Friday, October 8, 2021

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕೋಟ ಶಿವರಾಮ ಕಾರಂತರ ೧೨೦ ನೇ ಜನ್ಮದಿನದ ಅಂಗವಾಗಿ ಕವನ ರಚನೆ ಹಾಗೂ ಕವನ ವಾಚನ ಸ್ಪರ್ಧೆ ಭಾಗ-೦೩


Google image source images


ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕೋಟ ಶಿವರಾಮ ಕಾರಂತರ ೧೨೦ ನೇ ಜನ್ಮದಿನದ ಅಂಗವಾಗಿ ಕವನ ರಚನೆ ಹಾಗೂ ಕವನ ವಾಚನ ಸ್ಪರ್ಧೆ ಭಾಗ-೦೩

ಕವನ ರಚನೆ ಹಾಗೂ ಕವನ ವಾಚನ ಸ್ಪರ್ಧೆ 


ಕವನ : ನಾನಾರ್ಥದ ಸಿರಿವಂತಿಕೆಯ ಸ್ವಾತಿ ಮುತ್ತು


ಮಹತ್ವವುಳ್ಳದೀ ಮುತ್ತು ಮಾತಿಗೆ ಹೋಲಿಸಿಹುದು

ಒಡೆದು ಚೂರಾಗಲು ಮತ್ತೆ ಕೂಡಿಸಲಾಗದು

ಸ್ಪಷ್ಟ ಶುದ್ಧತೆಯ ಮಾತಿನಲ್ಲಿಹುದೀ ಮುತ್ತು

ಪರಿಶುದ್ಧತೆಯ ಸಂಕೇತವೇ ಶುಭ್ರ ಮುತ್ತು


ವಿವಿಧಾರ್ಥದೊಳುಂಟು ಮತ್ತೊಂದು ಮುತ್ತು

ತಾಯಿ ವಾತ್ಸಲ್ಯಭರಿತದಿ ಕೊಡುವ ಲಲ್ಲೆಗರೆವ ಮುತ್ತು 

ನಲ್ಲ ಪ್ರೇಯಸಿಗೆ ಕೊಟ್ಟ ಕೆನ್ನೆ ಮುತ್ತು

ಮುತ್ತುಗಳನೇಕ ರಸಿಕಮನಕೆ ಸಂತಸ


ನಿಜಾರ್ಥದೊಳು ತೋರುವದು ಸ್ವಾತಿಮುತ್ತು

ಕಪ್ಪೆಚಿಪ್ಪಿನೊಳಗಡಗಿ ಕೂತ ಗುಪ್ತಸ್ವತ್ತು

ಸ್ವಾತಿಮಳೆಗರೆಯಲದು ಬಾಯ್ದೆರೆದು ಮುತ್ತಾಗುವದು

ಕೊರಳೊಳು ಹೊಳೆವ ಆಭರಣವಾಗಿಹುದು


ನಿಸರ್ಗ ಕರುಣಿಸಿಹ ಸಿರಿ ಸಂಪತ್ತು

ಸಮೃದ್ಧಿಗೆ ಇತಿಹಾಸದಿ ಸಂಕೇತವಾಗಿತ್ತು

ಹಂಪಿಯೊಳು ಸೇರು ಸೇರಿನಲ್ಲಳೆದ ಮುತ್ತು

ಭಾರತೀಯರ ಶ್ರೀಮಂತಿಕೆಯ ದ್ಯೋತಕವೀ ಮುತ್ತು


 ಶ್ರೀಮತಿ ಗಿರಿಜಾ ಹಿರೇಮಠ ಬೆಳಗಾವಿ


ಜೀವನದರಿವು


ಅರಳುತಿದೆ ಭುವಿಯಲ್ಲೊಂದು ಜೀವ

ಮಾತಾಪಿತರ ಮೊಗದಲಿ ಸಂತಸದ ಭಾವ I

ಮಗುವ ಮೊಗವು ಮರೆಸುವುದು ನೋವ

ಅನುಭವಿಸುವವರು ಧನ್ಯತಾಭಾವ II 1 II


ಹರೆಯಕ್ಕೆ ಕಾಲಿಡುತಿರುವ ಸಮಯ

ಹೊಸ ಹುರುಪಿನಲಿ ಸಿದ್ಧವಾದ ಕಾಯ I

ಪಡೆಯಬೇಕು ಎಲ್ಲದರಲ್ಲೂ ಜಯ

ಮರುಳಾಗೇರುವರು ಆಸೆಯ ಹಯ II 2 II


ಗುರುಹಿರಿಯರ ಮಾತು ಕೇಳದು ಆಗ

ತಂದೆತಾಯಿಯೇ ಶತ್ರುವಾಗುವರಾಗ I

ಸಂಸಾರಜೀವನವ ಪ್ರಾರಂಭಿಸಿದಾಗ

ಸೇರುವವರಾಗ ನವ ಬಂಧುಬಳಗ II 3 II


ಮಕ್ಕಳು ಬಲ್ಲವರಾಗಿ ಎದ್ದುನಿಂತಾಗ

ಸಂಸಾರದಲಿ ಹೊಸತು ಬಂತು ಆಗ I

ವೃದ್ಧಾಪ್ಯ ಸಮೀಪಿಸಿ ಚೈತನ್ಯ ಕುಗ್ಗಿತಾಗ

ಉತ್ಸಾಹ ಕಳಚಿ ನಿರುತ್ಸಾಹ ಆವರಿಸಿತಾಗ II 4 II


ಕಳೆದ ಬಾಲ್ಯದ ಸಿಹಿಕಹಿ ಅನುಭವ

ತಪ್ಪು ಒಪ್ಪಿನ ಅರಿವಿನ  ಅನುಭಾವ I

ಮಾಡಿದ ಕರ್ಮದ ಫಲದ ಪರಿಣಾಮ

ನೋವೋ ನಲಿವೋ ಜಗದ ನಿಯಮ II 5 II


ತಾರುಣ್ಯ ಕರಗಿ ಕುಟುಂಬದಲಿ ಕೊರಗಿ

ತನುವೆಲ್ಲಾ ಸೊರಗಿ ಆಗುವನು ವಿರಾಗಿ I

ಬುದ್ಧಿಯು ಮಾಗಿ ನೆನಪು ಕಡಿಮೆಯಾಗಿ

ಅರಳುಮರುಳಾಗುವುದು ವೃದ್ಧನಾಗಿ II 6 II


ಡಾII ಅಮರಗೋಪಾಲ ಗುಡ್ಗೆ.

ಬೆಂಗಳೂರು


ಕವನದ ಶೀರ್ಷಿಕೆ :-ಅಮ್ಮ 


 ll ಇವಳು ಮನೆ ಎಂಬ ಗುಡಿಯವಳೆಗೆ ಮೂಕಿಯಂತೆ ಇರುವವಳು 

ಕೋಟಿ ದೇವರಾಗಿತ್ತಾ ದೊಡ್ಡವಳು

 ತನ್ನ ಹತ್ತಿರ ಕಷ್ಟ ಎಂದು ಬಂದವರಿಗೆ

 ಪ್ರೀತಿ ನೀಡುವ ದೇವತೆ ಇವಳು ll 

  ll ತನ್ನ ಮಕ್ಕಳು ಹಸಿವಿನಿಂದ ಇದ್ದವ್ರಿಗೆ 

ತನ್ನ ಕೈಗಳು ಇಂದ ಅಮೃತವನ್ನು ಉಣಬಡಿಸುವಳು

ನೆತ್ತಿಗೆರಿದ ಮಕ್ಕಳಿಗೆ ತನ್ನ ಎದೆಹಾಲನ್ನು ಉಣಬಡಿಸುವವಳು ll ತನ್ನ ಮಕ್ಕಳಿಗೆ ಆಗುವ ಗಾಯವನ್ನು ತನಗೆ ಆದಂತೆ ವರ್ತಿಸುವವಳು

 ತನ್ನ ಮನದಲ್ಲಿ ಆಗಿರುವ ಗಾಯಗಳನ್ನು ಯಾರಿಗೂ ತಿಳಿಯದಂತೆ ಬಚ್ಚಿಟ್ಟು ಕೊಳ್ಳುವವರು ll       

   ಕೆಲಸದಿಂದ ಮನೆಗೆ ಬಂದ ಗಂಡನಿಗೆ ಅರ್ಧಾಂಗಿಯಾಗಿ ಇರುವವಳು 

ಗಂಡನ ಕಷ್ಟಗಳನ್ನು ತಣ್ಣೀವೆಂದು ಸ್ವೀಕರಿಸುವವರು ll.      

   ll ಮನೆಯಲ್ಲಿರುವ ದೊಡ್ಡ ಹಿರಿಯರಿಗೆ ಗೌರವ ನೀಡುವವಳು 

ಅವರು ಹೇಳುವ ಬುದ್ಧಿವಂತ ಮಾತಿಗೆ ಗೌರವ ತರುವ ll.   

    ll ಅವಳ ಮನದಲ್ಲಿ ಆಗಿರುವ ನೋವುಗಳನ್ನು ಯಾರಿಗೂ ಹೇಳದೆ ಮನದಲ್ಲಿ ಮುಚ್ಚಿಟ್ಟುಕೊಳ್ಳುವವಳು 

ತನ್ನ ಕುಟುಂಬದವರಿಗೆ ಕಪ್ಪುಚುಕ್ಕೆ ಮೂಡದಂತೆ ನೋಡಿ ಕೊಳ್ಳುವವಳು ll.      

 ll ತನ್ನ ಗಂಡನನ್ನು ದೇವರೆಂದು ಪೂಜಿಸುವವಳು

 ತನ್ನ ಮಕ್ಕಳನ್ನು ನನ್ನ ಜೀವ ಎಂದು ನಂಬುವವಳು   

ಕೋಟಿ ದೇವರಿಗಿಂತ ದೊಡ್ಡವಳು ll...    

   🌼🌼🌼🌼🌼🌼

ದೇವರಾಜ ಕೆ.


ಕವನದ ಶೀರ್ಷಿಕೆ : ವ್ಯಸನಗಳು

( ಗಾಂಧೀಜಿಯವರ ಆಶಯ ಬಿತ್ತುವ ಕವಿತೆ )


ಗಾಂಜಾ ಅಫೀಮು ಅಮಲಿನಲಿ ತೇಲದಿರಿ ಮನುಜರೆ

 ದುಶ್ಚಟಗಳ ದಾಸರಾಗಿ ಪ್ರಾಣ ತೊರೆಯದಿರಿ ಅಧಮರೆ

  ವ್ಯಸನಗಳ ಸಹವಾಸ ಹೆಂಡತಿ ಮಕ್ಕಳ ಉಪವಾಸ

 ಚಟಗಳ ತ್ಯಜಿಸುತ ಸಂಸಾರದೊಳು ನೆಲೆಗೊಳಿಸಿ ಉಲ್ಲಾಸ 


ಮಧ್ಯದಂಗಡಿಗೆ ಕಟ್ಟುವಿರೇಕೆ ನಿಮ್ಮೆಲ್ಲ ಗಳಿಕೆ

 ಭವಿಷ್ಯದ ಸುಂದರ ಬದುಕು ಬಲಿಯಾಗಬೇಕೆ ಚಟಕೆ

 ನೀ ಮಸಣ ಸೇರಿದರೆ ಕುಟುಂಬ ಬೀಳುವುದು ಬೀದಿಗೆ

 ಒಡೆಯನೆ ಇಲ್ಲದಿರೆ ನಾಯಕರಾರು ಬಾಳ  ತೇರಿಗೆ 


ಮಾಧಕ ದ್ರವ್ಯದ ನಿಶೆಯು ತರವಲ್ಲ ದೇಹಕೆ

 ಆರೋಗ್ಯ ಜಾಗೃತಿ ಮೂಡಿಸುವ ಅಗತ್ಯವಿದೆ ಜನಕೆ

 ಧೂಮಪಾನ ಮಾಡಿದರೆ ಉಸಿರುಗಟ್ಟಿ ಸಾಯುವೆ ಮರುಳೆ

 ನೀ ಬಿಟ್ಟ ಹೊಗೆಗೆ ಮಾಲಿನ್ಯದಡುಗೆ ತೊಡುವಳು ಇಳೆ 


ಜೂಜು ಮೋಜು ಮಸ್ತಿ ಕ್ಷಣಿಕ ಸುಖಗಳು ತೊರೆಯಿರಿ

 ದೊರೆತೊಂದು ಅಮೂಲ್ಯ ಬಾಳಲಿ ಸಾಧನೆ ಮಾಡಿ ತೋರಿರಿ

 ಆರೋಗ್ಯಕರ ಸಮಾಜ ನಿರ್ಮಾಣ ಯುವ ಜನತೆಯ ಜವಾಬ್ದಾರಿ ಮರೆಯದಿರಿ

 ಭಾರತದ ಹೆಮ್ಮೆಯ ಕುಡಿಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರಿ


ಅನುಸೂಯ ಯತೀಶ್

ಶಿಕ್ಷಕಿ ಮಾಗಡಿ



ಪರೋಪಕಾರ


ಹೃದಯದ ತುಂಬಾ ಮಮತೆಯ ಬೆಳಕಿರಲಿ

ಕಂಗಳ ತುಂಬಾ ಕರುಣೆಯ ಹೊಳಪಿರಲಿ

ನೊಂದ ಮನಸಿಗಾಗಿ ಪ್ರೀತಿಯ ನುಡಿಯಿರಲಿ

ಮನದ ತುಂಬಾ ಪರರ ಕಾಳಜಿಯಿರಲಿ


ದ್ವೇಷ ಭಾವ ತೊರೆದು ಒಂದಾಗಿ ಬಾಳೋಣ

ಸರ್ವರ ಏಳಿಗೆಗಾಗಿ ನಾವು ದುಡಿಯೋಣ

ನಮ್ಮೊಂದಿಗೆ ಇತರರನ್ನೂ ಹರಸಿ ಬೆಳೆಸೋಣ

ಪ್ರೀತಿದೀವಿಗೆಯಿಂದ ಬದುಕ ಹಾದಿ ಬೆಳಗೋಣ


ತೋರುವ ಕಾಳಜಿಯಲಿ ಪರಿಶುದ್ಧತೆಯಿರಲಿ

ದುಡಿವ ಕಾಯಕದಲಿ ಪ್ರಾಮಾಣಿಕತೆಯಿರಲಿ

ಎಲ್ಲರೂ ನಮ್ಮವರೆನ್ನುವ ಬಾಧ್ಯತೆಯಿರಲಿ

ಸದ್ವಿಚಾರದಿಂದ ಬಾಳಲಿ ಪರಿಪೂರ್ಣತೆಯಿರಲಿ


ತೆರೆದ ಮನದಿಂದ ಪರೋಪಕಾರವೆಸಗು

ಸಹಾಯ ಪಡೆದವರಿಗಿರಲಿ ನಿನ್ನಿಂದ ಮೆರುಗು

ಸನ್ನಡತೆಗಳಿಂದ ಸರ್ವರ ಬದುಕ ಬೆಳಗು

ಸತ್ಯ ನ್ಯಾಯದ ಪರವಾಗಿ ನಿನ್ನ ದನಿ ಮೊಳಗು


ನೋವು ಕಷ್ಟಗಳಿಗೆ ಸ್ಪಂದಿಸುವ ಮನಸಿರಲಿ

ಅನುದಿನದ ಕಾಯಕಕೆ ಗುರಿಯ ಕನಸಿರಲಿ

ಸಹೃದಯತೆಯು ಸದಾ ರಕುತದಿ ಬೆರೆತಿರಲಿ

ಬಸವಳಿದು ಬಂದವರಿಗೆ ಪ್ರೀತಿ ಆಸರೆಯಿರಲಿ


✒️ ಸ್ಮಿತಾ ಅಶೋಕ್ ಪರ್ಕಳ


ಶೀರ್ಷಿಕೆ:-ಕನ್ನಡ  ನಾಡು


ಭವ್ಯ ಪರಂಪರೆಯ ಕನ್ನಡ ವೈಭವ

ಸಾರುತ್ತಿದೆ ಕನ್ನಡಮ್ಮನ ಗತ ವೈಭವ

ಒಂದಾಗಿ ಸೇರಿ ಆಚರಿಸೋಣ ವೈಭವ

ಹೇಳಿರಿ ಎಲ್ಲರೂ ಕನ್ನಡ ರಾಜ್ಯೋತ್ಸವ.


