ಬತ್ತದ ತೊರೆ ಸ್ನೇಹ ಬಳಗ
ಕಾರಂತಜ್ಜನ ನೆರಳಿನಡಿಯಲ್ಲಿ....
ಕಲೆ ಹಾಗೂ ಸಾಹಿತ್ಯ ವೇದಿಕೆ
ಗಾದೆ ಮಾತು ಕತೆಯ ಮೂಲಕ ವಿಸ್ತರಣೆ..
*ತಾನು ಕಳ್ಳ ಪರರ ನಂಬ*
ಶೀರ್ಷಿಕೆ..*ತಪ್ಪು ಮಾಡಬಾರದು*
"ನಮಸ್ತೇ ಟೀಚರ್".... ಏಳನೇ ತರಗತಿಯ ಮಕ್ಕಳೆಲ್ಲ ಕನ್ನಡ ಪಾಠದ ರಮ್ಯಾ ಟೀಚರ್ ಬಂದೊಡನೆ ಸ್ವಾಗತಿಸಿದರು.
"ನಮಸ್ತೇ ಮಕ್ಕಳೇ..ಕುಳಿತುಕೊಳ್ಳಿ..ಇಂದು ನಾವು ಕೆಲವೊಂದು ಗಾದೆ ಮಾತುಗಳನ್ನು ತಿಳಿಯೋಣ.ನಿಮಗೆ ಗೊತ್ತಿರುವ ಗಾದೆಗಳನ್ನು ಹೇಳುವಿರಾ"? ..ಟೀಚರ್ ಪ್ರಶ್ನಿಸುವುದೇ ತಡ , ಮೊದಲ ಬೆಂಚಿನ ಒಬ್ಬೊಬ್ಬರಾಗಿ 'ಕೈಕೆಸರಾದರೆ ಬಾಯಿ ಮೊಸರು
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?
ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಂಗೆ
ತಾನು ಕಳ್ಳ ಪರರ ನಂಬ......
ಹೇಳುತ್ತಾ ಹೋಗಲು ; ಕೊನೆಯ ಬೆಂಚಿನ ರಮೇಶ ಎದ್ದು ನಿಂದು " ಟೀಚರ್ ತಾನು ಕಳ್ಳ ಪರರ ನಂಬ ಗಾದೆಯ ಅರ್ಥವೇನು"? ಎಂದು ಪ್ರಶ್ನಿಸುತ್ತಾನೆ..
ರಮ್ಯಾ ಟೀಚರ್ .."ಮಕ್ಕಳೇ.. ಈ ಗಾದೆ *ಕುಂಬಳಕಾಯಿ ಕಳ್ಳ* ಹಾಗೂ ಕಳ್ಳನ ಮನಸ್ಸು ಹುಳ್ಳಗೆ ಗಾದೆಗಳಿಗೆ ಸಮೀಪದ ಮತ್ತೊಂದು ಗಾದೆ....ಕೇಳಿ ಹೇಳುತ್ತೇನೆ...
ಒಂದೂರಿನಲ್ಲಿ ಒಬ್ಬ ಶೆಟ್ಟಿ ವ್ಯಾಪಾರಿಯಿದ್ದ. ಹಳ್ಳಿಯಲ್ಲಿ ದಿನಸಿ ವ್ಯಾಪಾರ ಅವನದಾಗಿತ್ತು. ಹಲವು ವರ್ಷಗಳಿಂದ ವ್ಯಾಪಾರ ಮಾಡಿ ಸಿರಿವಂತನಾಗಿದ್ದ. ಬಡ್ಡಿಗೆ ಸಾಲವನ್ನೂ ಕೊಡುತ್ತಿದ್ದ. ಆದರೆ ಮಹಾ ಸಂಶಯದ ಪಿಶಾಚಿ. ತನ್ನ ಅಂಗಡಿಯಿಂದ ಸಾಮಗ್ರಿ ಗಳನ್ನು ತೆಗೆದುಕೊಂಡವರು ಹಣ ಕೊಟ್ಟಾಗ ಎರಡು,ಮೂರು ಬಾರಿ ಎಣಿಸುತ್ತಿದ್ದ. ಸಾಲದ ಮರುಪಾವತಿ ಬಂದಾಗಲೂ ಹತ್ತಾರು ಬಾರಿ ಎಣಿಸಿ ತೆಗೆದುಕೊಳ್ಳದಿದ್ದರೆ ಆತನಿಗೆ ನಿದಿರೆ ಬಾರದು..."
