Monday, November 29, 2021

ಕನ್ನಡದಲ್ಲಿ ಸುನೀತ ಅಥವಾ ಅಷ್ಟ ಷಟ್ಪದಿ ಕವಿತೆಗಳ ಸಂಗ್ರಹ



ಬತ್ತದ ತೊರೆ ಸ್ನೇಹ ಬಳಗದ ಸುನೀತಾ ರಚನೆ ಅಥವಾ ಅಷ್ಟ ಷಟ್ಪದಿಯಲ್ಲಿ ಕವನ ರಚನೆ : 


ವಿಷಯ: ಕನ್ನಡಕ್ಕಾಗಿ ಕೈ ಎತ್ತು


ಕನ್ನಡಕ್ಕಾಗಿ ಕೈ ಎತ್ತು


ಕನ್ನಡಕ್ಕಾಗಿ ಕೈ ಎತ್ತುತಲಿ

ಸನ್ನುಡಿಯ ಗೌರವವು ನಿಜ

ಕನ್ನಡ ಭಾಷೆ ಮೆರೆಯುತಿರಲಿ

ಮನ್ನಣೆ ಗಳಿಸುತಲಿ ಸಹಜ


ಕನ್ನಡ ನೆಲವಿದು ಗಂಧದ ಬೀಡು

ಘನ್ನ ಪರಂಪರೆ ಸಂಸ್ಕೃತಿಯು

ಬನ್ನವಾಗದಭಿಮಾನದಿ ಹಾಡು

ಭಿನ್ನವು ಜನರ ಸುಸಂಸ್ಕೃತಿಯು


ತನ್ನತನವನುಳಿಸುತ ಕನ್ನಡಿಗರು

ಕನ್ನಡ ಭಾಷೆಯ ಮರೆಯದೆಯೆ

ಸನ್ನತಿಯಲಿ ಕನ್ನಡವಿರಲುಸಿರು

ಕನ್ನಡದುಳಿವಿಗೆ ಮನದಿ ದಯೆ


ಗಣ್ಯ ಭಾಷೆಯಿದು ಕನ್ನಡವು

ಪುಣ್ಯದ ನೆಲದಲಿ ಹುಟ್ಟಿಹೆವು


           - ಡಾ. ಎ.ಕೇಶವರಾಜ್🙏

              ೨೯-೧೧-೨೦೨೧

ವಿಷಯ:-ಕನ್ನಡಕ್ಕಾಗಿ ಕೈ ಎತ್ತು

ಶೀರ್ಷಿಕೆ:-ಕನ್ನಡಮ್ಮನ ಸೇವೆ


ಭುವನೇಶ್ವರಿಯ ಮಡಿಲಲಿ

ಕಾವ್ಯಲೋಕ ಮೈವೆತ್ತಿದೆ

ನವ ನಮ್ಯತೆಯ ಹೊನಲಲಿ

ಭವ್ಯ ಸೃಷ್ಠಿ ಮೈತಳೆದಿದೆ//


ಅಕ್ಕರೆಯ ತಾಯ ಒಲವಂತೆ

ಸಕ್ಕರೆಯ ಸವಿ ನುಡಿಯಿದು

ಮಿಕ್ಕಭಾಷೆಗೆ ಸೋದರಿಯಂತೆ

ಚೊಕ್ಕವಾದ ಅಕ್ಷರ ದೀಪವಿದು//


ಶುದ್ಧವಾದ ನುಡಿ ಉಲಿಯುತಿರಲಿ

ಬದ್ಧ ನಾವು ಕನ್ನಡ ನೆಲದ ಸೇವೆಗೆ

ಗೆದ್ದು ಬೀಗುವೆವು ನಲಿಯುತಲಿ

ಸಿದ್ಧಿಸುವುದೆಲ್ಲ ನಮ್ಮ ಬಾಳಿಗೆ//


ಕನ್ನಡಕ್ಕಾಗಿ ನಾವ್ ಕೈ ಎತ್ತಬೇಕು

ಕನ್ನಡತನ ಸದಾ ಉಳಿಯಬೇಕು//


ಆನಂದಜಲ,ಶಿಕ್ಷಕಿ, ತುರುವೇಕೆರೆ

🍁ವಿಷಯ :ಕನ್ನಡಕ್ಕಾಗಿ ಕೈಯೆತ್ತು


ಕನ್ನಡಕ್ಕಾಗಿ ಸದಾ ಕೈಯೆತ್ತುತಲಿರು

ಕನ್ನಡಿಗನ  ಮಿಡಿಯುವುದು

ಕನ್ನಡನುಡಿಯ ನುಡಿಯುತಲಿರು

ಕನ್ನಡವೆನುತ ಹೃದಯ ಬಡಿಯುವುದು


ಸಂಸ್ಕೃತಿ ನಾಡು ಹಸುರಿನ ಪೈರು

ರಾಜಾಧಿರಾಜರಾಳಿದ ಪುಣ್ಯಭೂಮಿ

ಕಾಡಿನ ನಾಡು ಶ್ರೀಗಂಧದ ತೇರು

ಇದ ನೋಡಿ ಜಿಗಿದಾಡುವ ನಿಸರ್ಗ ಪ್ರೇಮಿ


ಸಾಧುಸಂತರು ಸಂಗೀತ ಶಿಲ್ಪಕಾರರು

ಸಾಧಿಸಿ ನೀಡಿದ ಕೊಡುಗೆಗಳಪಾರ

ಪಡೆದರನೇಕ ಪುರಸ್ಕಾರವ ಕವಿಗಳು ದಾಸರು

ಓದಿಅನುಭವಿಸು ಕಾವ್ಯದ ಅಮೃತಸಾರ


ಕನ್ನಡವೆನುತಲೇ ಇರು ಸದಾ ನೀ ಮಗು

ಕನ್ನಡಮ್ಮನ ಮೊಗದಲ್ಲಿ ಕಾಣುವೆ ನೀ ನಗು


✍️ ಶ್ರೀಮತಿ ರೇಖಾ ಜಿ.ನಾಯಕ

ಮುಖ್ಯಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಬೆಳಗಾವಿ.


ಶೀರ್ಷಿಕೆ : ಕನ್ನಡ ಬೆಳಗೋಣ


ಭವ್ಯ ಪರಂಪರೆ ಸಂಸ್ಕೃತಿ ಹೊಂದಿಹ

ಹೆಮ್ಮೆಯ ನಗರಗಳಿತಿಹಾಸ

ನಾಡಿಗಾಗಿ ಕೀರ್ತಿಯ ತಂದಿಹ

ಹೆಮ್ಮೆಯ ಮನುಜರ ಸಹವಾಸ


ಹಳ್ಳಿ ದಿಲ್ಲಿಗಳ ಸೂರೆಗೊಂಡಿಹುದು

ರಾಷ್ಟ್ರಪೀಠಗಳ ದಿವ್ಯತೆಯು

ವಿದೇಶಗಳಿಗೂ ಸವಾಲೆಸೆದಿಹುದು

ಸಿಲಿಕಾನ್‌ ಸಿಟಿಯ ಭವ್ಯತೆಯು


ವೈವಿಧ್ಯತೆಯ ಸುಂದರ ಬೀಡು

ಸೊಬಗಿನ ಐಸಿರಿಯ ಬಿಂಬ

ಆಗಿದೆ ನಮ್ಮಯ ನಲ್ಮೆಯ ನಾಡು

ಪುಟ್ಟ ಭಾರತದ ಪ್ರತಿಬಿಂಬ


ಇಂತಹ ಸುಂದರ ನಾಡಿನ ಭವ್ಯತೆ ಎಲ್ಲರಿಗೂ ಸಾರೋಣ

ನಮ್ಮಯ ನುಡಿಯ ಸುಮಧುರ ಸಂಸ್ಕೃತಿ ನಾವೆಂದಿಗೂ ಬೆಳಗೋಣ


ಶ್ರೀಕಲಾ ಬಿ ಕಾರಂತ್

ಅಳಿಕೆ,  ಬಂಟ್ವಾಳ ತಾಲೂಕು


ಶೀರ್ಷಿಕೆ:ನಮ್ಮ ಹೆಮ್ಮೆಯ ನಾಡು ನುಡಿ

ನಮ್ಮ ನಾಡು ಸಂಸ್ಕೃತಿಯ ನೆಲೆವೀಡು 

ವೀರಸಾಧಕರ ಕರ್ಮಭೂಮಿ

ನಾಡು-ನುಡಿಗಾಗಿ ಸರ್ವಸ್ವವನ್ನು ತೆತ್ತವರ ಬೀಡು

ಪ್ರಕೃತಿಮಾತೆಯ ಸುಂದರ ಭೂಮಿ


 ರಾಜ್ಯೋತ್ಸವವನ್ನು ಜಾತಿಭೇದವಿಲ್ಲದೆ ಆಚರಿಸುವ

ಎಂ ರಾಮಮೂರ್ತಿಯವರು ತೋರಿಸಿದ ಬಾವುಟದಲ್ಲಿ

ಹಳದಿ ಹಸಿರು ಬಣ್ಣಗಳ ಸುಂದರ ಬಾವುಟವ

ನಮ್ಮ ರಾಜ್ಯವು ಸರ್ವಧರ್ಮಗಳ ನೆಲೆಯಲ್ಲಿ