ನಿತ್ಯ ನೂತನದ ಕನ್ನಡದ ಚೇತನ

ಕರುನಾಡಿನ ರಾಜ್ಯೋತ್ಸವ ಈ ದಿನ

ಬೆಳಗಲಿ ದಿನವೂ ನಿತ್ಯ ವಿನೂತನ

ಕರುನಾಡ ಧ್ವಜವು ಹಾರಲಿ ಅನುದಿನ.


ಕನ್ನಡವ ಬೆಳೆಸೋಣ ಎಲ್ಲಾ ಒಟ್ಟಾಗಿ

ಕೂಗಿ ಹೇಳುವೆ ನಾ ಕನ್ನಡಿಗ ಎಂದಾಗಿ

ಕನ್ನಡದ ಜನಕ್ಕೆ ಇರಬೇಕು ಮೊದಲ ಸ್ಥಾನ

ಕನ್ನಡದ ಭಾಷೆಗೆ ಇರಲಿ ಅಗ್ರ ಸ್ಥಾನ.


ಕನ್ನಡ ನಾಡಿನ ಪರಂಪರೆಯ ಕರುನಾಡು

ಕವಿ,ಸಾಹಿತಿಗಳಿಗೆ ಕಮ್ಮಿಇಲ್ಲ ತಾಯ್ನಾಡು

ಕನ್ನಡ ಭಾಷೆಗಿರಲಿ ಅಗ್ರಸ್ಥಾನ

ಕನ್ನಡದ ಜನಕ್ಕಿರಲಿ ಮೊದಲನೆಯ ಸ್ಥಾನ.


ಕರ್ನಾಟಕದಲ್ಲಿ ಹಾರಾಡಲಿ ನಮ್ಮ ಭಾವುಟ

ಬರೀ ಬಾಯಿ ಮಾತಿನಲ್ಲಿ ಬೇಡ ಹೋರಾಟ

ಕನ್ನಡ ಬಂಗಾರದ ಗಣೀಯ ತವರೂರ ಬೀಡು

ನಮ್ಮ ಹೆಮ್ಮೆಯ ಕರುನಾಡಿನ ಪರಂಪರೆ ಬೀಡು.


ಕನ್ನಡಕ್ಕೆ ಆಗಬೇಕು ನಮ್ಮಕರುನಾಡಿನ ಉಸಿರು

ಕನ್ನಡಕ್ಕೆ ಆಗಬೇಕು ನಮ್ಮ ಕರುನಾಡಿಗೆ ಹೆಸರು

ಕರುನಾಡಿನ ಕನ್ನಡದ ಸವಿಯಾದ  ಕಂಪು

ಕನ್ನಡ ನಾಡು ನುಡಿಯ ಜೇನಿನಂತ  ಇಂಪು.


ಯಶೋದ.ಗಾಣೀಗ, ಗೃಹಿಣಿ, ಮೊಗೆಬೆಟ್ಟು, ಬೇಳೂರು ಗ್ರಾಮ ಕುಂದಾಪುರ 🙏🙏



ಶೀರ್ಷಿಕೆ:ಹಬ್ಬದ ಕಬ್ಬ



ಹಬ್ಬದ ಕಬ್ಬವು ನಾಡೊಳಗಡಿಯಿಡೆ

ಕೂಜನಗಳು ಕುಹೂ ಕುಹೂ ಮೊರೆಯಿಡೆ

ಹಸಿರಿನ ಪೈರು ಧರೆಯಲಿ ಹೊಳೆಯಲಿ

ಫೈರು ತುಂಬಿ ನೆಲ ಮನೆ ಬೆಳಗಲಿ


ನಾಡು ನುಡಿಯಲಿ ದೇವಿ ಮಹಿಮೆಯು

ಹಾಡುತ ಪಾಡುತ ಭಕ್ತಿಯ ಸುಧೆಯು

ಕವಿಗಳು ಪಟುಗಳು ದೇಶಕೆ ಮೀಸಲು

ನಾಡು ನುಡಿಯಲಿ ಕನ್ನಡವೇ ಹೊಸಿಲು


ಮನವದು ಬಯಸುತ ದೇವರ ಭಜನೆಯ

ಪಾಡುತ ಹಾಡುತ ಸಾಗುತ ಕಥೆಯ

ಸಾಗುವ ದಾರಿಗೂ ದೇವರ ಜಪವು

ಕಳೆಯಲಿ ಮಾಡಿದ ವಿಧ ವಿಧ ಪಾಪವು


ತಾನು ಎನ್ನುವ ಅಹಂಮಿನ ಮನೆಯನು

ತುಕ್ಕು ಹಿಡಿದರು ಬಿಡನು ಉಸಿರನು

ಹಣದ ಮಮತೆಗೆ ಸಂಬಂಧಗಳ ಬೆಸುಗೆ

ಬಿಡರು ದೇವರ ಹೆಸರಲಿ ತರ ತರ ವಸುಗೆ


ದೇವಿಯ ನೆನೆದರೆ ಶುಭವದು ಮನೆಗೆ

ಮೋಕ್ಷವು ಸಿಗುವದು ಲೆಕ್ಕದಿ ಕೊನೆಗೆ

ಕನ್ನಡ ನಾಡಿನ ಮಗುವೆಂಬ ಹೆಮ್ಮೆಯು

ಏಳೇಳು ಜನುಮ ಮಗಳಾಗುವ ಆಸೆಯು


(ಕಮಲಾಸುತೆ)

ವಿನುತಾ ಕಿಚ್ಚೀಕೇರಿ


ಕೊರೊನ ರಜೆಯಲ್ಲಿ ತರಕಾರಿ ಕೃಷಿ

🌱🌱🌱🌱🌱🌱🌱

ಬೆಳೆಸಿಹೆನು ತರಕಾರಿ ಗಿಡಗಳನು ಹಿತ್ತಿಲಲಿ

ನನ್ನ ಮನೆಯಡುಗೆಯ ಆಸೆಯಿಂದ

ಕಣ್ಣಲ್ಲಿ ಕಣ್ಣಿಟ್ಟು ಸಮಯದಲಿ ನೀರುಣಿಸಿ

ಪೋಷಣೆಯ ಮಾಡಿಹೆನು ಮೋಹದಿಂದ


ಬೀಜವದು ಅಂಕುರಿಸಿ ಟಿಸಿಲೊಂದು ಮೂಡುತಿರೆ

ಬಗೆಬಗೆಯ ತರಕಾರಿ ಕಣ್ಣ ಮುಂದೆ

ಮನೆಯೊಳಗೆ ಉಪಯೋಗ ಆಗಿ ಉಳಿದವುಗಳನು

ನೆರೆಹೊರೆಗೆ ಹಂಚಬೇಕೆಂದುಕೊಂಡೆ


ಮೊಳೆತ ಗಿಡಗಳನೆಲ್ಲ ಹೆಗ್ಗಣವು ಎಳೆದಿರಲು

ಹೊಳೆಯಾಗಿ ಹರಿಯಿತು ಕಣ್ಣನೀರು

ಸಾವರಿಸಿಕೊಂಡು ಪುನಃ ಅವುಗಳನ್ನು ನೆಟ್ಟೆ ನಾ 

ಹುಡುಕಿ ತುಂಡಾಗದೇ ಇರುವ ಬೇರು


ಕಾಪಾಡಿ ಗಿಡಗಳನು ಒಂದಡಿಗೆ ಬೆಳೆಯಲವು

ನವಿಲುಗಳು ಎಳೆ ತುದಿಯ ತುಂಡುಮಾಡೇ

ಮೊಂಡು ಹಠವನು ಹಿಡಿದು ಮುಳ್ಳುಗಳ ಶೇಖರಿಸಿ

ಇಟ್ಟೆನವುಗಳ ನಾನು ಗಿಡದ ಬುಡದೇ


ಗಿಡಗಳಲಿ ಹೂವರಳಿ ಕಾಯಿಗಳು ಬಿಟ್ಟಾಗ

ಧಾಳಿಯಿಡೆ ಮಂಗಗಳ ಹಿಂಡುಹಿಂಡು

ಯೋಚಿಸಿದೆ ತಲೆಕೆರೆದು ಕೂರಿಸಿದೆ ಮಗಳನ್ನು

ಆನ್ಲೈನ್ ತರಗತಿಯ ಜಾಡು ಹಿಡಿದು 

🌷🌷🌷🌷🌷🌷🌷

ವಿದ್ಯಾಶ್ರೀ ಅಡೂರ್

ಮುಂಡಾಜೆ.

ಗೃಹಿಣಿ

ಅಡೂರ್ ಕಾವೇರಿ ಮನೆ

ಮುಂಡಾಜೆ

ಬೆಳ್ತಂಗಡಿ ತಾಲೂಕು


ಶೀರ್ಷಿಕೆ :-ಬಾಳಸಂಗಾತಿ


  ನನ್ನ  ಬಾಳಪುಟದಲ್ಲಿ ಬಂದವನು 

  ನನ್ನ  ಬಾಳಸಂಗಾತಿ  ಇವನು

ಚಲಿಸುತ್ತಿರುವ  ಜೀವನ ನೌಕೆಯನ್ನು

ಚಲಾಯಿಸುತ್ತಿರುವ  ನಾವಿಕನಿವನು... 


ಕಷ್ಟಗಳೆನ್ನುವ  ಅಲೆಗಳನ್ನೆದುರಿಸಿ 

ನೋವುಗಳೆನ್ನುವ ಬಿರುಗಾಳಿಯನ್ನೆದುರಿಸಿ 

ಬದುಕಿಗೆ ಸವಾಲೊಡ್ಡುವವನು...


ಅಂಗೈಯಲ್ಲಿಡಿದು ನನ್ನ ಪೋಷಿಸುವವನು

ಕಣ್ಣರೆಪ್ಪೆಯಂತೆ ನನ್ನ ಕಾಪಾಡುವವನು 

ಹೃದಯದಲ್ಲಿಟ್ಟು ನನ್ನ ಪ್ರೀತಿಸುವವನು 

ಇವನೇ ನನ್ನವನು ...ನನ್ನ ಜೊತೆಗಾರನು .


ಕೋಪ ಬಂದಾಗ ರಮಿಸುವವನು 

ಹುಸಿಮುನಿಸ ತೋರಿದಾಗ ಮುದ್ದಾಡುವವನು 

ನೀನೇ ನನ್ನ ಜೀವ ಎನ್ನುವವನು... 

ಇವನೇ ನನ್ನವನು ...ನನ್ನ ಜೊತೆಗಾರನು...


ಸದಾ ಸಂತೋಷದಿಂದಿರಿಸಲು ಬಯಸುವವನು

ಅದಕ್ಕಾಗಿ ದಿನವಿಡೀ  ದುಡಿದು ಬರುವವನು

ದೇಹದ ದಣಿವನ್ನು ನನ್ನ ನೋಡಿ ಮರೆಯುವವನು...



ಪ್ರಾಣಕಿಂತ ಹೆಚ್ಚಾಗಿ ಪ್ರೀತಿಸುವವನು 

ಯಾವಾಗಲು ನನ್ನ ಜೊತೆಯಾಗಿರುವವನು 

ಬಾಳಪುಟದಲ್ಲಿ ಬಂದ ನನ್ನ ಪ್ರಾಣಕಾಂತನು 

ಇವನೇ ನನ್ನವನು ...ನನ್ನ ಜೊತೆಗಾರನು...


*ಸರಿತಾ ಅಂಬರೀಷ್ ಕುತ್ಪಾಡಿ*✍



ಕಾರಂತರ ನೆನಪಿನಲ್ಲಿ...


 ಕನ್ನಡ ನಾಡಿನ ವೈಭವ


ನಮ್ಮ ನಾಡು ಕನ್ನಡ

ನಮ್ಮ ಮಾತೃಭಾಷೆ ಕನ್ನಡ

 ನಮ್ಮಯ ನಡೆ ನುಡಿ ಕನ್ನಡ

ಹಲವು ಮೊದಲುಗಳಿಗೆ ಸಾಕ್ಷಿ ಕನ್ನಡ.


ನಯನ ಮನೋಹರ ಜೋಗ ಜಲಪಾತ

ನೋಡಲೇಬೇಕು ಕೆಮ್ಮಣ್ಣುಗುಂಡಿ ಪ್ರಪಾತ

ಕಾಲಿರಿಸಿದಲ್ಲೆಲ್ಲ ಹೂ ಗಿಡಗಳ ಮೇಳ

ಕೇಳಲೇ ಬೇಕು ಕೋಟೆಗಳ ಕಥೆಗಳ



ಜ್ಞಾನಪೀಠದ ಎಂಟು ರತ್ನಗಳು

ಅಲ್ಲಲ್ಲಿ ಕಾಣುವ ಇತಿಹಾಸದ ಕುರುಹುಗಳು

ಕದಂಬರಿಂದ ಶುರುವಾದ ರಾಜಮನೆತನಗಳು

ಸ್ವಾತಂತ್ರಕ್ಕಾಗಿ ಬಲಿದಾನವೆತ್ತ ಅದೆಷ್ಟೋ ಮಹನೀಯರುಗಳು


ಪಶ್ಚಿಮ ಘಟ್ಟದಲ್ಲಿ ಹುಲ್ಲುಗಾವಲು

ಬಯಲುಸೀಮೆಯ ಉರಿ ಬಿಸಿಲು

ಸೂರ್ಯನೊಂದಿಗೆ ಆಡುವ ಕಡಲ ಕಿನಾರೆಗಳು

ಚಂದಿರನಿಗೇ ತುತ್ತ ನೀಡುವ ಅದೆಷ್ಟೋ ಗಿರಿಗಳು


ಬಣ್ಣಿಸಿದಷ್ಟೂ ಕಡಿಮೆ ನನ್ನ ನಾಡ ಹಿರಿಮೆಯ

 ಜಾಲತಾಣಗಳಲ್ಲೂ ಸಿಗದು ಭಾವಕ್ಕೆ ನಿಲುಕುವ ವರ್ಣನೆಯು

ಸಾಗರ ದಾಟಿ ವಿದೇಶದಲ್ಲೂ ಹಬ್ಬಲಿ ನನ್ನ ನಾಡ ಖ್ಯಾತಿಯು

ನನ್ನ ನಾಡ ಸೇವೆಗೆ ನಾ ಸದಾ ಕಂಕಣ ಬದ್ಧನು


ಕು. ವೀಣಾ ಗಣಪತಿ ಹೆಗಡೆ

ಕೊಮ್ಮಿನಕೈ, ಶಿರಸಿ

ಉತ್ತರ ಕನ್ನಡ ಜಿಲ್ಲೆ.

ಬಿಕಾಂ ವಿದ್ಯಾರ್ಥಿನಿ.


