Tuesday, December 7, 2021

ನನ್ನ ಮೆಚ್ಚಿನ ಭಾವಗೀತೆ

ನನ್ನ ಮೆಚ್ಚಿನ ಭಾವಗೀತೆ.. ಇದರ ಭಾವಾರ್ಥ, ನನಗೆ ಏಕೆ ಇಷ್ಟ ಎಂಬುದನ್ನು ಲೇಖನ /ಕತೆಯ ಮೂಲಕ ಹೇಳ ಬಯಸಿದ ಕವಿಮನಸ್ಸುಗಳು....

ಬತ್ತದ ತೊರೆ ಸ್ನೇಹ ಬಳಗದಿಂದ, ಬೆಂಗಳೂರು

ಕಾರಂತಜ್ಜನ ನೆರಳಿನಡಿಯಲ್ಲಿ....





Beautiful[30/11, 6:23 PM] Tulasi Naveen: *ಸ್ಪರ್ಧೆಗಾಗಿ: ಲೇಖನ*


ವಿಷಯ : ಇಷ್ಟವಾದ ಭಾವಗೀತೆಯ ಸಾಲಿನಿಂದ ಸುಂದರವಾದ ಕವಿತೆ ಅಥವಾ ಲೇಖನ :


*ಶೀರ್ಷಿಕೆ : ಮನದ ಗರ್ಭದ ಪರಾಗ*

========================

*ಬಾ ಭೃಂಗವೆ ಬಾ ವಿರಾಗಿಯಂದದಿ

ಪರಾಗ ಎಂಬ ಹೆಸರಿನ ಈ ಗೀತೆ ಬೇಂದ್ರೆಯವರ ಪ್ರಸಿದ್ಧ ಭಾವಗೀತೆಗಳಲ್ಲಿ ಒಂದು*.


ಹೇಳಬೇಕಾದ ಒಂದು ಪುಟ್ಟ ಸಂಗತಿಯನ್ನು ಚಿಕ್ಕದಾಗಿ ಚೊಕ್ಕದಾಗಿ ಸುಂದರವಾಗಿ ಜೋಡಿಸಿ ಒಂದು ಹಾಡಾಗಿಸಿ ಬರೆದಿದ್ದಾರೆ ವರಕವಿ ದ. ರಾ. ಬೇಂದ್ರೆ.  


ಬಾ ಭೃಂಗವೆ ಬಾ , ವಿರಾಗಿಯಂದದಿ ಭ್ರಮಿಸುವೆ ನೀನೇಕೆ? ಕಂಪಿನ ಕರೆಯಿರೆ ಸರಾಗವಾಗಿರೆ ಬೇರೆಯ ಕರೆ ಬೇಕೇ? 


ಇಲ್ಲಿ  ಹೂವು ದುಂಬಿಯನ್ನು ಕರೆಯುತ್ತಿದೆ.ನೀನೇಕೆ ವಿರಾಗಿಯ ಹಾಗೆ ಸುತ್ತೆಲ್ಲಾ ಓಡಾಡುತ್ತಿರುವೆ?   ನನ್ನ ಕರೆ ನಿನಗೆ ಕೇಳಿಸದೆ?  ನನ್ನದು ಕಂಪಿನ ಕರೆ ನಾನು ಅರಳಿದ ಹೂವು ನಿನ್ನನ್ನು ಕರೆಯಲೆಂಬಂತೆ ನನ್ನ ಕಂಪನ್ನೆಲ್ಲಾ ಸುತ್ತಲು ಹರಡಿರುವೆ. ನಿನ್ನನ್ನು ಸ್ವಾಗತಿಸುತ್ತಿರುವೆ. ಆದರೆ ನಿನೇಕೋ ಉದಾಸಿಯಂತೆ ರಾಗಕ್ಕೆ ವಿಮುಖನಾದ ವಿರಾಗಿಯಂತೆ ಸುತ್ತೆಲ್ಲೋ ಓಡಾಡುತ್ತಿರುವೆ. ಬಾ... ಬಳಿಗೆ,  ಬಾ.... ನನ್ನ ಬಳಿಗೆ ಬಾ.... ಎಂದು ಕರೆದಿದೆ. ಮತ್ತೆ ಇಲ್ಲಿ ಹೂ ಹೇಳುತ್ತಿದೆ  ಬರಲಿಹ ಕಾಯಿಯ ಪಾಡಿನ ರುಚಿಯು ಇದರೊಳು ಮಡಗಿಹುದು. ನಾಳಿನ ಹಣ್ಣಿನ ರಸವು ಇಲ್ಲಿಯ ಮಕರಂದದೊಳಡಗಿಹುದು ನಾನು ಮಕರಂದವನ್ನು ಸಿದ್ಧಪಡಿಸಿ, ಪುಷ್ಪಪಾತ್ರೆಯೊಳಿಟ್ಟು  ಕಾಯುತ್ತಿರುವೆ. ಇದು ಮುಂದೆ ಬರುವ ಹಣ್ಣಿನ ರಸವನ್ನು ತನ್ನಲ್ಲಿ ಆಡಗಿಸಿಕೊಂಡಿದೆ.  ದುಂಬಿ ತನ್ನನ್ನು ಗಮನಿಸದೆ, ದೂರ ಚಲಿಸುತ್ತಿರಲು, ಹೂವು ಆ ದುಂಬಿಗೆ ಆಹ್ವಾನವೀಯುತ್ತಿದೆ. ನಾನು ಸೂಸುತ್ತಿರುವ ಕಂಪು ಅಂದರೆ ಪರಿಮಳವು ಸರಾಗವಾಗಿದೆ ಎಂದು ಹೂವು ದುಂಬಿಗೆ ಹೇಳುತ್ತಿದೆ.


ಇಲ್ಲಿ ಸರಾಗಕ್ಕೆ ಎರಡು ಅರ್ಥಗಳು. ಒಂದು ಅರ್ಥವೆಂದರೆ ತನ್ನ ಸುವಾಸನೆಯಲ್ಲಿ ಅನುರಾಗವಿದೆ; ಎರಡನೆಯ ಅರ್ಥವೆಂದರೆ ದುಂಬಿಯ ಆತಿಥ್ಯಕ್ಕೆ ಹೂವು ಅನುಕೂಲವಾಗಿದೆ. ಹೀಗೆ ಹೂವು ಸರಾಗವಾಗಿರಲು, ದುಂಬಿ ವಿರಾಗಿಯಂತೆ ಭ್ರಮಿಸಬೇಕೆ? ಭ್ರಮಿಸು ಪದಕ್ಕೂ ಎರಡು ಅರ್ಥಗಳಿವೆ. ಒಂದು ಸುತ್ತಾಡು. ಎರಡನೆಯ ಅರ್ಥ ಹುಚ್ಚನಾಗು. ಆದುದರಿಂದ ನನ್ನ ಬಳಿಗೆ ಬರದೆ ಹುಚ್ಚನಂತೆ ಎಲ್ಲೆಲ್ಲೊ ಹೋಗುತ್ತಿರುವುದೇಕೆ? ನನ್ನಲ್ಲಿ ಅನುರಾಗವಿದೆ ನನ್ನನ್ನು ಸವಿಯಬಹುದು ಎಂದು ಹೂವು ದುಂಬಿಗೆ ಹೇಳುತ್ತಿದೆ. ನೀನಿಲ್ಲದೆ ನಾನು ಕಾಯಾಗೆನು, ಹಣ್ಣಾಗೆನು. ನಾನು ಕಾಯಾಗಿ, ಹಣ್ಣಾಗಿ ಸಂಭ್ರಮಿಸಲು ಸಾರ್ಥಕಗೊಳ್ಳಲು ನಿನ್ನ ಸ್ಪರ್ಶದ, ಮಿಲನದ ಸುಯೋಗ ನನಗೆ ಬೇಕಾಗಿದೆ. ಆದ್ದರಿಂದ ವಿರಾಗಿಯಂತೆ ತಿರುಗಾಡಬೇಡ, ಬಾ....ಬಾ....ನನ್ನ ಬಳಿಗೆ ಬಾ.... ನನ್ನಲ್ಲಿ ಮಿಲನವಾಗು, ನನಗೆ ಕಾಯಿಯಾಗಿ ಹಣ್ಣಾಗಲು ಅವಕಾಶ ಮಾಡಿಕೊಡು. ಫಲದ ಸೃಷ್ಟಿಯೇ ಹೂವು ದುಂಬಿಗೆ ನೀಡುತ್ತಿರುವ ಆಹ್ವಾನದ ಉದ್ದೇಶವಾಗಿದೆ. ಆದುದರಿಂದ ಮುಂದೆ ಬರುವ ಕಾಯಿಯ ರುಚಿ ಈ ಕಂಪಿನಲ್ಲಿ ಗುಪ್ತವಾಗಿದೆ. ನಾಳೆ ಬರುವ ಹಣ್ಣಿನ ರುಚಿ ಈ ಮಕರಂದದಲ್ಲಿ ಅಡಗಿದೆ ಎಂದು ಹೂವು ಹೇಳುವಾಗ ಈ ದುಂಬಿಯ ಕಾರ್ಯವು ದೂತನ ಕಾರ್ಯವೆನ್ನುವದರ ಅರಿವು ಆಗುತ್ತದೆ.


ಮೂರನೆ ನುಡಿಯಲ್ಲಿ ಕವನದ ನಿಜವಾದ ಒಳಗುಟ್ಟು ರಟ್ಟಾಗುವುದು. ಇಲ್ಲಿ ದುಂಬಿಯನ್ನು ಕರೆಯುತ್ತಿರುವುದು ಹೂದೋಟದ ಹೂವಲ್ಲ. ಕವಿಯ ಎದೆಯಲ್ಲಿ ಬಿರಿದು ನಿಂತ ಭಾವಕುಸುಮ.  ಈ ಭಾವಕ್ಕೆ ಮಿಡಿಯಾಗುವ ಕಾಯಾಗುವ ಹಣ್ಣಾಗುವ ಫಲರೂಪವನ್ನು  ಪಡೆಯಲು ದುಂಬಿಯ ಮಿಲನದ ಅಗತ್ಯವಿದೆ. ಇಲ್ಲಿ ದುಂಬಿಯೆಂದರೆ ಕವಿ. ತುಂಬಿ ತುಳುಕುತ್ತಿರುವ ಭಾವವನ್ನು ಕವನವಾಗಿಯೋ ಕಾವ್ಯವಾಗಿಯೋ ಹೊರಹಾಕಲು ಕವಿ ನೆಪ ಮಾತ್ರಕ್ಕಾದರೂ ಬೇಕೇ ಬೇಕು. ಮನಸ್ಸು ಕಾವ್ಯರಚನೆಗೆ ವಿಮುಖವಾಗಿ ಎಲ್ಲೆಲ್ಲೊ ಚಲಿಸುತ್ತಿರುವಾಗ ಒಳಗಿರುವ ಕಾವ್ಯವಸ್ತು ಮನಸ್ಸನ್ನು ಕಾವ್ಯಸೃಷ್ಟಿಗೆ ಕರೆಯುತ್ತಿದೆ. ಕವಿಯ ಮನಸ್ಸಿನಲ್ಲಿರುವ ಕಾವ್ಯ ಹೊರಬರಲು ಬೇಕಾದದ್ದು ಕೇವಲ  ಮುಖಸ್ಪರ್ಶ ಮಾತ್ರ.


ಮಕರಂದ ಸಹಿತ ಅರಳಿನಿಂತ ಹೂವಿಗೆ ದುಂಬಿಯ ಮೂಲಕ ಪರಾಗ ಸ್ಪರ್ಶ ನಡೆಯಲೇ ಬೇಕು. ಹಾಗೆಯೇ ಕವಿಯ ಒಳಗೆ ಧುಮ್ಮಿಕ್ಕಿ ಘಮ ಘಮಿಸುತ್ತಿರುವ ಭಾವಧಾರೆ ಕಾವ್ಯಧಾರೆಯಾಗಿ ಹೊರಬರಲು ಕವಿ ಕಾಲುವೆಯಾಗಿ ತೆರೆದುಕೊಳ್ಳಲೇ ಬೇಕು. ಕವಿ ಇಲ್ಲಿ ದುಂಬಿಯ ಕೆಲಸವನ್ನು ಮಾಡಬೇಕು. ನಿಜವಾದ  ಕಾವ್ಯವಸ್ತು ಅವರ ಮನಸ್ಸಿನಲ್ಲಿಯೇ ಯಾವಾಗಲೂ ಕುಣಿಯುತ್ತಿದ್ದು, ಅದನ್ನು ಕಾವ್ಯರೂಪದಲ್ಲಿ ಹೊರಗೆ ತರುವುದಷ್ಟೆ ಕವಿಯ ಕಾರ್ಯವೆನ್ನುವುದು ಅರ್ಥವಾಗುತ್ತದೆ.


✍️ ಪುಷ್ಪ ಪ್ರಸಾದ್ ಉಡುಪಿ

[30/11, 6:23 PM] Tulasi Naveen: ಬತ್ತದ ತೊರೆ ಸ್ನೇಹ ಬಳಗ

ಶುಕ್ರವಾರ

ವಿಷಯ:-ನಿಮಗೆ ಇಷ್ಟವಾದ ಭಾವಗೀತೆಯ ಸುಂದರವಾದ ಕಥೆ ರಚನೆ

ಭಾವಗೀತೆ:-ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು....

ಶೀರ್ಷಿಕೆ:-ಅಹಲ್ಯಾಳ ಕಥೆ.


