ಸ್ಪರ್ಧೆಗಾಗಿ
ವಿಷಯ =ತಂದೆಗೊಂದು ಪತ್ರ
ಇಂದ,
ಜ್ಯೋತಿಭಾ. ಎನ್. ಸಿ
ಇಂಡಿಯನ್ ಆರ್ಮಿ
ಕಾಶ್ಮೀರ
ತೀರ್ಥರೂಪ ತಂದೆಯವರಿಗೆ ತಮ್ಮ ಪ್ರೀತಿಯ ಮಗನ ಪ್ರಣಾಮಗಳು.
ಇಷ್ಟು ದಿನಗಳವರೆಗೆ ಅಸ್ಸಾಂನ ಗಡಿಭಾಗದಲ್ಲಿ ಇದ್ದ ನಾನು. ನಿನ್ನೆ ಅಂದರೇ ದಿನಾಂಕ 22/2/22 ರಂದು ಕಾಶ್ಮೀರದ ಗಡಿ ಭಾಗಕ್ಕೆ ಬಂದಿರುವೆ. ಈ ಹದಿನೈದು ವರ್ಷದ ಭಾರತಾಂಬೆಯ ಈ ಯೋಧನ ಪ್ರಯಾಣ ದೇಶದ ಹಲವು ಗಡಿ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದು, ಇಂದಿನಿಂದ ಕಾಶ್ಮೀರಿನ ಗಡಿ ಭಾಗದಲ್ಲಿ ಶುರುವಾಗಿದೆ.
ಇದೀಗ ಈ ಪತ್ರ ಬರೆಯಲು ಮುಖ್ಯ ಕಾರಣ,ನಾನು ಇಲ್ಲಿ ಕ್ಷೇಮ. ತಮ್ಮ ಕ್ಷೇಮದ ಬಗ್ಗೆ ತಿಳಿಸಿ.ಇನ್ನೂ ಮುಂದಿನ ಎರಡು ವರ್ಷಗಳ ಕಾಲ ನಾನು ಭಾರತಾಂಬೆಯ ಮಗನಾಗಿ, ಯೋಧನಾಗಿ ಸೇವೆ ಸಲ್ಲಿಸಬೇಕಾಗಿದ್ದು, ನನ್ನ ಕನಸು ಹಾಗೂ ಆಸೆಯಂತೆ ಕಾಶ್ಮೀರದ ಗಡಿ ಕಾಯುವ ಸೇವೆ ಬಂದಿದ್ದು ನನ್ನ ಪುಣ್ಯವೇ ಆಗಿದೆ.
ತಾವು ಯಾವಾಗಲೂ ಹೇಳುತ್ತಿದ್ದ"ದೇಶ ಸುತ್ತು ಇಲ್ಲ ಕೋಶ ಓದು "ಎಂಬ ಮಾತು ಈಗಲೂ ನನ್ನ ಕಿವಿಯಲ್ಲಿ ಕೇಳುತ್ತಾ ಇರುತ್ತದೆ. ನಮಗೆ ಇರುವ ಸಿರಿತನಕ್ಕೆ ನಾನು ಕುಳಿತು ತಿಂದರೂ ಕರಗದ ಆಸ್ತಿ ನಮ್ಮ ಪೂರ್ವಿಕರು ಹಾಗೂ ತಾವು ಮಾಡಿ ಇಟ್ಟಿದ್ದೀರಾ.ಜೊತೆಗೆ ಆ ಆಸ್ತಿಗೆಲ್ಲ ನಾನೇ ವಾರಸುದಾರ ಕೂಡ.ಆದಾಗಿಯೂ ಕೂಡ ಇರುವ ಒಬ್ಬನೇ ಒಬ್ಬ ಮಗ ಎಂದು ಮುದ್ದು ಮಾಡಿ ಸ್ವಾರ್ಥ ಇಟ್ಟುಕೊಂಡು ಬೆಳೆಸಲಿಲ್ಲ. ಅದರ ಬದಲಾಗಿ ದೇಶ, ಭಾಷೆ, ನಾಡು ಎಂಬ ಅನೇಕ ವಿಷಯಗಳ ಬಗ್ಗೆ ತಿಳಿ ಹೇಳುತ್ತಾ ಬಂದಿರಿ.ಅದರಂತೆ ನಾನು ಕೂಡ ಯೋಧನಾಗಬೇಕೆಂಬ ನನ್ನ ಕನಸನ್ನು ತಮ್ಮ ಮುಂದೆ ಇಟ್ಟಾಗ ಆ ಕನಸಿಗೆ ಬೆನ್ನೆಲುಬಾಗಿ ನಿಂತು, ಅದಕ್ಕೆ ಬೇಕಾದ ತಯಾರಿಕೆ, ಶಿಸ್ತಿನ ಬಗ್ಗೆ ಕಲಿಸಿ ಕೊಟ್ಟಿದ್ದೀರಾ.ಎಲ್ಲರಂತೆ ಸ್ವಾರ್ಥ ಭಾವನೆ ಇಟ್ಟುಕೊಂಡು ನನ್ನ ನೀವು ಬೆಳೆಸಲಿಲ್ಲ.ಬದಲಾಗಿ ನನ್ನ ಕನಸು ಮತ್ತು ಆಸೆಗೆ ರೆಕ್ಕೆ ಆಗಿದ್ದೀರಾ.
15 ವರ್ಷಗಳ ಹಿಂದೆ ಸೇನೆಯ ತರಬೇತಿಗೆಂದು ಬಂದಾಗ ಅಮ್ಮ ತೀರಿಹೋಗಿದ್ದನ್ನು ನನಗೇ ತಿಳಿಸದೇ, ಮಗನ ಕನಸು ಎಲ್ಲಿ ಹಾಳಾಗುತ್ತದೆ ಎಂದು ಆ ಒಂದು ನೋವು ದುಃಖವನ್ನು ತಾವೇ ಇಟ್ಟುಕೊಂಡು ನನಗೇ ತಿಳಿಸದೇ ಎಲ್ಲವನ್ನು ಅದೇಗೋ ನಿಭಾಯಿಸಿಕೊಂಡು ಕಾಲವ ತಳ್ಳಿದ್ದೀರಿ.ಆ ಸನ್ನಿವೇಶ ನೆನೆಸಿಕೊಂಡರೇ ಈಗಲೂ ಕುಸಿದು ಹೋಗುವ ನಾನು.. ತಮ್ಮ ಒಂದು ತ್ಯಾಗ, ದುಃಖದ ಮುಂದೆ ನನ್ನದೇನು ಅಲ್ಲ ಅನಿಸುತ್ತೆ.
ಎಷ್ಟೋ ಸಾರಿ ಫೋನ್ ಮಾಡಿದಾಗ ಹೇಳಬೇಕು ಎಂದು ಅನಿಸಿದ ಇಂತಹ ಅದೆಷ್ಟೋ ಮಾತುಗಳು ತಮ್ಮ ಧ್ವನಿಯನ್ನು ಕೇಳಿ ಮಾತು ಬರದ ಹಾಗೇ ಆಗುತ್ತಿತ್ತು.ಅದಕ್ಕಾಗಿಯೇ ಈ ಪತ್ರ.ಈ ಪತ್ರವನ್ನು ಓದಿದ ಬಳಿಕ ತಮ್ಮ ಕಣ್ಣಿನಲ್ಲಿ ನೀರು ಬಂದರೂ ಸಹಿತ ಅದನ್ನು ತಡೆದುಕೊಳ್ಳುವ ಶಕ್ತಿ ಆ ದೇವರು ತಮಗೇ ಕೊಟ್ಟಿದ್ದಾನೆ ಎಂದು ನಂಬಿದ್ದೇನೆ..ಭಾರತ ಮಾತೆಯ ಯೋಧನಾಗಿ ಬದುಕುತ್ತಿರುವುದು ನನ್ನ ಪುಣ್ಯ.ತಮ್ಮಂತ ತಂದೆಯನ್ನು ಪಡೆದ ನಾನೇ ಧನ್ಯ. ನಾನು ಗಡಿ ಕಾಯುವ ಒಬ್ಬ ಯೋಧನಾದರೇ, ಈ ಯೋಧನ ತಂದೆ ತಾವು ಕೂಡ ಒಬ್ಬ ಮಹಾಯೋಧರೇ.ಈ ವರ್ಷದ ರಜೆಯಲ್ಲಿ ಆದಷ್ಟು ಬರಲು ಪ್ರಯತ್ನ ಮಾಡುವೆ.ನಮಸ್ಕಾರಗಳೊಂದಿಗೆ.
ಇಂತಿ ತಮ್ಮ ಮುದ್ದಿನ ಮಗ
ಜ್ಯೋತಿಭಾ
ಇವರಿಗೆ,
ಎನ್. ಜೆ. ಚಿಲ್ಲಣ್ಣವರ
ಕಲ್ಮೇಶ್ವರ ಗುಡಿ ಓಣಿ
ಉಣಕಲ್ಲ
ಜಿಲ್ಲೆ =ಧಾರವಾಡ
ತಾಲೂಕ =ಹುಬ್ಬಳ್ಳಿ
********************************
ಧನ್ಯವಾದಗಳು
✍️ಪೇಟೆಕವಿ
ಜ್ಯೋತಿಭಾ. ಎನ್. ಚಿಲ್ಲಣ್ಣವರ
ಹುಬ್ಬಳ್ಳಿ
[23/02, 6:59 PM] M Ramitha2 Mam: ಬತ್ತದ ತೊರೆ ಸ್ನೇಹಬಳಗದ ಸ್ಪರ್ಧೆಗಾಗಿ
✍️📝
*ದಿನಾಂಕ ೨೩/೦೨/೨೦೨೨ ಬುಧವಾರ
*ವಿಷಯ : ತಂದೆಗೊಂದುಪತ್ರ
ಬೈಂದೂರು ಪಡುವರಿ
ತಾಲೂಕು ಬೈಂದೂರು
. ಉಡುಪಿ ಜಿಲ್ಲೆ ೫೭೬೨೧೪
ಪ್ರೀತಿಯ ತಂದೆಯವರಿಗೆ,
ನಾನು ಇಲ್ಲಿ ಆರೋಗ್ಯವಾಗಿ ಇದ್ದೇನೆ. ನೀವು ಕ್ಷೇಮವೆಂದು ನಂಬಿರುತ್ತೇನೆ .ನನ್ನ ಮಕ್ಕಳ ಪರೀಕ್ಷೆಗಳು ಹತ್ತಿರ ಬರುತ್ತಿವೆ.ಹಾಗಾಗಿ ನನಗೆ ಬಿಡುವೇ ಸಿಗುವುದಿಲ್ಲ. ಮನೆಯ ಕೆಲಸ ಮಕ್ಕಳಿಗೆ ಓದಿಸುವುದಲ್ಲದೆ, ನಾನು ನನ್ನ ಬರವಣಿಗೆಯ ಆಸಕ್ತಿಯಿಂದಾಗಿ ಬತ್ತದ ತೊರೆ ಎಂಬ ಸಾಹಿತ್ಯ ಬಳಗಕ್ಕೆ ಸೇರಿಕೊಂಡಿದ್ದೇನೆ. ಅದರಲ್ಲಿ ವಾರಕ್ಕೆ ಮೂರು ದಿನ ವಿವಿಧ ಸಾಹಿತ್ಯ ಪ್ರಕಾರದ ಸ್ಪರ್ಧೆಗಳು ನಡೆಯುತ್ತಿವೆ. ಅದರಲ್ಲಿ ಭಾಗವಹಿಸುತ್ತೇನೆ.
ತಂದೆಯವರೆ ನೀವು ನಮ್ಮ ಮನೆಯಿಂದ ಹೋಗುವಾಗ ವ್ಯವಹಾರ ಪತ್ರವೊಂದನ್ನು ಇಲ್ಲೇ ಕಪಾಟಿನಲ್ಲಿ ಇಟ್ಟಿದ್ದೀರಿ. ಅದು ಇಲ್ಲೇ ಇದೆ ಅದನ್ನು ಜೋಪಾನವಾಗಿ ಇಟ್ಟಿದ್ದೇನೆ. ಇನ್ನೊಮ್ಮೆ ನಮ್ಮ ಮನೆಗೆ ನೀವು ಬಂದಾಗ ಅದನ್ನು ಒಯ್ಯುವೀರಾ. ಅಥವಾ ನಾನು ಅಕ್ಕನ ಮನೆಗೆ ಬರುವಾಗ ತರಲೆ ? ಅಥವಾ ತವರು ಮನೆಗೆ ಬರುವಾಗ ತರಲೇ?
ಅಂದಹಾಗೆ ಅಕ್ಕ ಭಾವ ಹೇಗಿದ್ದಾರೆ? ಅಕ್ಕನ ಮಕ್ಕಳು ಹೇಗಿದ್ದಾರೆ ? ಶರಣ್ಯ ಹಾಗೂ ಲಾಲಿತ್ಯಾ ಳಿಗೆ ನಾನು ಎಂದರೆ ತುಂಬಾ ಇಷ್ಟ. ಶರಣ್ಯ ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದಾಳಾ? ಲಾಲಿತ್ಯ ತುಂಟತನ ಮಾಡುತ್ತಿದ್ದಾಳಾ?
ಆಕೆ ಬರೀ ತುಂಟತನ ಮಾಡುತ್ತಿರುತ್ತಾಳೆ. ಆಕೆಗೆ ಸ್ವಲ್ಪ ಬುದ್ಧಿ ಹೇಳಿ. ಬೈಯಬೇಡಿ. ಮತ್ತು ಆಕೆಗೆ ಸ್ವಲ್ಪ ಅಭ್ಯಾಸ ಮಾಡಿಸಿ.
ಇನ್ನು ಅಕ್ಕನ ಕಾಲು ನೋವು ಹೇಗಿದೆ? ಇನ್ನೊಂದು ಪತ್ರ ಬರೆಯುವಾಗ ಅದನ್ನು ತಿಳಿಸಿ. ಅವರು ಮನೆಯಿಂದ ಮೊನ್ನೆ ಕೊಯ್ದು ತಂದ ಕಾಳು ಮೆಣಸಿನ ಕಾಳು ಒಣಗಿಸಿ ಇಟ್ಟಿದ್ದೇನೆ . ಅಕ್ಕಂದಿರಿಗೆ ಬೇಕಾಗಿದೆಯೇ ಕೇಳಿ. ದೊಡ್ಡಕ್ಕನಿಗೆ ದೂರವಾಣಿ ಮಾಡಿದ್ದೀರಾ? ಅವಳು ಕ್ಷೇಮವಾಗಿ ಇದ್ದಾಳೆ ಅಲ್ಲವೇ?
ನನ್ನ ನಮ್ಮನ್ನೆಲ್ಲ ಬಿಟ್ಟು ಅಗಲಿದ ನಮ್ಮಮ್ಮನನ್ನು ನೆನೆದು ನೀವು ಖಿನ್ನರಾಗಬೇಡಿ .
ನಮ್ಮನ್ನಗಲಿದ ನಮ್ಮಮ್ಮನ ನೆನೆದು ನಾನು ಕೂಡ ಬೇಸರದಲ್ಲಿದ್ದೇನೆ. ಆ ದುಃಖವನ್ನು ಎದುರಿಸಲು ದೇವರು ನನಗೂ ನಿಮಗೂ ನಮಗೆಲ್ಲರಿಗೂ ಶಕ್ತಿ ಕೊಡಲಿ ಎಂದು ದೇವರಲ್ಲಿ ಬೇಡುತ್ತೆನೆ. ಅವಳು ನಮ್ಮನ್ನು ಬಿಟ್ಟು ಆಗಲಿ ಒಂದು ವರ್ಷ ಸಂದರೂ ನೆನಪು ಮಾಸಿಲ್ಲ ಮಾಸೂದೂ ಇಲ್ಲ. ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡಿ.