ಕುಂದಾಪುರ ಕನ್ನಡ ಮೈಸೂರು ಕನ್ನಡ ಭಾಷೆ

ಉತ್ತರ ಕರ್ನಾಟಕದ ಇನ್ನೊಂದು ಶೈಲಿಯು

ಈ ನಾಡಿಗರು ಹೆಮ್ಮೆಯಿಂದ ಆಡುವ ಭಾಷೆ

ದುಂಡು ಅಕ್ಷರಗಳ ಸುಂದರ ಮಾಲೆಯು


ನಮ್ಮೀ ತಾಯಂದಿರ ಉಲಿಯುವ ಭಾಷೆ

ಕನ್ನಡಿಗರಾದ ನಾವು ಹೆಮ್ಮೆ ಆಡುವ ಭಾಷೆ


ಎಂ ರಮಿತಾ ಎ ಶೆಟ್ಟಿ

ಬೈಂದೂರು ಪಡುವರಿ


ವಿಷಯ-ಕನ್ನಡಕ್ಕಾಗಿ ಕೈಯೆತ್ತು.

****************************

          ಬಳಸಿ ಬೆಳೆಸೋಣ

****************************

ಜನ್ಮ ಭೂಮಿಯದು ಕನ್ನಡದ ನೆಲವು

ಕನ್ನಡಕ್ಕಾಗಿ ದನಿಯೆತ್ತು

ತಾಯ್ನುಡಿಯ ಕಡೆಗಿರಲಿ ಒಲವು

ಕನ್ನಡಕ್ಕಾಗಿ ಕೈಯೆತ್ತು


ಧಮನಿ ಧಮನಿಯಲಿ ಕನ್ನಡ ಮಿಡಿಯಲಿ

ನಮ್ಮತನವಾ ಮೆರೆಸೋಣ

ಉಸಿರುಸಿರಲ್ಲೂ ಕನ್ನಡ ಬೆರೆಯಲಿ

ತಾಯನುಡಿಯ ಬಳಸಿ ಬೆಳೆಸೋಣ


ಹಿರಿಮೆಯ ತಾಯ್ನೆಲ ನಮ್ಮಭಿಮಾನ

ಹುಟ್ಟಿರುವುದಿಲ್ಲಿ ನಮ್ಮಯ ಪುಣ್ಯ

ಪಾವನ ಭೂಮಿಯ ಭಾಷಾಭಿಮಾನ

ನೆಲೆಸಲು ಜನುಮವು ವರೇಣ್ಯ


ಮೊಳಗಲಿ ಎಲ್ಲೆಡೆ ಕರುನಾಡಿನ ಗುಣಗಾನ

ನಮ್ಮೀ ಸವಿನುಡಿ ಜನಜನಿತವಾಗಿರಲಿ ಅನುದಿನ


ಶ್ರೀಮತಿ ವಿಜಯಾ ಜಿ ಶೆಟ್ಟಿ

ಸಿರ್ಸಿ (ಉತ್ತರ ಕನ್ನಡ )