ಅಹಲ್ಯಾ ತನ್ನ ಗಂಡನ ಜೊತೆ ಸುಖವಾಗಿ ಸಂಸಾರ ನಡೆಸುತ್ತಾ ಇದ್ದಳು.ತನ್ನ ಗಂಡ ರಮೇಶ್ ಕೆಲಸದ ನಿಮಿತ್ತ ಹೊರಗಡೆ ಹೋದಾಗ ಹೃದಯಾಘಾತವಾಗಿ ತೀರಿಕೊಂಡರು.ಆಗ ಅಹಲ್ಯಾಗೆ ತುಂಬಾ ದುಃಖವಾಯಿತು.ತನ್ನ ಮಗಳು ಅನೂಸೂಯ ಬೆಂಗಳೂರಿನಲ್ಲಿ ಪದವಿ ಕಲಿಯಲೆಂದು ಹೋಗಿದ್ದಳು.ತಂದೆಯ ದುಃಖ ವಿಷಯ ತಿಳಿದು ಓಡೋಡಿ ಬಂದಳು.ತಾಯಿಗೆ ಸಮಾಧಾನ ಪಡಿಸುತ್ತಾ ತಾನು ಸಮಾಧಾನ ಮಾಡಿಕೊಂಡು ಧೈರ್ಯದಿಂದ ಜೀವನವನ್ನು ತಾಯಿಯೊಂದಿಗೆ ಊರಿನಲ್ಲಿ ಕಳೆಯುತ್ತಿದ್ದಳು.ಪದವಿಯ ಪರೀಕ್ಷೆ ಬರೆದು ಉತ್ತಿರ್ಣವಾಗಿ ಒಂದು ಒಳ್ಳೆಯ ಆಫೀಸ್ ನಲ್ಲಿ ಕೆಲಸ ಕೂಡಾ ಸಿಕ್ಕಿತು.ಅಹಲ್ಯಾ ತನ್ನ ಮಗಳು ತಂದ ಹಣ ಸಾಲುವುದಿಲ್ಲ ಎಂದು ಪಕ್ಕದ ಮನೆಯ ಮನೆ ಕೆಲಸ ಮಾಡಿ ದುಡಿದು ಮಗಳಿಗೆ ಹೊರೆ ಆಗಬಾರದು ಮುಂದೆ ಅವಳ ಮದುವೆಗೆ ಖರ್ಚಿಗೆ ಹಣ ಬೇಕೆಂದು ಕೂಡಿಡುತ್ತಿದ್ದಳು.ಮಗಳಿಗೆ ತಾಯಿ ಕೆಲಸಕ್ಕೆ ಹೋಗಿದ್ದು ಗೊತ್ತೆ ಆಗುತ್ತಿರಲಿಲ್ಲ.ಅದೊಂದು ದಿನ ತನ್ನ ಮನೆಯ ಕೆಲಸ ಮಾಡಿಟ್ಟು ಮನೆಕೆಲಸ ಮಾಡಲು ಹೋದ ಅಹಲ್ಯಾಗೆ ಕೆಲಸ ಮಾಡುವ ಮನೆಯಲ್ಲಿ ನೆಲ ಒರೆಸುವಾಗ ಕೆಳಗೆ ನೆಲದಲ್ಲಿ ಬಿದ್ದ ಎಣ್ಣೆ ಬಿದ್ದದ್ದು ಗಮನಿಸಿದೆ ಅಹಲ್ಯಾ ಕಾಲು ಜಾರಿ ಬೀಳುತ್ತಾಳೆ.ಕಾಲು ಜಾರಿ ಸೊಂಟ ಮುರಿದು ಹೋಗುತ್ತದೆ.ಮನೆಯ ಯಜಮಾನರು ಅಹಲ್ಯಾ ಳನ್ನು ಆಸ್ಪತ್ರೆಗೆ ದಾಖಲಿಸಿದರು.ಹಾಗೆಯೆ ತನ್ನ ಮಗಳಿಗೆ ವಿಷಯ ತಿಳಿಸಿದರು.ಮಗಳು ಆತುರದಲ್ಲಿ ಕೆಲಸದಿಂದ ಆಸ್ಪತ್ರೆಗೆ ನೋಡಲು ಓಡಿದಳು.ಅನುಸೂಯ ತಾಯಿಯ ಪರಿಸ್ಥಿತಿ ನೋಡಿ ಕಣ್ಣಿರು ಹಾಕಿದಳು.ಮೊದಲೇ ತಂದೆಯ ಕಳೆದುಕೊಂಡು ದುಃಖ ದಲ್ಲಿದ್ದ ಇವಳು ತಾಯಿಯ ಪರಿಸ್ಥಿತಿ ನೋಡಿ ಕಣ್ಣಿರು ಸುರಿಸಿದಳು.ಅಳಬೇಡ ಮಗಳೆ ನಾನು ನಿನಗೆ ಸಹಾಯ ಆಗಲಿ ಎಂದು ಹೋಗಿ ಕಷ್ಟವೇ ಕೊಟ್ಟು ಬಿಟ್ಟೆ ಮಗಳೇ ನನ್ನ ಕ್ಷಮಿಸು ಎಂದಳು.ಹೋಗಲಿ ಬಿಡು ಅಮ್ಮ ನಾನು ನಿನ್ನ ನೋಡಿಕೊಳ್ಳುವೆ ಎಂದು ಮನೆಗೆ ಡಿಸ್ಟಾರ್ಜ್ ಮಾಡಿ ಮನೆಗೆ ಬಂದಳು.ಮನೆಯಲ್ಲಿ ಅಮ್ಮನ ಆರೈಕೆಯಲ್ಲಿ ತೊಡಗಿ ತಾಯಿಯ ಎಲ್ಲಾ ಚಾಕರಿಯನ್ನು ಮಾಡಿದಳು.ವೀಲ್ ಚೇಯರ್ ಮೇಲೆ ಕುಳಿತು ಅಹಲ್ಯಾ ನಾನು ತಪ್ಪು ಮಾಡಿದೆ ನಿನಗೆ ತುಂಬಾ ಕಷ್ಟವ ಕೊಟ್ಟು ಬಿಟ್ಟೆ ಮಗಳೇ‌ ಕ್ಷಮಿಸು ಮಗಳೇ ಎಂದಳು.ಅಯ್ಯೋ ಹೋಗಲಿ ಬಿಡಮ್ಮಾ ಎಂದು ನೀನು ಮೊದಲು ಸರಿಯಾಗು ಎಂದಳು.ಪಕ್ಕದ ಮನೆಯ ಯಜಮಾನರು ಅಹಲ್ಯಾ ಳನ್ನು ನೋಡಲು ಬಂದರು.ನಮ್ಮಿಂದ ತುಂಬಾ ತೊಂದರೆ ಆಯಿತು ನಿಮಗೆ ಹೇಳಿ ಹತ್ತು ಸಾವಿರ ಹಣ ಕೊಟ್ಟರು.ನನ್ನ ಮಗ ನೆಲದಲ್ಲಿ ಎಣ್ಣೆ ಚೆಲ್ಲಿ ಹಾಕಿ ಇಷ್ಟೆಲ್ಲಾ ನಿಮಗೆ ತೊಂದರೆ ಆಯಿತು.ಅವನು ಹೆದರಿ ಮನೆಯಲ್ಲಿ ಕುಳಿತು ಅಳುತ್ತಿದ್ದಾನೆ.ಅವರ ಸ್ಥಿತಿ ನನ್ನಿಂದ ಹೀಗಾಯಿತಲ್ಲ ಎಂದು ಗೋಗರೆದ.ನಾನು ನಿಮ್ಮ ಆರೋಗ್ಯ ವಿಚಾರಿಸಲು ಬಂದೆ ಅಂದರು.ಅಹಲ್ಯಾ ಅವನನ್ನು ಕಳಿಹಿಸಿ ಮನೆಗೆ ಎಂದು ಹೇಳಿ ಕಳಿಸಿದಳು ನಾನು ಮಾತಾನಾಡುವೆ ಎಂದಳು.ಯಜಮಾನರು ಮನೆಗೆ ಹೋಗಿ ತನ್ನ ಮಗ ದುಷ್ಯಾಂತನನ್ನು ಕಳುಹಿಸಿ ಕೊಟ್ಟರು.ಆಗ ಅಳುತ್ತಾ ಬಂದು ಸಾರಿ ಆಂಟಿ ನಾನು ಮಾಡಿದ್ದು ತಪ್ಪಾಯಿತು.ಕ್ಷಮಿಸಿ ಎಂದು ಕಾಲಿಗೆ ಬಿದ್ದು ಅಂಗಲಾಚಿದನು.ಆಗ ಅಹಲ್ಯಾ ನೀನು ಬೇಕಂತ ಏನೂ ಮಾಡಿಲ್ಲ ಅಲ್ವಾ ಇರಲಿ ನನ್ನ ಒಂದು ನಿರ್ಲಕ್ಷ ಇದಕ್ಕೆಲ್ಲಾ ಕಾರಣವಾಯಿತು ಎಂದಳು.ಮಗಳು ಅನುಸೂಯಾ ಅಮ್ಮನ ಕಾಲ ಮೇಲೆ ಮಲಗಿ ಅಳತೊತಡಗಿದಳು.ಹಾಗೆಯೇ ವೀಲ್ ಚೇರ್ ಹಿಡಿದು ದುಷ್ಯಂತ ಅಳತೊತಡಗಿದನು.ಅಹಲ್ಯಾ ನನ್ನ ಹಣೆಬರಹ ಆಗಿದ್ದು ಆಗಿ ಹೋಯಿತು.ಇನ್ನು ಮುಂದೆ ನನ್ನ ಆರೋಗ್ಯ ಸರಿ ಆಗುವುದು ಎಲ್ಲವೂ ಅವನ ಇಚ್ಛೆಯಂತೆ ಆಗಲಿದೆ ಎಂದಳು. ಆರುತಿಂಗಳು ಅಹಲ್ಯಾ ಸೇವೆಯನ್ನು ಅನುಸೂಯಾ ದುಷ್ಯಂತ ಇಬ್ಬರು ಮಾಡಿದರು.ಕಾಲು ಸೊಂಟ ಎರಡು ನಿಧಾನವಾಗಿ ಸರಿ ಹೋಗುತ್ತಾ ಬಂತು.ನಂತರ ಆಫೀಸಿಗೆ ಪುನಃ ಹೋಗಲು ಆರಂಭಿಸಿದಳು ಅನುಸೂಯಾ.ದುಷ್ಯಂತ ಅಹಲ್ಯಾ ಳಿಗೆ ಸ್ವಲ್ಪ ಸಹಾಯ ಮಾಡಲು ಬರುತ್ತಿದ್ದ.ನಂತರ ತನ್ನ ಕಾಲೇಜಿಗೆ ಹೋಗುತ್ತಿದ್ದ.ಮನೆಯಲ್ಲಿ ಅಹಲ್ಯಾ ಳಿಗೆ ಅಡುಗೆಯನ್ನು ಮಾಡಿ ಎಲ್ಲಾ ಟೇಬಲ್ ಮೇಲೆ ಇಟ್ಟು ಹೋಗುತ್ತಿದ್ದಳು.ಅಹಲ್ಯಾ ಹಸಿವಾದಾಗ ತಿನ್ನುತ್ತಿದ್ದಳು.ಕುಳಿತಲ್ಲೆ ಮನೆಯ ಸಣ್ಣಪುಟ್ಟ ಕೆಲಸವ ಮಾಡುತ್ತಾ ಹೀಗೆ ಜೀವನ ಸಾಗುತ್ತಿತ್ತು.ಅಹಲ್ಯಾ ಹಾಗೂ ಅನುಸೂಯಾ ಇಬ್ಬರು ಚೆನ್ನಾಗಿ ಇದ್ದರು.ಅಹಲ್ಯಾಳ ಆರೋಗ್ಯ ಸರಿಹೋಗುತ್ತಾ ಬಂತು.


ಯಶೋದ.ಗಾಣಿಗ, ಗೃಹಿಣಿ 🙏🙏🙏🙏🙏.

[30/11, 6:23 PM] Tulasi Naveen: ಸ್ಪರ್ಧೆಗಾಗಿ:


ಶೀರ್ಷಿಕೆ : ಉಸಿರು ನೀಡಿದ ಹಸಿರು



ಅಮ್ಮಾ ನಿನ್ನ ಎದೆಯಾಳದಲ್ಲಿ

ಗಾಳಕ್ಕೆ ಸಿಕ್ಕ ಮೀನು

ಮಿಡುಕಾಡುತಿರುವೆ ನಾನು....


ವಾವ್! ಎಂತಹ ಭಾವತ್ವವಿರುವ ಭಾವನೆಗಳ ಗುಚ್ಛ. ನಿಜಕ್ಕೂ ಮೈ ನವಿರೇಳಿಸುತ್ತದೆ. ಬಿ. ಆರ್. ಲಕ್ಷ್ಮಣರಾವ್ ರವರ ಸಾಹಿತ್ಯವಿರುವ ಈ ಕವಿತೆ ಎಂತವರ ಮನವನ್ನು ತುಸು ತಲ್ಲಣಿಸದೆ ಇರದು . ತಾಯಿಯ ಒಡಲೊಳಗೆ ತೊಳಲಾಡಿ ಅನುಭವಿಸುವ ಹಿತವಾದ ಸ್ಪರ್ಶಸುಖ ಈ ಪ್ರಪಂಚದಲ್ಲಿ ಮತ್ತೆಲ್ಲಿಯೂ ಸಿಗದು. ಆ ಎರಡಕ್ಷರದಲ್ಲಿ ಎಂತಹ ಆಕರ್ಷಣೆ, ಅದೆಂತಹ ಪ್ರೀತಿ, ಮಾತೃ ವಾತ್ಸಲ್ಯ!