ತಟ್ಟನೆ ರಮೇಶ .."ಯಾಕೆ ಟೀಚರ್? ಶೆಟ್ಟಿಗೆ ಲೆಕ್ಕ ಬರುವುದಿಲ್ಲವೇ?" ಕೇಳಿದಾಗ ಮಕ್ಕಳೆಲ್ಲಾ ಗೊಳ್ಳನೆ ನಗುವರು..
"ಮಕ್ಕಳೇ...ಕೇಳಿ.. ಆ ಶೆಟ್ಟಿಯು ಮಹಾ ಜಿಪುಣನಲ್ಲದೆ ಲೋಭಿಯೂ ಆಗಿದ್ದ.ಬಡ್ಡಿಗೆ ಸಾಲ ಕೊಡುತ್ತಿದ್ದಾಗ ಹಣದ ಕಟ್ಟಿನಲ್ಲಿ ಒಂದೆರಡು ನೋಟುಗಳನ್ನು ಕಡಿಮೆ ಇರಿಸುತ್ತಿದ್ದ...ಕೆಲವರು ಹಣ ಎಣಿಸದೆ ನಂಬಿಕೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದರು..ಕೆಲವರು ಎಣಿಸಿ ಕಡಿಮೆ ಇದೆ ಅಂದರೆ ಅವರಿಗೇ ದಬಾಯಿಸುತ್ತಿದ್ದ..ಸರಿಯಾಗಿಯೇ ಕೊಟ್ಟಿರುವೆ..ನೀವೇ ಎಲ್ಲೋ ಅಡಗಿಸಿಟ್ಟು ಈಗ ಇಲ್ಲಾ ಎನ್ನುವಿರಾ?ಎಂದು ಮೋಸಗೊಳಿಸುತ್ತಿದ್ದ..ಪ್ರಾರಂಭದಲ್ಲಿ ಜನರ ಅರಿವಿಗೆ ಬಾರದಿದ್ದರೂ ನಿಧಾನವಾಗಿ ಇವನ ಬುದ್ಧಿಯ ಪರಿಚಯವಾಯಿತು.ಅನಿವಾರ್ಯದಿಂದಲೋ, ಬೇರೆ ಅಂಗಡಿಗಳಿಲ್ಲದೆ , ಸಾಲ ಕೊಡುವವರಿಲ್ಲದೆ ಎಲ್ಲರೂ ಇವನ ಮೋಸ ಗೊತ್ತಿದ್ದರೂ ಬರುತ್ತಿದ್ದರು. ಆದ್ದರಿಂದಲೇ ಶೆಟ್ಟಿ ಮರಳಿ ಹಣ ಪಡೆಯುತ್ತಿರುವಾಗ ಹಲವು ಬಾರಿ ಲೆಕ್ಕಮಾಡುತ್ತಿದ್ದ..ಯಾಕೆಂದರೆ ಆತ ಕಳ್ಳ..ಹಾಗಾಗಿ ಬೇರೆಯವರೂ ಕಳ್ಳರೆಂದೇ ಅವನ ಭಾವನೆ..ಯಾರ ಮೇಲೂ ವಿಶ್ವಾಸವಿರಲಿಲ್ಲ ಆತನಿಗೆ. ಎಲ್ಲರನ್ನೂ ಸಂಶಯದಿಂದಲೇ ನೋಡುತ್ತಿದ್ದ .
ಇದರಿಂದ ಬೇಸತ್ತ ಜನ ಶೆಟ್ಟಿಯ ಅಂಗಡಿಗೆ ವ್ಯಾಪಾರಕ್ಕೆ ಬರುವುದನ್ನು ಕಡಿಮೆ ಮಾಡಿದರು. ಸಾಲದ ಮೊರೆ ಹೋಗುವುದನ್ನೂ ನಿಲ್ಲಿಸಿದರು.ಹೊಸದಾಗಿ ಅಂಗಡಿ ತೆರೆದ ಅದೇ ಗ್ರಾಮದ ನಿಷ್ಠಾವಂತ, ಪ್ರಾಮಾಣಿಕ ಅನಂತ ಪ್ರಭುಗಳ ಅಂಗಡಿಯನ್ನು ಅವಲಂಬಿಸಿದರು.ಕ್ರಮೇಣ ಪ್ರಭುಗಳ ವ್ಯಾಪಾರ ವಹಿವಾಟು ಹೆಚ್ಚತೊಡಗಿ ಸಾಲವನ್ನೂ ಕೊಡಲು ಪ್ರಾರಂಭಿಸಿದರು.. ಸಿರಿವಂತರೂ ಆದರು.