ಇನ್ನು ಸಣ್ಣಕ್ಕನ ಹತ್ತಿರ ಈ ವರ್ಷ ಹಪ್ಪಳ ,ಸಂಡಿಗೆ ,ಉಪ್ಪಿನಕಾಯಿ ಮಾಡೋಣವೇ ಎಂದು ಕೇಳಿ. ಇನ್ನು ನನ್ನ ಮಕ್ಕಳು ನೀವು ಇಲ್ಲಿ ಇದ್ದ ದಿನಗಳನ್ನು ನೆನೆದು ಬೇಸರ ಪಟ್ಟುಕೊಳ್ಳುತ್ತಾ ಇರುತ್ತಾರೆ. ನಿಮ್ಮ ಅಳಿಯಂದಿರು ಕೂಡ ನಿಮ್ಮನ್ನು ನೆನೆದು ಕೊಳ್ಳುತ್ತಾರೆ . ನೀವು ಸಣ್ಣ ಅಕ್ಕನ ಮನೆಯಲ್ಲಿ ಇನ್ನು ಎಷ್ಟು ದಿನ ಇರುತ್ತೀರಿ ? ಇಲ್ಲಿಗೆ ಯಾವಾಗ ಬರುತ್ತೀರಿ. ನನ್ನ ಎಲ್ಲ ಪ್ರಶ್ನೆಗಳಿಗೆ ಇನ್ನೊಂದು ಪತ್ರದಲ್ಲಿ ಉತ್ತರ ಕೊಡಿ. ಇನ್ನೇನು ವಿಶೇಷವಿಲ್ಲ.
. ನಿಮ್ಮ ಪ್ರೀತಿಯ ಮಗಳು
ರಮಿತಾ
"""""''''""""""""""'''''''''"""""""""""""""””""""”""""""""""""""""""""""”""”"""""""""”""""""""""""""
ಎಂ ರಮಿತಾ ಎ ಶೆಟ್ಟಿ
ಬೈಂದೂರು ಪಡುವರಿ
[23/02, 7:03 PM] Savitha Sathish Madam: 🌳🌹🌹🌹✍️✍🌹🌹🌹🌳✍️📝
*ಇಂದು ದಿನಾಂಕ ೨೩/೦೨/೨೦೨೨ ಬುಧವಾರ
ಬತ್ತದ ತೊರೆ ಸ್ನೇಹ ಬಳಗ ಸ್ಪರ್ಧೆಗಾಗಿ:
*ವಿಷಯ : ತಂದೆಗೊಂದು ಪತ್ರ*
ಶೀರ್ಷಿಕೆ:ಅಪ್ಪನಿಗಾಗಿ ಮಗಳ ಸವಿ ಬರಹ
*****************************
ಸವಿತಾ ಸತೀಶ್ ಶೆಟ್ಟಿ
ಶ್ರೀ ರಾಜ ರಾಜೇಶ್ವರಿ
ಕೃಪಾ ಜೈನ್ ಪೇಟೆ
ಬೆಳ್ತಂಗಡಿ ೫೭೪೨೧೪
ಧರ್ಮಸ್ಥಳ.
ತೀರ್ಥರೂಪರ ಪಾದಾರವಿಂದಗಳಲ್ಲಿ ನಿಮ್ಮ ಹಿರಿ ಮಗಳಾದ ಸವಿತಾಳು ಮಾಡುವ ಸಾಷ್ಟಾಂಗ ಪ್ರಣಾಮಗಳು.
ಅಪ್ಪ ನೀವು ಆರೋಗ್ಯವಾಗಿರುವಿರಿ ತಾನೇ... ಹಾಗೆ ಅಮ್ಮನು ಆರೋಗ್ಯದಿಂದಿರುವರೆಂದು ನಂಬಿರುತ್ತೇನೆ. ನಿಮ್ಮಿಬ್ಬರ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ನನಗೆ ಅಮ್ಮನ ಆರೋಗ್ಯದ ಬಗ್ಗೆನೇ ತುಂಬಾ ಚಿಂತೆ ಕಾಡುತ್ತಿದೆ. ಅವರಿಗೆ ನಾಲ್ಕು ತಿಂಗಳ ಹಿಂದೆ ಬಂದ ಆರೋಗ್ಯದ ಗಂಡಾಂತರದಿಂದ ಮನಸ್ಸು ತುಂಬಾ ಸೋತು ಸುಣ್ಣವಾಗಿತ್ತು ಅಪ್ಪ. ಆಸ್ಪತ್ರೆಗೆ ದಿನಾ ಹೋಗಿ ಬರುವುದೇ ಸಾಕಾಗಿತ್ತು. ಆಸ್ಪತ್ರೆಯ ವಾತಾವರಣದಲ್ಲಿ ಮನಸೆಲ್ಲಾ ನೊಂದು ಹೋಗಿತ್ತು. ನಂತರ ಅಮ್ಮನ ಆಪರೇಷನ್ ಆದ ದಿನದಂದು ಎಷ್ಟೊಂದು ಕೊರಗಿ ಬಿಟ್ಟಿದ್ದೆ. ಆ ರಾತ್ರಿಯ ಕ್ಷಣ ಈ ಬದುಕಿಗೆ ಅಮವಾಸ್ಯೆ ಕತ್ತಲು ಬಡಿದಂತಾಗಿತ್ತು. ಮತ್ತೆ ಅಮ್ಮನಿಗೆ ಪ್ರಜ್ಞೆ ಬಂದಾಗ ನನ್ನ ಹೋದ ಪ್ರಾಣ ಹಿಂತಿರುಗಿ ಬಂದ ಹಾಗೆ ಆಯಿತು. ಆದರೂ ಆ ಪರಿಸ್ಥಿತಿಯಲ್ಲಿ ಅಮ್ಮನ ಕಂಡು ನನ್ನ ಕರುಳು ಕಿತ್ತು ಬಂತು. ಈ ಬದುಕೆಂದರೆ ಎಷ್ಟು ಕಷ್ಟ ಬಂದದ್ದನ್ನು ಎದುರಿಸಲೇಬೇಕು ಗಟ್ಟಿ ಮನಸ್ಸು ಮಾಡಿ ಅಲ್ವಾ?.. ಅಪ್ಪ. ನೀವು ಧೈರ್ಯದಿಂದ ಮಗನೊಂದಿಗೆ ಮನೆ ಜವಾಬ್ದಾರಿಯನ್ನು ನೋಡಿಕೊಂಡಿರಿ ಹಾಗೆ ನಾನು ಅಮ್ಮನನ್ನು ಪ್ರೀತಿಯಿಂದ ಕಾಳಜಿಯಿಂದ ನೋಡಿದೆ. ಅವರು ಗುಣಮುಖರಾಗುತ್ತಾ ಬಂದಾಗ ಮನಸ್ಸಿಗೆ ತುಂಬಾ ಖುಷಿಯಾಯಿತು. ನಾನು ಆ ದೇವರಲ್ಲಿ ಬೇಡುವುದೊಂದೇ ನೀ ಕಷ್ಟ ಕೊಟ್ಟರೂ ಎದುರಿಸಿ ಗೆಲ್ಲುವ ಕಷ್ಟವನ್ನು ಮಾತ್ರ ನನಗೆ ಕೊಡು ಈ ಬದುಕಿನ ಜಂಜಾಟ ಸಾಕಾಗಿ ಹೋಗಿದೆಯೆಂದು ಸದಾ ಮೊರೆಯಿಡುವೆ. ಅಮ್ಮನ ಜೀವನದಲ್ಲಿ 3 - 4 ಆಪರೇಷನ್ ಗಳು ನಡೆದುಹೋಯಿತು ಎಲ್ಲವನ್ನು ಗೆದ್ದು ಬಂದರು. ಆ ಗಣೇಶನ ದಯೆಯಿಂದ ಇನ್ನು ಯಾವತ್ತೂ ಅಮ್ಮನಿಗೆ ಆರೋಗ್ಯದಲ್ಲಿ ಸಮಸ್ಯೆ ಬರದೇ ಇರಲಿ ಎಂದು ಪದೇ ಪದೇ ಗಣೇಶನಲ್ಲಿ ವಿನಂತಿಸುವೆ. ಪಾಪ ಎಷ್ಟು ಕಷ್ಟವನ್ನು ಅನುಭವಿಸಲಿ ಅವರು ಅಲ್ವಾ ಅಪ್ಪ. ಹಾಗೆ ನೀವು ಆರೋಗ್ಯದಿಂದ ಇದ್ದದ್ದರಿಂದ ಮನೆಯು ಬೆಳಗುತ್ತಿದೆ. ಹಾಗೆ ತಮ್ಮನು ತುಂಬಾ ಕಷ್ಟಪಡುತ್ತಿದ್ದಾನೆ. ಸದಾ ನೀವೆಲ್ಲರು ಖುಷಿಯಿಂದ ಇರಬೇಕು ಅಪ್ಪ ನೀವು ಖುಷಿಯಾಗಿದ್ದರೆ ಅಮ್ಮನು ನಗುತ್ತಿದ್ದರೆ ಮಾತ್ರ ನಾವು ಇಲ್ಲಿ ಸಂತೋಷವಾಗಿ ಇರಲು ಸಾಧ್ಯ. ಇಲ್ಲದಿದ್ದರೆ ಎಲ್ಲವೂ ಆ ಸಾಧ್ಯವಷ್ಟೇ !.. ಅಪ್ಪ ನಮ್ಮೂರಲ್ಲಿ ಜಾತ್ರೆ ಮಹೋತ್ಸವ ಇದೇ ಬರುವ ಮಾರ್ಚ್ ೩ರಂದು. ಅದಕ್ಕೆ ಅಮ್ಮ ಮತ್ತು ನೀವು ಬರಲೇಬೇಕು ನಿಮ್ಮ ಮೊಮ್ಮಗನ ಖುಷಿಗಾಗಿ ಬರುತ್ತೀರಿ ಅಲ್ಲವೇ? ಬರುವಿರಿ ಎಂದು ನಂಬಿರುತ್ತೇನೆ. ಒಂದು ಪತ್ರದಲ್ಲಿ ಬರುವಿರೆಂದು ತಿಳಿಸಿ ಅಪ್ಪ. ಹಾಗೆ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ. ನೀವಿಬ್ಬರು ಸದಾ ನಗುತ್ತಾ ಇರಿ. ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ನನಗೆ ತಿಳಿಸಿಬಿಡಿ. ಸದಾ ನಿಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಜವಾಬ್ದಾರಿ ನನ್ನದು. ನಿಮ್ಮ ಮಗಳನ್ನು ಸದಾ ನೆನಪಿಸುತ್ತಿರಿ. ನೀವಿಬ್ಬರು ಸದಾ ನನ್ನ ಮನದಲ್ಲಿರುವಿರಿ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ. ಆರೋಗ್ಯವನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳಿ ಅಪ್ಪ.
ಇತೀ ಸಾಷ್ಟಾಂಗ ಪ್ರಣಾಮಗಳು 🙏🏻
ನಿಮ್ಮ ಪ್ರೀತಿಯ
ಮಗಳು ಸವಿತಾ.
ಇವರಿಗೆ,
ಸುಂದರ ಶೆಟ್ಟಿ
ಬೈಲು ಮನೆ,ಕರಂಬಾರು
ಬೆಳ್ತಂಗಡಿ ತಾಲೂಕು
ಫಿನ್ ಕೋಡ್-೫೭೪೨೧೪.
ಸವಿತಾ ಸತೀಶ್ ಶೆಟ್ಟಿ (ಧರ್ಮಸ್ಥಳ ಬೆಳ್ತಂಗಡಿ)✍️
[23/02, 7:57 PM] Usha Diddigi PuNe: *ಕ್ಷೇಮ*
*ಶ್ರೀ*
*ಹೈದರಾಬಾದ್*
*೨೩-೨-೨೨*
ತೀ// ಸ್ವರೂಪರಾದ ತಂದೆಯವರಿಗೆ,
ನಿಮ್ಮ ಮಗಳು ಮಾಡುವ ನಮಸ್ಕಾರಗಳು. ಇಲ್ಲಿ ನಾವು ಕ್ಷೇಮದಿಂದ ಇದ್ದೇವೆ. ನೀವೆಲ್ಲರೂ ಅಲ್ಲಿ ಕ್ಷೇಮದಿಂದ ಇದ್ದೀರಾ ಅಲ್ಲವೇ. ಬಹಳ ದಿನಗಳ ಆಯಿತು ಪತ್ರ ಬರೆಯಲು ಆಗಲಿಲ್ಲ. ಕ್ಷಮೆ ಇರಲಿ. ಮದುವೆಗೆ ಮುಂಚೆ ಎಲ್ಲಾದಕ್ಕೂ ಸಮಯವಿತ್ತು. ಆದರೆ ಈಗ ಸಮಯ ದೊರೆಯುವುದೇ ಕಠಿಣವಾಗಿದೆ. ನನ್ನದೇ ಆದಾ ಸಂಸಾರ, ವಯಸ್ಸಾದ ಅತ್ತೆಯ ಜವಾಬ್ದಾರಿ ಅವರನ್ನು ಮಗುವಿನ ಹಾಗೆ ನೋಡಿಕೊಳ್ಳುವುದು ನನ್ನ ಕರ್ತವ್ಯವಾಗಿದೆ. ಇನ್ನ ನನ್ನ ಚಿಕ್ಕಮಕ್ಕಳ ಅವರ ಆಟ-ಪಾಠದಲ್ಲಿ ಸಮಯ ಹೋಗಿದ್ದೇ ತಿಳಿಯುವುದಿಲ್ಲ. ಈಸಲ ಮಕ್ಕಳ ಬೇಸಿಗೆ ರಜದಲ್ಲಿ ಖಂಡಿತ ಸ್ವಲ್ಪ ಸಮಯ ಮಾಡಿಕೊಂಡು ಬರುತ್ತೇನೆ. ಏಕೆಂದರೆ ನಿಮ್ಮ ಅಳಿಯ ಅವರ ಅಕ್ಕ ಸ್ವಲ್ಪ ದಿನದ ಮಟ್ಟಿಗೆ ಹೈದರಾಬಾದಿಗೆ ಬರುವವರಿದ್ದಾರೆ. ಅವರು ಬಂದಾಗ ಸ್ವಲ್ಪ ದಿನ ಅವರೊಂದಿಗೆ ಇದ್ದುನಂತರ ಅಲ್ಲಿಗೆ ಬರುವ ಯೋಚನೆ ಇದೆ. ನಮ್ಮ ಅತ್ತೆ ಸ್ವಲ್ಪ ದಿನ ಊರಿಗೆ ಹೋಗಿ ಬಾ ಎಂದರು. ನಾನು ಬರುವ ದಿನವನ್ನು ತಿಳಿಸುತ್ತೇನೆ. ತಮ್ಮಂದಿರು ತಂಗಿಯರು ಸಹ ಮೈಸೂರಿಗೆ ಬರುತ್ತಾರೆ ಅಂತೆ. ಎಲ್ಲರನ್ನು ನೋಡಿದಂತೆ ಆಗುತ್ತದೆ.
ಅಂದಹಾಗೆ ನನ್ನ ಸ್ನೇಹಿತರಿಗೂ ಹೇಳಿ ನಾನು ಬರುವ ವಿಷಯ. ಅವರನ್ನು ನೋಡಿ ಬಹಳ ದಿನವಾಯಿತು.
ಈ ಸಲ ಬಂದಾಗ ಶ್ರೀರಂಗಪಟ್ಟಣ, ನಂಜನಗೂಡು ಮೈಸೂರಿನ ಸುತ್ತಮುತ್ತಲು ಜಾಗವನ್ನು ಮಕ್ಕಳಿಗೆ ತೋರಿಸಬೇಕು ಎಂದುಕೊಂಡಿದ್ದೇನೆ. ಅವರು ಸಹ ಕಾತರರಾಗಿದ್ದಾರೆ ನಿಮ್ಮನ್ನೆಲ್ಲ ನೋಡಲು.