ಶೀರ್ಷಿಕೆ:ಭ್ರಮನಿರಸನ


||ಭ್ರಮನಿರಸನ ಎನ್ನುವುದು 

ತಿಂಗಳಿಗೊಮ್ಮೆ ಬರುವ 

ಮಾಸಾಶನ ಅಲ್ಲ,||


||ಅದೂ ಒಮ್ಮೊಮ್ಮೆ ಬಂದರೆ ಬಂತು 

ಹೋದರೆ ಅತ್ಲಾಗೇ ಹೋಯ್ತು||


||ಅನುಬವಗಳೆಂಬ ಆಧಾರ ಕಾರ್ಡ್ ಗೆ

ಆಸೆಗಳೆಂಬ ಬ್ಯಾಂಕಿನ ಲಿಂಕ್ ಬಳಸಿದಂತೆ||


||ಕಷ್ಟಗಳೆಂಬ ಕೆ ವೈ ಸಿ ಬೆರೆಸಿ

ಇಷ್ಟಗಳೆಂಬ ಎಲ್ ಐ ಸಿ ಮಾಡಿಸಿ

ಸಮ್ಮಿಳನ ಗೊಂಡಾಗಲೂ

ತಾಳದಿರುವ ಬದುಕೇ ಭ್ರಮನಿರಸನ,||


||ಭ್ರಮೆಯೊಳು ಇಂದಿನ ದಿನವ ಹೂಳದಿರು

ನಾಳಿನ ಬಗ್ಗೆ ಇಂದೇ ಭ್ರಮೆಯೊಳು ಬೀಳದಿರು||


||ಆಗುವುದೆಲ್ಲ ಆಗಲಿ ಧೈರ್ಯ ಎದೆಗುಂದದಿರಲಿ

ಸಾಧಿಸುವ ಛಲ ನಿನ್ನಲ್ಲಿ ಇರಲಿ||


||ಲೋಕವು ದೂರ ಮಾಡಿಲ್ಲ ಏನನ್ನೂ

ಮನುಜನೇ ತಿಳಿಯುತ್ತಿಹನು ಎಲ್ಲವನ್ನೂ

ಎದುರಿಸಿ ಹೋರಾಡು ಬದುಕನ್ನು

ಇಷ್ಟ ಪಟ್ಟು ಪ್ರೀತಿಸು ನೀನು ನಿನ್ನನ್ನು..!


✍ನಿಗೂಢ, ಹುಬ್ಬಳ್ಳಿ.

ಗುರು ಢವಳೇಶ್ವರ

Monday, October 4, 2021

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕೋಟ ಶಿವರಾಮ ಕಾರಂತರ ೧೨೦ ನೇ ಜನ್ಮದಿನದ ಅಂಗವಾಗಿ ಕವನ ರಚನೆ ಹಾಗೂ ಕವನ ವಾಚನ ಸ್ಪರ್ಧೆ ಭಾಗ-೦೨



ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕೋಟ ಶಿವರಾಮ ಕಾರಂತರ ೧೨೦ ನೇ ಜನ್ಮದಿನದ ಅಂಗವಾಗಿ (೧೦/೧೦/೨೦೨೧ ರವಿವಾರ)

ಕವನ ರಚನೆ ಹಾಗೂ ಕವನ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಿದವರು :: ಭಾಗ ೦೨


೧೧) ಶೀರ್ಷಿಕೆ : ವಿಜಯಾನಂದದ ಸವಾರಿ


ಸವಾರಿ ಹೊರಟೆ ವಿಜಯಾನಂದ ಬಸ್ಸಿನಲ್ಲಿ 

ಬಹು ಆನಂದವಾಯಿತು ನನಗೆ ಮನದಲ್ಲಿ 

ಕುಳಿತೆ ಮುದದಿಂದ ಕಿಟಕಿ ಪಕ್ಕದ ಸೀಟಿನಲ್ಲಿ 

ಮೊದಲ ಪಯಣವು ನನದು ಈ ಬಸ್ಸಿನಲ್ಲಿ 


ಮೆಲುವಾದ ಸಂಗೀತ ಕೇಳುತ ಸಾಗಿತು ಪಯಣ

ನೋಡುತ ಮೈಯನು ಮರೆತೆ ಹಸಿರಿನ ತಾಣ

ಆಗಲೇ ಬಂದಿತು ಊಟ ಮಾಡುವ ನಿಲ್ದಾಣ

ಇಳಿದೆ ತೆಗೆದುಕೊಂಡು ಊಟಕೆ ಬೇಕಾದ ಹಣ


ಊಟವನು ಮುಗಿಸಿ ಬಂದೆ ಏರಲು ಬಸ್ಸನು

ಕಾಣದೇ ಬೋರ್ಡ್ ನು ಆದೆ ನಾನು ಮಂಗನು

ನೋಡಿ ದಂಗಾದೆ ಒಂದೇ ರೀತಿಯ ಬಸ್ಸನು

ಏನೂ ಮಾಡಲು ತೋಚದೇ ಹುಡುಕಿದೆ ಬಸ್ಸನು


ಯಾವ ಬಸ್ಸಿಗೂ ಬರೆದಿಲ್ಲವು ಊರ ಹೆಸರು

ನನಗೆ ನಿಂತ ಹಾಗಾಯಿತು ಒಮ್ಮೆಲೇ ಉಸಿರು

ಪರದಾಟವನು ನೋಡಿ ಕೇಳಿದರು ಒಬ್ಬರು

ಪರಿಸ್ಥಿತಿ ಅರಿತು ಸಹಾಯಕೆ ಬಂದರು ಅವರು


ನೋಡಿ ನಿಮ್ಮ ಬಸ್ಸಿನ ನಂಬರು ಇಲ್ಲ ಇಲ್ಲಿ ಹೆಸರು

ಆಗ ನೋಡಿದೆ ಟಿಕೇಟಿನಲ್ಲಿ ನನ್ನ ಬಸ್ಸಿನ ನಂಬರು

ಅಷ್ಟರಲ್ಲಿ ಬಸ್ಸಿನ ನಿರ್ವಾಹಕರು ಸಹ ಬಂದರು

ಇದು ನನ್ನ ಮೊದಲ ಪಯಣ ಕೇಳಿ ನೀವೆಲ್ಲರೂ


ವೇದಾವತಿ ಭಟ್ಟ  ಮುಂಬೈ 


೧೨)

ದಸರಾ ಹಬ್ಬ


ಬರುವುದು ಬರುವುದು ದಸರಾ ಹಬ್ಬ

ತರುವುದು ಎಲ್ಲೆಡೆ ಸಡಗರವ 

ದುರ್ಗಾ ದೇವಿಯ ಪೂಜೆಯ ಹಬ್ಬ

ಮೂಡಿದೆ ಮನದಲಿ ಭಕ್ತಿ- ಭಾವ


ಒಂಭತ್ತು ದಿನಗಳು ಪೂಜಿಸೋಣ 

ದೇವಿಯ ನವ ನವರೂಪಗಳ

ಒಂದಾಗಿ ಎಲ್ಲರೂ ಸ್ಮರಿಸೋಣ

ಜಗನ್ಮಾತೆಯ ಅನುಗ್ರಹವ


ವಿಶೇಷ ಆರಾಧನೆಯು ಜರಗುವುದು

ಕರ್ನಾಟಕದ ಮೈಸೂರಿನಲಿ

ವರ್ಷವು ನಡೆವುದು ಅರಮನೆಯೆದರು

ಜಂಭು ಸವಾರಿ ವಿಜೃಂಭಣೆಯಲಿ


ರಾಜ್ಯದ ವಿವಿಧ ಭಾಗಗಳಲ್ಲಿ 

ಇಡುವರು ಜನರು ಗೊಂಬೆಗಳ 

ಒಂಭತ್ತು ದಿನಗಳು ಪೂಜಿಪರು

ಸುಂದರ ಮಣ್ಣಿನ ಮೂರ್ತಿಗಳ


ಹತ್ತನೆ ದಿನವನ್ನು ಕರೆವರು ಜನರು

'ವಿಜಯ ದಶಮಿ'ಯ ಹೆಸರಿನಲಿ

ಘೋರ ಸಂಗ್ರಾಮದ ನಂತರ ರಾಮ 

ಗೆದ್ದ ರಾವಣನ ಲಂಕೆಯಲಿ


ಅರವಿಂದ ಬಾಯಿರಿ,

ಎಂಟನೇ ತರಗತಿ, ಬೆಂಗಳೂರು - ೩೫.


೧೩) 

ಪೂಜ್ಯ ಭಗವದ್ಗೀತೆಯ ಬೆಳಕು


ಮಹಾಭಾರತದೊಳಡಗಿದ್ದ ಭೀಷ್ಮ ಪರ್ವದಿ ಸೇರ್ದ

ವ್ಯಾಸ ಮಹರ್ಷಿ ಕರ ಸಂಜಾತೆ ಪೂಜ್ಯ ಭಗವದ್ಗೀತೆ!

ಕುರು ಪಾಂಡವರ ಕುರುಕ್ಷೇತ್ರ ರಣರಂಗದಾದಿಯಲಿ

ಶ್ರೀ ಕೃಷ್ಣ ಮುಖವಾಣಿ ದಿವ್ಯ ಸಂದೇಶವಾಂತೆ! ೧ !


ಹದಿನೆಂಟು ಅಧ್ಯಾಯ ಏಳುನೂರು ಶ್ಲೋಕಗಳು

ಮಾಸದಷ್ಟು ಮುಗಿಯದಿಹ ಅದ್ಭುತದ ಧಾರೆ!

ಧರ್ಮ ಸ್ಥಾಪನಾಯುಕ್ತ ಭಗವಂತನವತಾರ

ಅಧ್ಯಾತ್ಮ ಬಿತ್ತರಿಸಿ ಸಾಯುಜ್ಯ ತೋರೆ! ೨ !


ದ್ವೈತ ಅದ್ವೈತ ವಿಶಿಷ್ಠಾದ್ವೈತ ಒಗ್ಗೂಡಿ

ಏಕ ಮುಖ ಹರಿವಿನಲಿ ತತ್ವ ಸಮ್ಮಿಲನ!

ತಾಮಸವ ಬಡಿದೊಗೆದು ಸಾತ್ವಿಕದ ನೆಲೆಯಲ್ಲಿ

ಘಂಟನಾದದ ಸದ್ದು ವಿಶ್ವ ಬಹುಮಾನ! ೩ !


ಪಾರ್ಥನನ ಮುಂದಿಟ್ಟು ಲೋಕಕ್ಕೆ ತೆರೆದಿಟ್ಟ

ದುರಿತಗಳ ನೀಗಿಸುವ ಏಕೈಕ ಕಾವ್ಯ!

ಅಂತರಾಳದರಿಗಳವು ಆಸೆಗಳ ಬುದ್ಭುದವು

ಕಿತ್ತೊಗೆವ ಮುನ್ನುಡಿಯ ಬರೆದಿರುವ ಭಾಷ್ಯ! ೪ !


ಚಿತ್ತ ಭಿತ್ತಿಯ ಕಲಕಿ ಕತ್ತಲೆಯ ಮುಸುಕುಗಳ

ಹೊರಗೆಳೆದು ಸುತ್ತಲಿಗೆ. ಬೆಳಕ ಪದರು!

ಸಮಚಿತ್ತ ಸಮಭಾವ ಸಾರುತಿದೆ ಸಾನಿಧ್ಯ

ಸತ್ಯ ಹಣತೆಯ ಹಚ್ಚಿ ಬೆಳಗುತಿಹ ಸೊಡರು! ೫ !


ಕರ್ಮಯೋಗದಿ ಮುಂದೆ ಭಕ್ತಿ ಧ್ಯಾನವು ಸೇರಿ

ಜ್ಞಾನಾರ್ಜನೆಯ ಸಿದ್ಧಿಯಲಿ ಮುಕ್ತಿ ದಾರಿ!

ಪರಮಾತ್ಮನೇ ಶರಣು ಅರ್ಪಿಸುತ ತಲೆಬಾಗು

ಕೈ ಹಿಡಿದು ನಡೆಸುವನು ದಾರಿ ತೋರಿ! ೬ !


ಬಿ ಸತ್ಯವತಿ ಭಟ್ ಕೊಳಚಪ್ಪು, ಮಂಗಳೂರು


೧೪)

 ಶೀರ್ಷಿಕೆ - " ಒಡ್ಡೋಲಗ " 


ಬಲ್ಲಿರೇನಯ್ಯಾ...ದೇಶದ ಗುರುಗಳೆಲ್ಲರ ಗುರು ಯಾರೆಂದು ಬಲ್ಲಿರಿ..ನಾವೇ ಸರಿ ಗುರುವರ್ಯ..

ಎಂದಿನಂತೆಯೇ ಮುಂಜಾನೆಯ ನಿತ್ಯ ವಿಧಿಗಳನ್ನು ಪೂರೈಸಿ...ಒಡ್ಡೋಲಗ ನೀಡಿ ಅವಲೋಕಿಸುವಾಗ

ಶಿಕ್ಷಕರ ಪಾಡು ಅದೆಂತು ಪೇಳಲಿ ದೇಶದ ಸರ್ವಮುಖ ಏಳ್ಗೆಗಾಗಿ  ಶಿಕ್ಷಣವೀಯುವುದು ಗುರುವಿನ ಗುರಿ

ವಿರಾಮವಿಲ್ಲದೆ ಕಾಠಿಣ್ಯದ ಸೂಕ್ಷ್ಮತೆಯ ಅರಿತು...ಶಿಷ್ಯರ ಸತ್ಪ್ರಜೆ ಗಳಾಗಿಸುವುದು ಹೊಣೆ... ಆದರೇನು 

ಮಾಡೋಣ.?ಗುರು ತಾ ನಿಕೋಪಿ ನಿಗರ್ವಿ- ಅನ್ಯಾಯಕ್ಕೆ ಸೆಟೆಯಲಾರ , ಅನ್ಯಾಯವ ಹೊತ್ತು ಬವಣೆ

ಪಡುವ...ನೋವ ನುಂಗುತ ಬಸವಳಿವ - ಇಂತಿದೆ ಕಾಲದ ಸ್ಥಿತಿ.../ ಮನೆ ಗಣತಿ,ಜನ ಗಣತಿ,ಮತ ಗಣತಿ 

ಮುದುಕರ ಹೆಳವರ ಗಣತಿ,ಪ್ರಯೋಜಕ ಅಪ್ರಯೋಜಕರ ಗಣತಿ,ಗಣತಿ ಪ್ರಾಯೋಜಕತೆಗೆ ನೂಕುವರು 

ಈ ಶಿಕ್ಷಕರನೆ...ಅಷ್ಟೆಯೇ..ಕೊರೋನ ಸೋಂಕಿತರ ಗಣತಿ,ಶಂಕಿತರ ಗಣತಿ,ಗುಣವಾದವರ ಗಣತಿ,ಹೆಣ 

ವಾದವರ ಗಣತಿ... ಗುರುವಿಗೆ ಮತ್ತೇನು ಕೆಲಸ..ಆದರೂ ಲೆಕ್ಕ ಸಿಕ್ಕಿಲ್ಲ..ಈ ಸಾವಿನ ಗಣತಿ ಕಾಯಕದಲ್ಲಿ 

ಸೋಂಕು ಪೀಡಿತರಾಗಿ ಸತ್ತು..ಹೆಣವಾಗಿ ಹೋದ ಶಿಕ್ಷಕರ ಗಣತಿ..ಅನಾಥರಾದ ಅವರ ಹೆಂಡತಿ ಮಕ್ಕಳ 

ಗಣತಿ.../ ಗುರುವರ್ಯನಾದ ನಾನು ಶಿಕ್ಷಕರಲ್ಲಿ ಸಮಾಲೋಚಿಸುವುದೊಳಿತು ..ಗುರುತನವೆಂಬುದು 

ಕೆಲಸವಲ್ಲ..ಹೊಣೆಯರಿತ ಜವಾಬ್ದಾರಿ..ಅದು ಕಾಲಾತೀತ..ದೇಶ ಸುಭಿಕ್ಷೆಯ ದೀಕ್ಷೆಯೊಂದೇ ಈ ಶಿಕ್ಷಕನ 

ಗುರಿಯೆಂದು ಸಾರಿದರಾಗದೇ...|| ವಂದನೆಗಳು ||


೧೫)

