Thursday, December 2, 2021

ಕನ್ನಡ ಶಿಶುಗೀತೆಗಳ ಸಮಗ್ರ ಸಂಗ್ರಹ ಭಾಗ ೦೨

 


ಬತ್ತದ ತೊರೆ ಸ್ನೇಹ ಬಳಗ
ವಿಷಯ ಶಿಶುಗೀತೆ ರಚನೆ
ಸ್ಪರ್ಧೆಗಾಗಿ:

ಕರಿಹಲಗೆ ಮತ್ತು ನನ್ನ ಕನಸು

೧) ಅಕ್ಷರಕಲಿಕೆಗೆ ವಿಶಾಲಹೊಲ

ಗುರುಮಂದಿರದೊಳು ನನ್ನಯ ಠಾವೆ
ವಿದ್ಯೆಯ ಗಳಿಸಲು ಬಳಸುವರೆನ್ನನು
ಗುರುಗಳಿಗಂತೂ ನಾನೇ ಸನಿಹ
ನನ್ನಮುಖ ಕಪ್ಪಾಗಿದ್ದರೂ ನುಣ್ಣಗೆ ಹೊಳಪಿನದು
ಮುತ್ತಿನಕ್ಷರಗಳ ಗೀಚುವರೆನ್ನೆದೆಯಲಿ
ಜ್ಞಾನದಾಹಿಗೆ ಅಕ್ಷರ ಬಿತ್ತುವ ಹೊಲ ನಾನು
ವಿದ್ಯಾರ್ಥಿಗಳ ಹೃದಯದಿ ಜ್ಞಾನ ಹರಡುವೆನು
ಗುರುಶಿಷ್ಯರಿಬ್ಬರಿಗೂ ನಾನೇ ಅಚ್ಚುಮೆಚ್ಚಿನವನು

೨) ಸಾರ್ಥಕ ಕನಸು 

ಅಮ್ಮ ನಾನೊಂದು ಕನಸ ಕಂಡೆನು
ಬಾಪೂಜಿ ವಿವೇಕಾನಂದ ಕಲಾಂ ರ ಕಂಡೆನು
ಮೋಸ ಕಪಟ ವಂಚನೆಗಳನ್ನೆಂದೂ ಮಾಡೆನು
ಮಾತೃಭೂಮಿ ಏಳಿಗೆಗೆ ಸಜ್ಜಾಗುವೆನು
ಶ್ರಮವಹಿಸಿ ಕಲಿತು ಬೆಳೆಯುವೆನು
ಒಳ್ಳೆಯ ಕಾಯಕನಿರತ ಯೋಗಿ ನಾನಾಗುವೆನು
ಜ್ಞಾನದ ಶಿಖರವ ಚುಂಬಿಸಿ ಆನಂದಿಸುವೆನು
ಜನನಿ ಜನ್ಮಭೂಮಿಗೆ ನನ್ನ ಮುಡಿಪಾಗಿಸುವೆನು

 -- ಶ್ರೀಮತಿ ಗಿರಿಜಾ ಹಿರೇಮಠ

ಬತ್ತದ ತೊರೆ ಸ್ನೇಹ ಬಳಗ
ಸ್ಪರ್ಧೆಗಾಗಿ ಶಿಶುಗೀತೆ 
ವಿಷಯ : ಕರಿಹಲಗೆ ಹಾಗೂ ನನ್ನ ಕನಸು

 ಅಕ್ಷರ ಕಲಿಕೆಗೆ ಸಹಕಾರಿ

ಕರಿಹಲಗೆಯ ಮೇಲೆ ಅಕ್ಷರ ಕಲಿಸುವ ಶಿಕ್ಷಕಿ.
ಮಕ್ಕಳ ಪಾಲಿಗೆ ಅವಳೇ ಮುಂದಿನ ನಾಯಕಿ.
ನಮ್ಮೆಲ್ಲರ ಭವಿಷ್ಯಕ್ಕೆ ಹಾಕುವ ಭದ್ರ ಬುನಾದಿ.
ಅಕ್ಷರವನ್ನು ಕಲಿತು ಬಾಳಿದರೆ ಆದೇ ಯುಗಾದಿ.

ಎಲ್ಲರೂ ಕಲಿತು ಜಾಣರಗೋಣ ಬನ್ನಿ ಮಕ್ಕಳೇ.
ಸರಿ ತಪ್ಪು ತಿಳಿಯಲು ಸಹಾಯ ಕೇಳಿ ಹೂಗಳೇ.
ಕರಿಹಲಗೆಯೆಂದು ದೂರುವುದು ಸರಿಯಲ್ಲ ನೀವು.
ಭವ್ಯ ಭಾರತದ ನಿರ್ಮಾಣಕ್ಕೆ ನಾಂದಿ ಆಗುವುದು. 

 ಕನಸು ಕಂಗಳ ಚೆಲುವೆ 

ಕನಸು ಕಂಗಳ ಚೆಲುವೆಗೆ ಎಲ್ಲರಂತೆ ಇರುವಾಸೆ.
ಎಲ್ಲರೊಂದಿಗೆ ನಕ್ಕು ನಲಿದು ಬೆರೆಯುವ ಮನಸು.
ಸೂರ್ಯನ ಕಿರಣಗಳನ್ನು ಹಿಡಿದು ಆಡುವ ಕನಸು.
ಬೆಳದಿಂಗಳ ರಾತ್ರಿಯ ಸೊಬಗಿನ ಹೊಂಗನಸು.

ಹಕ್ಕಿಯಂತೆ ಹಾರಾಡುವ ಕನಸು ಇದೆ ನನಗೆ.
ರೆಕ್ಕೆಗಳೇ ಇಲ್ಲವಲ್ಲ ಎಂಬ ಕೊರಗು ಎನಗೆ.
ನಿನ್ನ ಆಸೆಗೆ ಹಾರಾಡುವ ವಿಮಾನವಾಗುವೆ.
ನನಸಾಗುವ ಕಾಲ ಬಂದೆ ಬರುವುದು ಮಗುವೇ.

✍️ ಕು|ಪೂರ್ಣಿಮಾ.ಹೆಚ್.ಬಿ.
     ಕಲ್ಕೆರೆ. ಹಾಸನ


ವಿಷಯ : ಕರಿ ಹಲಗೆ

ಅಮ್ಮ ನೋಡೇ ಅಣ್ಣನ
ಶಾಲೆಗೆ ನನ್ನ ಕರೆದುಕೊಂಡು
ಹೋಗನಂತೆ ಜೊತೆ ಅವನ 
ನನಗೂ ಆಸೆ ಕಲಿಯಲು ಕೇಳೆ
ಕಪ್ಪನೆ ಹಲಿಗೆಯಲಿ ಬರೆದಿಹ
ಅ ಆ ಇ ಈ ಯ 
ಕಲಿಯುವೆ ನಾನು ಚೆಂದದಿ 
ಅಣ್ಣನ ಕೂಡಿ 


ನನ್ನ. ಕನಸು

ಬಾನಲ್ಲಿ ಮಿನುಗುವ ಚುಕ್ಕಿ
ನಾ ತರಲೇನೇ ನಿನ್ನ ಹೆಕ್ಕಿ
ಕೂಡಿ ಹಾಡುವ ಬಾರೆ
ನೀನೇ ನನ್ನ ಮಿನುಗುವ ತಾರೆ

ಬಾನಡಿಯಾಗಿ ಹಾರಿ ಬಂದು
ನಿನ್ನಯ ಅಪ್ಪಿ ಹಿಡಿದು ಇಂದು
ತೋರುವೆ ನಾ ಗೆಳೆಯರಿಗಿಂದು
ಅದುವೇ ನನ್ನ ಕಾಡುವ ಕನಸ್ಸೆಂದೆಂದು