ಅಮ್ಮ ಅವರು ಹೇಗಿದ್ದಾರೆ? ಕೆಲಸ ಮಾಡಬೇಡಿ ಎಂದು ಹೇಳಿ. ನಾವು ಬೆಳೆಸಿದ ಗಿಡಮರಗಳು ಹೂತೋಟ ಎಲ್ಲವೂ ಹೇಗಿದೆ? ನೋಡಲು ಆಸೆ ಆಗುತ್ತಿದೆ. ತೆಂಗಿನ ಗಿಡಕ್ಕೆ ಕಾಯಿ ಆಗುತ್ತಿರುವುದು ತಿಳಿದು ಸಂತೋಷವಾಯಿತು. ಮನೆ ಗಿಡಗಳು ಹೇಗೆ ಬಿಡುತ್ತಿದೆ? ಸಂಪಿಗೆ ಗಿಡದ ಹೂವಿನ ವಾಸನೆ ಈಗಲೂ ನೆನಪಾಗುತ್ತಿದೆ. ಮಾವಿನ ಗಿಡದಲ್ಲಿ ಸಣ್ಣ ಸಣ್ಣ ಕಾಯಿಗಳು ಆಗಿರಬೇಕಲ್ಲವೇ? ಕೋಗಿಲೆಗಳ ಗಾನ ಮಧುರವಾದ ಸನ್ನಿವೇಶ ನಾ ಯಾವಾಗಲೂ ನೆನೆಸಿಕೊಳ್ಳುತ್ತಾ ಇರುತ್ತೇನೆ. ನೆಲ್ಲಿಕಾಯಿ ಗಿಡ, ಸೀಬೆ ಹಣ್ಣಿನ ಗಿಡ ಮತ್ತು ಗುಲಾಬಿ ಗಿಡಗಳು ಹೇಗೆ ಬೆಳೆದಿವೆ ಅದನ್ನೆಲ್ಲ ನೋಡಲು ಆಸೆಯಾಗುತ್ತಿದೆ.
ಹೈದರಾಬಾದಿನಿಂದ ನಿಮಗೆಲ್ಲ ಏನು ಬೇಕು ತಿಳಿಸಿರಿ.
ಇಲ್ಲಿಯ ಕೆಲವು ತಿಂಡಿಗಳು ಮತ್ತು ಉಪ್ಪಿನಕಾಯಿ ಬಹಳ ಪ್ರಸಿದ್ಧಿಯಾಗಿವೆ. ಯಾರಿಗಾದರೂ ಮುತ್ತಿನಸರ ಬಳೆಗಳು ಬೇಕಿದ್ದರೆ ತಿಳಿಸಿರಿ ಅದು ಸಹ ಇಲ್ಲಿ ಪ್ರಸಿದ್ಧಿಯಾಗಿದೆ. ನೀವು ತಿಳಿಸಿದರೆ ನಾನು ತರುತ್ತೇನೆ. ಸರಿ ಮತ್ತೆ ಅಲ್ಲಿಗೆ ಬಂದಾಗ ಮಿಕ್ಕ ವಿಷಯಗಳನ್ನು ಮಾತಾಡೋಣ. ನಿಮಗೆಲ್ಲಾ ನನ್ನ ನಮಸ್ಕಾರಗಳು
ಇಂತಿ ನಮಸ್ಕಾರಗಳು
ನಿಮ್ಮ ಮಗಳು
ಉಷಾ
*ಕೆ ಆರ್ ಉಷಾ ದಿದ್ದಿಗಿ*
ಹೈದರಾಬಾದ್
[23/02, 8:09 PM] Shankar Kulal Teacher: ಸ್ಪರ್ಧೆಗಾಗಿ - ಅಪ್ಪನಿಗೊಂದು ಪತ್ರ.
ಪ್ರೀತಿಯ ಅಪ್ಪ ,
ನಾನು ಶಂಕರ.ನಿಮ್ಮ ಕೊನೆಯ ಮಗ.ನಿಮ್ಮನ್ನು ನೋಡದೆ ಹಲವು ವರ್ಷಗಳಾಯಿತು.ನನ್ನ ಮದುವೆಗೆ ಬಂದ ಮೇಲೆ ನಿಮ್ಮನ್ನು ಕಂಡದ್ದಿಲ್ಲ.
ನಮ್ಮದು ಅಳಿಯ ಕಟ್ಟು.ಹಾಗಾಗಿ ತಾಯಿ ಮನೆಯಲ್ಲಿ ಸೋದರ ಮಾವನ ಪೋಷಣೆಯಲ್ಲಿ ನಾನು.ನೀವು ನಿಮ್ಮ ದರ್ಕಾಸಿನಲ್ಲಿ.ನೀವು ಏನು ಕೆಲಸ ಮಾಡುತ್ತೀರಿ ಎಲ್ಲಿದ್ದೀರಿ ಎಂದು ಕೂಡ ಗೊತ್ತಿಲ್ಲ.ಇಲ್ಲಿ ತಾಯಿ ಮನೆಯಲ್ಲಿ ಕತ್ತೆಯಂತೆ ದುಡಿಯುತ್ತಾಳೆ.ಅವಳಿಲ್ಲದೆ ಬೇಸಾಯ ನಡೆವಂತಿಲ್ಲ.ಮಾವನ ಹೆಂಡಂದಿರು ತವರುಮನೆ ಯಲ್ಲಿ.ಮಾವನವರು ನೀವು ಕುಡುಕ ಜುಗಾರಿ ಆಡ್ತೀರಿ ಎಂದೇನೇನೋ ಹೇಳಿ ತಾಯಿ ಯ ಮನ ಕೆಡಿಸಿದ್ದ.ನಾವೂ ಅದನ್ನೇ ಸತ್ಯವೆಂದು ನಂಬಿಕೆಯು.ಮಾವನ ಇಬ್ಬರು ಹೆಂಡಂದಿರಿಗೂ ಬೇರೆ ಬೇರೆ ಮನೆ ಕಟ್ಟಿಸಿದ್ದ.ಅವನ ಮಕ್ಕಳೂ ಶಾಲೆಗೆ ಹೋಗುವಾಗ ನಾನೂ ಹೋದೆ.ಅಮ್ಮ ಆಗಾಗ ಹೇಳುತ್ತಿದ್ದರು.ಮಗಾ ಚೆನ್ನಾಗಿ ಕಲಿ ಎಂದು.ದೇವರ ದಯದಿಂದ ಹೈಸ್ಕೂಲ್ ಪಾಸಾದೆ.ಇನ್ನು ಶಾಲೆ ಸಾಕೆಂದು ಮನೆಯ ಬೇಸಾಯಕ್ಕೆ ಹಚ್ಚಿದರು ಮಾವ.ಅವರ ಮಕ್ಕಳನ್ನು ಮಣಿಪಾಲದಲ್ಲಿ ಪ್ರೆಸ್, ಕಾರ್ಖಾನೆಗಳಲ್ಲಿ ಕೆಲಸಕ್ಕೆ ಹಚ್ಚಿದರು.
ಈಗ ನನಗೆ ನಿಧಾನಕ್ಕೆ ಅರ್ಥವಾಗ ತೊಡಗಿತು.ಮಾವನ ಒಳಗುಟ್ಟು.ಅಮ್ಮನೊಡನೆ ನಾನೂ ಕೆಲಸಕ್ಕೆ ಹೋಗುತ್ತೇನೆಂದೆ.ಮಾವನಿಗೆ ತಿಳಿಸಿದಾಗ ಇಲ್ಲಿ ಬೇಸಾಯ ಯಾರು ಅವನ ಅಜ್ಜ ಮಾಡ್ತಾನಂತೆಯೇ ಎಂದರು.ಅಪ್ಪಾ ಆಗೆಲ್ಲ ನಿಮ್ಮ ನೆನಪು ಕಾಡ್ತಾ ಇತ್ತು.
ದೇವರು ದೊಡ್ಡವನು.ನನ್ನ ಎಲಿಮೆಂಟರಿ ಟೀಚರೊಬ್ಬರು ಮಾವನ ಮನ ಒಲಿಸಿ ನಾನು ಶಿಕ್ಷಕ ತರಬೇತಿಗೆ ಸೇರುವಂತೆ ಮಾಡಿದರು.ಅಲ್ಲೂ ಮಾವ ಪಾಪದ ಹೆಂಗಸೊಬ್ಬರಿಂದ ವರ ದಕ್ಷಿಣೆ ಪಡೆದು ನನಗೆ ಮದುವೆ ಯನ್ನೂ ಮಾಡಿದರು.ಹೆಂಡತಿ ಆಸೆಗಾಗಿ ಅಳಿಯ ಟ್ರೈನಿಂಗ್ ಬಿಟ್ಟು ಬರುತ್ತಾನೆಂದು.ಅಪ್ಪಾ,ಆಗಿ ತಿಳಿಯಿತು ನೀವು ನನ್ನ ತರಬೇತಿ ಖರ್ಚಿಗೆ ಹಣ ಕಳುಹಿಸುತ್ತಿರುವ ವಿಚಾರ.ಪೋಸ್ಟ್ ಮನ್ ಒಮ್ಮೆ ತಿಳಿಸಿದ್ದು.ಎಲ್ಲ ಹಣವನ್ನು ಮಾವ ಸ್ವಾಹ ಮಾಡಿದ್ದರು.ನನ್ನ ಮದುವೆಗೂ ಹಣ ಕೊಟ್ಟಿರುವ ವಿಚಾರ ಅಮ್ಮ ಗುಟ್ಟಾಗಿ ತಿಳಿಸಿದ್ದಳು.
ಅಪ್ಪಾ ನನಗೀಗ ಕೆಲಸ ಸಿಕ್ಕಿದೆ.ಮನೆಯಿಂದ ಬಹು ದೂರ ದ ಬೆಳ್ತಂಗಡಿಯಲ್ಲಿ.ಹೆಂಡತಿಯನ್ನು ತಾಯಿ ಮನೆಗೆ ಕಳಿಸಿದ್ದೇನೆ.ಅಲ್ಲಿ ರೂಂ ಮಾಡಿದ್ದೇನೆ.ಅಮ್ಮನನ್ನು ಕರೆ ಕೊಂಡು ಹೋಗಿದ್ದೇನೆ.ಅಪ್ಪಾ ನೀವು ಸೋಮೇಶ್ವರ ಕಾಡಿನಲ್ಲಿ ಮರ ಕಡಿಯುವ ಕೆಲಸದಲ್ಲಿ ಇದ್ದೀರಿ ಎಂದು ಅಲ್ಲಿಂದ ನನ್ನ ಜೊತೆ ಕೆಲಸ ಮಾಡುವ ಅಧ್ಯಾಪಕರು ತಿಳಿಸಿದ್ದಾರೆ.ಮುಂದಿನ ಶನಿವಾರ ಬರುತ್ತೇನೆ.ಅಪ್ಪಾ ನಿಮ್ಮನ್ನು ಕರೆದೊಯ್ಯುತ್ತೇನೆ.ಸಿದ್ಧವಾಗಿರಿ.ಹೆಂಡತಿ ಗರ್ಭಿಣಿ.ಹಾಗೆ ಅತ್ತೆ ಮನೆಯಲ್ಲಿ ಇದ್ದಾಳೆ.ಅಪ್ಪಾ ತುಂಬ ಮಾತನಾಡಲಿದೆ...
ಇಂತಿ ,
ಬೇಡುವ ಆಶೀರ್ವಾದಗಳು.
ಶಂಕರ ಕುಲಾಲ .
[23/02, 8:09 PM] Veena Krishna Murthy: ಬತ್ತದ ತೊರೆ ಸ್ನೇಹ ಬಳಗದ ಸ್ಪರ್ಧೆಗಾಗಿ:- ತಂದೆಗೆ ಪತ್ರ.
..................................................
ಪ್ರೀತಿಯ ಅಪ್ಪಜೀ,
ಉಭಯ ಕುಶಲೋಪರಿ ಸಾಂಪ್ರತ.
ಬಹಳವೇ ದಿನಗಳಾಯಿತು ನಿಮ್ಮಿಂದ
ಪತ್ರ ಬರದೆ....ತಮ್ಮ ಹೇಗಿದ್ದಾನೆ ?
ಅಮ್ಮ ಮೊನ್ನೆ ಫೋನ್ ಮಾಡಿದಾಗ,
ಅವನಿಗೆ ಸ್ವಲ್ಪ ಆರೋಗ್ಯ ಸರಿಯಾಗಿ
ಇರಲಿಲ್ಲ ಈಗ ಸುಧಾರಣೆ ಆಗಿದೆ ಎಂದು ತಿಳಿಸಿದ್ದರು. ಈಗ ಆರೋಗ್ಯ
ವಾಗಿದ್ದಾನೆ ಎಂದು ಭಾವಿಸುತ್ತೇನೆ.
ಅವನ ಓದು ಹೇಗೆ ಸಾಗಿದೆ ? ಈ
ವರ್ಷ ಅಂತಿಮ ಪರೀಕ್ಷೆಯಲ್ಲವೇ?
ಚೆನ್ನಾಗಿ ಓದಿ ಕೊಳ್ಳಲು ತಿಳಿಸಿರಿ.
ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಎಷ್ಟು
ಅಂಕ ಪಡೆದರೂ ಕಡಿಮೆಯಾಗುತ್ತದೆ
ಅಂದಿನ ನಿಮ್ಮ ಕಾಲವೇ ಚೆನ್ನಾಗಿತ್ತು.
ಒತ್ತಡ ರಹಿತ ಜೀವನದಲ್ಲಿ ಆರೋಗ್ಯ
ಎಷ್ಟು ಚೆನ್ನಾಗಿರುತ್ತಿತ್ತು. ಈಗ ಎಲ್ಲವು
ತಿರುವು ಮುರುವು.
ಅಂದಿನ ನಿಮ್ಮ ನಿಸ್ವಾರ್ಥ ಸೇವೆ ಇಂದು ನಮಗೆ ಬಾಳಿಗೆ ಬೆಳಕಾಗಿದೆ.
ಎಂದಿಗೂ ನೆನಪಿನಲ್ಲಿ ಉಳಿಯುವ
ನಿಮ್ಮ ಸತ್ಕಾರ್ಯಗಳು ಸದಾ
ನೆನಪುಗಳನ್ನು ತರುತ್ತಲೇ ಇರುತ್ತದೆ.
ನಿಮ್ಮ ಸಾಮಾಜಿಕ ಸೇವೆಗಳಿಗೆ ಅಷ್ಟು
ಶಕ್ತಿಯಿದೆ.
ನೀವು ಮಾಡಿದ ನೂರಾರು *ಅನಾಥ ಶವಗಳ ಅಂತ್ಯಕ್ರಿಯೆ*
ಅದೂ ಒಬ್ಬಂಟಿಯಾಗಿ, ಅಬ್ಬಾ!
ಈಗ ನೆನೆಸಿಕೊಂಡರೂ ಮೈ ಜುಂ
ಎನ್ನುತ್ತದೆ. ಮತ್ತು ಯಾರೇ ಆಗಲಿ
ಕಷ್ಟ ಎಂದು ನಿಮ್ಮ ಬಳಿ ಬಂದರೆ
ಅವರನ್ನು ಹಾಗೆ ಕಳುಹಿಸದೇ, ಸ್ವಲ್ಪ
ವಾದರೂ ಹಣ ಕೊಟ್ಟು ಕಳುಹಿಸುತ್ತಿ
ದದ್ದು ನಾವೆಲ್ಲರೂ ಕಣ್ಣಾರೆ ಕಂಡವರು. ಎಂತಹ ಹೃದಯ ವೈಶಾ
ಲ್ಯತೆ ನಿಮ್ಮದು. ಸಮಾಜ ಸೇವೆಯೇ
ಜನಾರ್ದನ ಸೇವೆ ಎಂಬ ನಿಮ್ಮ
ಮನೋಭಾವ ನಮಗೆ ಮಾದರಿ.