ಶೀರ್ಷಿಕೆ : ಕನ್ನಡಿಗನೆಂಬ ಗರ್ವ


ಹೊನ್ನಿನ ಭಾಷೆಯ ಪರಿಮಳವನು ಹೀರುತ

ಮಣ್ಣಿನ ಋಣದಲಿ ಈ ಬದುಕನು ಸಾಗಿಸುವೆ

ನಾಡಿನ ಹಿತಕೆ ಭಾಷೆಯು ಸೊಗಡು ಬೀರುತ

ನೀಡಿರುವ ಅನುಗ್ರಹದಲಿ ಕನ್ನಡಕೆ ಕೈ ಎತ್ತುವೆ.


ಕನ್ನಡಕ್ಕಾಗಿ ಕೈ ಎತ್ತು ಎಂದು ಸಾರುತ ಎಲ್ಲೆಡೆ

ಸನ್ನಡತೆಯ ಪ್ರತೀಕದಲ್ಲೇ ಗೆಲುವನು ನೋಡಿ

ಅಭಿಮಾನದ ಶರಧಿಯಲಿ ತೇಲುತ ಮುನ್ನಡೆ

ಲಭಿಸಿದ ಅವಕಾಶ ಬಳಸಿ ಮಾಡುವೆ ಮೋಡಿ.


ನಾಲಗೆಯಲಿ ಹರಿದಾಡುತಿಹ ಕನ್ನಡದ ಪ್ರೀತಿ

ಮೇಲುಗೈ ಸಾಧಿಸುವ ಛಲವನಂದೇ ತಂದಿದೆ

ಗಡಿನಾಡಿನ ಮಡಿಲಲಿ ಮೊಳಗಿ ಸದ್ದಾದ ರೀತಿ

ಒಡಲಿನ ದಾಹವು ನೀಗುತ ಗೆಲುವು ಮೂಡಿದೆ.


ಎಲ್ಲಿ ಹೋದರೂ ಕನ್ನಡಿಗನೆಂಬ ಗರ್ವವಿರಲಿ

ಗಲ್ಲಿಗಳಲೆಲ್ಲಾ ಹಬ್ಬುತ ಸೊಬಗು ಮೆರೆಯಲಿ.