ಇತ್ತ ಶೆಟ್ಟಿಗೆ ವ್ಯಾಪಾರವೂ ಇಲ್ಲದೆ, ಸಾಲ ತೆಗೆದುಕೊಳ್ಳುವವರೂ ಬಾರದೆ ನಷ್ಟವುಂಟಾಯಿತು..ತನ್ನ ತಪ್ಪಿನ ಅರಿವಾಯಿತು..ಆದರೆ! ಕಾಲ ಮಿಂಚಿತ್ತು"....
ಅಷ್ಟರಲ್ಲಿ ರಮೇಶ *ಮಾಡಿದ್ದುಣ್ಣೋ ಮಹರಾಯ* ಎಂದು ನಗುವನು. ಎಲ್ಲರೂ ನಗುವರು..
ಕನ್ನಡ ಟೀಚರ್..."ಮಕ್ಕಳೇ.. ಶೆಟ್ಟಿ *ತಾನು ಕಳ್ಳ,ಪರರ ನಂಬ*.. ಸ್ವತಃ ಕಳ್ಳನಾಗಿರುವ ವ್ಯಕ್ತಿಗೆ ಬೇರೆ ಯಾರ ಮೇಲೂ ನಂಬಿಕೆ ಬರಲು ಸಾಧ್ಯವಿಲ್ಲ. ಅವನು ಎಲ್ಲರನ್ನೂ ತನ್ನ ದೃಷ್ಟಿಯಿಂದಲೇ ನೋಡುತ್ತಾನೆ. ಅವನಿಗೆ ಒಳ್ಳೆಯವರು ಒಬ್ಬರೂ ಕಂಡುಬರುವುದಿಲ್ಲ .ಎಲ್ಲರೂ ಕಳ್ಳರಂತೆಯೇ ಕಾಣುತ್ತಾರೆ .. ಎಂಬುದು ಈ ಗಾದೆ ಮಾತಿನ ಭಾವಾರ್ಥ..
ಶೆಟ್ಟಿ *ಕಳ್ಳನ ಮನಸ್ಸು ಹುಳ್ಳಗೆ* ಎಂಬಂತೆ ಎಲ್ಲರನ್ನೂ ಸಂಶಯದಿಂದ ನೋಡುತ್ತಿದ್ದ. *ಕುಂಬಳಕಾಯಿ ಕಳ್ಳನಂತೆ* ಪ್ರತಿ ಬಾರಿಯೂ ಹಣ ಪಡೆದಾಗ ಎಣಿಸುತ್ತಿದ್ದ.. ಇವನ ಅತಿರೇಕದ ಪರಮಾವಧಿಯಿಂದ ಎಲ್ಲರೂ ಇವನ ವ್ಯಾಪಾರ ನಿಲ್ಲಿಸಿದರು..
*ಇಬ್ಬರ ಜಗಳ ಮೂರನೆಯವನಿಗೆ ಲಾಭ* ಎಂಬಂತೆ ಅನಂತ ಪ್ರಭುಗಳು ಲಾಭ ಪಡೆದುಕೊಂಡು ಸಿರಿವಂತರಾದರು.."
ಆದ್ದರಿಂದ ಮಕ್ಕಳೇ ತಪ್ಪು ಮಾಡಬಾರದು .. ಮುಂದೆ ಪಶ್ಚಾತ್ತಾಪ ಪಡಬೇಕಾಗಿಬರಬಹುದು..ತನ್ನ ತಪ್ಪುನಿಂದಾಗಿ ಶೆಟ್ಟಿ ವ್ಯಾಪಾರ ಕಳೆದುಕೊಂಡು ಬಡವನಾಗಬೇಕಾಯಿತು..ನಾವೆಲ್ಲರೂ ಪ್ರಾಮಾಣಿಕರಾಗಿ ಬದುಕಬೇಕು..ತಿಳಿಯಿತೇ" ಟೀಚರ್ ಎಂದಾಗ..ಮಕ್ಕಳೆಲ್ಲರೂ "ಆಯ್ತು ಟೀಚರ್" ಎಂದರು ಒಕ್ಕೊರಲಿನಿಂದ.
- ರೂಪಾಪ್ರಸಾದ ಕೋಡಿಂಬಳ.