ಶೀರ್ಷಿಕೆ -- ದಸರದ ಸಂಭ್ರಮ


ನವರಾತ್ರಿಯ ಹಬ್ಬದ ದಸರವು

ನಾನಾ ದೇವಿಯ ಪೂಜೆಯು

ದುರ್ಜನರ ಶಿಕ್ಷಿಸಲು ಅವತರಿಸಿದಳು

ಸಜ್ಜನರ ರಕ್ಷಿಸುತ್ತಾ ಸಲಹಿದಳು


ಹಿರಿಯರಿಂದ ಕಿರಿಯರ ತನಕವು

ಸಡಗರ ತಂದಿದೆ ದಸರಾ ಹಬ್ಬವು

ಎಲ್ಲರೂ ಒಂದೆಡೆ ಸೇರುತ್ತಲಿ

ಹರುಷದ ಸಮಯವು ಬಂದೊದಗುತಲಿ


ಸರಸ್ವತಿಯ ದುರ್ಗೆಯ ಪೂಜೆಯು

ಜೊತೆಯಲ್ಲಿ ನಡೆದಿದೆ ವಾಹನ ಪೂಜೆಯು

ಗೊಂಬೆಯ ಕೂಡಿಸಿ ಬಾಗೀಣ ಹಂಚುತಲಿ

ಸಾಗಿದೆ ಹೀಗೆ ದಸರಾ ಹಬ್ಬ ಹರ್ಷದಲಿ


ಶುದ್ಧಗೊಳಿಸಿದ ಮನೆ-ಮನಗಳು

ಭಕ್ತಿಯಿಂದ ಪೂಜಿಸಿದೆ ನಾನಾ ಪುಷ್ಪಗಳು

ಹಣ್ಣು-ಹಂಪಲು ನೈವೇದ್ಯಗಳು ಅರ್ಪಿಸುತಲಿ

ದೀಪ ದೂಪ ಆರತಿ ಎತ್ತಿ ಬೆಳಗುತಲಿ


ದೇಶಕ್ಕೆ ಪ್ರಸಿದ್ಧಿಯು ಮೈಸೂರು ದಸರವು

ಎಲ್ಲೆಡೆ ವಿದ್ಯುತ್ ದೀಪದ ವೈಭೋಗವು

ಚಾಮುಂಡಿಬೆಟ್ಟದ ದೇವಿ ಅಲಂಕಾರವು

ಕನ್ನಂಬಾಡಿ ಕಟ್ಟೆಯ ಸೌಂದರ್ಯದ ಸಿರಿಯು


ನಾನಾ ಪಂದ್ಯಾಟಗಳ ಸ್ಪರ್ಧೆ ಗಳಿಗಾಗಿ

ಅವಕಾಶವೊದಗಿಸಿದೆ ಈ ಸುದಿನವು

ಕೈಬೀಸಿ ಕರೆಯುತ್ತಿದೆ ಪ್ರವಾಸಿಗಳನ್ನು

ಒಮ್ಮೆ ನೋಡ ಬನ್ನಿ ಮೈಸೂರು ದಸರಾವನ್ನು


ಜಂಬೂಸವಾರಿಯ ದೇವಿಯ ಮೆರವಣಿಗೆಯು

ಎಲ್ಲೆಲ್ಲೂ ನೆರೆದಿದೆ ಜನರ ಸಮೂಹವು

ಬನ್ನಿಯ ಹಂಚುತ ಸಡಗರ ಸಂಭ್ರಮದಿ

ನಡೆದಿದೆ ದಸರಾ ಹಬ್ಬದ ಶುಭ ಸಂದರ್ಭದಲಿ


ಕೆ.ಆರ್.ಉಷ ದಿದ್ದಿಗಿ, ಹೈದರಾಬಾದ್


೧೬) 

ಶೀರ್ಷಿಕೆ: ಕನಸು


ಕನಸು ಹೆಣೆಯುವ

ಸೂಜಿಗೆ ತೂತಿಲ್ಲ

ಕುರುಡನ ಕನಸಿಗೆ

ಬಣ್ಣಗಳ ಬವಣೆಯಿಲ್ಲ

ಶಿಕಾರಿ ಕನಸಿಗೆ

ರಾತ್ರಿಯ ಅಮಲಿಲ್ಲ


***

ಬಡವನ ಒಲೆಗೆ

ಬೆಂಕಿಯ ಪರಿಚಯವಿಲ್ಲ

ದನಿಕನ ನಾಯಿಗೆ

ಹಸಿವಿನ ಅರಿವಿಲ್ಲ

ಫಕೀರನ ಜಡಕ್ಕೆ

ಸ್ಮಶಾನದಲೂ ಸ್ಥಳವಿಲ್ಲ

***

ಧನಿಕನ ಮನೆಯ

ಕಪಾಟಲಿ ಸ್ಥಳವಿಲ್ಲ

ಬಡಪಾಯಿ ಶವಕೆ

ಕಫನಿನ ಹೊದಿಕೆಯಿಲ್ಲ

ಬಲ್ಲಿದನ ದೋಸೆಯಲ್ಲ,

ಕಾವಲಿಯ ತೂತೇ ಕಾಣಿಸಲ್ಲ

***

ಸುರಿಸುವ ಕಣ್ಣೀರಿಗೆ

ಸಿಹಿಉಪ್ಪಿನ ಪುಕಾರಿಲ್ಲ

ನಶೆಯೇರಿದ ಜಗಕೆ

ಉತ್ತಮನ ಜರೂರತ್ತಿಲ್ಲ

ಕೆಟ್ಟವನಿಸಿಬಿಡಲು

ಸಬೂಬುಗಳೇ ಬೇಕಿಲ್ಲ

***

ಹಗಲಿರುಳಿಗೆ ನಮ್ಮ

ರುಜುವಾತು ಬೇಕಿಲ್ಲ

ಏರಿನಿಂತ ಆಗಸಕೆ 

ಆಲದಮರದ ಹಂಗಿಲ್ಲ

ಅಲೆಮಾರಿಗೆ ಅರಸನಿಗೆ

ಪ್ರಾಣದ ಭಯವಿಲ್ಲ

***

-ಲುಕ್ಮಾನ್‌ ಅಡ್ಯಾರ್

ಕಾನೂನು ವಿದ್ಯಾರ್ಥಿ ಮಂಗಳೂರುಬಾ

೧೭) 

ಬಾಬಣ್ಣನ ಕವನಗಳು.....


🌹 ಸುಂದರ ಸೃಷ್ಟಿ 🌹


ಸೌಂದರ್ಯದ ಲಹರಿಯ ಈ ಸ್ವರ

 ಭಾವನೆಯಲ್ಲಿ ಬೆಸೆದಿದೆ ಸುಸ್ವರ

 ಸೃಷ್ಟಿಯ ವೈಭವವೇ ನವ ಸಿಂಗಾರ

 ಅರಳಿಸಿ ಮೂಡಿಸಿದೆ ಸಿರಿ ಮಂದಾರ llಪll


 ಅಣು ಅಣುವಿನ ಆತ್ಮದಿ ವಿಸ್ಮಯ

 ವೈಶಿಷ್ಟ್ಯವು ಹೇಳುತ್ತಿದೆ ಅವಿಸ್ಮಯ

ಪ್ರಕೃತಿಯ ಸೊಗಡಿನ ಈ ಮಾಯ

 ಕಾಲಚಕ್ರನ ನಿಯಮದಿ ಈ ಕಾಯ ll೧ll


ಪ್ರತಿದಿನ ಪ್ರತಿ ಕ್ಷಣ ಬದುಕಿನ ಆಕಾರ

 ತಂತ್ರ ನಯವನ್ನು ಮಾಡಿದೆ ಸುಂದರ

 ಹೊಸತನಕ್ಕೆ ನಾಂದಿಯಾಗುವ ಸಾಕಾರ

 ಮಂತ್ರಮುಗ್ಧಗೊಳಿಸುವ ಸೃಷ್ಟಿ ಆಗರ ll೨ll


ನಿಷ್ಕಲ್ಮಶ ವಿಶಾಲ ವಿ ಸುಂದರ ಸೃಷ್ಟಿ

 ಸೊಬಗನ್ನು ಸವಿಯಲು ನೀಡಿದೆ ದೃಷ್ಟಿ

 ಕಾಲಕ್ಕನುಗುಣವಾಗಿ ಬರುತ್ತಿದೆ ವೃಷ್ಟಿ 

ಪ್ರಕೃತಿಯ ಮಡಿಲಲ್ಲಿ ನಾವಿಲ್ಲಿ ಮುಷ್ಟಿ ll೩ll


ಪಂಚಭೂತಗಳ ತತ್ವವೇ ಈ ಜಗವು

 ಪಂಚೇಂದ್ರಿಯ ದಿಂದ ನೀಡಿದೆ ನಗುವು

 ಪ್ರತಿ ಆತ್ಮಕ್ಕೂ ಸಾವಿರಾರು ಮೊಗವು

 ಬೆಳೆಸುತ ಕಾಯುತಿದೆ ಸಕಲ ಕಾಲವು ll೪ll


ಪ್ರಶಾಂತ್ ಆರ್ ದೈವಜ್ಞ

 ಕರೇಕ್ಯಾತನಹಳ್ಳಿ



೧೮) ವಿಜಯೋತ್ಸವ 


ಶರದೃತುವಿನ ಆಶ್ವಯುಜ ಮಾಸದಲಿ 

ತಾಯಿ ಶಕ್ತಿಯು ಅವತಾರ ತಾಳುತಲಿ 

ಬಂದಳು ನವದುರ್ಗೆಯರ ರೂಪತಾಳಿ 

ಭುವಿಯಲಿ ಧರ್ಮಸಂಸ್ಥಾಪನೆಗಾಗಿ 


ತಾಮಸದ ಮೇಲಿನ ಸಾತ್ವಿಕತೆಯ ಜಯ 

ಲಕ್ಷ್ಮಿ ಸರಸ್ವತಿ ಪಾರ್ವತಿಯರೊಂದಾಗಿ 

ಅಭಯ ಪರಂಪರೆಯ ಅಭಿಯಾನ ಸಾಗುತ್ತಿದೆ ದಿನದಿನವೂ

ಅಧ್ಯಾತ್ಮವು ಸಮಾಜದೊಳಗೆ ಹಾಸುಹೊಕ್ಕಾಗಿರಲು


ವಾಸ್ತವದ ಬದುಕಿನಲ್ಲೀಗ ಬಹು ಪ್ರಸ್ತುತವು 

ಸಾಮಾಜಿಕ ಪಿಡುಗುಗಳು ಅಟ್ಟಹಾಸಗೈದಿರಲು ಸಜ್ಜನತೆಯು ಮತ್ತೆ ವಿಜೃಂಬಿಸಬೇಕಾಗಿದೆ 

ಇನ್ನೊಮ್ಮೆ ದೇವಿಯು ಉಗ್ರರೂಪ ತಾಳಬೇಕಿದೆ 


ಹೊಂದಬೇಕಿದೆ ಅರಿಷಡ್ವರ್ಗಗಳ ಹತೋಟಿ 

ಅಂತರಾಳದ ಕೊಳದ ಹಾವಸೆಯ ತೆಗೆದು 

ನಿವಾರಿಸುತೆ ಅಂತರಂಗದ ಒಳತೋಟಿ 

ನಿಜಾರ್ಥದಲ್ಲಿ ಆಚರಿಸಬೇಕಿದೆ ವಿಜಯೋತ್ಸವ 


ಶಮೀವೃಕ್ಷವನು ಪೂಜಿಸಿ ಆಗೋಣ ಪುನೀತ 

ದುಶ್ಚಟಗಳ ಸೀಮೋಲ್ಲಂಘನ ವ್ರತದಲಿ ನಿರತ 

ಯಾಂತ್ರಿಕ  ಬದುಕಿನಲೀ ಆಚರಣೆ ವಿಹಿತ

ಏಕತಾನತೆಯಿಂದ ವಿಮುಕ್ತಿ ಮನ ಮುದಿತ 


ಸುಜಾತಾ ರವೀಶ್

ಮೈಸೂರು


೧೯)

ಶೀರ್ಷಿಕೆ :  "ನೆನಪು"

ಗಾಂಧೀ ಎಂಬ ಶಾಂತಿ ದೂತನು

ನಮಗೆ ಕೊಡಿಸಿದ ಸ್ವಾತಂತ್ರ್ಯ

ದುಡ್ಡು,ಕಾಸು ಯಾವದು ನೀಡದೆ

ಸ್ವತಂತ್ರ್ಯ ರಾದೆವು ನಾವೆಲ್ಲಾ

ಸ್ವತಂತ್ರ್ಯ ರಾದೆವು ನಾವೆಲ್ಲಾ...


ಬಾಲಕ ಗಾಂಧೀ ತುಂಬಾ ತುಂಟ

ಊರನು ಸುತ್ತಿ ಶಾಲೆ ಕಲೆತಾ

ಜಾಣ ತನದಲಿ ಎಲ್ಲರ ಗೆದ್ದ

ಶಾಂತಿ ಮಂತ್ರದಿ ದೊರಕಿಸಿಕೊಟ್ಟರು

 ಸ್ವಾತಂತ್ರ್ಯ ಈ ಸ್ವಾತಂತ್ರ್ಯ

ಸ್ವಾತಂತ್ರ್ಯ ಈ ಸ್ವಾತಂತ್ರ್ಯ...


ಹಿಂಸೆಯ ದಾರಿ ಬಹು ದುಬಾರಿ

ಅಹಿಂಸಾ ಮಾರ್ಗದಿ ನಡೆಯೋಣ

ಸತ್ಯಾಗ್ರಹ, ಕಾಲ್ನಡಿಗೆ, ಉಪವಾಸ ದಿಂದ 

ಮನ ಒಲಿಸೋಣ (೨)

ಮನದಲಿ ಅನುಕಂಪದ ಅಲೆಯನು ಮೂಡಿಸಿ

ಪಡೆಯೋಣಾ ನಾವು ಸ್ವಾತಂತ್ರ್ಯ,

ಪಡೆಯೋಣಾ ನಾವು ಸ್ವಾತಂತ್ರ್ಯ...


ದೇಶ ಸೇವೆಯು ದೇವರ ಸೇವೆ

ಎಂಬುತ ನಡೆದಾ ಮಹಾತ್ಮನು ಇವನು

ಇವರ ಹಾದಿಯು ನಮಗೆ ಸ್ಪೂರ್ತಿಯು

ಅರಿತು ಬಾಳಲು ಇವರೆ ಜ್ಯೋತಿಯು

ಅದನು ತಿಳಿಯಲು ಈ ಜಯಂತಿಯು,

ಈ ಜಯಂತಿಯು,ಈ ಜಯಂತಿಯು...


ಶ್ರೀ ನರೇಂದ್ರ ನಾ, ವಾಳ್ವೇಕರ

                              ಉಪನ್ಯಾಸಕರು

ವ್ಹಿ.ಪಿ,ಎಸ್,ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ,

ರಾಮದುರ್ಗ.....✍🏻✍🏻🙏



೨೦)

ಗಾಂಧಿ ತಾತ

 

ಗಾಂಧಿ ತಾತ ಗಾಂಧಿ ತಾತ 

ನನ್ನ ಪ್ರೀತಿಯ ಗಾಂಧಿ ತಾತ

 ಬಡವ ಬಗ್ಗದರಿಗನ್ನದಾತ

ದೇಶಕ್ಕೆಲ್ಲ ರಾಷ್ಟ್ರಪಿತ 


ಸ್ವಾತಂತ್ರ್ಯವನ್ನು ತಂದುಕೊಟ್ಟರು 

ಜನರ ಮನಸ್ಸನ್ನು ಗೆದ್ದರು

 ಪೋರಬಂದರ್ ನಲ್ಲಿ ಜನಿಸಿ

 ಮಹಾ ಮಹಾತ್ಮರೆನಿಸಿದರು


 ಗಾಂಧಿಯವರ ತತ್ವಗಳನ್ನು

 ನಾವನುಸರಿಸೋಣ

 ರಾಮರಾಜ್ಯದ ಕನಸನ್ನು 

ನಾವ್ ನನಸಾಗಿಸೋಣ


- ಧನ್ವಿತಾ ಕಾರಂತ್

 ಏಳನೇ ತರಗತಿ ,ದ.ಕ.