🖋️ ಹಿತೇಶ್ ಕುಮಾರ್ ಎ


ಸುನೀತ. : ಕನ್ನಡಕ್ಕಾಗಿ ಕೈ ಎತ್ತು

ಹರಿನರಸಿಂಹ ಉಪಾಧ್ಯಾಯರು


ಕನ್ನಡದ ಓ ಮಕ್ಕಳಿರಾ ಕರುನಾಡ ಮರೆಯದಿರಿ 

ಮಣ್ಣಿನ ಋಣವಿಹುದು ನಮ್ಮ ನಿಮ್ಮೆಲ್ಲರಲಿ

ಭವ್ಯತೆಯನು ಸ್ಥಾಪಿಸಲು ನೀವೊಂದಾಗಿ ಬನ್ನಿರಿ

ನಾಡು ನುಡಿಗಾಗಿ ಈ ತನುವೆಂಬ ಸದ್ಭಾವವಿರಲಿ


ಭಾಷಾಭಿಮಾನವಿರಬೇಕು ಪ್ರತಿ ಕನ್ನಡಿಗನಲ್ಲಿ

ಅಂಧಾನುಕರಣೆಯೇಕೆ? ನುಡಿಯಿರಿ ನೀವಿದನು

ಕಲಿತಿರಲು ನೂರೆಂಟು, ಬಳಸಿರದನು ಅಲ್ಲಲ್ಲಿ

ಕರ್ನಾಟಕ ನೆಲದಲ್ಲಿ ನೀವಾಡಬೇಕು ಕನ್ನಡವನು


ಘೋಷವಾಕ್ಯವಿದು ಕನ್ನಡಕ್ಕಾಗಿ ಕೈ ಎತ್ತು ಎಂದು

ನರನಾಡಿ ತುಂಬೆಲ್ಲ ಹರಿಯಬೇಕದರ ದಿವ್ಯಶಕ್ತಿ

ಎಲ್ಲಿದ್ದರೂ ಮನವು ಮಾತ್ರ ಇಲ್ಲೇ ಇರುವುದೆಂದು

ಎತ್ತರಿಸಿ ಹೇಳಿರದನು, ನಮಗಿಹುದಿಲ್ಲಿ ಮುಕ್ತಿ


ಯಾರೇನೇ ಅಂದರೂ ಕನ್ನಡವ ಬಿಡೆವು ನಾವು

ನಿತ್ಯ ಕೇಳಲಿ ಸಿರಿಗನ್ನಡಂ ಗೆಲ್ಗೆ ಎಂಬೀ ಮಂತ್ರವು


ಹರಿನರಸಿಂಹ ಉಪಾಧ್ಯಾ

Thursday, November 25, 2021

ಕನ್ನಡ ಶಿಶುಗೀತೆಗಳ ಸಮಗ್ರ ಸಂಗ್ರಹ

ಶಿಶುಗೀತೆಗಳ ಸಮಗ್ರ ಸಂಗ್ರಹ



[24/11, 6:34 PM] Anandajala Teachr: *ಶಿಶುಗೀತೆ ರಚನೆ*


*ಬೆಳದಿಂಗಳ ಚಂದಿರ*


ಹುಣ್ಣಿಮೆ ರಾತ್ರಿ ಸೊಬಗಲಿ

ಚುಕ್ಕಿಗಳ ನಡುವೆ ನಗುತಲಿ

ಮೋಡದ ಮೇಲೆ ತೇಲುತಲಿ

ಬೆಣ್ಣೆಯ ಮುದ್ದೆಯ ತೆರದಲ್ಲಿ

ಆಗೋ ಬಂದನು ಬೆಳ್ಳಿ ಚಂದಿರ

ನೋಡಲು ಇವ ಬಲು ಸುಂದರ

ಹಾಸಿದ ನೊರೆವಾಲ ಹಂದರ

ತಂಪು ಬೆಳದಿಂಗಳ ಚಂದಿರ//


*ರವಿತೇಜ ಬಂದ*


ಮೂಡಣದಿ ಹೊಂಬೆಳಕ ತಂದ

ಮುಂಜಾನೆ ರವಿತೇಜ ಬಂದ

ಎಲ್ಲೆಲ್ಲೂ ಕಾಂತಿಯ ಚೆಲ್ಲಿದ

ಭೂ ತಾಯಿಯ ಬೆಳಗಿಸಿದ

ಕತ್ತಲೆಯ ತಾ ಓಡಿಸಿ

ಮಲ್ಲಿಗೆ ಮೊಗ್ಗನು ಅರಳಿಸಿ

ಮನಕೆ ಮುದವನು ತರಿಸಿ

ಬಂದ ರವಿ ಬೆಳಕ ಸುರಿಸಿ//


*ಆನಂದಜಲ,ಶಿಕ್ಷಕಿ*

  *ತುರುವೇಕೆರೆ*

[24/11, 6:43 PM] Saritha Akka Herady: *ಸ್ಪರ್ಧೆಗಾಗಿ:- ಶಿಶುಗೀತೆ ರಚನೆ*