  ಇಷ್ಟು ದಿನ ಗರ್ಭ ಸಾಗರದಲ್ಲಿ ಈಜುತ್ತಿರುವ ಮಗು ಅಲ್ಲಿಂದಾಚೆ ಬರಲು ಹಾತೊರೆಯುತ್ತದೆ. ಹಾಗೆಯೇ ಆ ಕೂಸು ಹೊರಬಂದು ಜಗವನ್ನು ಸುತ್ತಿ, ಜೀವನದಲ್ಲಿ ಸಿಹಿ - ಕಹಿಗಳನ್ನು ಅನುಭವಿಸಿ ಶಕ್ತಿಗುಂದಿ ಕೊನೆಗೆ ತನ್ನ ತಾಯಿಯ ಮಡಿಲನ್ನು ಸೇರಲು ಬಯಸುತ್ತದೆ. ಕವಿಗಳು ಬರೆದಿರುವ ಈ ವಾಸ್ತವ ಸೊಗಸು ಸಾಲುಗಳು ಹಾಲಿನ ಬಿಳುಪಿನಷ್ಟೇ ಸತ್ಯ, ಅಕ್ಷರಶಃ  ನಿಜ. ಗರ್ಭದಲ್ಲಿ ಕರುಳ ಬಳ್ಳಿಯ ಮೂಲಕ ಒಲವನ್ನು ಉಣಬಡಿಸುವ ತಾಯಿ ನಂತರ  ಇಡೀ ಜೀವಿತವನ್ನು ತನ್ನ ಕುಡಿಯ ಅಭ್ಯುದಯಕ್ಕೆ ತೆರೆದಿಡುತ್ತಾಳೆ. ಎಷ್ಟೋ ರಾತ್ರಿಗಳನ್ನು ಅಂಬರದ ಚುಕ್ಕಿಗಳನ್ನು ಎಣಿಸುವುದರಲ್ಲಿಯೇ ಕಳೆಯುತ್ತಾಳೆ. ಹಸಿವೆಯಿಂದ ಕಳೆದ ದಿನಗಳು ಅದೆಷ್ಟೋ. ಇಂದು ಎಷ್ಟೋ ಜನ ಸಾಧಿಸಿ ಮಹಾನ್ ಸಾಧಕರೆನಿಸಿಕೊಂಡವರ ಸಾಧನೆಯ ಹಿಂದೆ ಶೇಕಡ 90 ಕ್ಕಿಂತಲೂ ಹೆಚ್ಚಿನ ಪಾತ್ರ ತ್ಯಾಗ ಆ ಮಹಾತಾಯಿಯದ್ದಾಗಿದೆ. ತನ್ನನ್ನು ವೃದ್ಧಾಶ್ರಮದಲ್ಲಿ ಇರಿಸಿದರೂ ತನ್ನ ಮಗುವಿನ ಬಾಲ್ಯವನ್ನು ಕಣ್ಣರಳಿಸಿ ಮನ ತುಂಬಿಕೊಂಡು ಎರಡು ಕೈಯೆತ್ತಿ ಹರಸುವ ಅವಳ ವ್ಯಕ್ತಿತ್ವಕ್ಕೆ ತಾಯಿ ಎಂಬ ಪದವೂ ಸೋಲುತ್ತದೆ. ಈ ಪ್ರಪಂಚದಲ್ಲಿ ತಾಯಿಯ ಬಗ್ಗೆ ವಿಭಿನ್ನ ನಿಲುವುಳ್ಳ ಮಕ್ಕಳು ಇರಬಹುದು ಆದರೆ ತನ್ನ ಮಕ್ಕಳಿಗೆ ಕೆಡುಕನ್ನು ಬಯಸುವ ಅಮ್ಮ ಎಲ್ಲಿಯೂ ಸಿಗಲಾರಳು. ಅವಳದ್ದು ದೇವರ ರೂಪ. ಪರಮಾತ್ಮನನ್ನು ನಾವು ತಾಯಿಯಲ್ಲಿ ಕಾಣಬಹುದು ಎಂದೇನೋ ದೇವರು ಈ ಜಗತ್ತಿನಲ್ಲಿ ತಾಯಿ ಎನ್ನುವ ಅದ್ಭುತ ಶಕ್ತಿಯನ್ನು ಸೃಷ್ಟಿಸಿದ್ದಾನೆ. ''ಈಗ ನಾನು ಏನಾಗಿದ್ದೇನೋ ಅದಕ್ಕೆ ಕಾರಣ ನಮ್ಮಮ್ಮ. ನಾನು ಇನ್ನೇನು ಆದರೂ ಆಕೆಯ ಋಣವನ್ನು ತೀರಿಸುವುದಕ್ಕಂತು ಸಾಧ್ಯವಿಲ್ಲ'' ಎಂಬ ಮಹಾನ್ ಸಂತ ವಿವೇಕಾನಂದರ ನುಡಿಗಳು ಬಹುಶಃ ಎಲ್ಲರಿಗೂ ಅನ್ವಯವಾಗುತ್ತದೆ. ''ತಾಯಿ ಖುಷಿಯಾಗಿದ್ದರೆ ಕುಟುಂಬ ಖುಷಿಯಾಗಿರುತ್ತದೆ. ಕುಟುಂಬ ಖುಷಿಯಾಗಿದ್ದರೆ ದೇಶ ಖುಷಿಯಾಗಿರುತ್ತದೆ. ಅಂದರೆ ಇಡೀ ದೇಶದ ಖುಷಿ  ತಾಯಿಯ ಮೇಲೆ ನಿಂತಿದೆ'' ಎಂಬ ನಮ್ಮ ಹೆಮ್ಮೆಯ ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂ ರವರ ಮಾತು ತಾಯಿಯ ಘನತೆಯನ್ನು ಎತ್ತಿ ಹಿಡಿಯುತ್ತದೆ.

 ಮಕ್ಕಳೇ ಸರ್ವಸ್ವವಾಗಿರುವ ಆಕೆಗೆ ಕೊನೆಯವರೆಗೆ ಸಂತಸದ ಸವಿಯನ್ನು ಬಡಿಸುವ ಜವಾಬ್ದಾರಿ ಪ್ರತಿಯೊಂದು ಮಗುವಿನದ್ದು. ಆಗ ಮಾತ್ರ ಆ ಮಗು ಬದುಕಿನಲ್ಲಿ ಸಿರಿತನವನ್ನು ಕಾಣಲು ಸಾಧ್ಯ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿ ಎಂದು ಗುರುತಿಸಿಕೊಳ್ಳಲು ಸಾಧ್ಯ. ತನ್ನ ರಕ್ತವನ್ನು ಬಸಿದು ಒಂದು ಮಗುವಿಗೆ ಜನ್ಮ ನೀಡುವ ತಾಯಿಯ ಋಣ ತೀರಿಸಲು ಖಂಡಿತ ಸಾಧ್ಯವಿಲ್ಲ. ಮಹಾತಾಯಿಗೋಸ್ಕರ ನಮ್ಮ ಜೀವ ಮತ್ತು ಜೀವನವನ್ನು ಮುಡಿಪಾಗಿಡೋಣ. ಅವಳ ತ್ಯಾಗ ಜೀವನದತ್ತ ನಾವೂ ಸಾಗೋಣ. ನಮ್ಮನ್ನು ಪರಿಪೂರ್ಣರನ್ನಾಗಿಸುವ ನಿಟ್ಟಿನಲ್ಲಿ ಆಕೆ ತೋರಿಸಿದ ದಿಕ್ಕಿನತ್ತ ಸಾಗಿ ಬದುಕನ್ನು ಜಯಿಸೋಣ. ಉಸಿರು ನೀಡಿದ ಮಹಾ ತಾಯಿಯ ಬದುಕನ್ನು ಸದಾ ಹಸಿರಾಗಿಸಿ ಆಕೆಯ ಮನವನ್ನು ಹಸನಾಗಿಸೋಣ.


ಗಾಯತ್ರಿ ನಾರಾಯಣ ಅಡಿಗ

ಶಿಕ್ಷಕರು, ಬೈಂದೂರು ವಲಯ.

[30/11, 6:23 PM] Tulasi Naveen: "ಬತ್ತದ ತೊರೆ ಸ್ನೇಹ ಬಳಗ" ತಿಂಗಳ ಸ್ಪರ್ಧೆ ೨೬/೧೧/೨೦೨೧

ವಿಷಯ : ಇಷ್ಟವಾದ ಭಾವಗೀತೆ ಯ ಸಾಲಿನಿಂದ ಕಥೆ ಅಥವಾ ಲೇಖನ


 *ಶಿರ್ಷಿಕೆ : ಜಗದಲ್ಲಿರುವ ಎಲ್ಲವೂ ಜಗದೊಡೆಯನದೇ*

"ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು

ಕಡಲು ನಿನ್ನದೆ ಹಡಗು ನಿನ್ನದೆ ಮುಳುಗದಿರಲಿ ಬದುಕು"

      

            ಜಿ.ಎಸ್. ಶಿವರುದ್ರಪ್ಪನವರು ಬರೆದ ಈ ಭಾವಗೀತೆಯ ಈ ಸಾಲುಗಳು ನನಗೆ ತುಂಬಾ ಇಷ್ಟ ಮತ್ತು ಈ ಭಾವಗೀತೆನು ಇಷ್ಟಾ. ಮನೆಯಲ್ಲಿ ಬೆಳಗುವ ದೀಪ, ಹಾಗೂ ಬೀಸುವ ಗಾಳಿ ಎರಡೂ ಸೃಷ್ಟಿ ಮಾಡಿರುವ ಅದ್ಭುತ ಸಾಧನೆಗಳು. ಹಾಗಾಗಿ ಗಾಳಿ ಬೇಕು ಬದುಕಲು, ದೀಪ ಬೇಕು ಬೆಳಗಲು ನೀನೆ ಮಾಡಿದ ದೀಪವನ್ನು ನೀನೆ ಸೃಷ್ಟಿಸಿದ ಗಾಳಿಯಿಂದ ರಕ್ಷಿಸಬೇಕು. ಹಾಗೇ ಈ ಮನದಲ್ಲಿ ಬೆಳಕು ನೀಡಲೆಂದು ಬೆಳಗುವ ದೀಪವು, ಯಾರಾದರೂ ಬಂದು ಆ ದೀಪವನ್ನು ಕೆಟ್ಟತನದ ಗಾಳಿ ಬಂದು ಬಿಸಿ ಆ ಮನದಲ್ಲಿ ದೀಪದ ಬದಲು ಹತ್ತಿ ಉರಿಯುವ ಬೆಂಕಿ ಆಗದಿರಲಿ, ಉರಿದುರಿದು ಆರದಿರಲಿ ಅದರ ಹೊಣೆ ನೀನ್ನದು ಜಗದೊಡೆಯ ಎಂಬ ಭಾವಾರ್ಥ ಮೂಡಿ ಬಂದಿದೆ ಎಂದು ನನ್ನ ಮನದ ಬಯಕೆ. 

          ಮುಂದೆ ನೋಡಿ ಎಷ್ಟು ಸೊಗಸಾಗಿ ವರ್ಣಿಸಿದ್ದಾರೆ ನಮ್ಮ ಜೀವನವನ್ನು ನೀರಿನಲ್ಲಿ ತೇಲುವ ದೋಣಿಗೆ ಹೊಲಿಸಿದ್ದಾರೆ. ಕಡಲು ನಿನ್ನದೆ ಹಡಗು ನಿನ್ನದೆ, ಅಂದರೆ ನಮ್ಮ ಜೀವನ ಬೃಹದಾಕಾರದ ಸಮುದ್ರವಿದ್ದಂತೆ ಅದರೊಳಗೆ ನಾವುಗಳು ಹಡಗುಗಳು ಇದ್ದಂತೆ, ನೀನು ನಮ್ಮ ನಡೆಸುವ ನಾವಿಕ.ಒಂದು ದಡದಿಂದ ಮತ್ತೊಂದು ದಡಕ್ಕೆ ಅಂದರೆ ಹುಟ್ಟು ಎಂಬ ದಡದಿಂದ ಸಾವು ಎಂಬ ದಡ ಸೇರುವವರೆಗೂ ನಾವು ಎಂಬ ಪಯಣದ ಮಧ್ಯದಲ್ಲಿ ಹಡಗು ಮುಳುಗಿ ಹೋಗದಂತೆ ಕಾಪಾಡುವ ಹೊಣೆ ನಿನ್ನದು. ಆಗಾಗ ಹಡಗು ಮುಳುಗಿಸಲು ಅಪ್ಪಳಿಸುವ ಅಲೆಗಳನ್ನು ದಾಟಿ ಅಂದರೆ ಜೀವನದಲ್ಲಿ ಎಷ್ಟೇ ಗಟ್ಟಿ ಇದ್ದರು, ಕಲ್ಲು ಬಂಡೆಯಾಗಿದ್ದರು ಅದನ್ನು ಕುಗ್ಗಿಸಲು ಅಥವಾ ನಮ್ಮನ್ನು ಪರೀಕ್ಷಿಸಲು ನೀನೆ ನೀಡುವ ಅಲೆಗಳಂತಹ ಸಮಸ್ಯೆಗಳನ್ನು ದಾಟಿ ಮುನ್ನಡಿಸುವ ಶಕ್ತಿ, ಧೈರ್ಯ, ತಾಳ್ಮೆ ನೀಡುವ ಹೊಣೆ ನಿನ್ನದು.