೨೧) ಕಡಲು ಕಾರಂತ


ಕಡಲ ತೀರದ ಭಾರ್ಗವನು ಇವನದು

ಕಡಲ ದಾಟಿದ ಹೆಸರು

ಒಡಲ ಮೀರಿದ ಕಸುವು

ಮಡಿಲ ಧನ್ಯತೆಯುಸಿರು|


ಎಲ್ಲರಂತಿವನೂ ಹಸಿರ ಮಧ್ಯದ ಕೂಸು

ಬಲ್ಲವರ ಒಡನಾಡಿ

ಬಲ್ಲಿದರ ಸಹವರ್ತಿ

ಕಲ್ಲಲರಳಿದ ಸುಮವು|


ಬುದ್ಧಿಯಲಿ ಇವನ ಸರಿಸಾಟಿ ಯಾರಿಲ್ಲ

ವಿದ್ಯೆಯಿವನದು ಮಿತವು

ತಿದ್ದಿ ತೀಡುವ ಗುಣವು

ಮುದ್ದು ಮಗುವಿನ ಮನವು|


ಸಾಹಿತ್ಯ ಸೇವೆಯಲಿ ಅಪರಿಮಿತ ಉತ್ಸಾಹ

ಮಾಹಿತಿಯ ಭಂಡಾರ

ಮೋಹಿಸುವ ಕಲೆಗಾರ

ಮಹಿಪನಿವ ಕನ್ನಡಕೆ|


ಆಡು ಮುಟ್ಟದ ಸೊಪ್ಪು ಇಲ್ಲವೆಂದಾದರೆ

ದುಡಿದನಿವ ಭಾಷೆಯಲಿ

ಕಾಡಿದನು ಪ್ರತಿಯೊಂದ

ಆಡಿಸಿದ ಅಕ್ಷರವ |


ನಡೆದಾಡಿದಂತಹ ವಿಶ್ವಕೋಶವು ಇವನು

ಕಡಲಿನಷ್ಟೇ ಭರವು

ಕಡಲಿನಂತೆಯೆ ಆಳ

ಹುಡುಕಿ ಮುಗಿಯದ ಹವಳ|


***

ಶ್ರೀಕಲಾ ಬಿ ಕಾರಂತ್

ಳಿಕೆ

ಬಂಟ್ವಾಳ ತಾಲೂಕು, ದ.ಕ.

 ಗ್ರಾಮ ಕರಣಿಕೆ


೨೨) ಕೋಟಿಗೊಬ್ಬರು.


ಕೋಟ ಶ್ರೀ ಶಿವರಾಮ ಕಾರಂತರು

ಬಾಳು ಅವರದು ಆಕರ ಗ್ರಂಥವು

ಒಂದೇ, ಎರಡೇ ಹಲವಾರು ಬಗೆ

ಮೊಗದಲ್ಲರುಳುವ ತುಂಬು ನಗೆ.


ಸಂಸ್ಕೃತಿಯ ಬೇರಿನಲ್ಲಿ ಯಕ್ಷಗಾನವು

ಸಾಹಿತ್ಯದುಸಿರಲ್ಲಿ ಅವರ ಯಾನವು

ಮೂಕಜ್ಜಿಯ ಕನಸಿನ ಚಿತ್ತಾರದಲ್ಲಿ

ಮನ ಮನದಲ್ಲದು ಸವಿಸ್ತಾರವು.


ಕಡಲಲೆಗಳು ರಭಸದಿ ಆರ್ಭಟಿಸುವಂತೆ

ಮಾತಿನ ದಾಟಿಯು ಬಲು ಗಟ್ಟಿಯಂತೆ

ಥೈ,ಥೈ, ತಕ ಥೈ,ಥೈ ಗಾನಲಹರಿಯಲ್ಲಿ

ಭಾವ ಭಂಗಿಯದು ಸೈ,ಸೈ, ಸೈಯಲ್ಲಿ.


ಮಕ್ಕಳ ಪ್ರೀತಿಯ ಕಾರಂತರಜ್ಜರಿವರು

ಕಥೆಯನು ಹೇಳುವ ಹಿರಿಯಜ್ಜರವರು

ಚಿಣ್ಣರಿಗಾಗಿಯೇ ಕಾರಂತರ ವನವು

ಮಕ್ಕಳ ಮೊಗದಲ್ಲಿ ಅರಳಿದ ಮನವು.


ಕಾರಂತರ ಹೆಜ್ಜೆ,ಹೆಜ್ಜೆಯ ಅಚ್ಚಿನಲ್ಲಿ

ಸಾಹಿತ್ಯ, ಯಕ್ಷಗಾನದ ಹೊಂಬೆಳಕು

ವಿಶ್ವ ವಿದ್ಯಾಲಯ ಮಾಡದ ಕಾಯಕವು

ಮಾದರಿ ಬದುಕು,ಬರಹ ಸಾರ್ಥಕವು.


ಆಡು ಮುಟ್ಟದ ಸೊಪ್ಪಿಲ್ಲವಂತೆ...

ಕಾರಂತರ ಬರವಣಿಗೆಗೆ ಎಣೆ ಇಲ್ಲದಂತೆ

ಮೂಕಜ್ಜಿಯ ಕನಸು ಜ್ಞಾನಪೀಠ ಪುರಸ್ಕೃತರು

ಕಡಲ ತೀರದ  ನೆನಪಲ್ಲಿ ಭಾರ್ಗವರು..


ವೀಣಾ ಕೃಷ್ಣಮೂರ್ತಿ,  ದಾವಣಗೆರೆ.


೨೩)

ಶೀರ್ಷಿಕೆ : ನವರಾತ್ರಿ

ಸಂಪಿಗೆಯ ನಗೆ ಚಂದ ಮಲ್ಲಿಗೆಯ ನುಡಿ ಚಂದ

ನವರಾತ್ರಿಯಲಿ ನವದುರ್ಗೆಯರ ಪೂಜೆಯ ಅಂದ

ಜೇನಿನ ಸಿಹಿ ಚಂದ ಹೂವಿನ ಸ್ಪರ್ಶ ಚಂದ

ನಾಡ ಹಬ್ಬ ದಸರಾದ ವೈಭವ ಇನ್ನೂ ಅಂದ!!


ಆಕಾಶದ ವೈಯ್ಯಾರಕೆ ಮೋಡಗಳೇ ಚಂದ

ಅರಮನೆಗೆ ಬಣ್ಣದ ದೀಪಾಲಂಕಾರವೇ ಅಂದ 

ದಸರಾ ಗೊಂಬೆಗಳ ಕುಣಿತ ಬಲು ಚಂದ

ಗಿರಿವನಗಳ ಬೆಟ್ಟಕಾಡುಗಳ ನಾಡೇ ಅಂದ!!


ಎಲ್ಲೆಲ್ಲೂ ಕಾಣುವುದು ಬನ್ನಿ ಗಿಡದ ಹಸಿರೆಲೆಗಳ ಚಂದ

ಸರ್ವಧರ್ಮ ಭಾವನೆಗಳ ತುಂಬಿದ ಹಾಡಿನ ಅಂದ

ನಾಡ ಹಬ್ಬ ದಸರಾ ಮೆರವಣಿಗೆ  ನೋಡಲು ಚಂದ 

ಚಾಮುಂಡೇಶ್ವರಿ ತಾಯಿ ಮುಡಿಗೆ ಹೂಗಳ ಅಂದ!!


ಅಂಬರ ಚುಂಬಿಸುವ ಹಕ್ಕಿಯ ಹಾರಾಟ ಚಂದ

ಪಳ ಪಳ ಹೊಳೆಯುವ ನಗರದ ಬೆಳಕಿನ ಅಂದ

ಹೂದೋಟದಿ ದುಂಬಿಗಳ ಕಲರವ ಚಂದ

ಕರುನಾಡಿನ ಬೆಟ್ಟಗಳಲಿ ಹಚ್ಚ ಹಸುರ ಸಿರಿಯ ಅಂದ!!


ವಸಂತ ಮಾಸಕೆ ಕೋಗಿಲೆಯ ಗಾಯನ ಚಂದ

ನವರಾತ್ರಿ ಉತ್ಸವಕ್ಕೆ ನವರಂಗುಗಳ ಅಂದ

ಎಲೆಯ ಮೇಲೆ ಇಬ್ಬನಿ ಹನಿಗಳ ಝೇಂಕಾರ ಚಂದ 

ಮನೆ ಮನೆಗಳಲಿ  ಬೆಳಗುವ ದೀಪಗಳ ಅಂದ!! 


✍️ ಪುಷ್ಪ ಪ್ರಸಾದ್ ಉಡುಪಿ


೨೪) ನಮ್ಮ ಬಾಪು

🌸🌸🌸🌸🌸🌸🌸🌸🌸🌸🌸

ಜೀವನದ ಪಾಠ ಕಲಿಸುವವರು

 'ಕ್ಷಮೆ' ಪ್ರಬಲರ ಲಕ್ಷಣ ಎನ್ನುವವರು

 ಭವ್ಯ ಭಾರತದ ಕನಸು ಕಟ್ಟಿದವರು

 ಅವರೇ ನಮ್ಮ 'ಬಾಪು'


 'ಸತ್ಯವೇ ದೇವರು' ಎಂದವರು

 ಕೋಲು ಹಿಡಿದು ಅಹಿಂಸೆಯ ಪಾಠ ಕಲಿಸಿದವರು

 ರಾಮರಾಜ್ಯದ ಕನಸು ಕಟ್ಟಿದವರು 

 ಅವರೇ ನಮ್ಮ 'ಮಹಾತ್ಮ'


 ರಾಷ್ಟ್ರಕ್ಕೆ ಏಕತೆಯ ಪಾಠ ಕಲಿಸಿದವರು

 ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ದವರು

 'ವಿಶ್ವಶಾಂತಿ' ಸಾರಿದವರು

 ಅವರೇ ನಮ್ಮ 'ಗಾಂಧಿ'


 ಬನ್ನಿ! ಗಾಂಧೀಜಿಯವರ ಆದರ್ಶಗಳನ್ನು ಸ್ಮರಿಸುತ್ತ

 ಅವರ ಭಾವಚಿತ್ರವನ್ನು ವಂದಿಸಿ ಗೌರವಿಸುತ್ತ

 ಗಾಂಧೀಜಯಂತಿಯ ಪಾವನ ದಿನದಂದು  

 ಕೋಟಿ ಕೋಟಿ ನಮನ ಗಳನ್ನು ಸಲ್ಲಿಸೋಣ.

  ******

ಹೆಸರು : ಕು. ನಿಧಿ.ಬಿ ನಾಯ್ಕ್

ಊರು : ದಾಂಡೇಲಿ ( ಉ.ಕ )

ತರಗತಿ : ೭ ನೇ ದಾಂಡೇಲಿ


೨೫) ನಮ್ಮ ಕಾರಂತಜ್ಜ


ಬತ್ತದ ತೊರೆಯಾ ಬಳಗದ ನೆರಳದು

ಸುತ್ತಲು ಹರಡಿದೆ ಸಂಭ್ರಮದಿ

ಚಿತ್ತದಿ ಉದಿಸಿದ ಭಾವಕೆ ಸ್ಪರ್ಶವ

ಮೆತ್ತಗೆ ನೀಡಿದೆ ಹರುಷದಲಿ||


ಉಡುಪಿಯ ಜಿಲ್ಲೆಯ ಕೋಟದಿ ನೆಲೆಸಿದ 

ಕಡಲಿನ ತಡಿಯಾ ಭಾರ್ಗವರು

ತುಡಿತವು ಹೆಚ್ಚಿದೆ ಬರೆಯಲು ಕವನವ

ಮಿಡಿದಿದೆ ಭಾವದ ಸ್ಪಂದನವು||


ಚೋಮನ ದುಡಿಯಲಿ ದಲಿತರ ಭಾವವು

ಪಾಮರ ಪಂಡಿತರೆಲ್ಲರನು

ರೋಮಾಂಚನವನು ನೀಡಿದ ಕತೆಯನು

ಸಾಮದಿ ಕೂರುತ ಕೇಳಿರಲು||


ಬೆಟ್ಟದ ಜೀವಕೆ ಸಾಟಿಯು ಏನಿದೆ

ದಿಟ್ಟತೆಯಿಂದಲಿ ಅಡಿಯಿಡಲು

ಮುಟ್ಟಲು ಗುರಿಯನು ತಟ್ಟನೆ ಏರುತ

ಕಟ್ಟಿದ ಬರಹದಿ ಹುರುಳಿರಲು||


ಮಕ್ಕಳು ಎಂದರೆ ಮಮತೆಯ ಆಗರ

ತೆಕ್ಕೆಯ ರಕ್ಷೆಯು ಬಾಲವನ

ಹಕ್ಕಿಯ ತೆರದಲಿ ಹಾರುತ ಕುಣಿಯುತ

ಅಕ್ಕರ ಕಲಿಯುವ ಶಾಲಿವನ||


ನಡೆದಾಡುತಿರುವ ವಿಶ್ವದ ಕೋಶವೆ 

ಪಡೆದಿಹ ಪ್ರಶಸ್ತಿಯು ಅಗಣಿತವು

ನುಡಿಯಲಿ ಕುಣಿತದಿ ಆಸಕ್ತಿ ತೋರುತ

ಒಡಲಿನ ಪ್ರೀತಿಯ ಬಯಲಾಟ||


ಲಕ್ಷ್ಮೀ ವಿ ಭಟ್ ಮಂಜೇಶ್ವರ



೨೬)

ಶೀರ್ಷಿಕೆ:-ಪ್ರೀತಿಯ ಕಾರಂತಜ್ಜ


ಕಡಲ ತೀರದ ಭಾರ್ಗವರಿವರು

ಹೆಮ್ಮೆಯ ಶಿವರಮಕಾರಂತರು/

ಕನ್ನಡ ನಾಡಿನ ಸಾಹಿತಿಯಿವರು

ಕನ್ನಡಾಂಬೆಯ ವರಪುತ್ರರು//


ಆಡು ಮುಟ್ಟದ ಸೊಪ್ಪಿಲ್ಲ ಎಂಬ ಖ್ಯಾತಿಯು

ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆಯು/

ಪರಿಸರ ಪ್ರೇಮ ತೋರಿದ ಸಾಹಿತಿಯಿವರು

ಕವನ ಕಾದಂಬರಿಗಳಿಗೂ ಪ್ರಸಿದ್ಧರು//


ಕಣ್ಣಿಗೆ ಕಟ್ಟುವಂತೆ ಬರಹಗಳ ಚಿತ್ರಣವು

ಇವರೊಬ್ಬ ನಡೆದಾಡುವ ವಿಶ್ವಕೋಶವು/

ಮೂಕಜ್ಜಿಯ ಕನಸು ಕಾದಂಬರಿಗೆ ಖ್ಯಾತರು

ಕೋಟ ಶಿವರಾಮ ಕಾರಂತರೆಂದೇ ಪರಿಚಿತರು//


ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು

ತಾವು ನಾಸ್ತಿಕರಾಗಿ ಆಸ್ತಿಕರನ್ನು ಗೌರವಿಸಿದರು/

ಯಕ್ಷಗಾನ ಕಲೆಯನ್ನು ನೆಚ್ಚಿಕೊಂಡವರು

ವೈಜ್ಞಾನಿಕ ಬರಹಗಳಲ್ಲೂ ಮಿಂಚಿದವರು//


ಪ್ರವಾಸದ ಅನುಭವನನ್ನೇ ಕಥನವಾಗಿಸಿದರು

ನಾಟಕ ಪ್ರಕಾರಗಳಲ್ಲೂ ಹೆಜ್ಜೆಯಿಟ್ಟವರು/

ಕನ್ನಡದ ಕಂಪನ್ನು ಎಲ್ಲೆಡೆಯೂ ಪಸರಿಸಿದರು

ಪ್ರೀತಿಯ ಕಾರಂತಜ್ಜರಾಗಿ ಅಚ್ಚಳಿಯದೆ ಉಳಿದರು//


ದೀಪಿಕಾ,ಉಡುಪಿ.