ಸೂಕ್ಷ್ಮಮತಿಯಾದ ನೀವು ನಾವು
ಯಾವುದೇ ರೀತಿಯಲ್ಲು ತಪ್ಪು ಮಾಡದ ಹಾಗೆ ತಿದ್ದಿ ತೀಡಿ ಬೆಳೆಸಿದ
ಪರಿಣಾಮವಾಗಿ ನಾವಿಂದು ಒಬ್ಬ
ಒಳ್ಳೆಯ ಪ್ರಜೆಯಾಗಿ ಬಾಳಲು ಸಾಧ್ಯ
ವಾಗಿದೆ. ನಿಮಗೆ ಪೂರ್ಣವಾಗಿ ಸಹ
ಕರಿಸಿದ ಅಮ್ಮನವರ ತ್ಯಾಗವೇನು
ಕಡಿಮೆಯೇ? ತನಗೆಷ್ಟೇ ತೊಂದರೆ
ಆದರೂ ಯಾವಾಗಲೂ ಬಂದು
ಹೋಗುತ್ತಿದ್ದ ಬಂಧು ಬಳಗದವರನ್ನು
ಆದರಿಸುತ್ತಿದ್ದ ರೀತಿ ಯಾವಾಗಲೂ
ನಮ್ಮ ಕಣ್ಮುಂದೆ ಬರುತ್ತದೆ. ನಿಮ್ಮ
ಹಾದಿಯಲ್ಲಿಯೇ ಬದುಕು ಸಾಗಿಸಿದ
ನಾವು ನಮ್ಮ ಮಕ್ಕಳಿಗೆ ನಿಮ್ಮ ಬಗ್ಗೆ
ತಿಳಿಸಿ, ಅವರು ನಿಮ್ಮ ಹಾದಿಯಲ್ಲಿ
ಸಾಗುವಂತೆ ಪ್ರೇರೆಪಿಸುತ್ತೇನೆ. ನಿನ್ನ
ಮೊಮ್ಮಕ್ಕಳು ಒಳ್ಳೆಯ ಶಿಕ್ಷಣ ಪಡೆದರು. ಹಾಗೆಯೇ ಒಳ್ಳೆಯ
ಕುಟುಂಬಕ್ಕೆ ಮದುವೆ ಆಗಿ ಹೋಗಿ
ರುತ್ತಾರೆ. ನಿನಗ ಮರಿ ಮಕ್ಕಳು ಆಗಿದ್ದು ,ನೀವೀಗ ಮುತ್ತಜ್ಜ ಆಗಿರು
ತ್ತೀರಿ.
ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು, ಅವರ ಸಮಾಜ
ಸೇವೆಯಿಂದ ಜನಾನುರಾಗಿಯಾಗಿ
ಬಾಳಿದ ನನ್ನ ತಂದೆ ಪ್ರಾತಃ ಸ್ಮರಣೀ
ಯರು. ಅವರೆಂದೂ ನಮ್ಮ ಮನ
ದಲ್ಲೇ ಇರುವುದರಿಂದ, ಸದಾ ನೆನಪಿನ ಮಾಲೆಯಲ್ಲಿ ಇರುವುದ
ರಿಂದ ನಾನು ನನ್ನ ತಂದೆಗೆ ಪತ್ರ
ಬರೆಯುವ ಅವಕಾಶ ತಪ್ಪಿಸಿಕೊಳ್ಳಲು ಇಷ್ಟ ಪಡದೇ ಈ
ಪತ್ರವನ್ನು ಈ ಮೂಲಕ ಅವರಿಗೆ
ತಲುಪಿಸುತ್ತೇನೆ.
ಅಪ್ಪ ನಿನಗೆಂದೂ ನನ್ನ ಸಾ. ನಮಸ್ಕಾರಗಳು. ಪ್ರೀತಿಯಿಂದ....
ನಿನ್ನ ಮಗಳು ,
ವೀಕೆಎಂ
ದಾವಣಗೆರೆ.
[23/02, 8:11 PM] Nagarathna HM Madam2: *ಬತ್ತದ ತೊರೆ ಸ್ನೇಹ ಬಳಗ*
ಸ್ಪರ್ಧೆಗಾಗಿ...✍🏻💐 *ಪ್ರೀತಿಯ ಅಪ್ಪನಿಗೆ ನಿಮ್ಮ ಮಗಳಿಂದ ಒಂದು ಪತ್ರ*
ದಿನಾಂಕ 23/3/2022
ಬುಧವಾರ
ಹೆಬ್ಬಗೋಡಿ ಊರ ಹೊರಗಿನ (ಸ್ಮಶಾನದಲ್ಲಿ.... ಸಮಾಧಿ)😭
(ತಾಲೂಕು ಆನೇಕಲ್) (ಬೆಂಗಳೂರು ಜಿಲ್ಲೆ)....
ನನ್ನ ಪ್ರೀತಿಯ ಅಗಲಿದ ನನ್ನ ದೈವ ತಂದೆಯವರಿಗೆ ..
ನಾನು ಇಲ್ಲಿ ಕ್ಷೆಮವಾಗಿದ್ದೇನೆ ನಿಮ್ಮ ಅಳಿಯ ಮೊಮ್ಮಕ್ಕಳು ಎಲ್ಲರೂ ಆರೋಗ್ಯವಾಗಿದ್ದಾರೆ ನನ್ನ ಅಮ್ಮ ಕೂಡ ನಾಲ್ಕು ವರ್ಷಗಳ ಹಿಂದೆ ನಮ್ಮನ್ನೆಲ್ಲ ಆಗಲಿ ದೈವೈಕ್ಯರಾದರು .
ತಂದೆಯಾದ ನಿಮ್ಮನ್ನು ಹಾಗೂ ತಾಯಿಯನ್ನು ಕಳೆದುಕೊಂಡ ಅನಾಥ ಮಗಳಾಗಿರುವೆ ಎಲ್ಲರೂ ಇದ್ದಾರೆ ಆದರೆ ನಿಮ್ಮಷ್ಟು ಪ್ರೀತಿಸುವ ಜೀವಿಗಳು ಭುವಿಯಲ್ಲಿಲ್ಲ. ಅಪ್ಪ ನೀನು ಜಗತ್ತಿನಲ್ಲಿ ನೀನು ಕೊಟ್ಟಷ್ಟು ಪ್ರೀತಿ ಬೇರೆ ಯಾರೂ ಕೊಡಲು ಸಾದ್ಯವಿಲ್ಲ . ನಿಮ್ಮನ್ನು ಕಳೆದುಕೊಂಡ ಮೇಲೆ ಪ್ರತಿದಿನ ಪ್ರತಿಕ್ಷಣ ನೆನಪಿಗೆ ಬಂದು ಕಣ್ಣ ಹನಿಗಳು ನನಗೆ ಅರಿಯದೆ ಉದುರುತ್ತವೆ.
ಅಪ್ಪ ನನ್ನ ಮಗಳು ಸ್ವಾತಿಗೆ ಮದುವೆಯಾಗಿ ಒಬ್ಬ ಮೊಮ್ಮಗ ಇದ್ದಾನೆ. ಹಾಗೆಯೇ ಮೊಮ್ಮಗ *ಚಂದ್ರಕಾಂತ್* ಗೂ ಇತ್ತೀಚೆಗೆ ಮದುವೆಯಾಗಿ ಅವನಿಗೂ ಮಗಳು ಹುಟ್ಟಿದ್ದಾಳೆ ಮಗುವಿನ ಹೆಸರು *ಆದ್ಯ*
ನಮ್ಮನ್ನೆಲ್ಲ ಅಲ್ಲಿಂದಲೇ ಹರಸಿ ಹಾರೈಸುತ್ತೀರಿ ಎಂದು ನಂಬಿದ್ದೇವೆ.ನಾನು ಕೂಡ ನಾಲ್ಕೈದು ವರ್ಷಗಳಿಂದ ಸಾಹಿತ್ಯದ ಒಲವು ಮೂಡಿದ್ದು ಅದನ್ನು ಮುಂದುವರೆಸಿಕೊಂಡು ಹೋಗು ತ್ತಿದ್ದೇನೆ ಜೊತೆಗೆ ಕವನ ಸಂಕಲನ ಮಾಡಿ ಒಂದು ಕೃತಿಯನ್ನು ಬಿಡುಗಡೆ ಮಾಡಿ ನಾಡಿಗೆ ಒಂದು ಒಳ್ಳೆಯ ಕವಿಯತ್ರಿ ಯಾಗಿ ಲೇಖಕಿಯಾಗಿ ಬೆಳೆಯಲು ನಿನ್ನ ಆಶೀರ್ವಾದದಿಂದ *ಕಣ್ಣ ಹನಿ ಕಡಲ ಮುತ್ತಾದರೆ...?*
ಕೃತಿಯು ಕಳೆದ ವರ್ಷ ಹೆಸರಾಂತ ಕವಿ ಸಾಹಿತಿಗಳು *BR ಲಕ್ಷ್ಮಣ ರಾವ್*
ರವರ ಅಮೃತ ಹಸ್ತದಿಂದ ಬಿಡುಗಡೆಗೊಳಿಸಿ ಲೋಕಾರ್ಪಣೆ ಮಾಡಿದ್ದಾರೆ ನನ್ನ ಜೀವನದಲ್ಲಿ ಬಹುದೊಡ್ಡ ಸಾಧನೆ ಕೂಡ ನಿಮ್ಮ ಮಗಳಾಗಿ ಹುಟ್ಟಿದ್ದಕ್ಕೆ ಹೆಮ್ಮೆ ತಂದಿದೆ . ಅಪ್ಪ ಹದಿನೇಳು ವರ್ಷಗಳು ಕಳೆದವು ನಿಮ್ಮ ಆ ದೈತ್ಯ ದೇಹ ಸಾವಿನಲ್ಲಿ ತುಂಬಾ ಸೊರಗಿ ಸಾವನ್ನಪ್ಪಿದ ನಿಮ್ಮನ್ನ ಕಳೆದುಕೊಂಡ ಆ ಗಳಿಗೆ ದೇವರ ಮೇಲೆ ಬಹಳ ಬೇಸರವಾಗಿತ್ತು ಸ್ವಲ್ಪ ದಿನಗಳು ಕಳೆದ ಮೇಲೆ ಯಲ್ಲಾರೂ ಒಂದು ದಿನ ಸಾಯಲೇಬೇಕು ಎಂಬ ಸತ್ಯ ತಿಳಿದ ಮೇಲೆ ಸ್ವಲ್ಪ ಸಮಾಧಾನ ಕಂಡಿದ್ದೆ. ಎನಿರಲಿ ಅಪ್ಪ ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಬೇಡಿಕೊಳ್ಳುತ್ತೇನೆ.ನನ್ನ ಪ್ರೀತಿಯ ಅಪ್ಪ ಇಂತಿ ನಿಮ್ಮ ಪ್ರೀತಿಯ ಮಗಳು.... *ನಾಗರತ್ನ.. ✍🏻💅 *ಬತ್ತದ ತೊರೆ ಸ್ನೇಹ ಬಳಗ *
ಚಂದಾಪುರ✍🏻
[23/02, 8:23 PM] Usha Dinesh Wrtr: ಬತ್ತದ ತೊರೆ ತಂದೆಗೆ ಒಂದು ಪತ್ರ ಲೇಖನ ಸ್ಪರ್ದೆಗಾಗಿ
----------------------------------------
ಉಷಾ ದಿನೇಶ್
ಶಿವಮೊಗ್ಗ
ರಾಧಾಕೃಷ್ಣ
ಕುಂದಾಪುರ
ಶ್ರೀ....
ಪೂಜ್ಯ ಸ್ವರೂಪದ ತಂದೆಯವರಲ್ಲಿ ತಮ್ಮ ಮಗಳು ಬೇಡುವ ಆಶೀರ್ವಾದಗಳು..
ನೀವು ನಮ್ಮನ್ನು ಅಗಲಿ ಆಗಲೇ ಏಳು ವರ್ಷಗಳು ಸರಿದರೂ ನಿಮ್ಮ ನೆನಪುಗಳು ಮನದಲ್ಲಿ ಸದಾ ಹಸಿರು.ನೀವು ತೋರಿಸಿದ ದಾರಿ ,ಮಾರ್ಗದರ್ಶನ,ಬದುಕಿನ ಕಟು ಸತ್ಯಗಳ ಮೇಲೆ ಬೆಳಕು ಚೆಲ್ಲಿ ಎಲ್ಲವನ್ನೂ ಎದುರಿಸಲು ತಿಳಿಹೇಳಿದ ನಿಮಗೆ ಸದಾ ಋಣಿಯಾಗಿರುವೆ.
ನೊಂದಾಗ ಸಂತೈಸಿ,ಗೆದ್ದಾಗ ಹಾರೈಸಿ ,ಗಳಿಸಿದ ಯಶಸ್ಸಿಗೆ ತಾಯಿಯೊಡನೆ ಆನಂದ ಪಟ್ಟಿರುವವರು ನೀವು.ಇನ್ನೂ ಹೆಚ್ಚಿನ ಸಾಧನೆ ಗೈಯ್ಯುವಂತೆ ಹುರಿದುಂಬಿಸಿದವರು.ಬದುಕು ಎಷ್ಟು ಕಠಿಣವಾಗಿದೆ ಎಂದು ನಮಗೆ ಯಾವತ್ತೂ ಅನ್ನಿಸದ ಹಾಗೇ ಅಕ್ಕರಾಸ್ಥೆಯಿಂದ ನೋಡಿಕೊಂಡಿರುವಿರಿ.
ಆದರೂ ಮನುಷ್ಯನ ಜೀವನದಲ್ಲಿ ಬಾಲ್ಯವೆಂಬುದು ಸುಂದರವೆಂದೇ ಹೇಳಬೇಕು.ತರಗತಿಯ ಪಠ್ಯ ಅಭ್ಯಾಸ ಪರೀಕ್ಷೆಗಳ ತಯ್ಯಾರಿಯ ಬಗ್ಗೆ ಸ್ವಲ್ಪ ಚಿಂತೆ ಬಿಟ್ಟರೆ ಇನ್ಯಾವ ಸಮಸ್ಯೆಗಳು ಅಷ್ಟು ಕಾಡುವುದಿಲ್ಲ.ತಂದೆ ತಾಯಿಗಳ ಕಾವಲಿನಲ್ಲಿ, ಒಡ ಹುಟ್ಟಿದವರ ಸಲುಗೆಯಲ್ಲಿ ,ಸ್ನೇಹಿತರ ಸಹಚರ್ಯದಲ್ಲಿ ದಿನಗಳು ಸರಿಯುವುದೇ ತಿಳಿಯಲಾರದು.
ಆದರೆ,ಬದುಕು ನಿಂತ ನೀರಲ್ಲ ,ಕಾಲ ಓಡುತ್ತಲೇ ಇರುತ್ತದೆ.ಬದಲಾವಣೆಯೇ ಪ್ರಕೃತಿಯ ನಿಯಮವೆಂಬಂತೆ ಎಲ್ಲವೂ ಬದಲಾಗುತ್ತಲೇ ಸಾಗುತ್ತದೆ.ಪ್ರತಿಯೊಂದು ಸನ್ನಿವೇಶಕ್ಕೂ ನಾವು ಸ್ಪಂದಿಸಲೇ ಬೇಕು. ಏರಿಳಿತದ ಹಾದಿಯಲ್ಲಿ ಅದೆಷ್ಟೇ ಸವಾಲುಗಳಿದ್ದರೂ ಎದುರಿಸುತ್ತಾ ಸಾಗಲೇ ಬೇಕು ಎಂದು ತಿಳಿ ಹೇಳಿದವರು ನೀವು..
ಆದರೂ ಕೆಲವೊಂದು ಸಲ ಬಂದೊದಗಿದ ದೊಡ್ಡ ಆಘಾತಗಳಿಗೆ ಮನಸ್ಸು ತತ್ತರಿಸಿ ಛಿದ್ರವಾಗಿದ್ದು ನೋವಿನಿಂದ ಬೇಸತ್ತಿದ್ದು ಇದೆ.ಅವಾಗಲೆಲ್ಲ ನಿನ್ನ ನೆನಪಾಗುತ್ತದೆ.