*ವಿಷಯ :-ರವಿತೇಜ ಬಂದ*

*ಶೀರ್ಷಿಕೆ:-ರವಿಮಾಮ*


 ಹೊಂಬಣ್ಣದಿ ಮೂಡುತ

ಹೊಂಗಿರಣವ ಬೀರುತ

ಪಳಪಳನೆ ಹೊಳೆಯುತ

ಬಂದನು ರವಿತೇಜ ಮಿನುಗುತ||


ಜಗದಗಲಕೂ ಬೆಳಕ ನೀಡುವನು 

ಕತ್ತಲೆಯನು ಒದ್ದೋಡಿಸುವನು

ಗಗನ ಕುಸುಮ ಶಶಿಕಿರಣನು 

ಅವನೇ ನಮ್ಮ ರವಿಮಾಮನು||


*ಸರಿತಾ ಅಂಬರೀಷ್ ಕುತ್ಪಾಡಿ*✍🏻


*************************


*ವಿಷಯ:-ಬೆಳದಿಂಗಳ ಚಂದಿರ*

*ಶೀರ್ಷಿಕೆ:-ಆಗಸದರಸ*


 ಮೋಡದ ಮರೆಯಲಿ ನಗುವವನು

ಜಗಕೆ ತಂಪನು ನೀಡುವನು

ಹಾಲಿನ ಬಣ್ಣದಿ ಹೊಳೆಯುವನು

ಆಗಸದರಸ ಚಂದಿರನು||


ಬಿಸಿಲ ಬೇಗೆಯನು ತೊಡೆಯುವನು

ಹುಣ್ಣಿಮೆರಾತ್ರಿಯಲಿ ನಗುವನು

ಮಂದಬೆಳಕನು ನೀಡುವನು

ನಮ್ಮ ಮುದ್ದಿನ ಚಂದಮಾಮನು||


*ಸರಿತಾ ಅಂಬರೀಷ್ ಕುತ್ಪಾಡಿ*✍🏻

[24/11, 7:31 PM] Vijaya G. Madam Wrtr: ಬತ್ತದ ತೊರೆ ಸ್ನೇಹ ಬಳಗ

ಸ್ಪರ್ಧೆ-ಶಿಶುಗೀತೆ

ರವಿತೇಜ ಬಂದ

ಬೆಳದಿಂಗಳ ಚಂದಿರ

**************************

ರವಿತೇಜ ಬಂದ

-------------------------


 ಶೀರ್ಷಿಕೆ   -   ಏಳು ಕಂದ

*************************

ಬಾನೆಲ್ಲಾ ನೋಡು ಕೆಂದಾವರೆ ಬಣ್ಣ

ಇಣುಕುತ ಬಂದನಿಲ್ಲಿ ರವಿಯಣ್ಣ

ಆಕಾಶದ ತುಂಬಾ ಹೊನ್ನಕಿರಣ

ಚಳಿಯ ದೂರಮಾಡಿ ಬಂದ ಅರುಣ


ಕತ್ತಲೆಯ ಓಡಿಸಿ ರವಿತೇಜ ಬಂದ

ಕಂದ ಬೆಳಗಾಯ್ತು ಏಳು ಎಂದ

ಎದ್ದೇಳು ನೋಡು ಬಾ ಪುಟ್ಟಕಂದ

ಕೆಂಪು ಬಣ್ಣದೋಕುಳಿ ನೋಡೆ ಚಂದ


ಬೆಳದಿಂಗಳ ಚಂದಿರ

-----------------------------

ಶೀರ್ಷಿಕೆ- ಚಂದಿರ

************************

ಬಾರೋ ಬಾರೋ ಸುಂದರ

ನೋಡಲ್ಲಿ ಬೆಳದಿಂಗಳ ಚಂದಿರ

ಮಿನುಗುತಿರುವ ತಾರೆಯರ

ಅಂದವ ನೋಡೋ ಸುಕುಮಾರ


ಗೋಲಾಕಾರದ ಚಂದಿರ

ಹೊಳಪು ನೋಡು ಬಂಗಾರ

ಮೋಡದೊಳಗೆ ಅಡಗುವ

ಕಣ್ಣಾಮುಚ್ಚಾಲೆ ಆಡುವ


ಶ್ರೀಮತಿ ವಿಜಯಾ ಜಿ ಶೆಟ್ಟಿ

ಸಿರ್ಸಿ (ಉತ್ತರ ಕನ್ನಡ )