ಜಯಶ್ರೀ ಕಿಶೋರ್
ಬೆಂಗಳೂರು


ದಿನಾಂಕ-01-12-2021
ಬುಧವಾರ
ಸ್ಪರ್ಧೆ-ಶಿಶುಗೀತೆ ರಚನೆ
ವಿಷಯ- ಕರಿಹಲಗೆ, ನನ್ನ ಕನಸು
***************************
     ಅಕ್ಷರ ಮೂಡಿಸು
****************************
ಪುಟ್ಟ ಕಂದ ಬಾ ಬೇಗ
ತೋರುವೆ ನಿನಗೆ ಮೋಜೀಗ
ಬಳಪವನ್ನು ಹಿಡಿದುಕೊ
ಬರೆಯುವದನ್ನು ಕಲಿತುಕೊ

ಇಲ್ಲಿದೆ ನೋಡು ಕರಿಹಲಗೆ
ಅಕ್ಷರ ಮೂಡಿಸು ಇದರೊಳಗೆ
ಕಪ್ಪಿನ ಮೇಲೆ ಬಿಳಿ ಚಿತ್ತಾರ
ನೋಡು ಪುಟ್ಟ ಗೋಲಾಕಾರ

ಜಾಣನಾಗು
***********
ಕಂದಾ ಬೇಗ ದೊಡ್ಡವನಾಗು
ಓದಿ ಬರೆದು ಜಾಣನಾಗು
ಗುರು ಹಿರಿಯರಲಿ ಭಕ್ತಿಯಿಡು
ಸಜ್ಜನರ ಸಂಗವ ಮಾಡು

ವಿದ್ಯೆಯನೆಷ್ಟೇ ಕಲಿತರು
ನಡೆದ ದಾರಿಯ ಮರೆಯದಿರು
ನಯ ವಿನಯ ಮೈಗೂಡಿಸು
ನನಸಾಗಿಸು ನೀ ನನ್ನ ಕನಸು

ಶ್ರೀಮತಿ ವಿಜಯಾ ಜಿ ಶೆಟ್ಟಿ
ಸಿರ್ಸಿ (ಉತ್ತರ ಕನ್ನಡ )


 ಕಪ್ಪು ಹಲಗೆಯ ಬಿಳಿ ಅಕ್ಷರ
 
ಆಯತಾಕಾರವದು
ಕಪ್ಪು ಬಣ್ಣ ಇರುವುದು
ಅ ಆ ಎ ಬಿ ಸಿ ಡಿ
ಬಹಳ ಚಂದ ತಿಳಿಸುವುದು
 
ಕಷ್ಟ ಕಷ್ಟ ಲೆಕ್ಕಗಳನು
ಸುಲಭದಲ್ಲಿ ಬಿಡಿಸುವುದು
ಶಿಕ್ಷಕರ ಬಿಳಿ ಅಕ್ಷರ
ನಮ್ಮ ಬಾಳ ಬೆಳಗುವುದು

*****************
 ಲೆಕ್ಕವಿಲ್ಲದ ಕನಸ 

ಬೆಳಗ್ಗೆ ಹಕ್ಕಿಯ ನೋಡಿದಾಗ
ಮೇಲೆ ಹಾರುವ ಕನಸು ನನಗೆ
ಮತ್ತೆ ಹೂವು ನಗುತಿರುವಾಗ
ಪರಿಮಳ ಹರಡುವ ಕನಸು ನನಗೆ

ಟೀಚರ್‌ ಪಾಠವ ಕಲಿಸುವಾಗ
ಶಿಕ್ಷಕನಾಗುವ ಕನಸು ನನಗೆ
ವರಗಳ ಕೊಡುವ ದೇವರ ನೋಡೆ
ದೇವರೆ ಆಗುವ ಕನಸು ನನಗೆ

****************
ಶ್ರೀಕಲಾ ಬಿ ಕಾರಂತ್
ಅಳಿಕೆ, ಬಂಟ್ವಾಳ ತಾಲೂಕು



 ಬತ್ತದ ತೊರೆ ಸ್ನೇಹ ಬಳಗ
ಸ್ಪರ್ಧೆಗಾಗಿ ಶಿಶುಗೀತೆ
ವಿಷಯ :🍁ಕರಿಹಲಗೆ🍁

ಕರಿಹಲಗೆ ನೀನೆಷ್ಟು ಸುಂದರ ಇರುವೆ,
ಮಗುವಿನ ಹಣೆಬರಹ ನೀ ಬದಲಿಸುವೆ,
ಸುಣ್ಣದ ಖಡು ಓಡಾಡೆ ನಿನ್ನ ಮೈ ಮೇಲೆ,
ಮುದ್ದಾದ ಅಕ್ಷರಗಳು ಮೂಡುವವು ನಿನ್ನಯ ಮೇಲೆ/

ಪದ್ಯ-ಗದ್ಯ ಹೊಸ ಶಬ್ದ ನೀ ಪರಿಚಯಿಸುವೆ,
ಲೆಕ್ಕ ಪ್ರಮೇಯ,ಸಮೀಕರಣ ನೀ ತಿಳಿಸಿಕೊಡುವೆ,
ಭೂಪಟ, ಜೀವವಿಜ್ಞಾನದ ಚಿತ್ರ ನಿನ್ನ ಮೇಲೆಒತ್ತಿ,
 ಮಗು ನೀ ಓದು ಹೆಚ್ಚು ಅಂಕ ನಿಂಗೆ ಕಟ್ಟಿಟ್ಟ ಬುತ್ತಿ/


🍁 ನನ್ನ ಕನಸು🍁

ನಾನೊಂದು ಕನಸು ಕಂಡೆನು ಇಂದು,
ಯಾವ ಕಡೆ ನೋಡೆ ಹಚ್ಚ ಹಸಿರೇ ಹಸಿರು,
ನೋಡಿದಾ ಕಡೆಯೆಲ್ಲ ಕಂಡರು ಅಕ್ಷರಸ್ಥರು,
ಜಾತಿ ಭೇದ ಮರೆತು ಹಬ್ಬ ಆಚರಿಸಿದರು/
ರೋಗರುಜಿನೆಗಳು ಸುಳಿದಿಲ್ಲ ಯಾರದೇ ಹತ್ತಿರ,
ಹಣಕಾಸಿನ ಸಮಸ್ಯೆ ಎಲ್ಲವೂ ದೂರ ದೂರ,
ಎಲ್ಲ ಕಡೆ ಶಾಂತಿ, ಸಹನೆ, ಪ್ರೀತಿ, ಇಲ್ಲ ಎಲ್ಲೂ ಕದನ ,
 ಕಂಡೆ ನಾ ಭಾರತಾಂಬೆಯ ಮುಗುಳ್ನಗು ವದನ//


✍️ ಶ್ರೀಮತಿ ರೇಖಾ ಜಿ ನಾಯಕ
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಬೆಳಗಾವಿ



 ಶಿಶುಗೀತೆ ಸ್ಪರ್ಧೆಗಾಗಿ
ವಿಷಯ೧) ಕರಿ ಹಲಗೆ

ದೊಡ್ಡದಾದ ಕಪ್ಪಾದ ಹಲೆಗೆಯಂತೆ
ಹೇಳುವರು ಅದನ ಕರಿಹಲಗೆಯಂತೆ
ಶಿಕ್ಷಕರು ಅದರಲ್ಲಿ ಬರೆಯುವರಂತೆ
ಬಳಸುವರು ಅವರು ಬಳಪದಂತೆ