ಬಹುಶಃ ಎರೆಡು ವರ್ಷದಿಂದ ಇಡೀ ಮಾನವ ಕುಲವನ್ನು ಇನ್ನಿಲ್ಲದಂತೆ ಕಾಡಿಸಿದ ಕೊರೊನಾದ ರುದ್ರ ಅವತಾರವನ್ನು ನೀನು ಕಣ್ಣಾರೆ ಕಾಣಲಿಲ್ಲ.,ಬುದ್ದಿ ಬಂದ ನಂತರ ಒಂದು ದಿನವೂ ಮನೆಯಲ್ಲಿ ಕುಳಿತು ವಿಶ್ರಾಂತಿ ಪಡೆಯದ ಕೇವಲ ದುಡಿಮೆಯೇ ದ್ಯೇಯ ಮಂತ್ರವಾಗಿಸಿ ಕೊಂಡಿದ್ದ ಜನಸಮೂಹ ಕಾಲುಮುರಿದಂತೆ ಗ್ರಹಬಂದನದಲ್ಲಿ ದಿನಗಳ ಕಳೆಯಿತು. ಜೀವದ,ಜೀವನದ ಮೌಲ್ಯವನ್ನು ಒಂದು ಪುಟ್ಟ ಅಣು ಗಾತ್ರದ ಕ್ರಿಮಿ ತಿಳಿಯಪಡಿಸಿ ,ಹಣ ಐಶ್ವರ್ಯ ದಿಂದ ಎಲ್ಲವನ್ನೂ ದಕ್ಕಿಸಿಕೊಳ್ಳಲು ಸಾಧ್ಯವಿಲ್ಲವೆಂಬ ಸತ್ಯವನ್ನು ಮನನ ಮಾಡಿಸಿತು.
ಆದರೂ ಅಪ್ಪಾ,ಮನಸ್ಸಿಗೆ ನೋವು ಕೊಡುವ ವಿಷಯವೆಂದರೆ,ಇಷ್ಟಾದರೂ ಈ ಜನರು ಜಾತಿ, ಧರ್ಮವೆಂದು ದ್ವೇಷ ಕಾರುತ್ತಾ,ಇನ್ನೂ ಒಡೆದಾಡುವ ಪ್ರವೃತ್ತಿಯನ್ನು ಬಿಟ್ಟಿಲ್ಲ ,
ಧರ್ಮದ ದ್ವೇಷಕ್ಕೆ ಯಾವ ಅಮಾಯಕರನ್ನು ಹತ್ಯೆ ಮಾಡಲೂ ಹಿಂಜರಿಯುವುದಿಲ್ಲ..
ಇಂತಿ ನಿನ್ನ ಮಗಳು
ಉಷಾ ದಿನೇಶ್
ಶಿವಮೊಗ್ಗ
[23/02, 8:34 PM] Rekha G Nayaka Wrtr: ಬತ್ತದ ತೊರೆ ಸ್ನೇಹ ಬಳಗ
ದಿನಾಂಕ 23 /02/ 2022
ಸ್ಪರ್ಧೆಗಾಗಿ ವಿಷಯ. ತಂದೆಗೊಂದು ಪತ್ರ
ಇಂದ,
ರೇಖಾ
ಬೆಳಗಾವಿ
ತೀರ್ಥರೂಪ ತಂದೆಯವರಿಗೆ,
ನಿಮ್ಮ ಮಗಳು ರೇಖಾ ಮಾಡುವ ನಮಸ್ಕಾರಗಳು. ಅಪ್ಪ ಹೇಗಿದ್ದೀರಿ,? ಚೆನ್ನಾಗಿದ್ದೀರಿ ಎಂದು ತಿಳಿದುಕೊಂಡಿದ್ದೇನೆ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ .ನಾನು ಕೂಡ ಚೆನ್ನಾಗಿದ್ದೇನೆ. ಅಮ್ಮ ಹೇಗಿದ್ದಾಳೆ? ನಿಮ್ಮಿಬ್ಬರ ಆರೋಗ್ಯವನ್ನು ಕಾಪಾಡಿಕೊಳ್ಳಿ. ಹತ್ತಿರವಿದ್ದಾಗ ಅಷ್ಟೊಂದು ಬೇಜಾರ ಅನ್ನಿಸುತ್ತಿರಲಿಲ್ಲ. ಈಗ ದೂರ ಬಂದಮೇಲೆ ಪ್ರತಿದಿನವೂ ನಿಮ್ಮದೇ ಚಿಂತೆಯಾಗಿದೆ. ತಡರಾತ್ರಿಯಲ್ಲಿ ಯಾವುದೇ ಫೋನಿನ ಕರೆ ಬಂದರೂ ಪಟ್ಟನೆ ಎದ್ದು ಕುಳಿತು ಅಮ್ಮ ಅಪ್ಪ ಹೇಗಿದ್ದಾರೆ ಎಂಬ ಒಂದು ಸಣ್ಣ ಸಂಶಯ ತಲೆಯಲ್ಲಿ ಹಾದು ಹೋಗುತ್ತದೆ. ಊರಿಗೆ ಬರಬೇಕೆಂದು ಕೊಂಡರೂ ಶಾಲೆಯ ಜವಾಬ್ದಾರಿ, ಆಗ್ಗಾಗ್ಗೆ ಕೇಳುತ್ತಿರುವ ಮಾಹಿತಿಗಳು,ಶಾಲೆಗೆ ಅಧಿಕಾರಿಗಳ ಭೇಟಿ,ರಜೆ ಸಿಗದ ಕಾರಣ ಮತ್ತೆ ಹೋದರಾಯಿತು ಎಂದು ಮುಂದೂಡಿರುತ್ತೇನೆ. ಆದರೂ ಚಿಕ್ಕವರಿದ್ದಾಗ ನಿಮ್ಮೊಂದಿಗೆ ಕಳೆದ ಸಮಯಗಳು ದಿನಗಳು ಮತ್ತೆ ಬರುವುದಿಲ್ಲ. ಮಾರ್ಚದಲ್ಲಿ ಶಿವರಾತ್ರಿ ಬಂದಿದೆಯಂತೆ.ಪ್ರತಿ ಶಿವರಾತ್ರಿಯಂದು ನಡೆಯುವ ಗೋಕರ್ಣದ ಜಾತ್ರೆಗೆ ನಾವೆಲ್ಲಾ ಸೇರಿ ತೇರಿಗೆ ಹಣ್ಣನ್ನು ಎಸೆಯಲು ನಿಮ್ಮೊಂದಿಗೆ ಹೋಗುತ್ತಿದ್ದೆವು. ಬಣ್ಣ ಬಣ್ಣದ ಮಿಠಾಯಿ ಉಡುಪುಗಳು ಆಟಿಕೆಗಳು ಕೊಡಿಸುತ್ತಿದ್ದಿರಿ. ತಿಂಗಳುಗಟ್ಟಲೆ ಉಳಿಯುವಂತಹ ಗುಡಗೇರಿ ಕಂಪನಿಯ ನಾಟಕ ಒಂದನ್ನು ನೋಡದೇನೆ ಬಿಟ್ಟಿದ್ದು ನೆನಪಿಲ್ಲ. ಶಿವರಾತ್ರಿ ಎಂದು ಸರದಿ ಸಾಲಿನಲ್ಲಿ ನಿಂತು ಶಿವನಿಗೆ ಅಭಿಷೇಕ ಮಾಡಿ ಬರುವಾಗ ಶಿವನೇ ನಮ್ಮ ಮುಂದೆ ನಿಂತಷ್ಟು ಸಂತೋಷವಾಗುತ್ತಿತ್ತು. ಜಾತ್ರೇಲಿ ತಿರುಗುತ್ತಿದ್ದಂತೆ ಜೋಕಾಲಿ, ಚಕ್ರ, ಕುದುರೆ ಬಂಡಿ ಮುಂತಾದವುಗಳ ಮೇಲೆ ನಮ್ಮನ್ನು ಕುಳ್ಳಿರಿಸಿ ನಮ್ಮ ಸಂತೋಷದಲ್ಲಿ ನಿಮ್ಮನ್ನು ಕಾಣುತ್ತಿದ್ದ ಕಣ್ಣುಗಳು ಇಂದಿಗೂ ನನ್ನ ಕಣ್ಣೆದುರು ಬಂದು ನನ್ನ ಕಣ್ಣು ಮಂಜಾಗುತ್ತದೆ. ವಯಸ್ಸಾದ ನಿಮ್ಮಲ್ಲಿ ನಮ್ಮ ಮಕ್ಕಳು ಅಜ್ಜನೊಂದಿಗೆ ಹೋಗಬೇಕೆಂದು ಬಯಸಿದರೂನು ಈಗ ಆ ಹಿಂದಿನ ಶಕ್ತಿ ನಿಮಗೆ ಉಳಿದಿಲ್ಲ. ಮನೆಯ ಹತ್ತಿರವೇ ಓಡಾಡಿಕೊಂಡು ಹೇಗೋ ದಿನ ದೂಡಿದರಾಯಿತೆಂಬ ಮನೋ ಭಾವನೆ ತಮಗೆ ಬಂದುಬಿಟ್ಟಿದೆ. ಹಾಗಾಗುವುದು ಬೇಡ .ಶಿಸ್ತಿನ ಸಿಪಾಯಿ ಆದ ನೀವು ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದರು ಧೈರ್ಯ, ಚಲದಿಂದ ಬದುಕಬೇಕೆಂಬದೇ ನನ್ನ ಆಸೆ. ನನ್ನ ಮಗಳು ಕ್ಲಾಸ್೨ ಅಧಿಕಾರಿಯನ್ನಾಗಿ ಮಾಡಬೇಕೆಂಬ ತಮ್ಮ ಛಲ ಹಾಗೂ ನನ್ನಲ್ಲಿಟ್ಟ ಅಪಾರ ನಂಬಿಕೆ ಇಂದು ನಾನು ಕೆಇಎಸ್ ಮುಗಿಸಿ ಹತ್ತು ವರ್ಷದಿಂದ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ. ಕೆ.ಇ.ಎಸ್ ಪಾಸ್ ಮಾಡುವುದು ಅಷ್ಟೊಂದು ಸಲ ವಿಷಯವಾಗಿರಲಿಲ್ಲ. ತಾವು ಹುರಿದುಂಬಿಸಿರುವಂತಹ ರೀತಿ ನಿನ್ನಿಂದ ಸಾಧ್ಯ ನೀನು ಮಾಡಲೇಬೇಕೆಂದು ಬೆನ್ನು ತಟ್ಟಿರುವ ಅಂಶಗಳೆಲ್ಲಾ ಸೇರಿ ಇಂದು ಗ್ರೂಪ್ ಬಿ ವೃಂದದ ಅಧಿಕಾರಿ ಎಂದು ಕರೆಯಿಸಿಕೊಳ್ಳುವಂತಾಗಿದೆ ಅಪ್ಪ. ಅಪ್ಪ ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ ಇನ್ನೂ ಹೆಚ್ಚಿನ ಗುರಿಯನ್ನು ಸಾಧಿಸಬೇಕಾಗಿದೆ ಅದಕ್ಕೆಲ್ಲ ತಮ್ಮ ಪ್ರೋತ್ಸಾಹ ಕೊನೆಯವರೆಗೂ ನೀಡಿರಿ ಎಂದು ಬೇಡುತ್ತೇನೆ. ಸಮಾಜಕ್ಕೆ ನೂರಾರು ಸತ್ಕಾರ್ಯವನ್ನು ಮಾಡಿದ ತಮಗೆ ಇನ್ನಷ್ಟು ಸಮಾಜಕ್ಕೆ ಸೇವೆ ಮಾಡುವಂತಹ ಶಕ್ತಿಯನ್ನು ದೇವರು ನಿಮಗೆ ಕರುಣಿಸಲಿ ಎಂದು ಬೇಡಿಕೊಳ್ಳುತ್ತಾ, ತಮ್ಮ ಆರೋಗ್ಯದ ಕಡೆ ಲಕ್ಷ್ಯವಿರಲಿ ವೈದ್ಯರ ಸಲಹೆಯಂತೆ ಊಟ,ಯೋಗ ಔಷಧಿಗಳನ್ನು ತೆಗೆದುಕೊಳ್ಳಿ ಅಮ್ಮ ಆರೋಗ್ಯವಂತರಾಗಿ ಇರುವಂತೆ ನೋಡಿಕೊಳ್ಳಿ , ತೊಂದರೆಯಾದಲ್ಲಿ ತಮ್ಮನೊಂದಿಗೆ ಹೋಗಿ ವೈದ್ಯರಿಗೆ ತೋರಿಸಿ, ಎನ್ನುತ್ತಾ ನನ್ನ ಪತ್ರವನ್ನು ಮುಗಿಸುತ್ತಿದ್ದೇನೆ ಅಪ್ಪ.
ಇಂತಿ ನಿಮ್ಮ ಪ್ರೀತಿಯ ಮಗಳು ರೇಖಾ.
✍️ ಶ್ರೀಮತಿ ರೇಖಾ ಜಿ ನಾಯಕ ಮುಖ್ಯಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಬೆಳಗಾವಿ
[23/02, 8:54 PM] Rathna K Bhat: *ವಿಷಯ:ತಂದೆಗೊಂದು ಪತ್ರ*
ಅಡ್ಯನಡ್ಕ
೨೩-೦೨-೨೦೨೨
ತೀರ್ಥರೂಪರಿಂದ ನಿಮ್ಮ ಮಗಳು
ರತ್ನಾಳು ಬೇಡುವ ಆಶೀರ್ವಾದ.ನಾನು ಕ್ಷೇಮ.ನೀವು ಅಮ್ಮ ಮತ್ತು ಮನೆಯಲ್ಲಿರುವವರೆಲ್ಲರೂ ಕ್ಷೇಮವೆಂದು ಭಾವಿಸುತ್ತೇನೆ.
ಅಪ್ಪಾ,ನಿಮಗೊಂದು ವಿಷಯ ಹೇಳಬೇಕು.ನೀವಂದು ನನ್ನನ್ನು ಕಾಲೇಜಿಗೆ ಕಳುಹಿಸುವುದಿಲ್ಲವೆಂದಾಗ ನಾನು ಎಷ್ಟು ಅತ್ತಿದ್ದೇನೆ. ನಿಮ್ಮ ಕಷ್ಟವನ್ನು ಅರ್ಥ ಮಾಡಿಕೊಂಡಾಗ,ಯೋಚಿಸಿದಾಗ ಗೊತ್ತಾಯಿತು ಯಾಕೆ ಎಂಬುದು .ತೋಟದಲ್ಲಿ ಬೆಳೆ ಇಲ್ಲದೆ ಜೀವನಕ್ಕೆ ಕಷ್ಟ,ತಮ್ಮ ತಂಗಿಯರ ವಿದ್ಯಾಭ್ಯಾಸ ಇದೆಲ್ಲ ಆಗಬೇಕಲ್ಲ?ಆಗ ನನಗೆ ನಿಮ್ಮ ಮೇಲೆ ವಿಪರೀತ ಸಿಟ್ಟು ಬಂದಿತ್ತು,ಕ್ಷಮಿಸಿ ಅಪ್ಪ.
ನನ್ನನ್ನು ಬೇಗ ಮದುವೆ ಮಾಡಿದಿರೆಂಬ ಕೋಪವೂ ನಿಮ್ಮ ಮೇಲಿತ್ತು.ನೀವೊಮ್ಮೆ
ಹೇಳಿದ ಮಾತು ಈಗ ನೆನಪಿಗೆ ಬರುತ್ತಿದೆ 'ನಿನಗೆ ಅದೃಷ್ಟ ಒಳ್ಳೆಯದಿದ್ದರೆ ,ನೀನು ಮತ್ತೆ ಓದಬಹುದು,ನಿನ್ನ ಕೈಹಿಡಿದವ ಓದಿಸಿಯಾನು,ಬೇಸರ ಮಾಡಬೇಡ'. ಅದೀಗ ಸತ್ಯವಾಯಿತಪ್ಪ.