[24/11, 7:52 PM] Usha Dinesh Wrtr: ಬತ್ತದ ತೊರೆ ಶಿಶುಗೀತೆ ಸ್ಪರ್ದೆಗಾಗಿ


1)ರವಿತೇಜ ಬಂದ

       ರವಿರಾಜ

---------------------------

ರವಿತೇಜ ಬಾನಿಂದ ಬಂದ

ಈ ಭುವಿಯ ಕತ್ತಲನು ಕೊಂದ

ಹೊಸತನವು ತನ್ನಿಂದ ಎಂದ

ಬೆಳ್ಳಿ ಬೆಳಕನು ನಮಗಾಗಿ ತಂದ


ಸುಮಗಳು ಚೆಲ್ಲುತ್ತಿವೆ ಗಂಧ

ದುಂಭಿಗಳ ಝೇಂಕಾರ ಚಂದ

ತಂಗಾಳಿ ತೂಗಿರಲು ಆನಂದ

ಬೆಸೆದಿದೆ ಜಗದೊಡನೆ ಬಂಧ


2)  ಬೆಳದಿಂಗಳ ಚಂದಿರ

             ಹೊನಲು

-------------------------------------

ಬೆಳದಿಂಗಳ ಚಂದಿರನೇ ಬಾರ

ಚೆಲುವಾದ ಮುಖವನ್ನು ತೋರ

ಹಾಲ್ಬೆಳಕ ಹೊನಲನ್ನು ತಾರಾ

ಕಂದನ ನಗುವಲ್ಲಿ ಸೇರಾ


ಹಿರಿದಾಗಿ ಹಿಗ್ಗುವವನು ನೀನು

ರಂಗಾಯ್ತು ಬೆಳಗುತಲಿ ಬಾನು

ಕಾಂತಿಯನು ಚೆಲ್ಲುತ್ತಾ ತಾನು

ಚೆಲುವಿಗೆ ಹೋಲಿಕೆಯಾಗುವೆಯೇನು


ಉಷಾ ದಿನೇಶ್

ಶಿವಮೊಗ್ಗ

[24/11, 8:34 PM] Latha Gowda Techr: 🍁ಬತ್ತದ ತೊರೆ ಸ್ನೇಹ ಬಳಗ

🍁ಸ್ಪರ್ಧೆಗಾಗಿ :ಶಿಶುಗೀತೆ


*🍁ವಿಷಯ:- ಬಂದ ರವಿತೇಜ*


ನೋಡು ಕಂದ ಮೇಲೆ ನೋಡು

ಎದ್ದು ಬಂದ ದಿನಕರ

ದೂಡಿ ದೂಡಿ ಕತ್ತಲನ್ನು 

ಬೆಳಕು ತಂದ ಬಾಸ್ಕರ


ಹುಲ್ಲು ಹಾಸ ಮೇಲೆ ಹೊಳೆವ

ಮುತ್ತಿನಂತ ಇಬ್ಬನಿ

ಬಂದ ರವಿತೇಜನನ್ನು ಕಂಡು

ಹಕ್ಕಿಪಿಕ್ಕಿ ಚಿಲಿಪಿಲಿ



*ವಿಷಯ :ಬೆಳದಿಂಗಳ ಚಂದಿರ*


ಬೆಣ್ಣೆಯ ಹಾಗೆಯೇ ತೇಲುತ ಬಂದನು

ತಿಂಗಳ ಬೆಳಕನು ಚೆಲ್ಲುತ ನಿಂದನು

ದುಂಡನೆ ಮೊಗದ ಸುಂದರ ಚೆಲುವ

ಬೆಳದಿಂಗಳ ಚಂದಿರನು


ಹುಣ್ಣಿಮೆ ರಾತ್ರಿಗೆ ತಪ್ಪದೆ ಬರುವ

ಚುಕ್ಕಿಗಳೊಂದಿಗೆ ಹೊಳೆಯುತಲಿರುವ

ಅಂಗಳ ತುಂಬವು ಹೊಳಪನು ಚೆಲ್ಲುವ