                  ಜೀವನವೆಂಬ ದೀಪ ಬೆಳಗಲು ಅದೆಂತಾ ಬೀರುಗಾಳಿ ಬೀಸಿದರು ಅದನ್ನು ತಡೆಯುವ  ಹೊಣೆ ನಿನ್ನದು. ಯಾರಿಗೂ ಕೆಡಕು ಮಾಡದೇ ಸದಾ ಪರರ ಒಳೆತು ಮಾಡುವ ದೀಪದಂತಿರುವ ಮನುಷ್ಯರ ಬಾಳಲಿ ಅದನ್ನು ಉಪ್ ಎಂದು ಉಬುವ ಜನರನ್ನು ನೀನೆ ಸೃಷ್ಟಸಿರುತ್ತೀಯಾ ಆ ದೀಪ ಆರದಿರಲು ಉಬುವವರ ಮೀರಿ ಬೆಳಗುವ ಶಕ್ತಿ ನೀಡು ದೇವಾ ಎಂಬ ಗೂಢಾರ್ಥ ಈ ಸಾಲುಗಳು ಹೊಂದಿವೆ. 


✍🏻 *ಸುಮಂಗಲಾ.ವಿ.ಕೆ* ✍🏻

ಧಾರವಾಡ

[30/11, 6:23 PM] Tulasi Naveen: "ಬತ್ತದ ತೊರೆ"ಸ್ನೇಹ ಬಳಗ

ದಿನಾಂಕ:೨೬--೧೧-೨೦೨೧ ಶುಕ್ರವಾರ


*ತಿಂಗಳ ಸ್ಪರ್ಧೆ*


*(ಇಷ್ಟ ವಾದ ಭಾವಗೀತೆ ಯ ಸಾಲಿನಿಂದ ಸುಂದರವಾದ ಕಥೆ)*


*ಎಲ್ಲೋ ಹುಡುಕಿದೆ ಇಲ್ಲದ ದೇವರ*

*ಕಲ್ಲು ಮಣ್ಣಿನ ಗುಡಿಯೊಳಗೆ|*

*ಇಲ್ಲೇ ಇರುವ ಪ್ರೀತಿ ಸ್ನೇಹಗಳ*

*ಗುರುತಿಸೆದಾದೆನು ನಮ್ಮೊಳಗೆ||*


      *ಜಿ.ಎಸ್. ಶಿವರುದ್ರಪ್ಪ*



    *ತಪ್ಪು ಕಲ್ಪನೆಯ  ಪರಿಧಿ*



"ಯಾಕೋ ಏನೋ ನನಗೆ ನಾನೇ ಒಂದು ವರ್ತುಲವನ್ನು ನಿರ್ಮಿಸಿದವಳು.ಅದರೊಳಗೆ ಸಿಲುಕಿ ಹೊರ ಬರಲಾರದೆ ಒದ್ದಾಡುತ್ತಿರುವೆನು.ಏನಾದರೂ ಒಂದು ಉಪಾಯ ಹೇಳೆಂದು"ಜೀವದ ಗೆಳತಿ ಆರತಿ ಮೊನ್ನೆ ವಿವಾಹ ಸಮಾರಂಭದಲ್ಲಿ ಭೇಟಿಯಾದಾಗ ಹೇಳುತ್ತಾ ಕಣ್ಣೀರು ಹಾಕಿದಳು.ಇಲ್ಲಿ ಬೇಡ,'ನಡೆದ ವಿಷಯವನ್ನೆಲ್ಲ ಮುಚ್ಚಿಡದೆ ಹೇಳು,ನಂತರ ಯೋಚಿಸಿ ಹೇಳುವೆ'ಎಂದೆ. ಗೆಳತಿ ಹೇಳಿದ ಮಾತುಗಳ ಚಾಚುತಪ್ಪದೆ ಕೇಳಿಸಿಕೊಂಡೆ.ಮನೆಗೆ ಬಂದರೂ ನನಗೆ ಆರತಿಯ ಕಣ್ಣೀರು ಮತ್ತು ಮಾತುಗಳೇ ಪ್ರತಿಧ್ವನಿಸುತ್ತಿತ್ತು.


ನಾನು ಆರತಿ ಬಾಲ್ಯದ ಗೆಳತಿಯರು.ಒಟ್ಟಿಗೆ ಶಾಲೆ,ಬುತ್ತಿ ಊಟ ಎಲ್ಲ.ಹಾಗೆಯೇ ಬೆಳೆದು ದೊಡ್ಡವರಾದ ನಮಗೆ ಒಳ್ಳೆಯ ಮನೆತನದ ಸಂಬಂಧ ಮಾಡಲಾಯಿತು.ಮದುವೆಯಾಗಿ ಬೇರೆ ಬೇರೆಯಾದ ನಾವುಗಳು ಆಗೊಮ್ಮೆ ಈಗೊಮ್ಮೆ ಕಾರ್ಯಕ್ರಮ ಗಳಲ್ಲಿ ಭೇಟಿಯಾಗುತ್ತಿದ್ದೆವು.ಆರತಿ ಲವಲವಿಕೆ ಯಲ್ಲಿರುವ ಹೆಣ್ಣು ಮಗಳು.ಆದರೆ ಇತ್ತೀಚೆಗೆ ಮಂಕು ಕವಿದಂತೆ ,ಉಲ್ಲಾಸವೇ ಇಲ್ಲದಂತೆ ಕಾಣುತ್ತಿದ್ದಳು.

ಆರತಿಯ ಕೈಹಿಡಿದ ಅಜಿತ್ ಬ್ಯಾಂಕ್ ಲ್ಲಿ ನಾಲ್ಕಂಕೆಯ ಸಂಬಳ ಎಣಿಸುತ್ತಿದ್ದ.ಹೊರಗಿನಿಂದ ಕಾಣುವಾಗ ಸುಂದರ,ಪ್ರಾಮಾಣಿಕ ವ್ಯಕ್ತಿತ್ವ.ಜೀವನಕ್ಕೇನೂ ತೊಂದರೆಯಿಲ್ಲ. ಸ್ವಂತ ಮನೆ ವಾಹನ ಪ್ರೀತಿಸುವ ಅತ್ತೆ ಮಾವ  ಇದ್ದರು.ಗಂಡನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದ.ಆದರೆ ಎಲ್ಲಾ ಯಾಂತ್ರಿಕ ಬದುಕು.


ಒಂದೆರಡು ಸಲ ಅವನ ಜೊತೆಗೆ ಮನೆಯವರೆಗೂ ಬಣ್ಣದ ಚಿಟ್ಟೆ ಎನಿಸಿಕೊಂಡ ಐಶ್ವರ್ಯ ಬಂದಿದ್ದಳು.ನಾನೂ ಅವಳನ್ನು ನೋಡಿದವಳು.ತಾನೇ ದೇವಲೋಕದ ರಂಭೆ ಎಂಬ ಅಹಂ ಬೇರೆ ಆಕೆಗೆ. ಆಕೆಯೊಡನೆ ಅಜಿತ್. ನ ಮಾತುಕತೆ, ನಗು ಹಾವಭಾವಗಳು ಆರತಿಗೆ ನುಂಗಲಾರದ ತುತ್ತಾಗಿತ್ತು. *ಬಿಸಿ ತುಪ್ಪದಂತೆ ನುಂಗಲೂ ಅಲ್ಲ ಉಗುಳಲೂ ಅಲ್ಲ* ಎಂಬಂತಾಗಿತ್ತು.ಇವಳು ಬರುವ ಮೊದಲೆ ನನ್ನನ್ನು ಎಷ್ಟು ಪ್ರೀತಿಸುತ್ತಿದ್ದವನು ಇವನೇನಾ? ನನ್ನ ಹಿಂದೆ ಮುಂದೆ ಸುತ್ತುತ್ತಿರುವಾಗ,ಅತ್ತೆಯವರು ಹೇಳಿದ ಮಾತು" ಬೇಗ ಮಡಿಲಿಗೊಂದು ಕೂಸು ಬರಲಿ ,ಆಗ ಇದೆಲ್ಲ ಓಡಿಹೋಗ್ತದೆ'ಎಂದು ನಗುತ್ತಿದ್ದರು.ಕೇಳಿಸಿಕೊಂಡ ಮಾವನವರು,'ಸುಮ್ಮನಿರೆ,ನಮ್ಮ ಅಂದಿನ ದಿನಗಳನ್ನು ನೆನಪಿಸಿಕೊ'ಎಂದು ಹೇಳಿದಾಗ,ಸೆರಗನ್ನು ಬಾಯಿಗೊತ್ತಿ ನಗುವ ಸರದಿ ಅತ್ತೆಯವರದಾಗಿತ್ತು. ಈ ವಯಸ್ಸಿನಲ್ಲೂ ಎರಕ ಹೊಯಿದಂತೆ ಇದ್ದಾರೆಂದು ಸಂತಸವಾಗುತ್ತಿತ್ತು.


ಇಂದು ಮಲಗಿದರೂ ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಕಾರಣ ಆಗ ಗಂಡ ಸ್ನಾನಕ್ಕೆ ಹೋದಾಗ ಒಂದು ಕರೆ ಬಂತು.ತೆಗೆದು ಕಿವಿಗಾನಿಸಿದರೆ" ನಾಳೆ ಬೇಗ ಬನ್ನಿ ಕಛೇರಿಗೆ,ಮುಖ್ಯವಾದ ವಿಷಯ ಮಾತನಾಡಬೇಕೆಂಬ' ಮಹಿಳೆಯ ಧ್ವನಿ.ಕೋಪದಿಂದ ಅಲ್ಲೇ ಫೋನನ್ನು ಕುಕ್ಕಿದೆ.ಗಂಡ ಹೆಂಡತಿ ನಡುವಿನ ಬಿರುಕು ಹೆಚ್ಚುತ್ತಾ ಹೋಯಿತು.ಮತ್ತಷ್ಟೂ ಚಡಪಡಿಕೆ ನನ್ನೊಳಗೆ ಆರಂಭವಾಯಿತು.


ಅಷ್ಟರಲ್ಲಿ ಗೆಳತಿಯ ಭೇಟಿಯಾಗಿ ಮಾತುಕತೆಯಾಯಿತು.ಆರತಿಯ ಮನದಿ ಗೂಡು ಕಟ್ಟಿದ ಸಂಶಯವನ್ನು ತಿಳಿಯಾಗಿಸಲು ಯೋಚಿಸಿದೆ.ಅಜಿತ್ ನನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಅಜಿತ್ ನಂಥ ಹುಡುಗನನ್ನು ಪತಿಯಾಗಿ ಪಡೆದದ್ದು ಇವಳ ಪುಣ್ಯ ಎಂದರಿತೆ.


ಅಯ್ಯೋ, 'ನನ್ನ ಗೆಳತಿಯ *ತಪ್ಪು ಕಲ್ಪನೆಯ ಪರಿಧಿ* ಇಷ್ಟೆಲ್ಲಾ ಅನಾಹುತ ಸೃಷ್ಟಿ ಮಾಡಿತಲ್ಲ?' ಅನಿಸಿ ಮನಸ್ಸಿಗೆ ವೇದನೆಯಾಯಿತು.

ಜಿ.ಎಸ್.ಶಿವರುದ್ರಪ್ಪ ನವರ ಭಾವಗೀತೆಯ  ಒಂದೆರಡು ಸಾಲು ನೆನಪಿಗೆ ಬಂತು.ಸಾಮರಸ್ಯ ವಿಲ್ಲದ ಬದುಕು,ತನುವಿನೊಳಗಿನ ಸಂಶಯ,ಹತ್ತರವಿದ್ದೂ ದೂರವಿದ್ದಂತೆ  ಭಾಸವಾಗುವುದು, *ಅಹಮಿನ ಕೋಟೆ* ಯೊಡೆದು ಹೊರ ಬರಬೇಕು.ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ.ಎಲ್ಲವೂ ನಮ್ಮ ನಮ್ಮೊಳಗೆ ಅಡಗಿದೆ ಎಂದ ಮೇಲೆ ನಮಗೆ ನಾವೇ ಒಂದು ಪರಿಧಿಯನ್ನೋ,ಕೋಟೆಯನ್ನೋ ಕಟ್ಟಿ ಕೊಳ್ಳುವುದಕ್ಕೆ ಅರ್ಥ ವಿಲ್ಲ.ದೇವರು ಎಲ್ಲಿಯೋ ಕಲ್ಲು ಮಣ್ಣಿನ ಗುಡಿಯೊಳಗಿಲ್ಲ ಹುಡುಕುವ ಅಗತ್ಯವಿಲ್ಲ. ನಮ್ಮ ಮನದಾಳದ ಪ್ರೀತಿ ಸ್ನೇಹದೊಳಗೆ ಭಗವಂತನ ನೆಲೆಯಿದೆ.ದಾಂಪತ್ಯದ ಸವಿ ಹಾದಿಯೇ ಭಗವಂತನ ವಾಸಸ್ಥಾನ.ಹೊಂದಾಣಿಕೆಯ ಜೀವನವೇ ಮುಖ್ಯ.' ಇದನ್ನೆಲ್ಲ ಗೆಳತಿಗೆ ಮನವರಿಕೆ ಮಾಡಿದೆ.

"ಆಕೆ ಬಣ್ಣದ ಚಿಟ್ಟೆ ಅಲ್ಲ,ಏನೋ ಆಕೆ ಬೆಳೆದ ವಾತಾವರಣ ಹಾಗಿದೆ. ಆಕೆಯ ಗಂಡ ಬೇರೆ ಹೆಣ್ಣು ಮಗಳ ಸಹವಾಸ ಮಾಡಿ,ಇವಳಿಗೆ ವಿಚ್ಛೇದನ ಕೊಡ್ತಾನಂತೆ.ಆ ನೋವನ್ನು ನಿನ್ನವನೊಂದಿಗೆ ಹೇಳ್ತಾ ಇದ್ದಳು ಅಷ್ಟೆ. ಚಂದದಲ್ಲಿ ಅಜಿತನೊಂದಿಗೆ ಸಂಸಾರ ಮಾಡೆಂದು'ಹೇಳಿದೆ.ನಾಚಿಕೆಯಿಂದ ತಲೆ ತಗ್ಗಿಸಿದಳು. 