೨೭) 

ಅಂತರಂಗದ ದೇವ


ಅಂತರಂಗದ ಆತ್ಮವೆಂಬ ಜ್ಯೋತಿಯೇ

ಶಕ್ತಿಯು ನೀನೇ ಯುಕ್ತಿಯು ನೀನೇ

ನನ್ನೊಂದಿಗೆ ಇರುವ ದೇವನು ನೀನೇ

ವಿಚಾರಗಳ ಮಂಥಿಸುತ ಸಲಹೆ  ಕೊಡುವ ಗುರು ನೀನೇ//


ಸತ್ಯ-ಅಸತ್ಯತೆಗಳ ಅರುಹುವ ದೇವದೇವನು ನೀನೇ

ಅಡಿಯಿಡುವೆಡೆ ಎಚ್ಚರಿಸುವ ಗುರು ನೀನೇ

ಕಿವಿ ಹಿಂಡಿ ತಟ್ಟಿ  ತದಿಕಿ ಬುದ್ಧಿ ಹೇಳುವ ದೇವನು ನೀನೇ

ಭವದ ಭ್ರಮೆಯ ಬಿಡಿಸುವ ಪರಮಾತ್ಮ ನೀನೇ//


ಸಮ್ಮಿತ್ರನು ನೀನೇ ಸಹಚಾರಿಯು ನೀನೇ

ಸರಳತೆಯ ಸಾಕಾರಮೂರ್ತಿ ನೀನೇ

ಸದಾಚಾರದ ಬೀಜ ಮೋಳೆಸುವ ದೇವನು ನೀನೇ

ಸದ್ಭಾವದ ಜ್ಯೋತಿ ಬೆಳಗಿಸುವ ಅಂತರಾತ್ಮ ನೀನೇ//


 ಸನ್ಮಾರ್ಗಿಯೇ ಸರ್ವಾಂತರ್ಯಾಮಿಯೇ

ದೇವದೇವನೆ ನಿನಗೆ ನೂರು ನಮನ

ದೇವ ದೇವನೆ ನಿನಗೆ ಸಾವಿರ ನಮನ

ಅಂತರಂಗದಿ ಹೊಳೆವ ಜ್ಯೋತಿ ಇತ್ತ ಕರುಣಾಕರ ನೀನೇ//


ಡಾ ಅನ್ನಪೂರ್ಣ ಹಿರೇಮಠ ಶಿಕ್ಷಕಿ ಬೆಳಗಾವಿ

ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ಕವನ ರಚನೆ ಹಾಗೂ ಕವನ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಿದ ಕವಿತೆಗಳು

 


ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕೋಟ ಶಿವರಾಮ ಕಾರಂತರ ೧೨೦ ನೇ ಜನ್ಮದಿನದ ಅಂಗವಾಗಿ (೧೦/೧೦/೨೦೨೧ ರವಿವಾರ)

ಕವನ ರಚನೆ ಹಾಗೂ ಕವನ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಿದವರು :: ಭಾಗ ೦೧ 







ಸ್ಪರ್ಧೆಗಳು ರಚಿಸಿದ ಕನ್ನಡ ಕವಿತೆಗಳು :

((೧))

ಶೀರ್ಷಿಕೆ :  ಸಂಪನ್ಮೂಲಗಳ ನಾಶ


ಕಷ್ಟದಿಂದ ಕಲ್ಲುಗಳ ಹಾಕಿ ಕೊಡ ತುಂಬಿಸಿತು ಕಾಗೆ.

ಅದರಲ್ಲಿ ಹನಿ ನೀರು ಇಲ್ಲದೇ ಮೃತಪಟ್ಟ ಹಾಗೆ.

ಇದು ಮುಂದಿನ ಪೀಳಿಗೆಗೆ ನಾವು ಕೊಡುತ್ತಿರುವ ಕೊಡುಗೆ.

ಸ್ವಾರ್ಥಿಗಳ ಪ್ರಪಂಚದಲ್ಲಿ ಬದುಕು ನಡೆಸುವ ಕರ್ಮ ನಮಗೆ.


ಅತಿ ಆಸೆಯಿಂದ ಸಂಪನ್ಮೂಲಗಳು ಬರಿದಾಗುತ್ತಿದೆ.

ಇದರಿಂದ ಅಪಾಯಗಳು ಬೆಂಬಿಡದೆ ಕಾಡುತ್ತಿದೆ.

ಇದೆ ಮುಂದುವರೆದರೆ ಅನಾಹುತಗಳು ಕಾದಿದೆ.

ಈಗಾಗಲೇ ಪರಿಣಾಮಗಳು ಕಾಣಲು ಶುರುವಾಗಿದೆ.


ಎಷ್ಟು ಹೇಳಿದರು ಕೇಳದು ಮಾನವನ ಮನ.

ತನ್ನದೇ ನಡೆಯಬೇಕು ಎಂಬ ಹಠದ ಗುಣ.

ಸ್ವಾರ್ಥ ಬುದ್ದಿಯಿಂದ ಎಲ್ಲವನ್ನು ಹಾಳು ಮಾಡುತ್ತಿದ್ದೇವೆ.

ನೈಸರ್ಗಿಕ ಸಂಪನ್ಮೂಲಗಳನ್ನು ನಾಶ ಮಾಡುತ್ತಿದ್ದೇವೆ.


ಪ್ರಕೃತಿಯ ಮುಂದೆ ಮಾನವನ ಆಟ ನಡೆಯದು.

ಎಂಬ ಸತ್ಯವನ್ನು ಯಾರು ಸಹ ಮರೆಯಬಾರದು.

ಮರೆತಿರುವ ಕಾರಣವೇ ಈಗ ಆಪಾಯದ ಗೂಡಾಗಿದೆ.

ಎಚ್ಚೆತ್ತುಕೊಳ್ಳದೆ ಇದ್ದರೆ ಭೀಕರ ಪರಿಣಾಮವೇ ಕಾದಿದೆ.


ಪರಿಸರದ ಸಂರಕ್ಷಣೆ ಮಾಡಬೇಕಾಗಿದೆ ಎಲ್ಲರೂ.

ಪರಿಸರ ಸುರಕ್ಷಿತ ಆಗಿದ್ದರೆ ಬದುಕಬಲ್ಲರೂ.

ತಂತ್ರಜ್ಞಾನದ ಆವಿಷ್ಕಾರ ಜೀವಿಗಳ ನಾಶಕ್ಕೆ ಕಾರಣ.

ಮುಂದೊಮ್ಮೆ  ನಮಗೂ ಕಾದಿದೆ ಘೋರ ಮರಣ.


✍️ ಕು|ಪೂರ್ಣಿಮಾ. ಹೆಚ್. ಬಿ. ( ಕಲ್ಕೆರೆ ಹಾಸನ)

((೨))

ನವರಾತ್ರಿಯ  ನವದುರ್ಗಾವತಾರ


ನವ ದುರ್ಗಾವತಾರದ ಮಹಿಮೆಯ  ನಾನು ಬಣ್ಣಿಸುವೆ

ತಾಯೆ ನವದುರ್ಗೆಯರಾ ಚರಣಕೆ ನಾನು ವ೦ದಿಸುವೆ  l


ಪರ್ವತ ರಾಜನ ಮಗಳಾಗಿ ಶಿವನಾ ಸತಿಯಾಗಿ ನೀ ಮೆರೆದು

ಶೈಲಪುತ್ರಿಯೆ೦ಬ ಮೊದಲವತಾರದಿ

ಶೋಭಿಸುವೆ  l


ಶಿವನನೆ ಪತಿಯಾಗಿ ಪಡೆವುದಕೆ ನಿರ೦ತರ ತಪ ಗೈದು 

ಬ್ರಹ್ಮಚಾರಿಣಿ ಎ0ಬ ರೂಪದಿ ನೀ ಬಿ0ಬಿಸುವೆ  l


ಚ೦ದ್ರಘ೦ಟೆಯಾ ಕಿರೀಟವ ಧರಿಸಿ ಸಿಂಹ ಸಿ೦ಹಾನದಿ

ರಾರಾಜಿಸುವ ಚ೦ದ್ರಘ೦ಟಿ ನಾಮಾ0ಕನದಿ ನೀ ಮೆರೆವೆ  l


ಅಷ್ಟಸಿದ್ಧಿಯಾ ಬ್ರಹ್ಮಾಂಡವ ರಚಿಸಿ ಮ೦ದಹಸನ

ರೂಪದಲಿ ಕೂಷ್ಮಾಂಡ ದೇವಿಯಾಗಿ  ಅವತರಿಸುವೆ  l


ಷಣ್ಮುಖ ಪುತ್ರನ ತೊಡೆಯಲಿ ಇರಿಸಿ ಅಸುರನ ವಧೆಮಾಡಿ

ಸ್ಕ೦ದಮಾತೆಯಾಗಿ ಅವತರಿಸಿ ಭವ್ಯ ಮಾತೆ ನೀ ಎನಿಸುವೆ  l


ಮಹಿಷಾಸುರನ ವಧೆಮಾಡಿ ವಿರಾಟ ರೂಪಿಣಿಯಾಗಿ 

ನೀ ಮೆರೆದು ಕಾತ್ಯಾಯಿನಿ ರೂಪದಿ ರಾರಾಜಿಸುವೆ  l


ಸಹಸ್ರ ಕಮಲವ ಅರಳಿಸಿ ನೀನು ಶ್ಯಾಮಸು೦ದರೆಯಾಗಿ 

ಕಾಳರಾತ್ರಿ ಅವತಾರಿಣಿ ಸ್ವರೂಪದಿ  ಆಕರ್ಷಿಸುವೆ  l


ಗ0ಗಾಜಲ ಪರಿಶುದ್ಧತೆ ಪಡೆದು ಗೌರವರ್ಣ ವಧನೆಯಾಗಿ

ನೀ ಮೆರೆದು ಮಹಾಗೌರಿ ರೂಪದಿ ಶೋಭಿಸುವೆ  l


ಆಧ್ಯಾತ್ಮಿಕ ಸಿದ್ಧಿಯ ನೀ ಪಡೆದು ನಲಿವಿನ ಜೀವಿಯಾಗಿ

ನಲಿದು ಮೆರೆದು ಸಿದ್ಧಿಧಾತ್ರಿ ಯಾಗಿ ಪ್ರಜ್ವಲಿಸುವೆ  l


ನವರಾತ್ರಿಯ ನವದುರ್ಗೆಯರಾ ನವ  ಅವತಾರಕೆ ವ೦ದಿಸುತಾ

ಭಕ್ತರಿಗೆ ಆಶೀರ್ವದಿಸಿ ಹರಸಲು ಜಯ ಘೋಷವ ಮೊಳಗಿಸುವೆ  ll


ಲಲಿತಾ ಕೆ ಆಚಾರ್ ನಿವೃತ್ತ ಪ್ರಾ೦ಶುಪಾಲರು ಬೆಂಗಳೂರು.

((೩))

"ನಾಡಹಬ್ಬ"

ಶೀರ್ಷಿಕೆ: "ದಸರಾ ಸಂಭ್ರಮ"


ಬನ್ನಿರಿ ಬನ್ನಿರಿ ಬ್ರಾಹ್ಮೀ ಸಮಯದಿ ಏಳಿರಿ

ದಸರಾ ಹಬ್ಬವಿಂದು ಶಿರಸ್ನಾನ ಮಾಡಿರಿ

ಕಸವ ಗುಡಿಸಿ ರಂಗವಲ್ಲಿ ಬಿಡಿಸಿರಿ

ಬನ್ನಿಯ ಗಿಡಕ್ಕೆ ಹೋಗಿ ತಿಲಕವ ಲೇಪಿಸಿರಿ!!


ಬನ್ನಿರಿ ಬನ್ನಿರಿ ಹುತ್ತದ ಮಣ್ಣನ್ನು ತನ್ನಿರಿ

ಘಟ್ಟವ ಸ್ಥಾಪಿಸಿ ಮಣ್ಣಿನ ಹಣತೆ ಬೆಳಗಿರಿ

ಕಳಸ ಪ್ರಾಪ್ತಿಯಿಂದ ನವಧಾನ್ಯ ಹರಡಿರಿ

ಸಸಿಯ ಕಂಗೊಳಿಸಿ ಆರತಿಯ ಬೆಳಗಿರಿ!!


ಬಣ್ಣಬಣ್ಣದ ಹೂವುಗಳ ಸುಗಂಧ ಸೂಸಿರಿ

ಧೂಪದಾರತಿ ಬೆಳಗಿ ಭಕ್ತಿಗೀತೆ ಹಾಡಿರಿ

ಜನತೆಯ ಒಳಿತಿಗಾಗಿ ಬೇಡಿಕೊಳ್ಳಿರಿ

ನವಧಾನ್ಯದೈಸಿರಿ "ನವದುರ್ಗೆಯರ" ಸ್ವಾಗತಿಸಿರಿ!!


ತಳಿರು ತೋರಣದಿ ಮನೆಯ ಅಲಂಕರಿಸಿ

ಪಂಚ ಪಾಂಡವರನ್ನು ಪ್ರತಿಷ್ಠಾಪಿಸಿ

ಆಯುಧ ಪೂಜೆಯ ಮಾಡಿ ಹೋಮ ಹವನದಿ

ಮನ ಮತ್ತು ಮನೆಯ ಶುದ್ಧಿಕರಿಸಿ!!


ಹೊಸ ಉಡುಪನ್ನು ಧರಿಸಿ ತಯಾರಾಗಿರಿ

ನಾಡಹಬ್ಬವಿಂದು ಮೈಸೂರು ಅರಮನೆಗೆ ಹೊರಡಿರಿ

ಒಡೆಯರ್ ಸಾಮ್ರಾಜ್ಯದ ಮೈಸೂರು ಅರಮನೆ

ಹೊರಟು ನಿಂತ ಜಂಬೂ ಸವಾರಿ ವಿಜೃಂಭಣೆ!!


"ಚಾಮುಂಡಿಮಾತೆಯ" ಹೊತ್ತ ಆನೆ ನೋಡಿರಿ

ಕೈ ಮುಗಿದು ಶಿರಬಾಗಿ ಬೇಡಿಕೊಳ್ಳಿರಿ

ಹಿರಿಯರಿಗೆ ಬನ್ನಿಯ ಕೊಟ್ಟು ನಮಸ್ಕರಿಸಿರಿ

ಬಾಳು ಬಂಗಾರವಾಗಲೆಂದು ಆಶೀರ್ವಾದ ಪಡೆಯಿರಿ!!


ರಮ್ಯ ಸಂತೋಷ ವಡೆ 

ವಿಜಯನಗರ (ಹೊಸಪೇಟೆ)

ಗೃಹಿಣಿ.