ಸೀಮೆಸುಣ್ಣದಲಿ ಬರಿತಾರೆ
ಅಕ್ಷರಗಳ ಸಾಲು  ಸಾಲೆ
ಅದು ಕನ್ನಡ ವರ್ಣಮಾಲೆ
 ಕಲಿತು ಬರಬೇಕು ನಾಳೆ

೨) ನನ್ನ ಕನಸು

ನಾನೊಂದು ರಾತ್ರಿಯಲಿ
ಮಲಗಿದ್ದೆ ಹಾಸಿಗೆಯಲಿ
ಅಮ್ಮ ತೇಲುತ್ತಿದ್ದೆ ನಾ ಆಕಾಶದಲಿ
ಕೂತಿದ್ದೆ ತೇಲುವ ಕುರ್ಚಿಯಲಿ

ನಾನಿದ್ದೆ ಆಕಾಶದ ದೊಡ್ಡ ಪರದೆಯಲಿ
ನಾನು ಆಡುತ್ತಿದ್ದೆ ಮೋಜು ಮಸ್ತಿಯಲಿ
ಅಮ್ಮ ಎಬ್ಬಿಸಿದಾಗ ನಾ ಹಾಸಿಗೆಯಲಿ
ಇದೆಲ್ಲ ನಡೆದದ್ದು ನನ್ನ ಕನಸಿನಲಿ

ಎಂ ರಮಿತಾ ಎ ಶೆಟ್ಟಿ 
ಬೈಂದೂರು ಪಡುವರಿ


ಬತ್ತದ ತೊರೆ ಶಿಶುಗೀತೆ ಸ್ಪರ್ದೆಗಾಗಿ

              ಕರಿಹಲಗೆ
        ಕಲಿಕೆಗೆ ಕರಿಹಲಗೆ
           -------------------
ಕಪ್ಪಗೆ ಇರುವುದು ಕರಿಹಲಗೆ
ಉಪಯುಕ್ತ ವಾಗಿದೆ ಕಲಿಕೆಗೆ 

ಗುರುಗಳು ಪಾಠವ ಮಾಡುವರು
ಬಳಪವ ಬಳಸಿ ಬರೆಯುವರು

ಲೆಕ್ಕವ ಅದರಲಿ ಕಲಿಸುವರು
ಚಿತ್ರವ ಕೂಡಾ ಬಿಡಿಸುವರು

ಅಳಿಸುತ ಮತ್ತೆ ಬಳಸುವರು
ನಮಗೆ ಶಿಕ್ಷಣ ನೀಡುವರು

      2)    ನನ್ನ ಕನಸು
   ಚಂದ್ರ ಲೋಕದ ಕನಸು
       ---------------------
ನನ್ನಯ ಕನಸು ಬಲು ಚೆಂದ
ಹೇಳುವೆ ಕೇಳಿ ಮುದದಿಂದ

ಚಂದ್ರನ ಲೋಕಕೆ ಹಾರುವೆನು
ಆತನ ಜೊತೆಯಲಿ ಅಡುವೆನು

ಚುಕ್ಕಿ ತಾರೆಯ ಸೋಕುವೆನು
ಮೋಡದ ಮರೆಯಲಿ ಅಡಗುವೆನು

ಬಾನಿನ ತುಂಬಾ ನಲಿಯುವೆನು
ನನನ್ನೇ ನಾನು ಮರೆಯುವೆನು

ಉಷಾ ದಿನೇಶ್
ಶಿವಮೊಗ್ಗ


ಸ್ಪರ್ಧೆಗಾಗಿ:-ಶಿಶುಗೀತೆ ರಚನೆ
ವಿಷಯ:-ಕರಿಹಲಗೆ
ಶೀರ್ಷಿಕೆ:- ಜಾಣ ಪುಟ್ಟ

 ಸಮವಸ್ತ್ರವ ತೊಟ್ಟು
ಪಾಠಿಚೀಲವ ಹಿಡಿದು 
ಶಾಲೆಗೆ ಹೊರಟನು ಪುಟ್ಟು||

ಅ, ಆ,ಇ,ಈ ಕರಿಹಲಗೆಯಲಿ
ಪುಟ್ಟನು ಬರೆದನು ಸ್ಲೇಟಿನಲಿ
ಸೇರಿತು ಬರಹವು ಮಸ್ತಕದಲ್ಲಿ||

ಶಾಲಾ ಪರೀಕ್ಷೆಯು ಎದುರಾಯ್ತು
ಪುಟ್ಟನ ಅಂಕವು ಮೊದಲಾಯ್ತು||

************************


ವಿಷಯ:-ನನ್ನ ಕನಸು
ಶೀರ್ಷಿಕೆ:-ಕನಸಿನ ಗೋಪುರ

 ಶಾಲೆಗೆ ಹೋಗಿ ಜಾಣನಾಗಿ
ವೈದ್ಯನಾಗುವೆ ನಾನು ವೈದ್ಯನಾಗುವೆ
ಬಡವರ ಸೇವೆ ಮಾಡಿ
ಬದುಕನೀಡುವೆ ನಾನು ಬದುಕನೀಡುವೆ ||

ನನ್ನ ಕನಸು ನನಸಾಗಿಸಲು
 ಸಾಧನೆಯ ರೆಕ್ಕೆಪುಕ್ಕವ ಕಟ್ಟುವೆ
ಹಾರುತ ಹಾರುತ ಗುರಿಯ ಸೇರುತ
ಕನಸನು ನನಸಾಗಿಸುವೆ ನನಸಾಗಿಸುವೆ||

ಸರಿತಾ ಅಂಬರೀಷ್ ಕುತ್ಪಾಡಿ
 ✍🏻 ✒️📚🦢🐓🤍🙏✒️✍🏻✍️

ಇಂದಿನ ಸ್ಪರ್ಧೆಗಾಗಿ:- ಶಿಶುಗೀತೆ ರಚನೆ

ವಿಷಯಗಳು:-1)ಕರಿಹಲಗೆ
                    2)ನನ್ನಕನಸು

೧) ಶೀರ್ಷಿಕೆ:-ಕಪ್ಪು ಬಿಳಿಪಾಯ್ತು

ನಾಳಿನ ನಮ್ಮ ಬದುಕಿಗೆ
ಬೆಳಕಾವುದು ಈ ಹಲಗೆ
ಹೊಳಪಿನ ಮುಂದಿನ ಬಾಳಿಗೆ
ಕಾರಣವಾಗುವುದು ಈ ಕರಿಹಲಗೆ//

ಸೀಮೆಸುಣ್ಣದಿ ಬರೆಯಲು
ಜ್ಞಾನವು ಉಜ್ವಲವಾಗುವುದು
ಗುರುಗಳ ಗುರುತರ ಗುರಿಗೆ
ನಮ್ಮೀ ಜೀವನ ಪ್ರಜ್ವಲಿಸುವುದು//

೨) ಶೀರ್ಷಿಕೆ:-ನಾನೊಂದ ಕನಸ ಕಂಡೆ

ಇರುಳಿನ ನಿದಿರೆಯಲಿ
ಕನಸೊಂದ ಕಂಡೆನು
ಹಕ್ಕಿಯಂತೆ ಹಾರುತ
ಮೇಲೆ ಮೇಲೇರಿದೆನು//

ನೀರಿನೊಳಗೆ ಇಳಿದೆನು
ಮೀನಂತೆ ಈಜಿದೆನು
ಕಣ್ ಬಿಟ್ಟು ನೋಡಿದೆನು
ಮಲಗಿದ್ದಲ್ಲೇ ನಾ ಇದ್ದೆನು//

- ಆನಂದಜಲ,ಶಿಕ್ಷಕಿ
  (ತುರುವೇಕೆರೆ)

ಮಕ್ಕಳ ಸಾಹಿತ್ಯ
ಶಿಶುಗೀತೆ......