 .ಪಶ್ಚಾತ್ತಾಪ ದ ಕಣ್ಣೀರು ಹರಿಯಿತು ಆರತಿಗೆ.ಬೆನ್ನು ನೇವರಿಸಿ ಸಮಾಧಾನ ಪಡಿಸಿದೆ.ರೇಡಿಯೋದಲ್ಲಿ *ಎಲ್ಲೋ ಹುಡುಕಿದೆ ಇಲ್ಲದ ದೇವರ* ಭಾವಗೀತೆ ಪ್ರಸಾರವಾಗುತ್ತಿತ್ತು.



*✍️ರತ್ನಾ ಕೆ ಭಟ್, ತಲಂಜೇರಿ*

[30/11, 6:23 PM] Tulasi Naveen: ಬತ್ತದ ತೊರೆ ಬಳಗದ ತಿಂಗಳ ಸಾಹಿತ್ಯ ಸ್ಪರ್ಧೆಗಾಗಿ

ಲೇಖನ:ದೀಪವು ನಿನ್ನದೇ ಗಾಳಿಯು ನಿನ್ನದೇ

     *ಸೃಷ್ಟಿಕರ್ತನ ಲೀಲೆ*

-------------------------------------

ನಾನು/ಕೆ.ಎಸ್.ನರಸಿಂಹಸ್ವಾಮಿ ಅವರ ರಚನೆಯ *ದೀಪವು ನಿನ್ನದೇ ಗಾಳಿಯು ನಿನ್ನದೇ* ಈ ಭಾವಗೀತೆಯ ಸಾಲಿನಲ್ಲಿ ಅಡಗಿರುವ ವಿಶೇಷ ಅರ್ಥವನ್ನು ತೆರೆದಿಡುವ ಪ್ರಯತ್ನ ಮಾಡುತ್ತಿದ್ದೇನೆ.


ಈ ಸೃಷ್ಟಿಯಲ್ಲಿ ಆ ಭಗವಂತನೇ ಆದಿ ,ಅನಾದಿ,ಮೂಲ, ಮಹತ್ವ ಎಲ್ಲವೂ,ಅವನಿಲ್ಲದೇ ಚರಾಚಾರಗಳೆಲ್ಲವೂ ನಿಸ್ತೇಜ.ಪ್ರತಿಯೊಂದು ವಸ್ತುವಿಗೂ ಅವನಿಂದಲೇ ಚಾಲನೆ.ಈ ಭೂಮಿಯಲ್ಲಿರುವ ಪ್ರತಿಯೊಂದು ವಸ್ತುವು ಕೂಡಾ ಅವನ ಸೃಷ್ಟಿಯೇ ಆಗಿದ್ದರೂ,ಪರಸ್ಪರ ಮುಖಾ ಮುಖಿಯಿಂದ ಯಾವುದೇ ರೀತಿಯ ಹಾನಿಯಾಗದಂತೆ ಕಾಪಾಡುವ ,ಜಗತ್ತನ್ನು ಸಮತೋಲನದಲ್ಲಿ ಇರಿಸುವ ಮಹತ್ಕಾರ್ಯ  ಅವನಿಂದಲೇ ಆಗಬೇಕಿದೆ.


ದೀಪವು, ತೈಲ ಬತ್ತಿಯ ಸಾಂಗತ್ಯದಿಂದ ಭಗವಂತನ ಸಾನಿಧ್ಯದಲ್ಲಿ ಬೆಳಕಾಗಿ ಹೊಮ್ಮಿ ಕತ್ತಲನ್ನು ಅಟ್ಟಿ ಬೆಳಕಿನ ಪ್ರಭೆಯಾಗಿ ಹೊಳೆದು ತನ್ನ ಸುತ್ತು ಮುತ್ತ ಬೆಳಕು ನೀಡುವಂತಾದ್ದು.ಆ ದೀಪವು ಬೆಳಗಿ ಜಗತ್ತಿನ ಕತ್ತಲು ನೀಗುವ ವಾಂಛೆ ಆ ಪರಮಾತ್ಮನದ್ದೇ ಆದರೂ ಅದೇ ಸಮಯಕ್ಕೆ ಗಾಳಿಯೂ ಸಹ ಈ ಸೃಷ್ಟಿಯ ಒಂದು ಭಾಗವೇ ಆಗಿದೆ.ಎತ್ತ ಹೋದರೂ ಗಾಳಿ ಇಲ್ಲದ ಸ್ಥಳವಿಲ್ಲ.ತಂಗಾಳಿ ಬೀಸಿ ತಂಪೀಯುವ ಅನುಭವ ನೀಡುವುದು ಈ ಪ್ರಕೃತಿಯ ಕ್ರಿಯೆಯೇ ಆಗಿದೆ.ಆದರೆ,ಅದೇ ತಂಗಾಳಿಯ ಚಲನೆಗೆ ಉರಿಯುತ್ತಿರುವ ನಂದಾದೀಪವು ಆರಿ ಹೋದರೆ  ಆಗ ಲೋಕವೇ ಕತ್ತಲು ಇವೆಲ್ಲವನು ಸಮತೋಲನದಲ್ಲಿ ಇರಿಸುವ ಸಾಮರ್ಥ್ಯ ಇರುವುದು ಆ ಸೃಷ್ಟಿಕರ್ತನಿಗೆ ಮಾತ್ರ


ಆ ವಿಶಾಲವಾದ ಕಡಲು ಸಹ ಆತನ ಸೃಷ್ಟಿಯ ಒಂದು ಭಾಗ.ಅದು ಉಬ್ಬರ ಇಳಿತವಿಲ್ಲದೇ ಶಾಂತವಾಗಿದ್ದಾಗ ಎಲ್ಲವೂ ಸೊಗಸು.ತನ್ನೊಳಗೆ ಚಲಿಸುವ ಹಡಗನ್ನು ಅದರಲ್ಲಿರುವ ಜೀವಗಳನ್ನು  ಸ್ವಸ್ಥವಾಗಿ ನೆಲೆ ಕಾಣಿಸುತ್ತದೆ.ಆದರೆ ಯಾವುದೇ ಪ್ರಕೃತಿ ವಿಕೋಪಗಳಿಗೆ ಈಡಾದರೆ ಅಲ್ಲಿರುವ ಜನರ ಬದುಕು ಛಿದ್ರವೇ ಸರಿ ಇದೆಲ್ಲವನ್ನು ಸಮಪ್ರಮಾಣದಲ್ಲಿ ತೂಗಿಸುವುದು ಎಲ್ಲವೂ ಭಗವಂತನ ಕೈಯಲ್ಲಿಯೇ ಇದೆ ಎಂಬುದು ಇಲ್ಲಿ ಬಹು ಸೂಕ್ಷ್ಮವಾಗಿ ಸೂಚಿಸಲ್ಪಟ್ಟಿದೆ


ಹಾಗೆಯೇ ವಿಶಾಲವಾದ ಬೆಟ್ಟ, ಗುಡ್ಡ, ಬಯಲು ಎಲ್ಲವೂ ಪರಮಾತ್ಮನದ್ದೇ .ಎಲ್ಲೆಡೆಗೂ ಪ್ರೀತಿ ಹಂಚಬೇಕಾದದ್ದು ಸಹಾ ಅವನಿಂದಲೇ ಅಗಬೇಕಾಗಿರುವಂತಾದ್ದು ,ಈ ರೀತಿ ಪ್ರೀತಿ ಭಾಂಧವ್ಯ ಇಲ್ಲದೇ ಇದ್ದರೆ ಚರಾಚಾರಗಳಲ್ಲಿ ಸಾಮರಸ್ಯ ಇರುವುದಿಲ್ಲ .

ಅಲ್ಲದೇ ಈ ಭೂಮಿಯಲ್ಲಿ ಬಿಸಿಲು ಕೂಡಾ ಬೇಕು. ಅಂತೆಯೇ ನೆರಳಿನ ಅವಶ್ಯಕತೆಯೂ ಇದೆ.ಯಾವುದೇ ಅತಿಯಾದರೂ ಅಪಾಯ ತಪ್ಪಿದ್ದಲ್ಲ ತಾಪಮಾನ ಸಮತೋಲನದಲ್ಲಿ ಇರಬೇಕಾದರೆ ಇವೆಲ್ಲವನ್ನ ಒಂದೇ ರೀತಿಯಾಗಿ ಇರುವಂತೆ ಮಾಡಲು ಆತನ ಕರುಣೆ ಅಗತ್ಯವೆಂವುದು ನಿತ್ಯ ಸತ್ಯ.


ಅಲ್ಲದೇ ಪ್ರಕೃತಿಯಲ್ಲಿ ಮಳೆ ಗಾಳಿ, ಸಿಡಿಲು, ಮಿಂಚು ಎಲ್ಲವೂ ಎಷ್ಟು ಬೇಕೋ ಅಷ್ಟು ಮಾತ್ರ ಇರಬೇಕು.ಆಗೊಮ್ಮೆ ಹೀಗೊಮ್ಮೆ ಅಗತ್ಯವಿದ್ದಷ್ಟು ಮಾತ್ರವಿದ್ದಲ್ಲಿ ಮಾತ್ರ ಉತ್ತಮ.ಅತಿಯಾದಾಗ ಎಲ್ಲವೂ ಅಯೋಮಯ.ಅದನ್ನು ಕಾಯ್ದುಕೊಳ್ಳುವುದು ಜೀವಗಳನ್ನು ಬದುಕಿಸುವುದು ,ನಲಿಸುವುದು ಆತನಿಂದಲೇ ಅಲ್ಲದೇ ಇನ್ಯಾರಿಂದಲೂ ಸಾಧ್ಯವಿಲ್ಲ.ಇಂತಹ ಅವನಿಗೆ ನಾವೆಲ್ಲರೂ ಸಮರ್ಪಣಾ ಭಾವದಿಂದ ಕಾಣಲೇ ಬೇಕು.ಏಕೆಂದರೆ ಅವನಿಲ್ಲದೇ ನಾವಿಲ್ಲ.ಈ ಭೂಮಿಯ ಎಲ್ಲಾ ಜೀವಗಳು ನದಿ, ಸಾಗರ,ಆಕಾಶ,ಭೂಮಿ,ಈ ಮನುಷ್ಯ,,ಅವನಲ್ಲಿರುವ ಭಾವಗಳು, ಆ ಚೈತನ್ಯ,ಭರವಸೆ ಎಲ್ಲವೂ ಅವನಿಂದಲೇ ಅರಳುವುದು ,ಇದನ್ನು ನಾವೆಲ್ಲ ಅರಿತು ಅವನಿಗೆ ಋಣಿಯಾಗಿರಬೇಕು. ಹಾಗೂ ಎಲ್ಲವನ್ನೂ ಸಮಸ್ಥಿತಿಯಲ್ಲಿ ಇಡುವಂತೆ ಕೊರಬೇಕು...


ಉಷಾ ದಿನೇಶ್

ಶಿವಮೊಗ್ಗ

[30/11, 6:23 PM] Tulasi Naveen: ಸ್ಪರ್ಧೆಗಾಗಿ......

*************

ಸಾಲು : ಕಾಣದ ಕಡಲಿಗೆ ಹಂಬಲಿಸಿದೆ ಮನ

************


 *ಶೀರ್ಷಿಕೆ : ಕಡಲ ನೀಲಿಯೊಳು ಕರಗಬೇಕು* 


ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪನವರ ಲೇಖನಿಯಮ ಮೊನೆಯಿಂದ ಹೊರಟ “ಕಾಣದ ಕಡಲಿಗೆ ಹಂಬಲಿಸಿದೆ ಮನ” ಎಂಬ ಸಾಲು, ಸಿ. ಅಶ್ವತ್ಥ್ ರವರ ಕಂಚಿನ ಕಂಠದಲ್ಲಿ ಮತ್ತಷ್ಟು ಶಕ್ತಿ ಪಡೆದುಕೊಂಡು ನಾಡಿನೆಲ್ಲೆಡೆ ಅನುರಣಿಸಿತು. ಭಾವಜೀವಿಗಳ ಹೃದಯದಲ್ಲಿ ಇನ್ನೂ ಅನುರಣಿಸುತ್ತಲೇ ಇದೆ. 


ಭಾವಗೀತೆಯ ಈ ಸಾಲು ಕಡಲಿನಂತೆ ವಿಶಾಲವ್ಯಾಪ್ತಿಯುಳ್ಳದ್ದು, ಅವರವರ ಭಾವಕ್ಕೆ ತಕ್ಕಂತೆ ಅರ್ಥ ಕೊಡುವಂತದ್ದು, ಪ್ರತಿ ಧ್ವನಿಯಲ್ಲೂ ಹೊಸದೊಂದು ತೆರೆಯಂತೆ ಹೊಸ ಭಾವವನ್ನು ಸ್ಫುರಿಸುವಂಥದ್ದು, ಕಡಲಿನಂತೆ ಬಗೆದಷ್ಟೂ ಮುಗಿಯದ ಅಚ್ಚರಿಗಳ ಹೊಸ ಲೋಕಗಳನ್ನೇ ಮುಂದೆ ಇಡುವಂಥದ್ದು. ಕಡಲನ್ನು ಎಷ್ಟು ದೂರಕ್ಕೆ ನೋಡಿದರೂ ಕೊನೆ ಮುಟ್ಟಲಾಗದಂತೆ ಈ ಸಾಲಿಗೂ ಒಂದು ಅಂತಿಮ ವ್ಯಾಖ್ಯಾನ ನೀಡುವುದು ಅಸಾಧ್ಯವೇ ಆಗಿದೆ. 