ಬೆಳದಿಂಗಳ ಚಂದಿರನು


ಲತಾಗೌಡ 

ಶಿಕ್ಷಕಿ

ಭಟ್ಳಳ

[24/11, 8:34 PM] Pushpa Prasad Udupi: ಸ್ಪರ್ಧೆಗೆ

ವಿಷಯ : ರವಿತೇಜ

               ಬೆಳದಿಂಗಳ ಚಂದಿರ


*ಶೀರ್ಷಿಕೆ : ಜೀವತತ್ವ *

================

ಕತ್ತಲೆ ಮುಸುಕು ಸರಿಸಿ

ರವಿತೇಜ ಮೆಲ್ಲನೆ ಇಣುಕಿಹನು!!


ಹಕ್ಕಿಗಳ ಚಿಲಿಪಿಲಿ ಹಾಡನು ಕೇಳಿ

ಹೊಂಗಿರಣ ಚೆಲ್ಲಿರುವನು!!


ಮುಂಜಾನೆ ಸೂರ್ಯ ರಶ್ಮಿಗೆ

ಒಡ್ಡಲು ಮೈ ಸಿಗುವುದು ಡಿ ಜೀವಸತ್ವ!!


ಜಗ ಬೆಳಗುವ ರವಿಮಾಮನೊಳಪಿಗೆ

ಎಲ್ಲರೊಂದೇ ಎನ್ನುವ ತತ್ವ!!


************************************

*ಶೀರ್ಷಿಕೆ : ಪೂರ್ಣಚಂದ್ರ*

==================


ಚಂದಮಾಮ ಬಾನಿನಲ್ಲಿ

ನಗುತ ಏನು ಮಾಡುವೆ?


ಇಳೆಗೆ ಇಳಿಯೋ ಎನ್ನಲು ನಾ

ಮುನಿಸಿಕೊಂಡೆ ಏತಕೆ?


ಹುಣ್ಣಿಮೆಯಲ್ಲಿ ಪೂರ್ಣಚಂದ್ರ

ನೀನೆ ತಾನೆ ಸುಂದರ!!


ಇರುಳು ಕಳೆಯೇ ಮತ್ತೆ ಬರುವ

ಹೊನ್ನ ಹೊಳಪ ನೇಸರ!!


✍️ ಪುಷ್ಪ ಪ್ರಸಾದ್ ಉಡುಪಿ

[24/11, 8:36 PM] Laxmi V Bhat Wrtr: ಶಿಶು ಗೀತೆ



*ಅರುಣೋದಯ*


ರವಿತೇಜ ಬಂದಾಗ

ಬಣ್ಣದಾ ಓಕುಳಿಯು

ಮಕ್ಕಳೆಲ್ಲರ ಮನಗೆದ್ದು

ತಂಗಾಳಿ ಬೀಸುತ್ತಾ

ಮೊಗ್ಗುಗಳು ಬಿರಿದಿರಲು

ಸುರಲೋಕ ಧರೆಯಲ್ಲಿ 

ತನ್ನಿರವ ಪಡೆದಿರಲು

ಹಕ್ಕಿಗಳ ಕಲರವವು


*ತಿಂಗಳ ಬೆಳಕು*


ಬೆಳದಿಂಗಳ ಇರುಳಿನಲಿ

ಆಗಸದ ಚುಕ್ಕೆಗಳ

ನೋಡೋಣ ಚಿಣ್ಣರೇ

ಓಡೋಡಿ ಬನ್ನಿರಿ

ಚಂದಿರನ ಕಾಂತಿಯಲಿ

ಹಾಲನ್ನ ಉಣ್ಣುತ್ತ

ಅಮ್ಮನಾ ಮಡಿಲಿನಲಿ

ಪವಡಿಸುವ ಸಮಯವದು


ಲಕ್ಷ್ಮೀ ವಿ ಭಟ್

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...