೧) ವಿಷಯ : ಕರಿಹಲಗೆ 

              "ಜ್ಞಾನಧಾರೆ"

ಅ ಆ ಇ ಈ ಎಂಬ ಅಕ್ಷರಕೆ ನೀ ಭೂಮಿ ಯಾದೆ 
ನನ್ನೊಳಗೆ ಅಕ್ಷರದ ಬೀಜ ಬಿತ್ತಿದೆ
ಬೀಜ ಸಸಿಯಾಗಿ ಇಂದು ಫಲವ ನೀಡಿದೆ 
ಪೋಷಿಸಿ ಬೆಳೆಸಿದ ಆ ಸರಸ್ವತಿಯ ರೂಪಕೆ ವಂದನೆ....

ಜ್ಞಾನದ ಜೋತಿಗೆ ನೀ ಮೂಲ  ಕಾರಣ 
ದೋಷಗಳನು ಕಳೆದು ನೀಡಿದಿ ಜ್ಞಾನವಾ
ನೀ ನಿಲ್ಲದೆ ಕಲಿಕೆ ಅಪೂರ್ಣ
ನೀ ತೋರುವ ದಾರಿ ಬಲು ಸಂಪೂರ್ಣ..........


೨) ವಿಷಯ: ನನ್ನ ಕನಸು......
 
         "  ನನ್ನಪ್ಪ ಆಸೆ "

ನನ್ನಯ ಅಪ್ಪ ತುಂಬಾ ಬಡವಾ
ದುಡಿಮೆಯೆ ನಮ್ಮ ಬಂಡವಾಳ
ಓದುವ ಬರೆಯುವ ಕನಸು ನನದು
ಆದರು ದಾರಿ ತೋಚುತಿಲ್ಲ

ಕಷ್ಟವೊ ನಷ್ಟವೊ ಒಂದು ಅರಿಯೆ 
ರಾತ್ರಿ ಶಾಲೆ ಕಲಿಯುತಲಿರುವೆ 
ಸಾಧಿಸಿ ತಿರುವೆ ಹಟ್ಟವನು ಬಿಡದೆ
ಅಪ್ಪನ ಬಡತನ ನಿವಾರಿಸಿ ತಿರುವೆ...

-  ನರೇಂದ್ರ ನಾ,ವಾಳ್ವೇಕರ
ರಾಮದುರ್ಗ..

ಶಿಶುಗೀತೆ

೧) ಕಪ್ಪುಹಲಗೆ

ಕಪ್ಪುಹಲಗೆ ಕಪ್ಪುಹಲಗೆ
ಬಿಳಿ ಬಳಪದಿ ಅಕ್ಷರಗಳ ನಲಿಸೋ
ನನ್ನ ಅಚ್ಚುಮೆಚ್ಚಿನ ಕಪ್ಪುಹಲಗೆ
ಬರೆಯುತ್ತಲಿದ್ದರೆ ಗುರುಗಳು 
ಉತ್ಸಾಹದಿ ತಲೆಯೆತ್ತಿ ನೋಡುವೆ ಹಲಗೆಯ ಕಡೆ
ಕೋಲನು ಹಿಡಿದು ಓದುತಲಿದ್ದರೆ
ಭವಿಷ್ಯಕ್ಕೆ ಹಿಡಿದ ಕೈಗನ್ನಡಿ ಹಲಗೆ
ಎಲ್ಲರ ಗುರಿಗೆ ಅಡಿಪಾಯ ಹಾಕುವ ಕಪ್ಪುಹಲಗೆ//

೨) ನನ್ನ ಕನಸು

ಅಮ್ಮ ನಾನು ಶಾಲೆಗೆ ಹೋಗುವೆ
ಗುರುಗಳು ಹೇಳಿದ ಪಾಠ ಕಲಿಯುವೆ
ಓದುತ ಓದುತ ಗುರಿಯೆಡೆ ಸಾಗುವೆ
ನನಗೂ ಕನಸಿದೆ ಸೈನಿಕನಾಗಬೇಕೆಂಬ
ಭಾರತಮಾತೆಯ ಸೇವೆಯ ಮಾಡಬೇಕೆಂಬ
ನನಗೂ ಆಸೆ ಗಾಂಧಿತಾತನಂತಾಗಬೇಕೆಂಬ
ದೇಶೆಕೆ ಶಾಂತಿ ಬಯಸುತ ಉಪವಾಸ ಗೈಯಬೇಕೆಂಬ
ನನಗೂ ಆಸೆ ಪುನೀತನಂತಾಗಬೇಕೆಂಬ
ದುಡಿದು ಸಂಪಾದಿಸಿ ಜನಸೇವೆ ಮಾಡಬೇಕೆಂಬ//

- ಡಾ ಅನ್ನಪೂರ್ಣ ಹಿರೇಮಠ ಶಿಕ್ಷಕಿ ಬೆಳಗಾವಿ

ಸ್ಪರ್ಧೆಗಾಗಿ...
***********
 ೧) ನನ್ನ ಮೆಚ್ಚಿನ ಕರಿ ಹಲಗೆ

ನನ್ನ ಶಾಲೆಯಲ್ಲಿದೆ ಕರಿಹಲಗೆಯು
 ಶಿಕ್ಷಕರು ಕಲಿಸುವರು ಹಲಗೆಯಲ್ಲಿ
 ಕರಿಹಲಗೆ ನನ್ನಿಷ್ಟದ ಕರಿಹಲಗೆ 
ಬಿಳಿ ಅಕ್ಷರದಲ್ಲಿ ಬರೆವ ಕಪ್ಪುಹಲಗೆ

 ಕರಿ ಹಲಗೆಯಲ್ಲಿ ಅ ಆ ಇ ಈ
 ಕರಿಹಲಗೆಯಲ್ಲಿ ಎ ಬಿ ಸಿ ಡಿ 
ನನ್ನ ಇಷ್ಟದ ಚಿತ್ರಗಳು ಕರಿ ಹಲಗೆಯಲ್ಲಿ
ಕರಿ ಹಲಗೆ ನನ್ನ ಮೆಚ್ಚಿನ ಕಪ್ಪು ಹಲಗೆ

*************
೨) ಕನಸು ನನಸ 


ಒಂದು ರಾತ್ರಿ ನನಗೆ ಕನಸು ಬಿದ್ದಿತ್ತು
 ಅಲ್ಲಿ ನಾನು ಬೈಕನ್ನು ಓಡಿಸುತ್ತಿದ್ದೆ
 ಒಂದು ರಾತ್ರಿ ನನಗೆ ಕನಸು ಬಿದ್ದಿತ್ತು
ಅಲ್ಲಿ ನಾನು ಪೋಲೀಸಳಾಗಿದ್ದೆ

 ಒಂದು ರಾತ್ರಿ ನನಗೆ ಕನಸು ಬಿದ್ದಿತ್ತು
 ಅಲ್ಲಿ ನಾನು ಬೊಂಬೆಗಳ ಲೋಕದಲ್ಲಿದ್ದೆ
 ಒಂದು ರಾತ್ರಿ ನನಗೆ ಕನಸು ಬಿದ್ದಿತ್ತು
 ಅಲ್ಲಿ ನಾನು ಕನಸು ನನಸಾಗಲಿ ಎನ್ನುತಿದ್ದೆ