"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ? " ಗೋಪಾಲಕೃಷ್ಣ ಅಡಿಗರ ಈ ಭಾವಕ್ಕೆ ಸಂವಾದಿಯಾಗಲೂ ಬಹುದಾದ ಭಾವಗೀತೆಯ ಈ ಸಾಲು 'ಕಡಲು' ಎಂಬ ಉಪಮೆಯೊಂದಿಗೆ ಮತ್ತಷ್ಟು ಗಾಢವಾಗುತ್ತದೆ; ಗೂಢವಾಗುತ್ತದೆ. ನಮ್ಮ ದೃಷ್ಟಿಗೆ, ಕೈಗೆ ಮೀರಿದ  ಮತ್ತೇನಕ್ಕೋ  ನಾವು ಸದಾ ಚಡಪಡಿಸುತ್ತಲೇ ಇರುತ್ತೇವೆ. ಸಿಗಲಾರದ್ದನ್ನು ಪಡೆಯುವ, ಅರಿಯಲಾಗದ್ದನ್ನು ತಿಳಿದುಕೊಳ್ಳುವ ಕಾತರ ಪ್ರತೀ ಹೃದಯದಲ್ಲೂ ಇದ್ದೇ ಇರುತ್ತದೆ. 


ಬಹಳಷ್ಟು ವಿಮರ್ಶಕರು ವ್ಯಾಖ್ಯಾನಿಸಿದಂತೆ ಇಲ್ಲಿ ಕಾಣುವುದು ಜೀವನದ ಗುರಿಯೊಂದಿಗೆ ಮಿಳಿತವಾಗುವ ಹಂಬಲ. “ಸುನೀಲ ವಿಸ್ತರ ತರಂಗ ಶೋಭಿತ ಗಂಭೀರಾಂಬುಧಿ”ಯನ್ನು ಸೇರುವ ತವಕ; ಸೇರಬಲ್ಲೆನೇನು ? ಎಂಬ ಕೌತುಕ. ಅಪಾರವಾದ ವಿಸ್ತಾರವಾದ ಕಡಲು ನೀಲಿಯಾಗಿದೆ. ಈ ನೀಲಿ ಅನಂತದ ಪ್ರತೀಕ. ಎಷ್ಟು ನದಿಗಳು ಬಂದು ಸೇರಿದರೂ ಒಂದೇ ತೆರನಾಗಿ ಗಂಭೀರವಾಗಿರುವ ಸಾಗರವನ್ನು ಸೇರಬೇಕಾದರೆ ಕೊರಕಲಿನ ವಕ್ರ ಹಾದಿಯನ್ನು ಕ್ರಮಿಸಲೇಬೇಕು. ನಮ್ಮ ಬದುಕಿನ ದಾರಿಯ ಕಾಠಿಣ್ಯಗಳನ್ನೆಲ್ಲ ಎದುರಿಸಲು ಶಕ್ತರಾದರೆ ಮಾತ್ರ, ನದಿಯು ಸಾಗರವನ್ನು ಸೇರಿದಂತೆ ವಿಶಾಲವಾದ ಅಪಾರ ನೀಲಿಯ ಶಾಂತ ಲೋಕವನ್ನು ಸೇರಲು ಸಾಧ್ಯವಾಗುತ್ತದೆ. ಆ ಮೂಲಕ ಜೀವನದ ಅಂತಿಮ ಧ್ಯೇಯದ ದರ್ಶನವಾಗುತ್ತದೆ.


ಕಡಲನ್ನು ಸೇರುವ ಹಂಬಲ ಕೇವಲ ಕವಿ ಒಬ್ಬರದ್ದಲ್ಲ, ಅದು ಪ್ರತೀ ಹೃದಯದ ಹಂಬಲ. ಹಾಗಾಗಿಯೇ ಸುಲಭವಾಗಿ ಹೃದಯದಾಳದ ನಾಟುತ್ತದೆ. ಹಾಡನ್ನು ಕೇಳುವ ಯಾರಾದರೂ ಬದುಕಿನ  ಗುರಿಯ ಬಗ್ಗೆ ಯೋಚಿಸದೇ ಇರಲು ಸಾಧ್ಯವೇ ಆಗುವುದಿಲ್ಲ. 


ಆತ್ಮವೊಂದು ಅನಂತದಲ್ಲಿ ಲೀನವಾಗುವ ಅಚ್ಚರಿಯನ್ನು ಬೇಧಿಸಲು ಮನುಕುಲ ಉಗಮವಾದಂದಿನಿಂದಲೇ ಹುಡುಕಾಟಗಳು ಪ್ರಾರಂಭವಾಗಿದೆ. ಜೀವನದ ಅಂತಿಮ ಗುರಿಯನ್ನು ಅರಿಯಲು ಮಾನವ ನಡೆಸದ ಪ್ರಯತ್ನಗಳಿಲ್ಲ. ಕೊರಕಲಿನ ಹಾದಿಯಲ್ಲಿ ನಡೆದು ಗಂಭೀರ ಶಾಂತದಲ್ಲಿ ಒಂದಾಗುವ ಉಪಮೆ ನಮಗೆಲ್ಲರಿಗೂ ಬಹಳ ಸ್ಪಷ್ಟವಾಗಿ ಅರ್ಥವಾಗುತ್ತದೆ. ಇಲ್ಲಿ ಕ್ಲಿಷ್ಟ ವಿವರಣೆಗಳು ಬೇಕಾಗುವುದಿಲ್ಲ, ಅಗತ್ಯವೂ ಇಲ್ಲ. ಮನುಷ್ಯರೆಲ್ಲರ ಮನದ ಅಸ್ಪಷ್ಟ ಹಂಬಲಗಳು ಅಕ್ಷರರೂಪದಲ್ಲಿ ಸುಲಭ ಗ್ರಾಹ್ಯವಾಗುವಂತೆ ಶಿವರುದ್ರಪ್ಪನವರು ಈ ಸಾಲಿನಲ್ಲಿ ಅಕ್ಷರ ಚಿತ್ರವನ್ನು ಮೂಡಿಸಿದ್ದಾರೆ. 


ಒಳ ಕಿವಿಗೆ ಕೇಳುವ ಕಾಣದ ಕಡಲಿನ ಮೊರೆತವು ಆ ಕಡಲನ್ನು ಸೇರುವ ಹಂಬಲವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದೇ ಹಂಬಲ ದಾರಿಯ ಕೊರಕಲನ್ನು ಸುಲಭವಾಗಿ ದಾಟುವಲ್ಲಿ ಸಹಾಯಮಾಡುತ್ತದೆ. ಹೀಗೆ "ಮಹಾ ತಾಳ್ಮೆಯ ಮತ್ತು ಅಷ್ಟೇ ಕ್ರಿಯಾಶಾಲಿಯಾದ" ಜಿ.ಎಸ್.ಶಿವರುದ್ರಪ್ಪನವರಂಥ ವ್ಯಕ್ತಿಗಳು ಮಾತ್ರ ಇಂತಹ ಉಪಮೆಗಳನ್ನು ಕಟ್ಟಿಕೊಡಲು ಸಾಧ್ಯ. ಬದುಕಿನ ಭವಬಂಧನಗಳಿಂದ ಮುಕ್ತರಾಗಿ ಅಲೌಕಿಕ ಜಗತ್ತನ್ನು ಸೇರುವ ಅಭಿಲಾಷೆ ಕವಿಯದ್ದು ಮತ್ತು ಓದುಗರದ್ದೂ ಸಹ. ಅಸ್ಪಷ್ಟ ಕಲ್ಪನೆಗಳಿಗೆ ಸ್ಪಷ್ಟ ಚಿತ್ರಣದ ಉದಾಹರಣೆ ಕೊಟ್ಟು ಕವಿ ವಿವರಿಸುವ ಪರಿ ಅನನ್ಯ. ಗಂಭೀರ ವಿಚಾರವೊಂದು ನಮ್ಮ ಬಾಳಿನ ಹಾದಿಯನ್ನು ಸ್ಪಷ್ಟೀಕರಿಸುತ್ತದೆ; ಮತ್ತೆ ಚಿಂತನೆಗೆ ಹಚ್ಚುತ್ತದೆ. “ಕಡಲ ನೀಲಿಯೊಳು ಕರಗುವ” ಧ್ಯೇಯವನ್ನು ದಟ್ಟವಾಗಿಸುತ್ತದೆ.

************


ಶ್ರೀಕಲಾ ಬಿ ಕಾರಂತ್

ಅಳಿಕೆ, ಬಂಟ್ವಾಳ ತಾಲೂಕು

[30/11, 6:23 PM] Tulasi Naveen: ಬತ್ತದ ತೊರೆ ಸ್ನೇಹ ಬಳಗ

ವಿಷಯ ಭಾವಗೀತೆಯ ಸಾಲಿನಿಂದ  ಲೇಖನ ಅಥವಾ  ಕಥಾರಚನೆ ಸ್ಪರ್ಧೆಗಾಗಿ:


ನನ್ನ ಲೇಖನ


 *ತಾಯಿ ದೇವತೆ* 


" *ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತಿರುವೆ ನಾನು"* 


ಬಿ ಆರ್ ಲಕ್ಷ್ಮಣರಾವ್ ಅವರು ರಚಿಸಿದ ಅಪೂರ್ವವಾದಂತಹ ತಾಯಿ, ಜನನಿ, ಮಾತೆಯ ಕುರಿತಾದ ಭಾವಗೀತೆಯ ಸಾಲುಗಳ ಆಧಾರಿತವಾದುದು.


' *ಜನನಿ ಜನ್ಮಭೂಮಿಷ್ಯ ಸ್ವರ್ಗದಪಿ ಗರಿಯೇಸಿ'* ಎಂಬಂತೆ ಈ ಲೋಕದಲ್ಲಿ 'ಹಡೆದ ತಾಯಿ, ಪಡೆದ ಭೂಮಿ' ಆಗೋಚರವಾದಂತಹ ಸ್ವರ್ಗಕ್ಕಿಂತಲೂ ಶ್ರೇಷ್ಠವಾಗಿರುವುದಾಗಿದೆ. ಅಮ್ಮ ಮಗುವಿನ ಸಂಬಂಧ ಜನ್ಮ ಜನ್ಮಾಂತರದ್ದು. ಅಮ್ಮ ಕಂದನಿಗೆ ತನ್ನೆಲ್ಲ ಉಸಿರು ಬಸಿದು, ರಕ್ತ ಹರಿಸಿ ಜನ್ಮನೀಡಿದ ತ್ಯಾಗಿ, ಸಹನಾಮೂರ್ತಿ, ಕಡಲಿನಷ್ಟೇ ಪ್ರೀತಿ, ಮಮತೆ, ವಾತ್ಸಲ್ಯಗಳನ್ನು ತುಂಬಿಕೊಂಡಂತಹ ಅಗಾಧ ಚೇತನವಾಗಿದ್ದಾಳೆ.


' *ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂಧುವಿಲ್ಲ'* ಎನ್ನುವ ನಾಣ್ನುಡಿಯಂತೆ ಎಷ್ಟು ರುಚಿಗೊಳಿಸಲು ಅಡುಗೆ ಪರಿಕರಗಳನ್ನು ತಂದು ಹಾಕಿ, ಉಪ್ಪಿಲ್ಲದ ಮಾಡುವ ಭೋಜನ ಏನೂ ರುಚಿ ಕೊಡಲಾರದಂತೆ, ಜಗದೊಳು ನೂರಾರು ಹಿತೈಷಿ, ಬಂದು ಬಾಂಧವರಿರಲಿ ತಾಯಿ ದೇವತೆಯ ಸ್ಥಾನವನ್ನು ಯಾರೂ ತುಂಬಲು ಅಸಾಧ್ಯ.


ತಾಯಿ ದೇವತೆ ತೋರಿದ ಪ್ರೀತಿ, ಕರುಣೆ, ಅನುಕಂಪ ಮತ್ತೆಲ್ಲಿ ಜಗದಲ್ಲಿ ದೀಪ ಹಚ್ಚಿ ಹುಡುಕಿದರೂ ಸಿಗಲಾರದು. ಅದೊಂದು ಅಮೂಲ್ಯ ವಾದಂತಹ ದೇವರ ರೂಪವನ್ನು

ಹೊತ್ತು ನಿಂತ ಪ್ರತ್ಯಕ್ಷ ದೇವತೆ. ಸಾಕ್ಷಾತ್ ಜಗಜ್ಜನನಿಯ ಅವತಾರವೆಂದು ನನ್ನ ಅಂತರಾಳದ ಮಾತನ್ನು ಬಿಚ್ಚಿ ಹೇಳುತ್ತಿದ್ದೇನೆ.


ಕರುಳಬಳ್ಳಿಗೆ ಗರ್ಭಾಂಕುರದ ಕ್ಷಣ ದಿನದಿಂದ ಸಕಲವನ್ನೂ ಧಾರೆಯೆರೆದ ಸಹನಾಧರಿತ್ರಿ ಎಂದರೆ ಅತಿಶಯೋಕ್ತಿಯಾಗಲಾರದು. ಸಾಕಷ್ಟು ನೋವುಗಳನ್ನು ಅನುಭವಿಸುತ್ತ ಭೂಮಿಗೆ ಮಾನವ ಜೀವಿಯನ್ನು ಕರುಣಿಸಿದ ಕರುಣಮೂರ್ತಿ ತಾಯಿ. ಒಂಬತ್ತು ತಿಂಗಳು ಒಡಲಲ್ಲಿ ಹೊತ್ತು ನಂತರ ಏನೂ ತಾಕದಂತೆ, ಮಾಂಸದ ಮುದ್ದೆಯಂತಿರುವ ಹಸುಳೆಯನ್ನು ಅತ್ಯಂತ ನಾಜೂಕಾಗಿ, ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡುವಲ್ಲಿ ತಾಯಿಯ ಪಾತ್ರ ಅಷ್ಟಿಷ್ಟು ಜವಾಬ್ದಾರಿಯುತವಾದುದಲ್ಲ.