((೪))

ಕನಸು ತುಂಬಿದ ಕವಿತೆ


ಕನಸುಗಳು ಕವಿತೆಯಾದವು

ಕವಿತೆ ಕಣ್ಣಲ್ಲಿ ತುಂಬಿಕೊಂಡಿತು


ಆಸೆ ಅನವರತವಾಯಿತು ಅಂಕುರದ ಟಿಸಿಲು ಮತ್ತೆಲ್ಲೋ ಚಿಗುರಿತು


ಬಾಳು ಬಸವಳಿಯಿತು ಬೆಂಕಿ ಕಡಲಂತೆ ತೋರಿ ತಂಪಾಯ್ತು


ಇಂದು ನಿನ್ನೆಯಾಗಿ ನಾಳೆ ನೆನಪಿನ ರಂಗೋಲಿಯಲ್ಲಿ ಚುಕ್ಕೆಯಾಯಿತು


ಹಿಡಿದಿಡಲಾಗದ ಬೊಗಸೆ  ತುಂತುರಾಗಿ ಹರಿಯಿತು ಮುತ್ತುಗಳು ಇಬ್ಬನಿಯಂತೆ ತೇಲಿತು


ಜೀವಜಲದ ಬಿಂದುವಿನಲ್ಲಿ ಸಿಂಧುವಾಗಿ ಸೇರಲು ಕಾಲ ತಡೆದಿದೆ ಹಿಡಿಗಾತ್ರದ ಪ್ರಾಣವು ಹೋಗಲು ಪ್ರೀತಿಯನ್ನು ಬಯಸಿದೆ


ತಪ್ಪು ಎಲ್ಲರದ್ದಾಗಿದ್ದರೂ ಹೊರುವ ಹೊಣೆ ಒಬ್ಬರ ಮೇಲೆ ಕಣ್ಣೀರು ಜಾರಿದಾಗ ಬೀಳುವ ಹನಿ 

ಒಂದೇ ರೀತಿಯದ್ದು


ಬಿಚ್ಚಿ ಬಯಲಾದಾಗ ಎಲ್ಲವೂ ಕೊನೆಗೊಳ್ಳುವ ಕವಿತೆ ಅಲ್ಲಿಯವರೆಗೆ ಅರ್ಧ ಮುಚ್ಚಿಟ್ಟ ಸತ್ಯ ಇರುವ ದಿನಗಳವರೆಗೂ.


ಎನ್.ಆರ್.ರೂಪಶ್ರೀ, ಕವಯತ್ರಿ ಮತ್ತು ಅರ್ಥಶಾಸ್ತ್ರ ಉಪನ್ಯಾಸಕಿ  ಮೈಸೂರು.


((೫))

ಹಾಸ್ಯಕವನ - ಬಾಲ್ಯದ ಪೇಚಿನ ಪ್ರಸಂಗ.


ಬಾಲ್ಯದ ದಿನಗಳ ಹಳೆಯ ನೆನಪುಗಳ ಸರಣಿಯಿದು

ಹೇಳಬೇಕು ಅನಿಸಿದ ತಮಾಷೆಯ ಘಟನೆಗಳಿದು                   ||


ಏನೇ ಕೊಟ್ಟರು ಕಾಳಜಿ ಮಾಡುವ ಬುದ್ಧಿವಂತಿಕೆ ನನ್ನದು

ಕಡ್ಡಿ ಐಸ್ ನ್ನು ಮನೆಗೆ ಬಂದು ತಿನ್ನೋಣವೆಂದು

ಬಿಸಿಲಿಗೆ ಕರಗುವುದೆಂದು ಪುಸ್ತಕದ ಚೀಲದಲಿ ಇಟ್ಟಿದ್ದು

ಅದರಿಂದ ಮನೆಯಲಿ ಶಾಲೆಯಲಿ ಬಯ್ಗುಳ ತಿಂದದ್ದು            ||


ಗೆಳೆಯರ ಜೊತೆ ಮರಳ ಆಟದಲಿ ಗುಂಡಿ ತೋಡಿದ್ದು

ಪೈಪೋಟಿಯಲಿ ಮರೆತು  ನಾನೇ ತೋಡಿದ್ದರಲ್ಲಿ ಬಿದ್ದದ್ದು

ಶಾಲೆಯಲಿ ಮೇಜು ಕಾಲ್ಬೆರಳಿನ ಮೇಲೆ ಸರಿದದ್ದು

ಒಸರುತ್ತಿದ್ದ ರಕ್ತವ ಬೆರಗುಗಣ್ಣಿಂದ ನೋಡುತ್ತಿದ್ದದ್ದು               ||


ಮರದಲಿರುವ ಪಾದರಿ ಹೂವನು ನೋಡಿ ಆಸೆಪಟ್ಟಿದ್ದು

ಅದರಿಂದ ಕಿತ್ತುಕೊಡುವೆನೆಂದ ಹೆಂಗಸನು ನಂಬಿದ್ದು

ಅವಳ ಮರುಳುಮಾತಿಗೆ ಚಿನ್ನದೋಲೆಯ ಬಿಚ್ಚಿಕೊಟ್ಟಿದ್ದು

ಭಯದಿ ಅಳುತ ನಿಂತಿರಲು ಇನ್ಯಾರೋ ಮನೆ ತಲುಪಿಸಿದ್ದು        ||


ಹೊರಗೆ ಆಡುತಿದ್ದವ ಏದುಸಿರಲಿ ಒಳಗೋಡಿ ಬಂದದ್ದು

ಆಟೋದಲಿ ಢ್ರಮ್ ಬರುತಿದೆ ಎಂದು ಗಾಭರಿಯಲಿ ಉಸಿರಿದ್ದು

ಕೌತುಕದಿ ಎಲ್ಲರು ಹೊರಬಂದು ನೋಡಿ ಅಜ್ಜಿಯ ಕಂಡದ್ದು

ಮಕ್ಕಳೆದುರು ಅಡ್ಡಹೆಸರಿನ ಬಳಕೆಯ ಫಜೀತಿಯ ತಿಳಿದದ್ದು       ||


ಎತ್ತರ ಸಾಲದೆ ಕಲ್ಲನು ಏರಿ ಸೈಕಲ್ಸವಾರಿ ಕಲಿಯ ಹೊರಟಿದ್ದು

ಇಳಿಯಲು ಕಲ್ಲು ಕಾಣಿಸದೆ ಡಿಕ್ಕಿ ಹೊಡೆದು ಬಿದ್ದದ್ದು

ಗೊಂದಲದಿ ದ್ವಿಚಕ್ರ ವಾಹನ ನಿಲ್ಲಿಸಲು ವೇಗವರ್ಧಕ ಒತ್ತಿದ್ದು

ಕಣ್ಣಿಗೇಟಾಗಿ ವಾಹನ ಚಾಲನೆಗೆ ತಿಲಾಂಜಲಿ ಇಟ್ಟಿದ್ದು                ||

ಪೂರ್ಣಿಮ ಭಗವಾನ್.


((೬))

ಕಾಲ ಚಲಿಸಿದಂತಾಯ್ತು


ಪಕ್ಕದ ಮನೆಗಳ ದೀಪದ ಬೆಳಕಲಿ

ದೀಪಾವಳಿಯ ಕಂಡವನು ನಾನು

ಬಿಡುವಿಲ್ಲದೆ ಬೆಳಗುತ್ತಿದ್ದ ಹಣತೆಯ ಸಾಲು

ಅವುಗಳ ನಡುವೆ 

ಮುರುಕು ಮನೆಯಲಿ ಹರಕು ಬಟ್ಟೆಯಲಿ

ಕಳೆದವು ಎಷ್ಪೋ ಸಂವತ್ಸರಗಳು

ಅಂಗಳ ತುಂಬುವ ಪಟಾಕಿ ಸದ್ದುಗಳು

ಸುರು ಸುರು ಬತ್ತಿ ರಾಕೇಟ್, ಚಿಮ್ಮುವ ಕುಡಿಕೆ

ಅವುಗಳ ಹೊಗೆ ನಮ್ಮ ಮನೆಗೂ ತಟ್ಟಿ

ಮರೆತಿದ್ದ ದೀಪಾವಳಿಯನ್ನು ನೆನಪಿಸುತ್ತಿದ್ದವು

ಮನೆ ಮುಂದಿನ ಲೈಟುಕಂಬಕ್ಕೆ ಅಳವಡಿಸಿದ್ದ ಬಲ್ಬು

ಸರ್ಕಾರದ ಶ್ರೀಮಂತಿಕೆಯ ಸಂಕೇತ!

ಅದರ ಬೆಳಕಲ್ಲೇ ನಡೆದದ್ದು ನಮ್ಮ ಎಷ್ಟೋ ಬದುಕು

ನಮ್ಮವ್ವ ದೇವರ ಮುಂದೆ ಹೊತ್ತಿಸಿದ್ದ ದೀವಿಗೆ

ತೈಲವಿಲ್ಲದೆ ಸೊರಗಿದೆ! ದೇವರೇಕಿಷ್ಟು ಕ್ರೂರಿ?

ನಮ್ಮಪ್ಪನ ಬೆವರಿಗೆ ಬೆಲೆಯಿಲ್ಲವೆ

ನಮ್ಮ ಬೆವರ ಸಂಸ್ಕೃತಿಯಲ್ಲಿ?

ಏನೇನೋ ಪ್ರಶ್ನೆಗಳು ಕಾಡಿದ್ದವು.....

ಕಳೆದುಹೋದ ನೆನಪಿನ ಪುಟ ತೆರೆದಾಗ

ಅಷ್ಟರಲ್ಲಿ ನನ್ನ ಮಕ್ಕಳು ಹೊಸ ಉಡುಗೆ ತೊಟ್ಟು

ಪಟಾಕಿ,ಬಿಲ್ಲು,ಸುರು ಸುರು ಬತ್ತಿ ರಾಕೇಟ್ ಬಿಡುತ್ತಿದ್ದಾರೆ

ಕಾಂಪೌಡ್ ಮೇಲೆ ಮಡದಿ ಇಟ್ಟಿರುವ ಸಾಲು ದೀಪಗಳು

ದೀಪಾವಳಿಯ ಸಂಭ್ರಮ

ನಾನೇ ತಂದುಕೊಟ್ಟದ್ದು

ಎಷ್ಟು ಬದಲಾದ ಬದುಕು

ಕಣ್ಣ ಮುಂದೆಯೆ ಕಾಲ ಚಲಿಸಿದಂತಾಯ್ತು.


     ಕಿರಣ್ ಸಿಡ್ಲೇಹಳ್ಳಿ

((೭))

ಹೆಮ್ಮೆಯ ಕುವರ


ಕನ್ನಡ ನಾಡಿನ ಹೆಮ್ಮೆಯ ಕುವರ

ಕನ್ನಡದಾಸ್ತಿ ನೀನಾದೆಯೋ ಶಿವರಾಮ


ಶ್ರೀ ಕೃಷ್ಣನಿಂದ ಹೆಸರಾದ ಉಡುಪಿಯು

ನಿನ್ನಿಂದ ಗಳಿಸಿತು ಮತಷ್ಟು ಕೀರ್ತಿಯನು

ಕೋಟಾದಲ್ಲಿ ಆಯಿತು ನಾನ್ನಾ ಜನನ

ಕನ್ನಡಾಂಬೆಗೆ ಹರುಷದಿ ಆಗ ತುಂಬಿತು ಮೈಮನ


ಆಂಗ್ಲ ಮಾಧ್ಯಮದಲಿ ನಿನ್ನಾ ಕಲಿಕೆ

ಅದೇಗೊ ಮೂಡಿತು ಕನ್ನಡದೊಲುಮೆ

ಪ್ರತಿದಿನ ಸಾಗಿತು ಕನ್ನಡ ಜ್ಞಾನದ ಗಳಿಕೆ

ಸದಾ ಬೆಳಿಯಿತು ಕನ್ನಡದೇಳಿಗೆಯಾ ದುಡಿಮೆ


ಜ್ಞಾನಪೀಠ ಪುರಸ್ಕೃತ ನೀನು

ಕಡಲ ತೀರದ ಭಾರ್ಗವ ನೀನು

ನಡೆದಾಡುವ ವಿಶ್ವಕೋಶ ನೀನು

ನಿನ್ನೀ ಜ್ಞಾನಕೆ ಶರಣೆಂದೆ ನಾನು


ಸಾರುತಿಹವು ಕಾದಂಬರಿಗಳು

ಪರಿಸರ ಪ್ರೇಮಿ ನಿನೆಂದು

ಪುತ್ತೂರಿನಲ್ಲಿ ನಾನಾ ಸಂಸ್ಥೆಗಳು

ನೇಮಕವಾಯಿತು ಅದು ಬಾಲವನವೆಂದು


ದೇಶ ವಿದೇಶಗಳ ಸುತ್ತಿ ಸುತ್ತಿ

ಅರಿತುಕೊಂಡೆ ಜ್ಞಾನವನು

ಅಕ್ಷರ ಜ್ಞಾನವ ಎಲ್ಲಡೆ ಹರಡಿ

ತೋರಿದೆ ಜನರಿಗೆ ಜ್ಞಾನದ ದಾರಿಯನು...(ಕನ್ನಡ... ಶಿವರಾಮ)


ರಚನೆ: ಸುಮಂಗಲಾ.ವಿ.ಕೆ

ಊರು:ಬೆಳಗಲಿ

ತಾ: ಹುಬ್ಬಳ್ಳಿ

ಜಿ: ಧಾರವಾಡ

((೮))

ಶೀರ್ಷಿಕೆ.. ನಿವೇದನೆ

.....................................

ದೇವ ಅಧಿದೇವತೆ ಆದಿಶಕ್ತಿ ಯೇ

ಮನೋ ಶರಧಿಯ ಅಂತರಾಳದ

ಮುತ್ತುಗಳ ಕಾಂತಿ ಪ್ರ ಕಾಂತಿಯ

ಬೆಳಗಿಸು ಲೋಕಕ್ಕೆ ಸರ್ವಮಂಗಳೆ


ಮಹಿಷಮರ್ದಿನಿ ಮಹೇಶ್ವರಿ

ಮಧುಸೂದನಿ ಮದ್ವೆರಿ

ಶುಂಭ ನಿಶುಂಭಧ್ವಂಸಿನಿ ಶಾಂಭವಿ

ಚಂಡ ಮುಂಡರ ಸಂಹಾರಿಣಿ


ಕೈಲಾಸವಾಸ ನ ಹೃದಯ ನಿವಾಸಿನಿ

ಚತುರ್ಮುಖನ ಹೃದಯ ರಾಣಿ

ಅಂಬುಜ ನಾಭನ ಹೃದಯವಾಸಿ ನೀ

ಶಕ್ತಿ ತ್ರಯ ಅಂಕಿತ ತ್ರಯಂಬಕ ನ ರಾಣಿ/


ಭೂರಿ ಭುವನ ಪೋಷಿತೆ

ಭಕ್ತಜನ ಹೃದಯ ವಿರಾಜಿತೆ

ಶಕ್ತಿ-ಯುಕ್ತಿ ಮುಕ್ತಿ ಆಧಾರಭೂತೆ

ಶಿವಶಕ್ತಿ ಪರಶಿವ ಶಕ್ತಿ ಮಾತೆ


ಶಿರವೇ ರುವ ಹರನ ಶಿರವೇ ರುವ

ಪುನೀತ ಗಂಗಾ ತೆರೆದೊಲು

ಹರನ ಅರನಾರಿ ನಿನ್ನೊಲು

ನನ್ನ ಭಾವಗಂಗೆ ಹರಿಯಲಿ


ನವರಾತ್ರಿ ಅಧಿದೇವತೆ

ನವ ಭಾವಸಂಗಮ ಅಂಕಿತೆ

ಭಾವ ಭಾವಗಳ ಜೀವಾಂಕಿತೆ

ಮಂಗಳಮಯ ಪುನೀತ ಮಯಾಂಕಿತೆ/


ವಿ.ರಾಧಾ ಗುರುರಾಜ್

ಚಾಮರಾಜನಗರ


((೯))