ಶಿರ್ಷಿತಾ ಕಾರಂತ್
4 ನೇ ತರಗತಿ
ಅಳಿಕೆ , ಬಂಟ್ವಾಳ ತಾಲೂಕು

✒️📚🗒️🦢🙏🗒✒️📚🦢🤍🐓
 ೧) ಕರಿಹಲಗೆ 
 ಬನ್ನಿ ಬನ್ನಿ ಸ್ನೇಹಿತರೆ
ಬನ್ನಿ ಶಾಲೆಗೆ ಹೋಗೋಣ
ಹೇಳಿದ ಪಾಠವ ಕೇಳುತಿರೆ
ಗುರುಗಳ ಮಾತನು ಕೇಳೋಣ

ಅಂದದ ಅಕ್ಷರಗಳ ಗುರುಗಳು
ಬರೆವರು ಕರಿಹಲಗೆಯ ಮೇಲೆ
ನೋಡಿ ಬರೆಯೋಣ ಪಾಠಿಯ ಮೇಲೆ
ಜಾಣರಾಗೋಣ ನಾವುಗಳು

೨) ನನ್ನ ಕನಸು

ನಾನು ಶಿಕ್ಷಕಿ ಆಗುವ ಕನಸು
ಕಾಣುತ್ತಿರುವೆ ಹಗಲಿರುಳು
ಆಗಲೇಬೇಕು ಅದು ನನಸು
ನಾನಾಗಬೇಕು ಗುರುಗಳ ನೆರಳು

ಕನಸಿಗಾಗಿ  ಅನುದಿನ ಓದುವೆ
ಒಳ್ಳೆಯ ಅಂಕವ ಪಡೆಯುವೆ
ಗುರುಗಳ ಹೇಳಿದ ಹಾಗೆ ಕೇಳುವೆ
ಕನಸಿನಂತೆ ಒಂದು ದಿನ ಶಿಕ್ಷಕಿ ಆಗೇ ಆಗುವೆ

 - ಕು.ಸುಮಂಗಲಾ ವಿ ಕೆ ✍🏻
✒️📚🗒️🙏🕊️🐓🦢🗒️🤍📚✒️✒️

೧) ಕರಿ ಹಲಗೆ

ಕರಿಯ ಹಲಗೆಯ ಮೇಲೆ ನೋಡಿ
ಬಿಳಿಯ ಅಕ್ಷರದ ಮೋಡಿ
 ಕಪ್ಪು ಎಂದು ಹೀಗಳೆಯಲುಬೇಡಿ
ಬಾಳನು ಬೆಳಗುತ್ತಿರುವುದು ಕತ್ತಲೆ ದೂಡಿ

ಶಾಲೆಯೊಳಗೆ ಮೌನದಿ ಕುಳಿತು
ಬಾಳಿನ ಪುಟದಲಿ ನಾಂದಿಯ ಹಾಡಿತು
ಮಂತ್ರಿ ರಾಜ ಧನಿಕನು ಕೂಡ
ಕಂದ ಅಕ್ಷರ ಕಲಿತದು ಇದರಲಿ ನೋಡ

೨) ನನ್ನ ಕನಸು

ಅಮ್ಮಾ ಕೇಳು ತಮ್ಮನ ಕನಸು
ಬಂದಿದೆ ಅವನಿಗೆ ಬಹಳ ಮುನಿಸು
ನೀನು ಕೋಪವ ಬೇಗನೆ ತಣಿಸು
ಚುಕ್ಕಿಯ ತೋರಿಸಿ ಊಟವ ಮಾಡಿಸು

ತಮ್ಮಗೆ ಮೇಲಕೆ ಹಾರಲು ರೆಕ್ಕೆಯು ಬೇಕಂತೆ
ಚುಕ್ಕಿಯ ಜೊತೆಗೆ ಆಡುವ ಕನಸಂತೆ
ನನಗೂ ಹಾಗೆ ನೂರಾರು ಕನಸುಂಟು
ದೂರದ  ಕನಸನು  ಸಾಧಿಸು ಛಲವುಂಟು

ಲತಾಗೌಡ 
ಶಿಕ್ಷಕಿ
ಭಟ್ಕಳ

೧) ಕರಿಹಲಗೆ...

ಈ ಕಪ್ಪು ಕಣ್ಣದ
 ಹಲಗೆ..
ನಾಳೆಯ ನನ್ನ
 ಬದುಕಿಗೆ..
ಬೆಳಕಿನ ಕಿಂಡಿ
 ಬಾಳಿಗೆ..
ಅಕ್ಷರಗಳಜೋಡ
ಣೆಗೆ ದೀವಿಗೆ..

ಕಲಿಯಲುಕಲಿಸಲು 
ಬೆಳೆಸಲುಉಳಿಸಿ
ಸಾಧಿಸಲುಉನ್ನತ
 ಶಿಖರ ಮುಟ್ಟಲು
 ಅಕ್ಷರದಾಸೋಹದ
ಮೊದಲಹೆಜ್ಜೆ
ಆ ಕರಿಹಲಗೆ...
ನನ್ನ ಬದುಕಿನ
 ದೀವಿಗೆ....

೨) ನಾನು ಕಂಡ ಕನಸು

ನಾನು ಒಂದು
 ಕನಸು ಕಂಡೆ
 ಕನಸಲ್ಲ ವೆಂದು
 ತಿಳಿದುಕೊಂಡೆ.

ಹಕ್ಕಿಯ ಕೊಲ್ಲಲು
 ಬೇಟೆಗಾರನೊಬ್ಬ
ಹೊಂಚು ಹಾಕಿ
 ಸಂಚು ಮಾಡಿ
ಬಾಣವ ಹೂಡಿದ.

ಹಕ್ಕಿಗೆ ಬೀಳುವ
ಬಾಣವು ತಪ್ಪಿ
ನನ್ನ ಎದೆಯ
 ಸೀಳಿತು ಹೊಕ್ಕಿ
ಬಿಚ್ಚಿದ ನಾನು
 ಅಳುತ್ತಾ ಎದ್ದು
 ಕೂತೆ ಬಿಕ್ಕಿಬಿಕ್ಕಿ...
ಕಣ್ಬಿಟ್ಟು ನೋಡಿದ
ನಾನೇ ಕಕ್ಕಾಬಿಕ್ಕಿ..

- ನಾಗರತ್ನ ಹೆಚ್ಎಂ
ಚಂದಾಪುರ


 ಶಿಶು ಗೀತೆ

೧) ಕಪ್ಪು ಹಲಗೆ

ಅಂದದ ಕಪ್ಪುಹಲಗೆಯಲಿ ಇಂದು 
ಮತ್ತೆ ಮೂಡಿದೆ ಸುಂದರ ಅಕ್ಷರ...
ನಮ್ಮೂರ ಚೆಂದದ ಶಾಲೆ ತೆರೆದು
ನಮ್ಮೆಲ್ಲರ ಮನದಿ ಹೊಸ ಸಡಗರ

ಓದು ಬರೆದು ಗೆಳೆಯರ ಜೊತೆಗೆ
ಮೈದಾನದಲ್ಲಿ ವಿವಿಧ ಆಟೋಟ
ನಕ್ಕು ನಲಿಯುತ ಶಿಕ್ಷಕರೊಂದಿಗೆ 
ಕಲಿಯೋಣ ನಾವು ಹೊಸ ಪಾಠ

೨) ನನ್ನಕನಸು

ನಿನ್ನೆ ರಾತ್ರಿ ಕಂಡೆಯೊಂದು ಕನಸು
ನನಸಾದರೆ ಎಷ್ಟೊಂದು ಸೊಗಸು
ಮೈಸೂರಿನಲ್ಲಿತ್ತು ಜಂಬೂ ಸವಾರಿ
ನಾನೇ ಕೂತಿದ್ದೆ ಆನೆಯ ಮೇಲೇರಿ