ಈ ಭೂಮಿಗೆ ಮಾನವ ಸಂತಾನದ ಪೀಳಿಗೆಯ ಅಭಿವೃದ್ಧಿಯನ್ನು ಮಾಡುವಲ್ಲಿ ತಾಯಿ ಜನನಿಯ ಕೊಡುಗೆ ಅಪಾರವಾದುದಾಗಿದೆ. ತನ್ನೆಲ್ಲ  ಸ್ವಾರ್ಥಪರ ಚಿಂತನೆಗಳನ್ನು ಬದಿಗೊತ್ತಿ ಮಗುವಿನ ಲಾಲನೆ-ಪಾಲನೆಯಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡು, ಆರೈಕೆ ಮಾಡಿ, ಬೆಳೆಸಿ ಉತ್ತಮ ಸಂಸ್ಕಾರಗಳನ್ನು, ಮೌಲ್ಯಗಳನ್ನು ಬಿತ್ತುವ *ತಾಯಿ ಮೊದಲ ಗುರುವಾಗಿ* ಪರಿಣಮಿಸುತ್ತಾಳೆ.


ತಾಯಿಯನ್ನು ತೊರೆದು ಇನ್ನೊಂದೆಡೆಗೆ ಅಗಲಿ ಹೋಗುವುದೆಂದರೆ ಅದೊಂದು ಕಷ್ಟ ದುಃಖಕರವಾದ ಸಂಗತಿ. ಕಣ್ಣೀರಧಾರೆ ಹರಿಸುತ್ತಾ ತಾಯಿ ಹಾರೈಸಿ ಮಗಳನ್ನು ಇನ್ನೊಂದು ಮನೆ ಮಂದಿರ ಬೆಳಗಲು ಅಣಿಗೊಳಿಸಿ ಬೀಳ್ಕೊಡುವ ಮಹಾತ್ಯಾಗಿ. ಇಂತಹ ಅಪರೂಪ ವ್ಯಕ್ತಿತ್ವವನ್ನು ಧರಿಸಿರುವ ಧರಣಿಯೊಳು ತಾಯಿಯ ಮಹತ್ವ ಪದಗಳಲ್ಲಿ ಹಿಡಿದಿಡಲು ಬಾರದು.


ಅದಕ್ಕೆ ಕವಿ ಇಲ್ಲಿ ತನ್ನ ಕರುಳ ಬಳ್ಳಿಯಿಂದ ಮಗುವನ್ನು ಸ್ವತಂತ್ರವಾಗಿಸುವ ಕಲ್ಪನೆಯನ್ನು ಬಿಂಬಿಸಿರುವರು. ಅಮ್ಮನ ಬೆಚ್ಚಗಿನ ಮಡಿಲು ಒಳಗಿಂದ ಒಂದು ಮಗು ಸ್ವತಂತ್ರಗೊಂಡು ತಾಯಿಯಿಂದ ಎಲ್ಲವನ್ನೂ ಗಿಟ್ಟಿಸಿಕೊಂಡು, ತಾನೂ ಏನನ್ನಾದರೂ ಜನ್ಮಕೊಟ್ಟ ಭೂಮಿಗೆ ಉಡುಗೊರೆಯಾಗಿ ನೀಡಲು ಸನ್ನದ್ಧನಾಗಬೇಕೆಂಬುದು ಕವಿಯ ಆಶಯ.

ಅಮ್ಮನ ಆಶ್ರಯದಿಂದ ಜಾರಿಕೊಂಡು, ಇಡೀ ಪ್ರಪಂಚದ ಜ್ಞಾನವನ್ನೆಲ್ಲ ಪಡೆದು ಮತ್ತೆ ತನ್ನ ಜನ್ಮಭೂಮಿಗೆ ಜನ್ಮದಾತೆಯೆಡೆಗೆ ಉನ್ನತ ವ್ಯಕ್ತಿತ್ವ ಹೊಂದಿದ ಪರಿಪೂರ್ಣ ಮಾನವನಾಗಿ, ಮೂರ್ತಪ್ರೇಮದೆಡೆಗೆ ಬರುವುದು, ಎಂಬುದು ಕವಿಯ ಸುಂದರ ಸಾಲುಗಳು ಪ್ರತಿಬಿಂಬಿಸುವಲ್ಲಿ ಸಾರ್ಥಕಗೊಂಡಿದೆ. ಬಿ ಆರ್ ಲಕ್ಷ್ಮಣರಾವ್ ಕನ್ನಡ ಕಾವ್ಯಪ್ರಪಂಚಕ್ಕೆ ಅತ್ಯುನ್ನತ ವಾದಂತಹ ಕವನದ ಸಾಲುಗಳನ್ನು ಸುಂದರಗೊಳಿಸಿ ಕನ್ನಡ ನಾಡಿಗೆ ಅರ್ಪಿಸಿದ್ದಾರೆ.


 *ಶ್ರೀಮತಿ ಗಿರಿಜಾ ಹಿರೇಮಠ*

[30/11, 6:23 PM] Tulasi Naveen: ಸ್ಪರ್ಧೆಗಾಗಿ:- *ಲೇಖನ*

ವಿಷಯ:- *ಇಷ್ಟವಾದ ಭಾವಗೀತೆ*

ಶೀರ್ಷಿಕೆ :- *ಅಮ್ಮ*



ಭಾವಗೀತೆಗಳು ನಮ್ಮ ಕನ್ನಡ ಸಾಹಿತ್ಯದಲ್ಲಿ ವಿಶೇಷವಾದ ಸ್ಥಾನ ಪಡೆದಿವೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ. ಭಾವಗೀತೆಗಳ ಮೂಲ ಸ್ವರೂಪ ಹಾಡಿನದ್ದು. ಕಾವ್ಯವನ್ನು ಹಾಡುವುದು ನಮ್ಮಲ್ಲಿ ಮೊದಲಿನಿಂದ ಇದ್ದರೂ ಕಾವ್ಯ ಆ ಹಾಡಿಗಿಂತ ಭಿನ್ನವಾಗಿತ್ತು.ಹಿಂದೆ ಕನ್ನಡ ಹಾಡುಗಳು, ಶಿವಶರಣರ ವಚನಗಳು ಇವುಗಳನ್ನು ಬಿಟ್ಟರೆ ಉಳಿದ ಕಾವ್ಯಗಳೆಲ್ಲ ಕಥನ ಕಾವ್ಯಗಳೇ.

 ಪ್ರತಿಯೊಬ್ಬ ಕವಿಯು ತನ್ನ ಮನದಲ್ಲಿರುವ ಭಾವನೆಗಳನ್ನು ಕಾವ್ಯದ ಮೂಲಕ ಹೊರಗೆಡುವುತ್ತಾನೆ.ಈ ಕಾವ್ಯಕ್ಕೆ ಮಧುರವಾದ ಸಂಗೀತವನ್ನು ಸಂಯೋಜಿಸಿ,ಸುಶ್ರಾವ್ಯವಾದ ಧ್ವನಿಯಲ್ಲಿ ಹಾಡಿದರೆ,ಕೇಳುಗರನ್ನು ಭಾವಲೋಕಕ್ಕೆ ಕರೆದೊಯ್ಯುತ್ತದೆ.


ಭಾವಗೀತೆಯಲ್ಲಿ ನನ್ನ ಮೆಚ್ಚಿನ ಹಾಡು.. ಬಿ.ಆರ್.ಲಕ್ಷ್ಮಣ ರಾವ್ ಸಾಹಿತ್ಯದ   " *ಅಮ್ಮಾ..ನಿನ್ನ ಎದೆಯಾಳದಲ್ಲಿ,ಗಾಳಕ್ಕೆ ಸಿಕ್ಕ ಮೀನು., ಮಿಡುಕಾಡುತ್ತಿರುವೆ ನಾನು."..* ಈ ಹಾಡನ್ನು ಬಿ.ಆರ್.ಛಾಯರವರು ಕೇಳುಗರ ಮನಸ್ಸಿಗೆ ತುಂಬಾ ಇಂಪಾಗಿ ಕೇಳುವಂತೆ ಹಾಡಿದ್ದಾರೆ.  ನಿಜವಾಗಿಯೂ ಈ ಹಾಡು ಕೇಳುವಾಗ ತಾಯಿ-ಮಗುವಿನ ಸಂಬಂಧ ಎಷ್ಟು ಗಾಡವಾಗಿದೆ ಎಂದು ಮನದಟ್ಟಾಗುತ್ತದೆ. ಪ್ರತ್ಯಕ್ಷ ದೇವರಾಗಿ ನಮ್ಮ ಜೀವನದಲ್ಲಿ ಬಂದ ತಾಯಿಯ ಬಗ್ಗೆ ಹೇಳಲು ಪದಗಳೇ ಸಾಲದು.ಏಳೇಳು ಜನ್ಮದಲ್ಲೂ ಆ ದೇವತೆಯ ಋಣವನ್ನು ತೀರಿಸಲು ಸಾಧ್ಯವಾಗದ ಮಾತು. ತಾಯಿ-ಮಗುವಿನ ಸಂಬಂಧ ಏನೆಂಬುದನ್ನು ಆ ಗೀತೆಯ ಭಾವಾರ್ಥದಲ್ಲೇ ಇದೆ.ತಾಯಿಯ ಗರ್ಭದಲ್ಲಿ ಮಗು ಇರುವಾಗ,ಆ ಮಗು ಎಷ್ಟೊಂದು ಬೆಚ್ಚಗೆಯಾಗಿ ಇರುತ್ತದೆ, ತಾಯಿಯ ಕರುಳಬಳ್ಳಿಯನ್ನು ಸುತ್ತಿಕೊಂಡು,ಅವರ ಒಲವಿನಿಂದ ಭೂಮಿಗೆ ಬರಲು ಕಾಯುತ್ತಿರುತ್ತದೆ.ಒಂಬತ್ತು ತಿಂಗಳು ತುಂಬಿದೊಡನೆ,ತಾಯಿಯ ಗರ್ಭ ಸೀಳಿ ಮಗು ಭೂಮಿಗೆ ಬಂದಾಗ,ಆ ತಾಯಿ ನೋವಿನಲ್ಲೂ ಪಡುವ ಸಂತಸ,ಆ ರಸಗಳಿಗೆ ಅವಳ ಬಾಳಿನ ಅದ್ಭುತವಾದ ಕ್ಷಣ.ನನ್ನ ಒಳ ಜಗತ್ತಿನ ನಿನ್ನ ನೋವನ್ನು, ನಾನು ಉಪಶಮನ ಗೊಳಿಸಿ,ಹೊರ ಜಗತ್ತಿಗೆ ಕಾಲಿಡುವೆ.ನಿನ್ನ ತೋಳಲ್ಲಿ,ಮಡಿಲಲ್ಲಿ ಮಲಗಿ ನಾನು ಆನಂದಿಸುವೆ ಎನ್ನನ್ನು ಹೊರಗೆ ಕಳುಹಿಸು,ಹೊರಗಿನ ಆಟ-ಪಾಟ ನನಗೆ ಕಲಿಸು ಎಂಬ ಚಿತ್ರಣವನ್ನು ಕವಿಯವರು ಚೆನ್ನಾಗಿ ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ್ದಾರೆ.ತಾಯಿ ಎನ್ನುವ ಆ ಮಹಾನ್ ಶಕ್ತಿಗೆ ನಾವು ಎಂದೆಂದಿಗೂ ಚಿರ ಋಣಿಗಳಾಗೋಣ.ಪ್ರತಿಯೊಬ್ಬ ತಾಯಿ-ಮಗುವಿನ ಸಂಬಂಧ ಉತ್ತಮವಾಗಿರಲಿ. ಒಂದು ಮಗು ಚಿಕ್ಕಂದಿನಲ್ಲಿ ತಾಯಿಯನ್ನು ಹೇಗೆ ಅವಲಂಬಿಸಿಕೊಳ್ಳುತ್ತದೋ,ಹಾಗೆಯೇ ತಾಯಿಗೆ ವಯಸ್ಸಾದ ಮೇಲೆ, ಅವರನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳಬೇಕು. *ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂಧು ಇಲ್ಲ* ಎಂಬ ಹಿರಿಯರ ಮಾತನ್ನು ಮನದಲ್ಲಿ ಇಟ್ಟುಕೊಂಡು, ಆ ಮಹಾತಾಯಿಗೆ ಗೌರವ ನೀಡುವ. ಮುಪ್ಪಿನ ಕಾಲದಲ್ಲಿ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ. ಈ ದೇಶದ ಪ್ರತಿಯೊಬ್ಬ ತಾಯಿಗೂ ನನ್ನ ಸಾಷ್ಟಾಂಗ ನಮಸ್ಕಾರಗಳು 🙏😍