ಶೀರ್ಷಿಕೆ:- ತಾಯಿ ಬರುವಳು


ತಾಯಿ ಬರುವಳು ಶ್ರೀಮಾತೆ ಬರುವಳು

ನಾಡ ಜನರ ನೋವ ಮರೆಸಿ ಹರಸುವುಳು

ಹೊತ್ತು ಹೊಂಡುವ ಮೊದಲು ಶುದ್ಧ ಮನಸಲಿ

ಹೂವು ಕಾಯಿ ಬಿಲ್ವ ಪತ್ರಿಯ ಜೊತೆಯಲಿ|೧|


ರುದ್ರ ನರ್ತನ ತೋರಿ ನಿಂತಳು ಕೆಂಡ ಕಾರುತಲಿ

ದುರ್ಗಾ ಮಾತೆಯು ದುಷ್ಟ ಜನರ ಚಂಡಾಡುತಲಿ

ಹರನು ಬಂದನು ಶಾಂತಳಾಗೆಂದು ಅರುವಿದನು

ಕ್ಷಮಿಸೆನೆನ್ನುತ ಮೆಟ್ಟಿ ನಿಂತಳು ಶಿವನ ಎದೆಯನು|೨|


ಮೂರು ಲೋಕ ನನ್ನದೆಂದ ಕೆಟ್ಟ ಹುಳವ ಕೊಂದು

ದೇವ ಗಣರ ಅಸುರ ಭಯವ ಸುಟ್ಟು ನಕ್ಕಳು ಇಂದು

ಶರಣು ಬಂದ ಜನವ ತಾಯಿ ಬಿಡದೆ ಕಾಯ್ವಳು 

ಭಕ್ತಿ ಮಾರ್ಗವ ಪಿಡಿದ ಮನಕೆ ಸುಖವ ಕೊಡುವಳು|೩|


ಹಸಿದ ಶಿವಗೆ ಅನ್ನ ನೀಡಿದ ಅನ್ನಪೂರ್ಣೇಶ್ವರಿ

ಕಾಳಿದಾಸಗೆ ಒಲಿದು ನೀಡಿದೆ ಜ್ಞಾನದಾ ಸಿರಿ

ಹರನ ಜಡೆಯಿಂದ ಧರೆಗೆ  ಇಳಿದ ಗಂಗೆ

ನರನ ಪಾಪವ ತೊಳೆದು ಹೋದೆ ಶಿವನ ಕಡೆಗೆ|೪|


ಕಮಲದೂವ ತಂದು ನಿಂತೆವು ತೋರು ನಿನ್ನ ಪಾದ

ಗಂಧಲೇಪಿತ ದ್ರವ್ಯ ದೂಪವ ಬೆಳಗಿ ಹಿಡಿವೆ ಪಾದ

ಪರಿಶುದ್ಧ ಮನದಿ ಪಚ್ಚ ಕರ್ಪೂರಧಾರತಿ ನಿನಗೆ

ಕೊನೆಯ ವರೆಗೂ ಅಭಯ ಹಸ್ತ ನೀಡು ನಮಗೆ|೫|



......✍️ನಿchi

ಚಿನ್ನಯ್ಯ ಹೀರೆಮಠ ಹುಬ್ಬಳ್ಳಿ


((೧೦)

ಸಾಹಿತ್ಯಲೋಕದ ಶ್ರೀಮಂತ


ಉಡುಪಿಯ ಕೋಟ ಎಂಬಲ್ಲಿ ಹುಟ್ಟಿದಂತ ಧೀಮಂತ

ಕನ್ನಡತಾಯಿ ಮಡಿಲಾಗ ಇವರೂ ಒಬ್ಬ ಸಾಮಂತ

ಕಡಲ ತೀರದ ಭಾರ್ಗವ ಸಾಹಿತ್ಯ ಲೋಕದ ಶ್ರೀಮಂತ

ನಡೆದಾಡೋ ವಿಶ್ವಕೋಶ ಅವರೇ ನಮ್ಮ ಕಾರಂತ..!


ಬೆಟ್ಟದ ಜೀವ, ಮರಳಿ ಮಣ್ಣಿಗೆ ಮೂಕಜ್ಜಿಯ ಕನಸು

ಓದುವಾಗ ಕಳದೊಯ್ತಲ್ಲ ಓದುಗನ ಮೈ ಮನಸು

ಕನ್ನಡ ಸಾಹಿತ್ಯ ಓದುವಾಗ ಮನಸಿಗೇನೋ ಸೊಗಸು

 ಮನಸಿನಾಗೆ ಉಳಿದಂಗಾಯ್ತು ಪಾತ್ರಗಳ ಮುನಿಸು


ಪರಿಸರ ಪ್ರೇಮಿ ಕಾರಂತರ ಸಾಹಿತ್ಯವೆಲ್ಲ ನವನೀತ

ಓದಿದ ಭಾವ ತಲೆದೂಗಿ ಆಗತೈತಿ ಪುನೀತ

ಭಂಡಾರ ಬೆಡಗಲಿ ಬರದಾರ ಕನ್ನಡದ ಸಾಹಿತ್ಯ

ಮನಸಿನ್ಯಾಗ ಮಾಸದಂಗ ಕಾರಂತರು ಅಮರ್ತ್ಯ


ಕಾರಂತರ ಸಾಹಿತ್ಯ ಅಪರಿಮಿತ ಅಗಣಿತ ಪಾಂಡಿತ್ಯ

ಹುಟ್ಟತೈತಿ ಓದುಗನಿಗೆ ತನ್ನಿಂತಾನೇ ಲಾಲಿತ್ಯ

ಬತ್ತದ ಒಲುಮೆ ಅಮೃತ ಚಿಲುಮೆ ಕಾರಂತರ ಸಾಹಿತ್ಯ

ಮತ್ತೊಮ್ಮೆ ಹುಟ್ಟಿ ಬರಲಿ ಕನ್ನಡ ನಾಡಿನ ಆದಿತ್ಯ


✍️-ಲಕುಮಿಕಂದ ಮುಕುಂದ


ನಮ್ಮ "ಬತ್ತದ ತೊರೆ ಸ್ನೇಹ ಬಳಗ"ದ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ "ಕೋಟ ಶಿವರಾಮ ಕಾರಂತರ ಜನ್ಮದಿನ"ದ ಸವಿನೆನಪಿಗಾಗಿ..."ಸಾಹಿತ್ಯ ಸ್ಪರ್ಧೆಗಳ ಸಪ್ತಾಹ "ಪ್ರಾರಂಭವಾಗಿದೆ

 

ಬತ್ತದ ತೊರೆ ಸ್ನೇಹ ಬಳಗ - ವಾಟ್ಸ್ ಆಪ್ ಗ್ರೂಪ್ ನ ಲೋಗೋ.

ನಮ್ಮ "ಬತ್ತದ ತೊರೆ ಸ್ನೇಹ ಬಳಗ"ದ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ "ಕೋಟ ಶಿವರಾಮ ಕಾರಂತರ ಜನ್ಮದಿನ"ದ ಸವಿನೆನಪಿಗಾಗಿ..."ಸಾಹಿತ್ಯ ಸ್ಪರ್ಧೆಗಳ ಸಪ್ತಾಹ "ಪ್ರಾರಂಭವಾಗಿದೆ.


(°)) ದಿನಾಂಕ: ೦೪/೧೦/೨೦೨೧ ರಿಂದ ೦೯/೧೦/೨೦೨೧, ಸೋಮವಾರದಿಂದ ಶುಕ್ರವಾರದವರೆಗೆ...


(°)) ಕವನ ರಚನೆ ಹಾಗೂ ಕವನ ವಾಚನ ವೀಡಿಯೋ, ಕಾದಂಬರಿ ವಿಮರ್ಶಾ ಲೇಖ‌ನ, ಲಲಿತ ಪ್ರಬಂಧ, ಪ್ರವಾಸ ಕಥನ, ಮಕ್ಕಳ ನಾಟಕ ರಚನೆ, ಹಾಗೂ ಚಿತ್ರಕಲಾ ಸ್ಪರ್ಧೆ..... 


🔴 ಸರ್ವ ಕವಿಮನಗಳಿಗೂ,ಸಾಹಿತ್ಯ ಪ್ರಿಯರಿಗೂ, ಹಾಗೂ ವಿದ್ಯಾರ್ಥಿಗಳಿಗೂ ಸುಸ್ವಾಗತ.


(°)) ಪ್ರತಿದಿನ ಬೆಳಿಗ್ಗೆ ೦೬ ರಿಂದ ರಾತ್ರಿ ೧೦ ರ ವರೆಗೆ ಬರೆಯಲು ಅವಕಾಶವಿದೆ.


(°)) ನಿಯಮದ ಅನುಸಾರ ಸ್ಪರ್ಧೆಯಲ್ಲಿ ಭಾಗವಹಿಸಿರಿ. ನಿಮ್ಮ ಹೆಸರು ಊರು ವೃತ್ತಿ , ವಿದ್ಯಾರ್ಥಿಗಳು ತಮ್ಮ ತರಗತಿ, ಶಾಲೆ ಹೆಸರು, ಫೋನ್ ನಂಬರ್ ಎಲ್ಲವನ್ನೂ ಕೊನೆಯಲ್ಲಿ ಅಗತ್ಯವಾಗಿ ನಮೂದಿಸಿರಿ.

🔵 ಭಾಗವಹಿಸಿದ ಸರ್ವರಿಗೂ "ಇ-ಪ್ರಮಾಣಪತ್ರವನ್ನು" ನೀಡಿ ಪ್ರೋತ್ಸಾಹಿಸಲಾಗುವುದು. 

ಮೊದಲ ಮೂರು ವಿಜೇತರಿಗೆ ಪುಸ್ತಕ ಬಹುಮಾನದ ಜೊತೆಗೆ ಪ್ರಮಾಣಪತ್ರವನ್ನು ಪೋಸ್ಟ್ ಮೂಲಕ ತಲುಪಿಸಲಾಗುವುದು.

ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರಿ.


ಶುಭಹಾರೈಕೆಗಳು💐

ಬತ್ತದ ತೊರೆ ಸ್ನೇಹ ಬಳಗ,

ನಿರ್ವಾಹಕರು ಹಾಗೂ ನಿರ್ಣಾಯಕರು

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳ ಸಪ್ತಾಹ ಕಾರ್ಯಕ್ರಮ


ಜನಮಿಡಿತ ದಿನಪತ್ರಿಕೆಯಲ್ಲಿ ಪತ್ರಿಕಾ ವರದಿ ಪ್ರಕಟವಾಗಿದೆ.


ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳ ಸಪ್ತಾಹ ಕಾರ್ಯಕ್ರಮ

"ಬತ್ತದ ತೊರೆ ಸ್ನೇಹ ಬಳಗ" ಕಾರಂತಜ್ಜನ ನೆರಳಿನಡಿಯಲ್ಲಿ... ಎಂಬ ಅಡಿಬರಹದೊಂದಿಗೆ ಹುಟ್ಟಿಕೊಂಡ ಹೊಸ ಸಾಹಿತ್ಯ ಬಳಗವು ಅಕ್ಟೋಬರ್ ಮೊದಲ ವಾರದಲ್ಲಿ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳನ್ನು ನಡೆಸಲು ಮುಂದಾಗಿದೆ.
(೧) ದಿನಾಂಕ : ೦೪/೧೦/೨೦೨೧ ಸೋಮವಾರ ಕವನ ರಚನೆ ಹಾಗೂ ಕವನ ವಾಚನ ಸ್ಪರ್ಧೆ
(ವಿ.ಸೂ : ವಿಷಯ ನಿಮ್ಮ ಆಯ್ಕೆ. ಸಾಲುಗಳ ಮಿತಿ : ೨೦-೨೪ ಸಾಲುಗಳು. ಮೊಬೈಲ್ ಅಡ್ಡ ಹಿಡಿದು ವೀಡಿಯೋ ಮಾಡಿರಿ. ಸುಮಾರು ಮೂರು ನಿಮಿಷಗಳ ಕಾಲ)
(೨) ದಿನಾಂಕ : ೦೫/೧೦/೨೦೨೧ ಮಂಗಳವಾರ
"ನಾ ಓದಿದ ಕಾರಂತರ ಕಾದಂಬರಿ.. ವಿಮರ್ಶಾ ಲೇಖನ ಸ್ಪರ್ಧೆ"
(ವಿ.ಸೂ : ಪದಗಳ ಮಿತಿ ೧೦೦೦ ಪದಗಳು ಸುಮಾರು ಎರಡು ಪುಟಗಳಷ್ಟು)
(೩) ದಿನಾಂಕ : ೦೬/೧೦/೨೦೨೧ ಬುಧವಾರ
"ಲಲಿತ ಪ್ರಬಂಧಾ ಸ್ಪರ್ಧೆ"
(ವಿ.ಸೂ : ವಿಷಯ ನಿಮ್ಮದೇ ಇರಲಿ. ಪದಗಳ ಮಿತಿ ೧೦೦೦- ೧೫೦೦  (ಸುಮಾರು ಎರಡರಿಂದ ಮೂರು ಪುಟಗಳಷ್ಟು)
(೪) ದಿನಾಂಕ : ೦೭/೧೦/೨೦೨೧ ಗುರುವಾರ
ನೀವು ಭೇಟಿ ಮಾಡಿದ ಕುತೂಹಲಭರಿತ ಸ್ಥಳದ ಕುರಿತಾದ "ಪ್ರವಾಸ ಕಥನ"
(ವಿ.ಸೂ : ಪದಗಳ ಮಿತಿ ೧೦೦೦, ಸುಮಾರು ಎರಡು ಪುಟಗಳಷ್ಟು)
(೫) ದಿನಾಂಕ : ೦೮/೧೦/೨೦೨೧ ಶುಕ್ರವಾರ
"ಮಕ್ಕಳ ನಾಟಕ ರಚನೆ"
(ವಿ.ಸೂ : ವಿಷಯ ನಿಮ್ಮದೇ ಇರಲಿ. ಸುಮಾರು ಎರಡರಿಂದ ಮೂರು ಪುಟಗಳು, ಪಾತ್ರಗಳ ಸಂಖ್ಯೆ ೫-೭)
(೬) ದಿನಾಂಕ : ೦೯/೧೦/೨೦೨೧ ಶನಿವಾರ
ಚಟುವಟಿಕೆ ವಿಭಾಗದಲ್ಲಿ ಕಾರಂತರ ಭಾವಚಿತ್ರ ಅಥವಾ ಅವರ ಕಾದಂಬರಿಯ ಮುಖಪುಟದ ಚಿತ್ರವನ್ನು ಬಿಡಿಸುವುದು.

ನಿಯಮಗಳು :
ಹಿರಿಯರು , ಕಿರಿಯರು, ವಿದ್ಯಾರ್ಥಿಗಳು ಕೂಡ ಭಾಗವಹಿಸಬಹುದಾಗಿದೆ.
ಇಮೇಜ್ ಗಳನ್ನು ಸ್ವೀಕರಿಸುವುದಿಲ್ಲ.
ಬರಹಗಳಿಗೆ ಸೂಕ್ತ ಶೀರ್ಷಿಕೆ ನೀಡಬೇಕಾಗಿ ಕೋರಿಕೆ.
ನಿಮ್ಮ ಹೆಸರು, ಊರು ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಿರಬೇಕು.
ಭಾಗವಹಿಸಿದ ಪ್ರತಿಯೊಬ್ಬರಿಗೂ ಇ-ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು. ಹಾಗೂ ಮೊದಲ‌ ಮೂವರು ವಿಜೇತರಿಗೆ ಪುಸ್ತಕ ಬಹುಮಾನದ ಜೊತೆಗೆ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು.


*******
ಕಾರಂತರ ಜನ್ಮದಿನದ ಅಂಗವಾಗಿ ಸ್ಪರ್ಧೆಗಾಗಿ ಎಂದು ನಮೂದಿಸಿರಿ.
ನಿಮ್ಮ ಬರಹಗಳನ್ನು ಕಳುಹಿಸಬೇಕಾದ ಇ-ಮೇಲ್  ಐಡಿ :  battadatore@gmail.com


ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಿಕೆ.

ನಿರ್ವಾಹಕರು ಮತ್ತು ತೀರ್ಪುಗಾರರು
ಬತ್ತದ ತೊರೆ ಸ್ನೇಹ ಬಳಗ, ಬೆಂಗಳೂರು

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...