ಸುತ್ತಲೂ ಸೇರಿದ ಜನರ ಜೈ ಜೈಕಾರ
ರಾಜನ ಧಿರಿಸ್ಸಿನಲಿ ನಾನು ರಣಧೀರ
ನಾನಾದೆ ಮಹಾರಾಜ ನನ್ನ ಕನಸಲ್ಲಿ
ಹರುಷದಲಿ ನಲಿದೆ ಸ್ವಪ್ನ ಲೋಕದಲಿ

                     ✍️ ದಿವ್ಯ ಮನಸು


 ೧) ಬೇಕೆನಗೆ 

ಬರೆಯಲು ಬೇಕು
ಕರಿ ಹಲಗೆ 
ಅಕ್ಷರ ಎಂಬುದು 
ಬಾಳಿಗೆ ದೀವಿಗೆ  //
ಕೈಬರಹ ತೋರಿಸುವ
ಮಾಯಾ ಪೆಟ್ಟಿಗೆ
ಜ್ಞಾನ ದಾಹ ನೀಗಿಸುವ
ಪ್ರೀತಿಯ ಅರವಟ್ಟಿಗೆ   //


ನನ್ನ  ಕನಸು 
೨) ಹೀಗೆ ಮಾಡು ಕಂದಾ 

ಕಂದ ನೀನು ಶಾಲೆಗೆ
ಹೋಗಿ ಜಾಣನಾಗು 
ವಿದ್ಯಾಬುದ್ಧಿ ಕಲಿತು
ಪರರಿಗೆ ಮಾದರಿಯಾಗು  //
ನನ್ನ ಕನಸಿಗೆ ರೆಕ್ಕೆ ಪುಕ್ಕ
ನೀನೇ ಹಚ್ಚಿ ಹಾರಿಸು
ಜಗಮೆಚ್ಚಿದ ಮಗನಾಗಿ
 ಅಮ್ಮನ ಆಸೆ ಪೂರೈಸು   //

- ಶ್ರೀಮತಿ ಜೋಶಿ  ನಿಸರಾಣಿ ಸೊರಬ ಶಿವಮೊಗ್ಗ


೧)ಶೀರ್ಷಿಕೆ : ಕರಿ ಹಲಗೆ
================
ಊರ ಬಯಲಿನ ಮಧ್ಯೆ
ನನ್ನ ಶಾಲೆ ನಿಂತಿದೆ!!

ಸುಂದರ ಪುಷ್ಪವನದ ಮಧ್ಯೆ
ಕೈ ಬೀಸಿ ಕರೆಯುತ್ತಿದೆ!!

ಕರಿ ಹಲಗೆಯಲಿ ಬರೆದು ಕಲಿವೆವು
ನಾವು ಅಕ್ಷರ ಲೋಕದ ಪಾಠ!!

ಬದುಕಿಗೊಂದು ಸುಂದರ ದಾರಿ 
ಗುರುಗಳು ತೋರುವರು ತಿದ್ದಿತೀಡಿ!!
********************************
೨) ಶೀರ್ಷಿಕೆ :ನನ್ನ ಕನಸು
=================
ಸೈಕಲ್ ಹತ್ತಿ ಊರೆಲ್ಲಾ ಸುತ್ತಿ
ಗೆಳೆಯರೊಡನೆ ಆಡಬೇಕು!!

ಮಾವಿನ ಮರಕೆ ಜೋಲಿ ಕಟ್ಟಿ
ಆಡಬೇಕು ನನಗೆ ಜೋಕಾಲಿ!!

ನನಗೆ ನಾನೇ ಕಲಿಯಬೇಕು
ನಾನೇ ನನ್ನ ಗುರುವಾಗಬೇಕು!!

ಸಾಧಿಸಬೇಕು ನಾನು ನಸುನಗೆ ಬೀರಿ 
ಗುರಿಯ ಮುಟ್ಟಬೇಕು ಮೇಲಕ್ಕೇರಿ!!

✍️ ಪುಷ್ಪ ಪ್ರಸಾದ್ ಉಡುಪಿ


೧- ನಲಿಕಲಿ

ಬನ್ನಿರಿ ಚಿಣ್ಣರೆ ತರಗತಿ ಒಳಗಡೆ
ಅಕ್ಕರೆಯಿಂದಲಿ ಬರೆಯೋಣ
ಆಟದ ಬಯಲಲಿ ಬಗೆಬಗೆ ಆಟವ
ಆಡುತ ಎಲ್ಲರು ಬೆರೆಯೋಣ ||

ಸುಣ್ಣದ ಕಡ್ಡಿಯ ಹಿಡಿಯುತ ಗುರುಗಳು
ಬರೆದಿಹ ಅಕ್ಕರ ಕರಿಹಲಗೆ
ಬಣ್ಣದ ಕಡ್ಡಿಲಿ  ಚಿತ್ರವ ಬರೆಯುತ
ಹೆಜ್ಜೆಯ ಹಾಕಲು ಹೊರಗಡೆಗೆ ||

೨- ಬಾಲಿಶ ಕನಸು

ಬಾನಲಿ ಹಾರುವ ಹಕ್ಕಿಯ ಹಾಗೆಯೆ
ನನಗೂ ಹಾರುವ ಆಸೆಯಿದೆ
ನೀರಲಿ ಈಜುವ ಮೀನಿನ ಹಾಗೆಯೆ
ನನಗೂ ಈಜುವ ಆಸೆಯಿದೆ||

ಬಗೆಬಗೆ ಕನಸನು ಕಾಣುವೆ ದಿನವೂ
ಹಗಲೂ ಇರುಳೂ ದಿನನಿತ್ಯ
ಚಿನ್ನದ ಬಣ್ಣದ ತಾರೆಯ ನೋಡುತ
ಹಿಡಿಯುವ ಕಾತುರ ಅನುನಿತ್ಯ ||

- ಲಕ್ಷ್ಮೀ ವಿ ಭಟ್
ಮಂಜೇಶ್ವರ

೦೧-೧೨-೨೦೨೧.


೧) ಕರಿಹಲಗೆ.:-

ಅಕ್ಷರವ ಕಲಿಸುವ ಕಪ್ಪು ಹಲಗೆ
ಅದುವೇ ಅಕ್ಕರೆ ಮಕ್ಕಳ ಪಾಲಿಗೆ 
ಕಲಿಸುವರು ಶಿಕ್ಷಕರು ಇಂದು ನಿಮಗೆ
ನಾಳೆ ಆಗುವಿರಿ ನಾಯಕರು ನಿಮಗೆ.

ಕಲಿಯುವ ಹುಮ್ಮಸ್ಸು ಪ್ರೋತ್ಸಾಹ ನೀಡುವ
ಎಂದೆಂದೂ ಕಡೆಗಣಿಸದಿರಿ ಶಿಕ್ಷಣ ಕಲಿಸುವ
ಪಾಠವ ಕಲಿತಂತೆ ನಾವು ಪ್ರಜೆಯಾಗಿ
ದೇಶದ ರಕ್ಷಣೆಗಾಗಿ ನಾವು ಸಹಾಯವಾಗಿ.

೨) ನನ್ನ ಕನಸು:-

ನಾನು ನನ್ನ ಕನಸು ಇಂದು ನೇರವೇರಿತು
ಹೃದಯದ ಮಾತು ಮಧುರ ಕ್ಷಣವಾಯಿತು
ಕಾರಣವೇ ಹೇಳದೇ ಹೋಯಿತು ಇಂದು
ಮುತ್ತಿನ ಸುರಿಮಳೆಲಿ ಸುರಿಯಿತು ಅಂದು.