✍️  *ಮಾಲತಿ ರಮೇಶ್ ಕೆಮ್ಮಣ್ಣು*

[30/11, 6:23 PM] Tulasi Naveen: *ತಿಂಗಳ ಸ್ಪರ್ಧೆಗೆ*


*ಇಷ್ಟದ ಭಾವಗೀತೆಯ ಸಾಲಿಗೆ ಲೇಖನ*


*ಭಾವಗೀತೆಯ ಸಾಲು 👇🏻*


ಇಂದು ನಾ ಹಾಡಿದರೂ, ಅಂದಿನಂತೆಯೆ ಕುಳಿತು |

ಕೇಳುವಿರಿ ಸಾಕೆನಗೆ ಅದುವೆ ಬಹುಮಾನ |

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ? ||


*ರಚನೆ : ಜಿ.ಎಸ್.ಶಿವರುದ್ರಪ್ಪ* ರವರು


*ಶೀರ್ಷಿಕೆ : ಪ್ರಶಸ್ತಿ ಮಾರಾಟಕ್ಕಿದೆ...!?* 


ಇತ್ತೀಚೆಗೆ ಪ್ರಶಸ್ತಿ ಎಂಬ ಹೆಸರಲ್ಲಿ ಖ್ಯಾತ ವಿಜ್ಞಾನಿ, ಕವಿಗಳು ಮುಂತಾದವರ ಹೆಸರನ್ನಿಟ್ಟು ಕೆಲವು ಸಂಘ ಸಂಸ್ಥೆಗಳು ಅರ್ಜಿ ರವಾನಿಸಿ ಅಥವಾ ಹಣವನ್ನು ನಿಗದಿ ಮಾಡಿ ಪ್ರಶಸ್ತಿಯನ್ನು ಕೊಡುತ್ತಿರುವುದು ಹೆಚ್ಚಾಗಿದೆ. ಹಾಗೆಯೇ ಎರಡಕ್ಷರ ಬರೆದ ಕೂಡಲೇ ನಾನೂ ಕವಿ, ಸ್ವಲ್ಪ ಹಾಡಲು ಬರುತ್ತಿದ್ದರೆ ನಾನೂ ದೊಡ್ಡ ಹಾಡುಗಾರ ಎಂದು ಭಾವಿಸಿ ಮೆರೆಯುವ ಜನರಿಗೆ ಇದೊಂದು ಸುವರ್ಣ ಅವಕಾಶದಂತೆ ನನ್ನ ಪಾಲಿಗೆ ಒದಗಿ ಬಂದಿದೆ ಎಂದು, ಅರ್ಜಿ ಹಾಕಿಯೇ ಬಿಡುವ ಮನಸ್ಥಿತಿ ಬರುತ್ತಿದೆ. ಇದರಿಂದ ಪ್ರಶಸ್ತಿ ಎಂಬ ಹೆಸರಲ್ಲಿ ಪ್ರಸಿದ್ಧ ವ್ಯಕ್ತಿಗಳ ಛಾಯಾಚಿತ್ರವಿರುವ ಬಹುದೊಡ್ಡ ಕಲಾಕೃತಿ ಮನೆಯಲ್ಲಿಡಲು ದೊರೆಯುವುದಲ್ಲದೆ ಹೇಳಿ ಕೊಂಡು ಬರಲು ದೊಡ್ಡ ವಿಷಯವಾಗಿ ದೊಡ್ಡ ಘನತೆ ಬಂದಂತೆ ಆಡುವವರ ಸಂಖ್ಯೆ ಏನೂ ಕಡಿಮೆ ಇಲ್ಲ. 


ಅದರಿಂದ ಎಲ್ಲಾ ನಾನು ದೂರ ಇದ್ದೇನೆ, ಎಂದು ಪ್ರಸಿದ್ಧ ಕವಿಗಳ ಈ ಭಾವಗೀತೆಯ ಸಾಲು ಮನಸ್ಸಿಗೆ ಮುದ ನೀಡುವುದಲ್ಲದೆ, ಇಂತಹ ಪ್ರಶಸ್ತಿಗಳ ಕಡೆಗೆ ನನ್ನ ಮನವೂ ಸಾಗದು ಎಂಬ ಆಶಯ ಬಹಳ ಸ್ಪೂರ್ತಿಯನ್ನು ನೀಡುವಂತಿದೆ. ಏನು ಬರೆದರೂ ನನ್ನ ಸಮಾಧಾನಕ್ಕೆ. ಅದನ್ನು ಹಲವು ಸಹೃದಯರು ಒಪ್ಪಿಕೊಂಡು ಪ್ರೋತ್ಸಾಹಿಸುವಾಗ ಇನ್ನು ಬಿರುದು ಸನ್ಮಾನದ ಅವಶ್ಯಕತೆ ಇಲ್ಲ ಎನ್ನುವ ಭಾವ ಬಹಳ ಸೊಗಸಾಗಿದೆ.


ಕಲೆಯ ಹೆಸರಲ್ಲೂ ಹಣ ಗಳಿಸಿ ತಮ್ಮ ಸಂಸ್ಥೆಯನ್ನು ಮೇಲೆ ತೆಗೆದುಕೊಂಡು ಹೋಗುವ ಸಲುವಾಗಿ ಪ್ರಶಸ್ತಿಗಳನ್ನು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ ಎಂದು ಇನ್ನಾದರೂ ಅರ್ಜಿ ಹಾಕಿ ಅಥವಾ ದುಡ್ಡು ಕೊಟ್ಟು ಕೊಂಡು ಕೊಳ್ಳುವ ಪ್ರಶಸ್ತಿಗಳನ್ನು ಕಲಾವಿದರು, ಬರಹಗಾರರು ತಿರಸ್ಕರಿಸಬೇಕು. ಶಿವರುದ್ರಪ್ಪನವರ ಈ ಸಾಲುಗಳಲ್ಲಿ ಸಂಭ್ರಮವಿದೆ, ನೋವಿದೆ ಹಾಗೆಯೇ ಕುಹಕವಿದೆ. ಇದನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿಗೆ ನಾವೆಲ್ಲರೂ ಬರಬೇಕಿದೆ. ಜೊತೆಯಲ್ಲಿ ಕಲಾ ಸೇವೆ ಅಥವಾ ಸಾಹಿತ್ಯ ಸೇವೆ ಎನ್ನುವ ಸುಂದರ ಆಶಯವನ್ನು ಕಳಂಕಗೊಳಿಸುವ ತಂತ್ರಗಳನ್ನು ಹೊಡೆದು ಹಾಕಲು ಸಂಬಂಧಪಟ್ಟವರು ಶ್ರಮವಹಿಸಬೇಕು ಎನ್ನುವ ಕಳಕಳಿ ನಮ್ಮದಾಗಬೇಕು. ನಿಜವಾದ ಬರಹಗಾರ ಅಥವಾ ಇನ್ಯಾವುದೇ ಕ್ಷೇತ್ರದಲ್ಲಿ ತೊಡಗಿಸಿಕೊಂಡವ ಪ್ರಶಸ್ತಿಯ ಹಿಂದೆ ಹೋಗಲಾರ. ಏನಿದ್ದರೂ ಅವನ ಸಂತೋಷಕ್ಕಾಗಿ ಹಾಗೂ ಸಮಾಜದಲ್ಲಿ ಬದಲಾವಣೆಯನ್ನು ತರುವ ಧ್ಯೇಯವನ್ನು ಇಟ್ಟುಕೊಂಡು ಮುನ್ನಡೆಯುವನಲ್ಲದೆ ಇದನ್ನು ತಿರಸ್ಕರಿಸುವನು. ನಮ್ಮೆಲ್ಲರ ಮನಸ್ಥಿತಿ ಈ ರೀತಿ ಇರಲಿ ಎಂಬುದೇ ಕವಿಯ ಸದಾಶಯ ಹಾಗೂ ಕಳಕಳಿ ಆಗಿದೆ.


ಇಂತಹ ಪ್ರಶಸ್ತಿಗಳ ಹೆಸರಲ್ಲಿ ಕಲೆಗಳ ಪ್ರೋತ್ಸಾಹ ಎಂಬ ಅಡಿಬರಹದಲ್ಲಿ ನಿಜವಾಗಿಯೂ ಮೋಸ ಹಾಗೂ ನಿಜವಾದ ಪ್ರಶಸ್ತಿ ಪಡೆಯುವ ವ್ಯಕ್ತಿಗಳತ್ತವೂ ಸಂಶಯದ ದೃಷ್ಟಿ ಸಾಗುತ್ತಿದೆ ಎನ್ನುವುದೇ ವಿಪರ್ಯಾಸ.


🖋️ *ಹಿತೇಶ್ ಕುಮಾರ್ ಎ*

[30/11, 6:23 PM] Tulasi Naveen: ಬತ್ತದ ತೊರೆ ಬಳಗದ 

ದಿನಾಂಕ  ೨೬/೧೧/೨೦೨೧ ಶುಕ್ರವಾರದ ತಿಂಗಳ ಸ್ಪರ್ಧೆಗೆ

ವಿಷಯ:  ನನಗಿಷ್ಟವಾದ ಭಾವಗೀತೆ ಗಳಲ್ಲಿ ಕೆಎಸ್ ನರಸಿಂಹಸ್ವಾಮಿಯವರ ಬರೆದ "ಒಳಿತು ಮಾಡು ಮನಸ" ಎಂಬ ಹಾಡಿನ ಸಾಲುಗಳು


ಲೇಖನ



ಶೀರ್ಷಿಕೆ :ಒಳಿತು ಮಾಡು ಮನಸ ನೀನ್ ಇರುವುದು ಮೂರು ದಿವಸ


     ಜೀವನವೆನ್ನುವುದು ಮರದಂತೆ  , ಆಲೋಚನೆಗಳು ವೃಕ್ಷದ ಬೇರುಗಳು. 

ನಮ್ಮ ಯೋಚನೆಗಳು ಒಳ್ಳೆಯದಾಗಿದ್ದರೆ ಜೀವನವೂ ಆಹ್ಲಾದಕರ ವಾಗಿರುತ್ತದೆ. ಒಳ್ಳೆ ಯೋಚನೆಗಳೇ ಮನುಷ್ಯನನ್ನು ಮಹನೀಯರನ್ನಾಗಿ ಮಾಡುತ್ತದೆ. ಕೆಟ್ಟ ಯೋಚನೆಗಳೇ ಮನುಷ್ಯನನ್ನು ಸರ್ವನಾಶವನ್ನು ಮಾಡುತ್ತಿದೆ. ಅಂದರೆ  ಆಲೋಚನೆಗಳು ಒಳ್ಳೆಯದಾಗಿದ್ದರೆ ಒಳ್ಳೆಯ ಜೀವನ ನಡೆಸಬಹುದು. ಜೀವನದಲ್ಲಿ ಯಾವುದು ಶಾಶ್ವತವಲ್ಲ, ಮೂರು ದಿನದ ಬಾಳು.


    ಆಗ ಮನದಲ್ಲಿ ಬರುವ ಪ್ರಶ್ನೆ ಏನೆಂದರೆ ಒಳಿತು ಯಾವುದು? ಕೆಡುಕು ಯಾವುದು? ಶಾಶ್ವತ ಯಾವುದು? ನಶ್ವರ ಯಾವುದು? ಎಲ್ಲಾ ವಿಷಯದ ಆಮೇಲೆ ತಿಳಿದುಕೊಳ್ಳೋಣ.

    ನನಗೆ ಕೆಎಸ್ ನರಸಿಂಹಸ್ವಾಮಿಯವರ ಬರೆದ ಆ ಸಾಲು  ಒಳಿತು ಮಾಡು "ಮನಸ ನೀನಿರುವುದು ಮೂರು ದಿವಸ  ಇಷ್ಟ" ಎಕೆಂದರೆ ಅದರ ಲಯವೂ ಇಷ್ಟ.  ಭಾವಾರ್ಥ ಕೂಡ ಆಳವಾಗಿದೆ.

 ಇದರ ಆಳವಾದ ಅರ್ಥ ನನಗೆ ಆರಾಮ ಇಲ್ಲದೇ ಇದ್ದಾಗ ಮನಸ್ಸಿಗೆ ನಾಟಿತು, ನನ್ನ ಸಂಬಂಧಿಕರೊಬ್ಬರು ನಾನು ಹಿಂದೆ ಅವರ ಅಮ್ಮನಿಗೆ ಮಾಡಿದ ಸಹಾಯವನ್ನು ನೆನೆದು ನನಗೆ ಶುಶ್ರೂಷೆ ಮಾಡಿದರು.

   ಹೀಗೆ ನಾವ್ಯಾರು ಶಾಶ್ವತವಲ್ಲ. ನಮಗೂ ಕಾಯಿಲೆಗಳು ಬರುತ್ತವೆ. ಗುಣವಾಗುತ್ತವೆ. ನಾವು ಒಳ್ಳೆ ನನ್ನ ಮೈಗೂಡಿಸಿಕೊಳ್ಳಬೇಕು ಒಳ್ಳೆ ವರಾಗಿರಬೇಕು. ‌ ಅದರಿಂದ ಒಳ್ಳೇದೆ ಆಗ್ತದೆ. ಆತ್ಮವಿಶ್ವಾಸವಿರಬೇಕು ಆತ್ಮವಂಚನೆ ಮಾಡಬಾರದು. ಹಾಗಂತ ಸ್ವಾರ್ಥಿಗಳೂ ಆಗಬಾರದು . ಕಾಮ ಕ್ರೋಧ ಮದ ಮತ್ಸರ ಲೋಭ ಮೊದಲಾದ ಗುಣಗಳನ್ನು ಬಿಡಬೇಕು.

ಅಂತೆ ಯೇ ಪಲಾಯನವಾದ ದೊಡ್ಡ ವೇದಾಂತ ಸೋಮಾರಿತನ ಆತ್ಮವಂಚನೆ ನಿರಾಶವಾದ ಯಾವುದು ನಮ್ಮಲ್ಲಿ ಇರಕೂಡದು.

ನಾವು ಸಾಧಾರಣ ಅರ್ಧ ಆಯುಷ್ಯವನ್ನು ಕಳೆದು ಆಯ್ತು. ಇನ್ನರ್ಧ  ಆಯುಷ್ಯವನ್ನು ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ದೇವರಿಗೆ ಪ್ರಿಯರಾಗಿ, ಸಮಾಜದ ಒಳಿತಿಗಾಗಿ ಜೀವಿಸಿ ಜೀವನವನ್ನು ಸಾರ್ಥಕ ವಾಗಿಸುವ ಎನ್ನುವುದು ನನ್ನ ಹಾರೈಕೆ.


ಎಂ ರಮಿತಾಎ ಶೆಟ್ಟಿ ಬೈಂದೂರು

No comments:

Post a Comment

ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...