ಅಪ್ಪಾ,ಮದುವೆ,ಮನೆ,ತೋಟ,ನನ್ನ ಕುಟುಂಬದವರೆಂದು ಹತ್ತು ವರ್ಷ ಮನೆವಾರ್ತೆ ಮಾಡಿದೆ..ಎರಡು ಮಕ್ಕಳ ಅಮ್ಮನಾದೆ.ನನ್ನ ಬಾಣಂತನವನ್ನು ನೀವು ತಾಯಿ ಚೆನ್ನಾಗಿ ನೋಡಿ ಮಾಡಿದ್ದೀರಿ.ಆ ಋಣ ತೀರಿಸಲು ಸಾಧ್ಯವಾಗದು.ನಂತರ ನನಗೇನೋ ಅಸೌಖ್ಯದಿಂದ ನಾನು ಅನಿವಾರ್ಯವಾಗಿ ಶಿಕ್ಷಕ ತರಬೇತಿ ಮುಗಿಸಿದೆ.ನನಗೆ ಕೆಲಸವೂ ಸಿಕ್ಕಿತು.ಅಪ್ಪಾ,ನಾನು ಈಗ ಯಕ್ಷಗಾನ ,ತಾಳಮದ್ದಳೆ ಎಲ್ಲಾ ಕಲಿತಿದ್ದೇನೆ.
ಅಪ್ಪಾ, ನಿಮ್ಮ ಅಳಿಯ ನನಗೆ ಖಾಸಗಿಯಾಗಿ ಪದವಿಪೂರ್ವ ಶಿಕ್ಷಣ ಕೊಡಿಸಿ,ಪರೀಕ್ಷೆಗೂ ಕುಳಿತು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾದೆ.ಹಾಗೆಯೇ ಪದವಿ,ಹಿಂದಿ ವಿಶಾರದಾ ಪರೀಕ್ಷೆ ಬರೆದು ಪ್ರಥಮ,ದ್ವಿತೀಯ ದರ್ಜೆಯಲ್ಲಿ ಪಾಸಾದೆ.ಸ್ನಾತಕೋತ್ತರ,ಬಿಎಡ್ ಮಾಡಬೇಕೆಂಬ ಆಸೆ ಇತ್ತು.ಆಗ ನನಗೆ ವರುಷ ೪೭ ದಾಟಿತು ಒಂದು ಕಾರಣ,ನಿಮ್ಮ ಮೊಮ್ಮಕ್ಕಳು ದೊಡ್ಡವರಾಗಿ ಅವರಿಗೆ ಓದಿಸಬೇಕಿತ್ತಲ್ಲ,ಅದು ನನ್ನ ಕನಸು ಸಹ,ಹಾಗಾಗಿ ಸಿಗುವ ದುಡಿಮೆಯ ಸಂಪಾದನೆಯಲ್ಲಿ ಕಷ್ಟ. ಹಾಗಾಗಿ ಓದಿಲ್ಲ.ಆದರೆ ನನ್ನವರು ಇಷ್ಟಾದರೂ ಓದಿಸಿದರೆಂಬ ಸಂತಸ,ತೃಪ್ತಿ ನನಗಿದೆ ಅಪ್ಪ.
ನಿಮಗೂ ನಾನು ಕಲಿಯಬೇಕೆಂಬ ಆಸೆ ಇತ್ತಲ್ಲ?ಅದು ಈಗ ಈಡೇರಿದೆ.ನಾನೀಗ ಮಕ್ಕಳಿಗೆಲ್ಲ *ಪ್ರೀತಿಯ ರತ್ನ ಟೀಚರ್* ,ಊರಿನ ಶಾಲೆಯ ಹೆತ್ತವರಿಗೆ *ನಮ್ಮೂರ ಶಾಲೆಯ ತಾಯಿ* ಆಗಿದ್ದೇನೆ.ಇದೆಲ್ಲ ನಿಮ್ಮ ಆಶೀರ್ವಾದ,ಭಗವಂತನ ರೂಪದ ನಿಮ್ಮ ಅಳಿಯನಿಂದ ಹಾಗೂ ದೇವರ ಕೃಪೆಯಿಂದ ಆಯಿತು.
ಅಪ್ಪ,ಕೊರೊನಾ ಇಡೀ ಹಬ್ಬಿದ ಕಾರಣ ಎಲ್ಲಿಗೂ ಹೋಗಲಿಲ್ಲ.ಈಗ ಸ್ವಲ್ಪ ಕಡಿಮೆಯಾಗಿದೆ.ನಾನು,ಮೊಮ್ಮಕ್ಕಳು ಶಾಲೆಗೆ ರಜೆ ಸಿಕ್ಕಿದ ಕೂಡಲೆ ಬರುತ್ತೇವೆ.ಈಸಲ ತಂಗಿಯ ಮದುವೆ ಉಂಟು ಹೇಳಿದ್ದೀರಿ.
ಅಪ್ಪ,ಗೇರು ಬೀಜದ ಹಣ್ಣು,ಮಾವಿನಹಣ್ಣುತೋಟದಲ್ಲಿ ತುಂಬಾ ಇದೆ ಹೇಳಿದ್ದೀರಿ.ಅಂಗಳದ ಬದಿಯ ಗುಡ್ಡೆಯಲ್ಲಿ ಹಲಸಿನ ಮರದಲ್ಲಿ ಕಾಯಿ ಇದೆಯಾ?ಕಪಿಲೆ,ಗೌರಿ ಹಟ್ಟಿಯಲ್ಲಿ ಪುಟ್ಟ ಕರುಗಳೊಟ್ಟಿಗೆ ಖುಷಿ ನೋಡಲು.ಹೇಳಿದ ಹಾಗೆ ಮೋತಿ,ಟಾಮಿ ಎರಡು ನಾಯಿಗಳು ಬಿಲ್ಲಿ ಬೆಕ್ಕು ಮೊಮ್ಮಕ್ಕಳಿಗೆ ಇಷ್ಟ.ಅಪ್ಪ,ಸಿಹಿಯಾಳ ಗೆಂದಾಳಿಯದ್ದು ಕೊಯಿದು ಕೊಡಬೇಕು.ಅದರ ನೀರು ಮತ್ತು ಗಂಜಿ ಬಹಳ ರುಚಿ,ಆರೋಗ್ಯಕ್ಕೂ ಒಳ್ಳೆಯದೆಂದು ಆವತ್ತು ನನಗೆ ಮೈಯಲ್ಲಿ ಕೋಟ್ಲೆ(ಅಮ್ಮ)ಆದಾಗ ಹೇಳಿದ್ದೀರಿ.ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆಗೆ ಎಲ್ಲರೂ ಒಟ್ಟಿಗೆ ಹೋಗುವ.ನಿಮ್ಮ ಮೊಣಕಾಲು ನೋವಿಗೆ ನಿತ್ಯವೂ ಎಣ್ಣೆ ಹಚ್ಚಿ
ಆರೋಗ್ಯದ ಕಡೆಗೆ ನೀವಿಬ್ಬರೂ ಗಮನಕೊಡಿ.ಈ ಸಮಯದಲ್ಲಿ ಅಗತ್ಯವಿದ್ದರೆ ಮಾತ್ರ ಹೊರಗೆ ಹೋಗಿ.ಈ ಪತ್ರಕ್ಕೆ ಉತ್ತರಕ್ಕಾಗಿ ಕಾಯುತ್ತೇನೆ.
ಇಂತಿ ಬೇಡುವ
ಆಶೀರ್ವಾದಗಳು
ನಿಮ್ಮ ಪ್ರೀತಿಯ
ಮಗಳು
ರತ್ನಾ
(*****)
ಇವರಿಗೆ,
ಶ್ರೀ ಈಶ್ವರ ಭಟ್,
ಹಾಲುಮಜಲು ಮನೆ
ಪುತ್ತೂರು ತಾಲೂಕು
ದ.ಕನ್ನಡ-೫೭೪೨೧೨
[23/02, 8:57 PM] Shreekala Madam Wrtr: ಸ್ಪರ್ಧೆಗಾಗಿ
************
*ಅಪ್ಪನಿಗೊಂದು ಪತ್ರ*
*********
ಅಳಿಕೆ
22-02-2022
ತೀರ್ಥರೂಪರಿಗೆ ನಲ್ಮೆಯ ಪ್ರಣಾಮಗಳು.
ಈಗ ತಾನೇ ನಿಮ್ಮ ಜೊತೆ ಮಾತನಾಡಿ ಮೊಬೈಲ್ ಕೆಳಗೆ ಇರಿಸಿದ್ದೇನೆ. ನೀವು ಕ್ಷೇಮವೆಂದು ತಿಳಿದಿದೆ. ಹಾಗೆಯೇ ನಾನು ಕ್ಷೇಮ ಎಂದು ನಿಮಗೆ ಗೊತ್ತಿದೆ.
ಮತ್ತೆ ಯಾಕೆ ಇವಳ ಪತ್ರ ? ಎಂದು ನೀವು ಅಚ್ಚರಿ ಪಡುವುದಿಲ್ಲ ಎಂದು ನನಗೆ ಗೊತ್ತು. ಏಕೆಂದರೆ ನಾವು ಈಗ ತಾನೆ ನನ್ನ ಹಾಸ್ಟೆಲ್ ವಾಸದ ದಿನಗಳು, ಅಲ್ಲಿ ನಿಮಗೆ ಬರೆಯುತ್ತಿದ್ದ ಪತ್ರಗಳನ್ನು ನೆನಪು ಮಾಡಿಕೊಂಡೆವಲ್ಲ ? ಮತ್ತೆ ನಾವಿಬ್ಬರೂ ನನ್ನ ಕೆಲಸದ ಒತ್ತಡದಲ್ಲಿ ಬೇಕೆಂದಾಗ ಮಾತನಾಡಲು ಸಾಧ್ಯವಿಲ್ಲ. ಆದರೆ ನಿಮ್ಮ ಬಳಿಯಲ್ಲಿ ಭದ್ರವಾಗಿರುವ ಈ ಪತ್ರ ನಿಮ್ಮ ಮುಖದಲ್ಲಿ ಸದಾ ಮುಗುಳ್ನಗು ಮೂಡಿಸುವುದು ಎಂದು ನನಗೆ ಗೊತ್ತಿದೆ.
ಇತ್ತೀಚೆಗೆ ನೀವು ನನಗೆ ತುಂಬಾ ನೆನಪಾಗುತ್ತೀರಿ. ನನ್ನ ಮಕ್ಕಳಿಗೆ ತುತ್ತು ಅನ್ನ ಉಣಿಸುವಾಗ, ಅವರ ಉಗುರನ್ನು ಕತ್ತರಿಸುವಾಗ, ತಲೆಗೆ ಸ್ನಾನ ಮಾಡಿಸುವಾಗ, ಪಾಠಗಳನ್ನು ಹೇಳಿಕೊಡುವಾಗ, ಪರೀಕ್ಷೆಗಳ ಸಮಯದಲ್ಲಿ ಧೈರ್ಯ ತುಂಬುವಾಗ, ಪ್ರವಾಸ ಹೋದಾಗ ಅಲ್ಲಿ ಸ್ಥಳ ಪರಿಚಯ ಮಾಡಿಸುವಾಗ.... ನೀವು ಸಣ್ಣವನಾಗಿದ್ದಾಗ ನನ್ನೊಂದಿಗೆ ಆಡುತ್ತಿದ್ದ ಮಾತುಗಳು, ನನಗೆ ತುಂಬುತ್ತಿದ್ದ ಧೈರ್ಯ ಎಲ್ಲವೂ ಕಣ್ಣಿಗೆ ಮತ್ತೆ ಕಟ್ಟುತ್ತಿದೆ.
ತಂದೆ-ತಾಯಿಯ ಬವಣೆ ಮಕ್ಕಳಿಗೆ ತಿಳಿಯುವುದು ಅವರು ತಂದೆ-ತಾಯಿಗಳಾದಾಗಲೇ. ಅದು ನನ್ನ ಬದುಕಲ್ಲೂ ನಿಜವಾಗಿದೆ. ನಮ್ಮನ್ನು ಈ ಮಟ್ಟಕ್ಕೆ ಬೆಳೆಸಲು ನೀವು ಎಷ್ಟು ಕಷ್ಟಪಟ್ಟಿದ್ದೀರೆಂದು ಈಗ ಅರಿವಾಗುತ್ತಿದೆ. ನಿಮ್ಮಂತಹ ತಂದೆಯನ್ನು ಪಡೆದಕ್ಕಾಗಿ ಹೆಮ್ಮೆಯೆನಿಸುತ್ತಿದೆ.
ನಾನು ಸಣ್ಣವಳಿದ್ದಾಗ ನೀವು ನನಗೆ ತಂದುಕೊಟ್ಟ ಬಣ್ಣಬಣ್ಣದ ಪುಸ್ತಕಗಳು, ಮತ್ತೆ ಸ್ವಲ್ಪ ದೊಡ್ಡವಳಾದಾಗ ತರುತ್ತಿದ್ದ ಕಥೆ ಪುಸ್ತಕಗಳು, ನನಗೋಸ್ಕರ ತಂದ ಮಕ್ಕಳ ಹಾಡುಗಳ ಕ್ಯಾಸೆಟ್, ಪ್ರತಿವರ್ಷ ತೆಗೆದು ಕೊಡುತ್ತಿದ್ದ ಹೊಸ ಹೊಸ ಚೀಲಗಳು, ಹುಟ್ಟುಹಬ್ಬಕ್ಕೆ ಕೊಡಿಸುತ್ತಿದ್ದ ಚಂದದ ಉಡುಪುಗಳು... ಎಷ್ಟೇ ಕಷ್ಟವಿದ್ದರೂ ನನ್ನ ಆಸೆಗಳನ್ನು ಎಂದೂ ನಿರಾಕರಿಸಲಿಲ್ಲ ನೀವು. ಒಂದೇ ಒಂದು ಬಾರಿ ಸುಳ್ಳು ಹೇಳಿದ್ದಕ್ಕಾಗಿ ಪೆಟ್ಟು ಕೊಟ್ಟದ್ದು ಬಿಟ್ಟರೆ ಮತ್ತೆಂದೂ ನನ್ನ ಮೇಲೆ ಕೈ ಮಾಡಿದವರಲ್ಲ ನೀವು. ನನಗೆ ನಿಮ್ಮಷ್ಟು ತಾಳ್ಮೆ ಇಲ್ಲ ಅಪ್ಪಾ. ನನ್ನ ಮಕ್ಕಳನ್ನು ನಿಮ್ಮಷ್ಟು ನಾಜೂಕಿನಿಂದ ಬೆಳೆಸಲು ಸಾಧ್ಯವಾಗುತ್ತಿಲ್ಲ.
ಮತ್ತೆ ನಾನು ಸಣ್ಣವಳಾಗಬೇಕು ಅನಿಸುತ್ತಿದೆ. ನಿಮ್ಮ ಬೆನ್ನ ಮೇಲೆ ಕೂಸುಮರಿ ಆಡಬೇಕು. ನಿಮ್ಮ ಕೈಹಿಡಿದು ತೋಟವೆಲ್ಲಾ ಸುತ್ತಾಡಬೇಕು. ಅಕ್ಷರಗಳನ್ನು ತಿದ್ದಿಸಿಕೊಳ್ಳಬೇಕು. ಅಂದು ಹೇಳಲಾಗದ ಮಗ್ಗಿಗಳನ್ನು, ಶ್ಲೋಕಗಳನ್ನು, ನಕ್ಷತ್ರಗಳ ಹೆಸರುಗಳನ್ನು ಈಗ ಚೆನ್ನಾಗಿ ಕಲಿತು ನಿಮ್ಮ ಮುಂದೆ ಒಪ್ಪಿಸಬೇಕು. ಅಮ್ಮ ಬೈದಾಗ, ಟೀಚರ್ ಹೊಡೆದಾಗ ನಿಮ್ಮ ಮಡಿಲಲ್ಲಿ ಮುಖವಿಟ್ಟು ಅಳಬೇಕು. ಪೇಟೆಯಿಂದ ಬರುವಾಗ ನೀವು ತರುತ್ತಿದ್ದ ಪೆಪ್ಪರಮೆಂಟಿಗೆ ಮತ್ತೆ ತುದಿಗಾಲಲ್ಲಿ ನಿಂತು ಕಾಯಬೇಕು. ಹಾಸ್ಟೆಲಿಗೆ ಕಳಿಸುವಾಗ, ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವಾಗ ನಿಮ್ಮ ಕಣ್ಣ ಅಂಚಿನಲ್ಲಿ ಜಿನುಗಿದ ನೀರನ್ನು ಮತ್ತೊಮ್ಮೆ ಒರೆಸಬೇಕು. ನಿಮ್ಮನ್ನು ಅಪ್ಪಿಕೊಂಡು ಅಳಬೇಕು. ಅದೆಲ್ಲ ಈಗಾಗಲೇ ಮಾಡಿ ಆಗಿದೆಯಲ್ಲ ಕಂದಾ ? ಎನ್ನುತ್ತೀರಿ ಎಂದು ನನಗೆ ಗೊತ್ತಿದೆ. ನೀವು ನನ್ನ ಧೈರ್ಯ, ನನ್ನ ಸ್ಥೈರ್ಯ. ನಾನೆಂದೂ ನಿಮ್ಮ ಹೆಮ್ಮೆಯ ಮಗಳಾಗಿಯೇ ಇರುತ್ತೇನೆ ಅಪ್ಪಾ. ನಿಮ್ಮ ಆಸೆಗಳಂತೆಯೇ ಬೆಳೆಯುತ್ತೇನೆ. ನನ್ನ ಮಕ್ಕಳನ್ನೂ ಹಾಗೆಯೇ ಬೆಳೆಸಲು ಪ್ರಯತ್ನಿಸುತ್ತೇನೆ.
ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮ್ಮ ಮಡಿಲು ಸೇರಲು ಆದಷ್ಟು ಬೇಗ ರಜೆ ಸಿಕ್ಕಿದೊಡನೆ ಊರಿಗೆ ಹಾರಿ ಬರುತ್ತೇನೆ ... ನಿಮ್ಮ ಮೊಮ್ಮಕ್ಕಳೊಂದಿಗೆ. ಅಮ್ಮನಿಗೂ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳಿ. ಹೆಚ್ಚಿಗೆ ಕೆಲಸ ಮಾಡುವುದು ಬೇಡ ಎಂದು ಹೇಳಿ.
ನಿಮ್ಮ ಮುದ್ದಿನ ಮಗಳು
ಶ್ರೀಕಲಾ
***********
ಶ್ರೀಕಲಾ ಬಿ ಕಾರಂತ್
ಅಳಿಕೆ, ಬಂಟ್ವಾಳ ತಾಲೂಕು
[23/02, 8:59 PM] Shwetha Wrtr: *ಇಂದು ದಿನಾಂಕ ೨೩/೦೨/೨೦೨೨ ಬುಧವಾರ
ಬತ್ತದ ತೊರೆ ಸ್ನೇಹ ಬಳಗ ಸ್ಪರ್ಧೆಗಾಗಿ:
*ವಿಷಯ : ತಂದೆಗೊಂದು ಪತ್ರ*
ಶೀರ್ಷಿಕೆ:ಅಪ್ಪನಿಗೊಂದು ಕೋರಿಕೆ ಪತ್ರ
ಇಂದ,
ಶ್ವೇತಾ ತೀರ್ಥಹಳ್ಳಿ
ಬೆಂಗಳೂರ್
ಗೆ,
ಪ್ರೀತಿಯ ಅಪ್ಪ,
ನಿಮ್ಮ ಆಶ್ರಿವಾದ ಬೇಡಿಕೊಳ್ಳುತ್ತ ನಾನು ಅಮ್ಮ ಎಲ್ಲರೂ ನೀವೀಲ್ಲದೆ ಬಹುದೂರ ಬದುಕಲ್ಲಿ ಸಾಗಿ ಬಂದಿದ್ದೇವೇ,ನಿಮ್ಮ ಇರುವಿಕೆ ಅಮ್ಮನಲ್ಲಿ ಕಾಣುತ್ತ ಏರುಪೇರು ದಾಟಿ ಸದೃಢವಾಗಿದ್ದೇನೆ ,ಆದರೂ ಮನಸ್ಸಿನ ಒಂದು ಮೂಲೆಯಲ್ಲಿ ನೀವಿರದ ಪ್ರತಿ ಘಳಿಗೆ ಒಮ್ಮೊಮ್ಮೆ ಮರಗಿ ಸೊರಗುತ್ತದೆ ಮತ್ತೆ ಅಮ್ಮನ ಮುಖದಲ್ಲಿರುವ ನಿಮ್ಮ ಛಾಯೆ ನೋಡಿ ಅವಳಿಗಾಗಿ ಸಮಾಧಾನ ಮಾಡಿಕೊಳ್ಳುತ್ತದೆ,
ಇದೊಂದು ಸದಾವಾಕಾಶ ನಿಮಗೊಂದು ಪತ್ರ ಬರೆಯುವ ಮೂಲಕ ಅಂತರಾಳದ ಮಾತುಗಳನ್ನು ಹಂಚಿಕೊಳ್ಳುತ್ತಾ ಇದ್ದೇನೆ,
ನೀವಿರದ ಪ್ರತಿ ಕ್ಷಣದ ಆಗುಹೋಗುಗಳಲ್ಲಿ ಒಮ್ಮೆಯಾದರೂ ನೆನೆಸಿಕೊಂಡಿದ್ದೇನೆ ಕೊಳ್ಳುತ್ತಾ ಇದ್ದೇನೆ,
* ಇರಬೇಕಿತ್ತು ನನ್ನೆಲ್ಲ ಬೆಳವಣಿಗೆ ನೋಡಿ ಆನಂದಿಸಲು ,ಬೆಂಬಲಿಸಲು,
*ಇರಬೇಕಿತ್ತು ನೀವು ನಾ ಎಡವಿದಾದಾಗ
ಕೈ ಹಿಡಿದು ನಡೆಸಲು
*ನೋಡಬೇಕಿತ್ತು ನೀವು ಕೈ ತುಂಬಾ ಬಳೆತೊಟ್ಟು ನಾ ಸಂಭ್ರಮಿಸುವಾಗ,
*ಹೇಳಬೇಕಿತ್ತು ನೀವು ಚಂದದ ಹೊಸ ಉಡುಗೆ ತೊಟ್ಟಾಗ ನೀ ನನ್ನ ಮುದ್ದು ಗೊಂಬೆ ಎಂದು,
*ಕೊಡಿಸಬೇಕಿತ್ತು ಚಂದದ ನನಗೆ ಗೊಂಬೆಯೊಂದನ್ನು ಜಾತ್ರೆ ಅಂಗಳದಲ್ಲಿ ನಿಂತು ನಾ ಅಳುವಾಗ
*ತಿನ್ನಿಸಬೇಕಿತ್ತು ನೀವು ಹಸಿವಾದಾಗ ಚಂದಿರನ್ನ ತೋರಿಸಿ ಕೈ ತುತ್ತನ್ನ,
*ಹೋಗಳಬೇಕಿತ್ತು ನೀವು ಪ್ರಶಸ್ತಿ ಪತ್ರಗಳನ್ನು ತಂದಾಗ,
*ಸಹಿ ಒಂದು ಮಾಡಬೇಕಿತ್ತು ನನ್ನ ಶಾಲಾ ಅಂಕಪಟ್ಟಿಯಲ್ಲಿ
*ಕಾಯಬೇಕಿತ್ತು ನೀವು ಶಾಲೆಯ ಮುಂದಿನ ಗೇಟಿನ ಬಳಿ ನಾ ಬರುವ ವೇಳೆಗೆ,
*ಹರಿಸಬೇಕಿತ್ತು ಅಕ್ಷತೆ ಹಾಕಿ ಮದುವೆ ಮಂಟಪದಲ್ಲಿ
ಎಲ್ಲವೂ ಮಾಡದೆ ಹೋದ ನಿಮಗೆ ನನ್ನದೊಂದು ಪತ್ರ ವಿಳಾಸವಿಲ್ಲದ ಮನೆಗೆ
ಕಂಡೊಡನೆ ಬಂದು ಬಿಡಿ ಕಾರಣ ಹೇಳದೆ ಹೇಗೆ ಹೊದಿರೋ ,ಹಾಗೆ ಕಾರಣ ಕೇಳದೆ ಬಂದು ಬಿಡಿ,ಮನೆಯ ಮುಂದಿನ ಬಾಗಿಲಲ್ಲಿ ಮುಸ್ಸಂಜೆ ವೇಳೆಯಲ್ಲಿ ಅಮ್ಮ ಪ್ರತಿದಿನ ಸದಾ ನಿಮಗಾಗಿ ಕಾಯುತ್ತಿರುವಳು.
ನಿಮ್ಮ ಎದುರುನೋಡುತ್ತಿರುವ ಹಂಬಲದ ಜೀವಗಳು.
ಇಂತಿ ನಿಮ್ಮ ಮಗಳು
ಶ್ವೇತಾ,
✍️
ಶ್ವೇತಾ ತೀರ್ಥಹಳ್ಳಿ
ಬೆಂಗಳೂರ್,
[23/02, 9:08 PM] ParimaLa NM: ಸ್ಪರ್ಧೆಗಾಗಿ ವಿಷಯ ತಂದೆಗೊಂದು ಪತ್ರ
ಇವರಿಂದ
ಪರಿಮಳ
ಐವರ್ನಾಡು ಸುಳ್ಯ
ತೀರ್ಥರೂಪು ತಂದೆಯವರಿಗೆ,
ಪ್ರೀತಿಯ ಅಪ್ಪನಿಂದ ನಿಮ್ಮ ಮಗಳು ಬೇಡುವ ಆಶೀರ್ವಾದಗಳು ನಾನು ಕ್ಷೇಮವಾಗಿರುವೆ.. ನಿಮ್ಮ ಕ್ಷೇಮವ ಯಾಚಿಸುವ ಹಂಬಲ. ಎನಗೆ ಆದರೆ ಪ್ರತಿಕ್ರಿಯಸಲಾರದ ತಾಣಕ್ಕೆ ತಲುಪಿರುವಿರಿ.. ಅಪ್ಪ ನಿಮ್ಮೊಡನೆ ಮಾತಾಡಿ ಅದೆಷ್ಟು ವರ್ಷಗಳಾದವು.. ಹದಿನೇಳು ವರ್ಷಗಳು ಸಂದವು..
ಅಪ್ಪಾ ನಿಮಗೊಂದು ವಿಷಯ ಹೇಳ ಬಯಸುವೆ.. ನೀವು ನಮ್ಮನ್ನು ಬಿಟ್ಟು ಹೋದಾಗ ಅಕ್ಕನಿಗೆ ಮಾತ್ರ ಮದುವೆಯಾಗಿತ್ತು.. ಅಕ್ಕನ ಮಗನಿಗೆ ಆಗ ನಾಲ್ಕು ತಿಂಗಳಾಗಿತ್ತಾಷ್ಟೇ.. ಈಗ ಆತ ದ್ವಿತೀಯ ಪಿ ಯು ಸಿ ಅಭ್ಯಾಸ ಮಾಡುತ್ತಿದ್ದಾನೆ.. ಬಲು ಜಾಣ... ಈಗ ನಮಗೆಲ್ಲರಿಗೂ ವಿವಾಹವಾಗಿ ಮಕ್ಕಳೊಂದಿಗೆ ಸುಖವಾಗಿದ್ದೇವೆ... ನಿಮಗೆ ಮೊಮ್ಮೊಕ್ಕಳು ಎಷ್ಟು ಗೊತ್ತಾ ಅಪ್ಪಾ ಒಟ್ಟು 7 ಮಂದಿ ಮೊಮ್ಮೊಕ್ಕಳು ಇದ್ದಾರೆ... ಅಳಿಯಂದಿರೆಲ್ಲಾ ಶುದ್ಧ ಅಪರಂಜಿ. ಇಷ್ಟೆಲ್ಲಾ ಸೌಭಾಗ್ಯ ನೀವು ಅಂದು ಮಾಡಿದ ಪುಣ್ಯ ಕಾರ್ಯ...
ಅಪ್ಪಾ ಇಂದು ನಾವು ತುಂಬಾ ಸಂತೋಷವಾಗಿದ್ದೇವೆ.. ಆದರೆ ಆ ಸಂತೋಷವನ್ನು ನಿಮ್ಮೊಡನೆ ಕಳೆಯಲಾಗುತ್ತಿಲ್ಲ ಎಂಬ ವೇದನೆ ಕೊಲ್ಲುತ್ತಿದೆ.. ಇಂದಿಗೂ ನಿಮ್ಮ ಶಿಷ್ಯ ವರ್ಗ ನಿಮ್ಮನ್ನು ಸ್ಮರಿಸುತ್ತಿದೆ. ನಿಮ್ಮಂತಹ ಅಧ್ಯಾಪಕರನ್ನು ಕಳೆದುಕೊಂಡದಕ್ಕೆ ದುಃಖಿಸುತ್ತಿದೆ... ಎಲ್ಲರೂ ನಿಮ್ಮ ಬಗ್ಗೆ ಹೇಳುವಾಗ ನಿಮ್ಮಂತ ತಂದೆಗೆ ಮಗಳಾಗಿ ಜನಿಸಿದಕ್ಕೆ ಹೆಮ್ಮೆ ಎನಿಸುತಿದೆ... ನಿಮ್ಮನ್ನೂ ಈ ಕೂಡಲೇ ನೋಡ್ಬೇಕು ಮಾತಾಡ್ಬೇಕು ನಿಮ್ಮ ಮಡಿಲಲ್ಲಿ ಮಲಗ್ಬೇಕು ಅಂತ ಮನಸ್ಸು ತವಕಿಸುತ್ತಿದೆ.. ಆದರೆ ಮರಳಿ ಬರಲಾರದ ಊರಿಗೆ ಹೋದಿರಿ.. ಹೇಗಪ್ಪಾ ನಿಮ್ಮ ನಾ ಕಾಣಲಿ.. ಈಗಲೇ ನಿಮ್ಮ ಬಳಿ ಬರಲು ನಾನು ಸಿದ್ಧ ಆದರೆ ಜವಾಬ್ಧಾರಿಗಳು ನನ್ನ ತಡೆ ಹಿಡಿದಿವೆ.
ಏನೇ ಇರಲಿ ಅಪ್ಪಾ ನಿಮ್ಮ ಆದರ್ಶಗಳೇ ನಮಗೆ ಮಾರ್ಗದರ್ಶನ.. ಮುಂದಿನ ಜನ್ಮದಲ್ಲಿ ನೀವು ನನ್ನ ಮಗನಾಗಿ ಹುಟ್ಟಿ ಬನ್ನಿ. ಜವಾಬ್ಧಾರಿ ಮುಗಿದ ಮೇಲೆ ನಿಮ್ಮ ಬಳಿ ಬರುವೆ ಕಾಯುತ್ತಿರಿ.ಕೊನೆಯದಾಗಿ ಅಮ್ಮನ ಯೋಗಕ್ಷೇಮ ವಿಚಾರಿಸಿದೆನೆಂದು ತಿಳಿಸಿ..
ಧನ್ಯವಾದಗಳು
ಇತೀ ನಿಮ್ಮ ಪ್ರೀತಿಯ ಮಗಳು
ಪರಿಮಳ ಐವರ್ನಾಡು
[23/02, 9:09 PM] ಮಾಲತಿ ರಮೇಶ್: ಸ್ಪರ್ಧೆಗಾಗಿ:- *ಪತ್ರ ಬರೆಯುವುದು*
ವಿಷಯ:- *ತಂದೆಗೊಂದು ಪತ್ರ*
ದಿನಾಂಕ:- ೨೩-೦೨-೨೦೨೨
ಸ್ಧಳ:- ಉಡುಪಿ
ತೀರ್ಥರೂಪರ ಪಾದಾರವಿಂದಗಳಿಗೆ ನಿಮ್ಮ ಮುದ್ದಿನ ಮಗಳು ಮಾಲಳು ಮಾಡುವ ಸಾಷ್ಟಾಂಗ ನಮಸ್ಕಾರಗಳು.ಇಲ್ಲಿ ನಾವೆಲ್ಲರೂ ಕ್ಷೇಮ.ಶ್ರೀ ದೇವರ ಪಾದ ಸೇರಿದ😭 ನೀವು ಕೂಡಾ ಕ್ಷೇಮದಲ್ಲಿ ಇರುವಿರೆಂದು ನಂಬಿರುತ್ತೇನೆ.