ಭಾವನೆಯ ಬೆಸೆಯುತ ಹೇಳುವ ಮನಸು
ಕಾಡುತಿದೆ ಸುಮ್ಮನೆ ನನ್ನನು ಹೊಂಗನಸು
ನಕ್ಷತ್ರಗಳ ಮಧ್ಯೆ ಪಳ ಪಳ ಹೊಳೆಯುವನು
ಹಕ್ಕಿಯ ಹಾಗೇ ಸುಮ್ಮನೆ ಹಾರುವವನು.

- ಯಶೋದಾ. ಗಾಣಿಗ, ಗೃಹಿಣಿ 



ಕಪ್ಪುಹಲಗೆ

ಅಕ್ಕರೆಯ ಅಕ್ಷರ ಮೂಡಲು
ಸಕ್ಕರೆಯ ಅ ಆ ಇ ಈ ಬರೆಯಲು
ಬನ್ನಿರಿ ನಲಿಯುತ ಶಾಲೆಗೆ
ಕೈಬೀಸಿ ಕರೆಯುತಿದೆ ಕಪ್ಪುಹಲಗೆ

ಬಂದುದನು ತಿದ್ದಿ ತೀಡಿರಿ
ಓದು-ಬರಹವ ಕಲಿಯಿರಿ
ಊಟದ ಜೊತೆಗೆ ಪಾಠವು
ಗೆಳೆಯರೊಡನೆ ಸಂತಸದಾಟವು


ನನ್ನ ಕನಸು

ನನಗೊಂದು ಕನಸಿದೆ
ಹಕ್ಕಿಯಂತೆ ಹಾರಲು
ಮನಕ್ಕೊಂದು ಆಸೆಯಿದೆ
ಮೀನಿನಂತೆ ಈಜಲು

ನಿದಿರೆಯಲಿ ರೆಕ್ಕೆ ಮೂಡಿತು
ಬಾನೆತ್ತರಕ್ಕೆ ಹಾರಿದೆ
ನನಸೆಂದು ಕಣ್ತೆರೆಯಿತು
ಕನಸೆಂದು ಮತ್ತೆ ಮಲಗಿದೆದ

- ಧನಲಕ್ಷ್ಮಿ ಎ ಆರ್
ಹುಬ್ಬಳ್ಳಿ

     
     ಚಿತ್ರವನ್ನು ಬಿಡಿಸುವೆ
    
ಅಮ್ಮ ನಾನು ಹೋಗುವೆ
ಅಂಗನವಾಡಿ ಶಾಲೆಗೆ/
ಗೋಡೆಯಲಿ ಮಾಡಿಹರು ಅಂದದ
ದೊಡ್ಡದೊಂದು ಕರಿಹಲಗೆ//

ಅಆಇಈ ಅಕ್ಷರ ಸಂತಸದಿ
ದುಂಡಗೆ ಬರೆಯುವೆ/
 ಸೀಮೆ ಸುಣ್ಣ ತುಂಡಿನಲ್ಲಿ  
ಚಿತ್ರವನ್ನು ಬಿಡಿಸುವೆ//


     ೨-ನನ್ನ ಕನಸು

           ಪೀಪಿ

ಅಜ್ಜನ ಮನೆಗೆ ಹೋದೆ
ಸಂತೆ ಗದ್ದೆ ತಿರುಗಿದೆ/
ಮಾವನು ಕೊಟ್ಟನು ಪೀಪಿ
ನಾನು ಊದಿದೆ ಪೀಂಪೀಂ//

ಅಜ್ಜಿಯು ಕಥೆಯ ಹೇಳಿದಳು
ಲಾಲಿ ಹಾಡನು ಹಾಡಿದಳು/
ನನ್ನ ಕನಸು ನನಸಾಯ್ತು
ಮನದಲಿ ಸಂತಸ ತುಂಬಿತ್ತು//

✍️ ರತ್ನಾ ಕೆ ಭಟ್ ತಲಂಜೇರಿ

೧) ಜ್ಞಾನದ ಸ್ಲೇಟು

 ನನ್ನ ನೆಚ್ಚಿನ ದೊಡ್ಡದಾದ
 ಕರ್ರಗಿರುವ ಕರಿಹಲಗೆ 
ಕರಿ ಹಲಗೆಯಲ್ಲಿ ಬರೆಯುತ್ತೇವೆ
 ಸಣ್ಣಗಿರುವ ಚಾಕಲ್ಲಿ

 ಕರಿಹಲಗೆ ಎಂಬ ದೊಡ್ಡ ಸ್ಲೇಟು
ಆಯತ ಇರುವ ಕಪ್ಪು ಸ್ಲೇಟು 
ಕರಿ ಹಲಗೆಯಲ್ಲಿ ವಿದ್ಯಾಭ್ಯಾಸ
 ಕರಿಹಲಗೆಯಲ್ಲಿದೆ ಜ್ಞಾನ ರಸ


೨) ಸಾಧಿಸಬೇಕು

ಶಿಕ್ಷಕಿಯಾಗುವ ಕನಸು ನನಗೆ
 ಮಕ್ಕಳಿಗೆ ಕಲಿಸುತ್ತೇನೆ
 ವಿಜ್ಞಾನಿಯಾಗುವ ಕನಸು ನನಗೆ
 ಸಂಶೋಧನೆಯ ಮಾಡುತ್ತೇನೆ

 ಕಲಾವಿದಳಾಗುವ ಕನಸು ನನಗೆ
 ಜನರ ಮೆಚ್ಚುಗೆ ಗಳಿಸುತ್ತೇನೆ
 ಕನಸುಗಳ ನನಸು ಮಾಡಲು
 ಸ್ವಪ್ರಯತ್ನದಿ ಸಾಧಿಸುತ್ತೇನೆ

- ಧನ್ವಿತಾ ಕಾರಂತ್ 
ಏಳನೇ ತರಗತಿ 
ಅಳಿಕೆ, ಬಂಟ್ವಾಳ ತಾಲೂಕು

🕊️🐓🦢🤍🙏🍨🦢🐓🕊️🤍✒️📚📚✒️🗒️
 ಶಿಶುಕಾವ್ಯ 
೧. ಕರಿಹಲಗೆ

ಬಳಪ ಹಿಡಿದು ಬಾರೋ ಕಂದ
ಅಕ್ಷರ ಬರೆದರೆ ಸಿಗುತ್ತೆ ಆನಂದ
ಶಾಲೆಗೆ ನಿತ್ಯ ತಪ್ಪದೆ ಬರುವ ಕಂದ
ಕರಿ ಹಲಗೆ ಮೇಲೆ ಬರೆಯೋ ಕಂದ

ಅ ಆ ಇ ಈ ಮುದ್ದು ಅಕ್ಷರ
ಕರಿಹಲಗೆಗೆ ಅಕ್ಷರ ಹಂದರ
ತಿದ್ದಿ ಬರೆಯಬಹುದು ಅಕ್ಷರ
ಬರೆದರೆ ಕಾಣುವುದು ಸುಂದರ

