನ ಕಾಡಿನ ಜನರು ಈ ಎಲ್ಲ ಪ್ರಾಣಿಗಳ ಉಪಾಯವನ್ನು ಸ್ವೀಕರಿಸಿ ತಮ್ಮ ವನದ ಸಂಪತ್ತನ್ನು ಹಾಳು ಮಾಡಲು ಬರುವ ಮಾನವರ ಜೊತೆ ಹೋರಾಡಲು ಸಿದ್ಧರಾದರು.


                                     ಮುಂದುವರೆಯುವುದು........


ಅರವಿಂದ ಬಾಯಿರಿ, 

ಎಂಟನೇ ತರಗತಿ, 

ಕಾರ್ಮೆಲ್ ಕಾನ್ವೆಂಟ್ ಸ್ಕೂಲ್,

ಕಾರ್ಮೆಲಾರಾಂ, ಬೆಂಗಳೂರು -೩೫.

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...