ನಿಮ್ಮಂತಹ ತಂದೆಯವರನ್ನು ಪಡೆದ ನಾವುಗಳೇ ಧನ್ಯರು.ನಾವು ನಿಮಗೆ ಐದು ಜನ ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಿದ್ದರೂ, ಯಾವ ತಾರತಮ್ಯ ಇಲ್ಲದೆ ನಮ್ಮನ್ನು ಸಾಕಿ ಸಲಹಿದಿರಿ. ಚಿಕ್ಕಂದಿನಿಂದಲೂ ನಮಗೆ ಯಾವ ವಿಷಯದಲ್ಲೂ ಕೊರತೆಯಾಗದಂತೆ ಬೆಳೆಸಿದಿರಿ.ಒಳ್ಳೆಯ ವಿಧ್ಯಾಭ್ಯಾಸ ನೀಡಿ,ಉತ್ತಮ ಸಂಸ್ಕಾರಗಳನ್ನು ಕಲಿಸಿದ್ದೀರಿ.ಎಲ್ಲಾ ಮಕ್ಕಳಿಗೂ ಯೋಗ್ಯವಾದ ವರನನ್ನು ನೋಡಿ ಮದುವೆ ಮಾಡಿಸಿದಿರಿ.ನಮ್ಮ ನೋವನ್ನೆಲ್ಲಾ ಕ್ಷಣ ಮಾತ್ರದಲ್ಲಿ ಪರಿಹಾರ ಮಾಡಿದ್ದೀರಿ.ನೀವು ಮತ್ತು ನಮ್ಮನ್ನು ಎಷ್ಟೊಂದು ಪ್ರೀತಿಸುದ್ದೀರಿ.ಏನೇ ತೊಂದರೆ ಬಂದರೂ,ಮಕ್ಕಳಿಗೆ ಹೇಳದೆ ನೀವೇ ಆ ನೋವನ್ನು ನುಂಗುತ್ತಿದ್ದೀರಿ.ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ಅಮ್ಮ ನಮ್ಮ ಸಂಸಾರವನ್ನು ನೋಡುತ್ತಿದ್ದರು. ನೀವು ದುಡಿದು ತಂದ ಹಣವನ್ನು ಅವರು ಮಕ್ಕಳಿಗೆ ಯಾವ ಕೊರತೆ ಬಾರದಂತೆ ಮಿತವಾಗಿ ಖರ್ಚು ಮಾಡುತ್ತಿದ್ದರು. ಎಲ್ಲಾ ಮಕ್ಕಳಿಗೂ ಮದುವೆ ಮಾಡಿಸಿ,ಮೊಮ್ಮಕ್ಕಳೊಂದಿಗೆ ಸ್ವಲ್ಪ ಸಮಯ ಕಾಲ ಕಳೆದಿರಿ.ಆನಂತರ ನಿಮ್ಮ ದಾಂಪತ್ಯದ ಸುವರ್ಣ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿ, ಕೆಲವೇ ಸಮಯದಲ್ಲಿ ಆಕಸ್ಮಿಕವಾಗಿ ನಮ್ಮಿಂದ ದೂರವಾಗಿ,(೦೭-೦೩-೨೦೦೬)ಶ್ರೀ ದೇವರ ಪಾದವನ್ನು ಸೇರಿಸಿದಿರಿ.ಆ ದುಃಖದ ನಾನೆಂದೂ ಮರೆಯಲಾರೆ 😭. ನಿಮ್ಮ ಅನ್ಯೋನ್ಯ ದಾಂಪತ್ಯದ ರಥದ ಒಂದು ಚಕ್ರ ಕಳೆದು ಹೋಯಿತು. ಆನಂತರ ನಿಮ್ಮ ಪ್ರೀತಿಯನ್ನು ನಾವು ಅಮ್ಮನಲ್ಲಿ ನೋಡುತ್ತಿದ್ದೇವು.
ನೀವು ನಮ್ಮಿಂದ ಅಗಲಿ ಹದಿನಾಲ್ಕು ವರ್ಷಗಳು ಕಳೆಯುವಾಗ, ಅಮ್ಮ ನಮ್ಮಿಂದ ದೂರವಾದರು (೨೯-೦೨-೨೦೨೦) ರಾಮಾಯಣದ ಸೀತೆ ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದ ಹಾಗೆ,ನಿಮ್ಮಲ್ಲಿಗೆ ಅಮ್ಮ ಬಂದು ಸೇರಿದರು.ಆ ದಿನದಂದ ನಾವು ಅನಾಥರಾದೆವು.ಗಂಡ,ಮಕ್ಕಳು ಎನ್ನುವ ಸಂಸಾರ ಬಂಧನದಲ್ಲಿ ಇದ್ದರೂ,ನಿಮ್ಮಿಬ್ಬರ ನೆನಪು ಪ್ರತಿ ಕ್ಷಣವೂ ಆಗುತ್ತಿದೆ.ಅವರಲ್ಲಿ, ಅಕ್ಕ,ಅಣ್ಣನವರಲ್ಲಿ ನಿಮ್ಮ ಪ್ರೀತಿಯನ್ನು ಕಾಣುತ್ತಿದ್ದೇನೆ. ನಿಮ್ಮಿಬ್ಬರ ಆಶೀರ್ವಾದ ಯಾವಾಗಲೂ ನಮ್ಮ ಮೇಲಿರಲಿ ಎಂದು ಬೇಡುತ್ತಾ ಈ ಪತ್ರ ಮುಗಿಸುತ್ತೀದ್ದೇನೆ.
ಇಂತೀ ನಿಮ್ಮ ಪ್ರೀತಿಯ ಕೊನೆಯ ಮಗಳು
ತಂದೆಯ ನೆನಪುಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಟ್ಟ *ಭತ್ತದ ತೊರೆ ಸ್ನೇಹ ಬಳಗಕ್ಕೆ* ಧನ್ಯವಾದಗಳು🙏
✍️ *ಮಾಲತಿ ರಮೇಶ್ ಕೆಮ್ಮಣ್ಣು*
[23/02, 9:15 PM] Vijaya G. Madam Wrtr: ಬತ್ತದ ತೊರೆ ಸ್ನೇಹ ಬಳಗ
ತಂದೆಗೆ ಒಂದು ಪತ್ರ
******************************
ಸಪ್ರೇಮ ವಂದನೆಗಳು
ದಿನಾಂಕ-23-02-2022
ತೀರ್ಥರೂಪ ತಂದೆಯವರ ಪಾದಾರವಿಂದಗಳಿಗೆ, ನಿಮ್ಮ ಮಗಳಾದ ವಿಜಯಾ ಮಾಡುವ ಶಿರಸಾಷ್ಟಾಂಗ ನಮಸ್ಕಾರಗಳು. ನಾವೆಲ್ಲಾ ಇಲ್ಲಿ ಕ್ಷೇಮವಾಗಿ ಇದ್ದೇವೆ. ತಾವೆಲ್ಲಾ ಕ್ಷೇಮವಾಗಿ ಇರುವಿರಿ ಎಂದು ತಿಳಿದಿರುವೆ.
ಅಪ್ಪಾ, ಅಮ್ಮ ಹೇಗಿದ್ದಾರೆ ?
ಇಲ್ಲಿ ನಿಮ್ಮ ಅಳಿಯ ನನಗೆ, ಮಕ್ಕಳಿಗೆ ಯಾವ ಕೊರತೆಯಾಗದಂತೆ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನಾನು ನಿಮಗೆ ಎಷ್ಟು ಕೃತಜ್ಞಳಾಗಿದ್ದರೂ ಸಾಲದು ಅಪ್ಪಾ. ಬಡತನದಲ್ಲೂ ನನ್ನನ್ನು ಕಷ್ಟಪಟ್ಟು ಓದಿಸಿದಿರಿ. ಅಮ್ಮನ ಓದುವ ಹವ್ಯಾಸದಿಂದ ನಾನು ಓದುವ, ಬರೆಯುವ ಹವ್ಯಾಸವನ್ನು ರೂಢಿಸಿಕೊಂಡೆ. ಈಗ ಮನೆಯಲ್ಲಿ ಇವರು ಉದ್ಯೋಗಕ್ಕೆ, ಮಕ್ಕಳು ಶಾಲೆಗೆ ಹೋದ ನಂತರ, ಏಕಾಂಗಿತನವನ್ನು ದೂರ ಮಾಡುವದು, ನಿಮ್ಮಿಂದ ಕಲಿತ ವಿದ್ಯೆ, ಅಮ್ಮನಿಂದ ಬಳುವಳಿಯಾಗಿ ಸಿಕ್ಕ ಓದು, ಬರೆಯುವ ಹವ್ಯಾಸ. ಕರೊನಾ ಬಂದು ಜನರ ಉತ್ಸಾಹವನ್ನು ಕಸಿದುಕೊಂಡು, ಮುಂದೇನು ಎಂದು ಕಂಗಾಲಾಗಿ ತಲೆಮೇಲೆ ಕೈಹೊತ್ತು ಕುಳಿತಾಗ, ಕಗ್ಗತ್ತಲಲ್ಲಿ ಬೆಳಕಿನ ಕಿರಣದಂತೆ ಜೀವನೋತ್ಸಾಹ ತುಂಬಿದ್ದು, ಅಂತರ್ಜಾಲದ ಸಾಹಿತ್ಯಿಕ ವೇದಿಕೆಗಳು ಅಪ್ಪಾ. ಅಲ್ಪಸ್ವಲ್ಪ ಬರೆಯುತ್ತಿದ್ದ ನಾನು ಈಗ ದಿನಾಲೂ ಬರೆಯುತ್ತಿದ್ದೇನೆ. ಬರವಣಿಗೆಯಲ್ಲಿ ಅತ್ಯುತ್ತಮ ಬಂದಾಗ, ಪುಸ್ತಕ ಬಹುಮಾನ ಪಡೆಯುವಾಗ, ನಿಮ್ಮ ಮತ್ತು ಅಮ್ಮನ ನೆನಪಾಗಿ ಕಣ್ಣು ಹನಿಗೂಡುತ್ತದೆ ಅಪ್ಪಾ. ದುಃಖದ ಕಣ್ಣೀರಲ್ಲಾ, ನಿಮ್ಮಂತಹ ತಂದೆ, ತಾಯಿಗಳ ಹೊಟ್ಟೆಯಲ್ಲಿ ಹುಟ್ಟುವ ಅದೃಷ್ಟ ನನ್ನದಾಗಿದ್ದಕ್ಕೆ ಆನಂದಭಾಷ್ಪ. ನಾನೆಷ್ಟು ಪುಣ್ಯವಂತೆ ಅನ್ನಿಸುತ್ತದೆ ಅಪ್ಪಾ. "ಬತ್ತದ ತೊರೆ ಸ್ನೇಹ ಬಳಗ" ಎಂಬ ಒಂದು ಅಂತರ್ಜಾಲ ವೇದಿಕೆಯಲ್ಲಿ, ಹರಿನರಸಿಂಹ ಸರ್, ತುಳಸಿ ಮೇಡಂ, ಚಂದ್ರಿಕಾ ಮೇಡಂ, ದಿನ ಬಿಟ್ಟು ದಿನ ಉತ್ತಮೊತ್ತಮ ಸಾಹಿತ್ಯಿಕ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. ಬರೆಯಲು ಹುರಿದುಂಬಿಸಿ, ಅತ್ಯುತ್ತಮ, ಉತ್ತಮ ಎಂದು ಪ್ರೋತ್ಸಾಹ ಕೊಡುತ್ತಾರೆ.ಪ್ರತಿದಿನ ಬರೆಯುವವರಿಗೆ, ಸಕ್ರೀಯ ಬರಹಗಾರರೆಂಬ, ಸುಂದರವಾದ ಅಭಿನಂದನಾ ಪತ್ರವನ್ನು ಕೊಡುತ್ತಾರೆ. ಅಪ್ಪಾ, ನನಗೆ ಈ ವೇದಿಕೆಯಲ್ಲಿ ಬರೆಯುವದೆಂದರೆ ಏನೋ ಸಂತೋಷ. ಮತ್ತೆ ಅಪ್ಪಾ, ನಾನು ನವೆಂಬರ ತಿಂಗಳ ಸ್ಪರ್ಧೆಯಲ್ಲಿ ಲಲಿತಪ್ರಬಂಧ ಬರೆದು, ದ್ವಿತೀಯ ಸ್ಥಾನ ಪಡೆದಿದ್ದೆ. ಡಿಸೆಂಬರದಲ್ಲಿ ಜಾನಪದ ತ್ರಿಪದಿಯಲ್ಲಿ ಪ್ರಥಮ ಸ್ಥಾನ ಸಿಕ್ಕಿತು. ಎರಡು ಬಾರಿಯೂ ನನಗೆ ಪ್ರಶಸ್ತಿಪತ್ರ ಮತ್ತು ಅಮೂಲ್ಯವಾದ ಪುಸ್ತಕಗಳನ್ನು ಅಂಚೆ ಮೂಲಕ ತುಳಸಿ ಮೇಡಂ ಕಳಿಸಿದ್ದಾರೆ ಅಪ್ಪಾ.ಅವರಾರೋ, ನಾನ್ಯಾರೋ ?ಮುಖತಃ ಪರಿಚಯವಿಲ್ಲ. ಆದರೂ ಈ ಸಾಹಿತ್ಯ ಕ್ಷೇತ್ರ ನಮ್ಮೊಳಗೆ ಅವೀನಾಭಾವ ಸಂಬಂಧ ಬೆಸೆದಿದೆ ಅಪ್ಪಾ. ಇದು ನನ್ನ ಪೂರ್ವಜನ್ಮದ ಪುಣ್ಯಫಲ ಎಂದೇ ತಿಳಿದಿದ್ದೇನೆ.
ಅಪ್ಪಾ, ನೀವು ಅಮ್ಮನ ಜೊತೆ ಬೇಗ ಬನ್ನಿ. ಆ ಪುಸ್ತಕಗಳನ್ನು ಓದಿದರೆ, ನೀವು , ಅಮ್ಮ ಇಬ್ಬರೂ ಆನಂದ ಪಡ್ತೀರಿ. ಅಪ್ಪಾ, ನಿಮ್ಮಿಬ್ಬರನ್ನು ಬರಲು ಇವರು ಕೂಡಾ ಹೇಳಿದ್ದಾರೆ.ಮಕ್ಕಳು, ಅಜ್ಜ, ಅಜ್ಜಿಗೆ ಬರಹೇಳಮ್ಮಾ ಎಂದಿದ್ದಾರೆ. ಇಬ್ಬರೂ ಒಮ್ಮೆ ಬಂದು ನಮ್ಮೆಲ್ಲರಿಗೂ ಖುಷಿಕೊಡಿ ಅಪ್ಪಾ.
ನೀವಿಬ್ಬರೂ ಬಿ ಪಿ ಗುಳಿಗೆ ಹೊತ್ತಿಗೆ ಸರಿಯಾಗಿ ತೆಗೆದುಕೊಳ್ಳಿ. ಶುಗರ್ ಟೆಸ್ಟ್ ಮಾಡಿಸಿಕೊಳ್ಳಿ. ಆರೋಗ್ಯದ ಕಡೆ ಕಾಳಜಿಯಿರಲಿ ಅಪ್ಪಾ. ಅಮ್ಮನನ್ನು ನಾನು ತುಂಬಾ ಕೇಳಿದೆ ಎಂದು ಹೇಳಿ.
ಇತೀ ತಮ್ಮ ಆಶೀರ್ವಾದ ಬಯಸುವ,ತಮ್ಮಆಗಮನಾಭಿಲಾಶಿ ಮಗಳು
ಶ್ರೀಮತಿ ವಿಜಯಾ ಜಿ ಶೆಟ್ಟಿ
ಸಿರ್ಸಿ(ಉತ್ತರ ಕನ್ನಡ )
ಇವರಿಗೆ,
ಶ್ರೀ ವಿ.ಎನ್. ಶೆಟ್ಟಿ
" ಶ್ರೀಗಂಧ"
ಬಸವೇಶ್ವರ ನಗರ
ಹುಬ್ಬಳ್ಳಿ 581302