೨. ನನ್ನ ಕನಸು

ನನ್ನದೇ ಕನಸು
ಮಗುವಿನ ಮನಸು
ಬಾಲ್ಯ ಸೊಗಸು
ಕಲಿವ ವಯಸು

ಕಲಿತು ವೈದ್ಯನಾಗುವ
ಕಷ್ಟಕೆ ವರವಾಗುವ
ಕನಸು ನನಸಾಗಲಿ
ಆಸೆ ನೆರವೇರಲಿ

- ರತ್ನತನಯ. ನುಗ್ಗಿಹಳ್ಳಿ

     
     ಕರಿಹಲಗೆ
    
ಕಿರಿಯರು ನಗುತಲಿ
ಕರಿಯ ಹಲಗೆಯಲಿ
ಬರೆಯುತ ಕಲಿಯಲಿ
ಸರ ಸರ ಖುಷಿಯಲಿ

ಕರಿಹಲಗೆಯೆಮಗೆ
ಸಿರಿಯಿರೆ ಬದುಕಿಗೆ
ಮರೆಯದಿರಲೆಮಗೆ
ಚಿರ ಯಶಕಿಹ ಬಗೆ

     ೨-ಹಾರುವ ಕನಸು

ಚಿಕ್ಕವನು ನಾನಿರಲು
ಮಕ್ಕಳಾಟದಲಿರಲು
ಹಕ್ಕಿಯಂತೆ ಹಾರಲು
ರೆಕ್ಕೆಗಳು ಇರಲು

ಗಕ್ಕನೆಯೆ ಹಾರುತಲಿ
ಪಕ್ಕನೆಯೆ ಗಗನದಲಿ
ಹಕ್ಕಿಗಳ ಜೊತೆಯಲಿ
ನಕ್ಕು ನಲಿಯುತಲಿ

- ಎ.ಕೇಶವರಾಜ್



ವಿಷಯ:- ೧) ಕರಿಹಲಗೆ
ಶೀರ್ಷಿಕೆ:- ಬಳಪ

ಸಂಭ್ರಮದ ದಿನವಿಂದು ನನಗೆ
ಶಾಲೆ ಬಾಗಿಲು ತೆರೆಯಿತೂ ಕೊನೆಗೆ
ಬೇಗನೆ ಎದ್ದು ದೇವರಿಗೆ ನಮಿಸುವೆ
ಚೀಲವ ಹಿಡಿದು ಶಾಲೆಗೆ ಹೋಗುವೆ

ಕರಿಹಲಗೆಗೆ ಬರೆಯುವೆ ಬಳಪದಲ್ಲಿ
ಅದನ್ನೇ ನೆನಪಿಡುವೆ ನ ಮಸ್ತಕದಲ್ಲಿ
ಗುರುಗಳ ಪಾಠವ ಚೆನ್ನಾಗಿ ಕೇಳುವ
 ತಾಯಿ ಸರಸ್ವತಿಗೆ ಕೈ ಮುಗಿಯುವ

ವಿಷಯ:- ೨) ನನ್ನ ಕನಸ
ಶೀರ್ಷಿಕೆ:- ಜೀವನ ನಗುತಿರಲಿ

ಕನಸೊಂದು ಬೇಕು ಬದುಕಿಗೆ
ಮನುಜನ ಮುಂದಿನ ಏಳಿಗೆಗೆ
ಶಿಕ್ಷಕಿ ಆಗುವ ಕನಸಿತ್ತು ನನಗೆ
ಆದರೂ ಆಗಲಿಲ್ಲ ಕೊನೆಗೆ

ಮಕ್ಕಳಿಗೆ ಪಾಠ ಮಾಡುವ ಆಸೆ
ಅವರೊಂದಿಗೆ ಕುಣಿದಾಡುವಾಸೆ
ನಮ್ಮ ಕನಸಿಗೆ ಮಿತಿ ಇರಲಿ
ಬಾಳಲಿ ಎಂದೂ ನಗುವಿರಲಿ

✍️ ಮಾಲತಿ ರಮೇಶ್ ಕೆಮ್ಮಣ್ಣು


1)
ಕರಿ ಹಲಗೆ

ಕರಿಯ ಹಲಗೆ ಮೇಲೆ ಬರೆದ
ಅಕ್ಷರವನು ಕಲಿಯುವೆ
ಬಿಳಿಯ ಸುಣ್ಣ ಬಳಪ ತಂದು
ಅಂದವಾಗಿ ಬರೆಯುವೆ

ಗುರುವು ಹೇಳಿಕೊಟ್ಟ ಪಾಠ
ಅಂದೇ ಬಿಡದೆ ಓದುವೆ
ಅ ಆ ಇ ಈ ವರ್ಣ ಮಾಲೆ 
ಬಾಯಿ ಪಾಠ ಮಾಡುವೆ 

ಒಂದೊಂದ್ಲ ಮಗ್ಗಿಯಿಂದ
ಹತ್ತೊಂದ್ಲ ತನಕವೂ
ದಿನವೂ ಬರೆದು ಕಲಿತು ನಾನು
ಒಳ್ಳೆ ಹೆಸರು ಪಡೆಯುವೆ

2)
ನನ್ನ ಕನಸು

ನೂರು ಕನಸು ನನ್ನಲಿ
ಯಾವುದೆಂದು ಹೇಳಲಿ
ಹಕ್ಕಿಯಂತೆ ಹಾರಿ ಮೇಲೆ
ತೇಲಬೇಕು ಬಾನಲಿ..

ಒಂದು ಕನಸು ಮನದಲಿ 
ಮೂಡಿ ಬಂತು ಒಲವಲಿ 
ಚಂದ್ರನನ್ನು ಮುಟ್ಟಿ ಬರುವ
ವಿದ್ಯೆ ಕಲಿವೆ ಹಠದಲಿ

ಒಂದು ಕನಸು ನನ್ನಲಿ
ಹೇಳಬೇಕು ನಿಮ್ಮಲಿ
ಅಪ್ಪ ಅಮ್ಮನನ್ನು ನಾನು 
ಸಾಕಬೇಕು ಸುಖದಲಿ

ಒಂದು ಕನಸು ಮನದಲಿ
ಯಾರಿಗಿದನು ಹೇಳಲಿ
ದೇಶದ್ರೋಹಿಗಳನು ಮಣಿಸಿ
ಶಾಂತಿ ಮಂತ್ರ ಮೊಳಗಲಿ

ಹರಿನರಸಿಂಹ ಉಪಾಧ್ಯಾಯ


೧. ಕರಿ ಹಲಗೆ.
........................
ಚಿಣ್ಣರ ಚೀಲದಲಿ ಕರಿ ಹಲಗೆ
ಜೊತೆಗೆ ಇರುವುದು ಬಿಳಿ ಬಳಪ
ಜ್ಞಾನದ ಅರಿವಿಗೆ ಬೆಳಕಿನ ದೀಪ
ಬರೆಯುತ,ಅರಿಯುತ ಸಂಪ್ರೀತ.

ಕರಿ ಬಣ್ಣದ ಮೇಲೆ ಶ್ವೇತ ವರ್ಣವು
ನೆನಪದು ತುಂಬಿದ ಮಸ್ತಕವು.....
ಕನಸಿನ ಕಣ್ಣಲಿ ವರ್ಣದ ಚಿತ್ತಾರ
ಕೊಳದಲ್ಲಿ ಸುಂದರ ತಾಮರ....!!

೨.ಕಾಮನ ಬಿಲ್ಲಿನ ಸಪ್ತವರ್ಣ ಕನಸಲ್ಲಿ
ಕಣ್ ಮಣಿಯಲಿ ತುಂಬಿದ ರಂಗಲ್ಲಿ
ರವಿ ಕಿರಣವು ತೂರಿದ ಹೊಂಬಣ್ಣದಲಿ
ಕನಸಿನ ಮನಸದು ಬಗೆಬಗೆಯಲ್ಲಿ

ಕನಸಿನ ಗೋಪುರ ಹಿಮಾಲಯದಲ್ಲಿ
ಸಾಗುತ್ತಿತ್ತದು ಬಲು ಹರುಷದಲಿ.....
ನಲಿಯುತ, ಸಾಗಿದೆ ನಾ ಹಿಂದಿಂದೆ
ಮುಂಜಾವಿನ ರವಿಕಿರಣಕೆ ಬೆಚ್ಚಿ ಎದ್ದೆ.

ವೀಣಾ ಕೃಷ್ಣಮೂರ್ತಿ, ದಾವಣಗೆರೆ.


No comments:

Post a Comment

ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...