Google Images
ಬುದ್ಧಿವನದ ಕತೆಗಳು:
ಸಂಚಿಕೆ ೧: ಪ್ರಾಣಿಗಳ ಸಮಸ್ಯೆ
'ಬುದ್ಧಿವನ' ಎನ್ನುವ ಒಂದು ಆಧುನಿಕ ಕಾಡು. ಅಲ್ಲಿ ಅನೇಕ ಕಾಡು ಪ್ರಾಣಿಗಳು ವಾಸವಾಗಿದ್ದವು. ಅವುಗಳ ರಾಜ ಚತುರಮತಿ ಎಂಬ ಸಿಂಹ. ಒಂದು ದಿನ ಚತುರಮತಿಯು ತನ್ನ ಪ್ರಜೆಗಳ ಸಭೆಯನ್ನು ಮೊಬೈಲಿನ ಜೂಮ್ ಆಪಿನ ಮೂಲಕ ಸೇರಿಸಿದನು. ಅವರನ್ನು ಉದ್ದೇಶಿಸಿ ಹೀಗೆಂದನು, "ಓ, ನನ್ನ ಪ್ರಾಣಿ ಮಿತ್ರರೇ ನೀವೆಲ್ಲರೂ ಕುಶಲದಿಂದಿರುವಿರಿ ತಾನೆ? ನಿಮಗ್ಯಾರಿಗೂ ಯಾವ ಸಮಸ್ಯೆಯು ಇಲ್ಲವೆಂದು ಭಾವಿಸಿಕೊಳ್ಳುತ್ತೇನೆ. ನಿಮಗೆ ಯಾವುದೇ ಸಮಸ್ಯೆಯಿದ್ದರು ನನ್ನ ಬಳಿ ಹೇಳಿ". ಆಗ ಪ್ರಾಣಿಗಳ ನಡುವೆಯಿದ್ದ ಶ್ರೀಮುಖನೆಂಬ ಕರಡಿಯು ಹೇಳಿತು, "ಮೃಗರಾಜ, ಈ ಮಾನವರು ಆಗಾಗ ನಮ್ಮ ಕಾಡಿಗೆ ಬಂದು ನಮ್ಮ ಬಂಧು-ಬಳಗದವರನ್ನು ಸೇರೆ ಹಿಡಿದುಕೊಂಡು ಹೋಗಿ ತಮ್ಮ ಸರ್ಕಸ್ಗಳಲ್ಲಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಎಷ್ಟೊ ಪ್ರಾಣಿಗಳಿಗೆ ಹಿಂಸೆಯನ್ನು ಕೊಡುತ್ತಾರೆ. ಅವರನ್ನು ಒಂದೇ ಕಾಲಿನಲ್ಲಿ ನಡೆಸುತ್ತಾರೆ. ಅವರ ಕೈಯಲ್ಲಿ ಚೆಂಡುಗಳನ್ನು ಆಡಿಸುತ್ತಾರೆ". ಇದನ್ನು ಕೇಳಿದ ಚತುರಮತಿಗೆ ಕೋಪ ಬರುತ್ತದೆ. ಆಗ ಅತಿವೇಗಿಯೆಂಬ ಮೊಲವೆಂದಿತು, "ಸಿಂಹರಾಯ, ಈ ಮನುಷ್ಯರು ಕರುಣೆ ಇಲ್ಲದವರು. ಅವರು ತಮ್ಮ ಲಾಭಕ್ಕಾಗಿ ತರುಗಳನ್ನು ಕಡಿಯುತ್ತಾರೆ. ಜಿಂಕೆಗಳನ್ನು, ಮೊಲಗಳನ್ನು, ಹುಲಿಗಳನ್ನು ಕಾಡು ಹಂದಿಗಳನ್ನು ಬೇಟೆಯಾಡಿ ಅವರ ಚರ್ಮ, ಮೂಳೆ, ಮಾಂಸ ಮುಂತಾದ ವಸ್ತುಗಳನ್ನು ಮಾರುತ್ತಾರೆ. ಇದರಿಂದಾಗಿ ನಮ್ಮ ಕಾಡಿನ ಪ್ರಾಣಿಗಳ ಹಾಗೂ ವೃಕ್ಷಗಳ ಸಂಖ್ಯೆ ಕಡಿಮೆಯಾಗುತ್ತಿದೆ".
ಅತಿವೇಗಿಯ ಮಾತನ್ನು ಕೇಳಿದ ಚತುರಮತಿಯೆಂದಿತು, "ಓ, ನನ್ನ ಪಶು ಬಂಧುಗಳೇ ನಿಮ್ಮ ಎಲ್ಲ ಸಮಸ್ಯೆಗಳನ್ನು ನಾನು ಪರಿಹರಿಸುತ್ತೇನೆ. ವನ್ಯಸಿರಿಯನ್ನು ಉಳಿಸಲು ನನ್ನ ಕೈಲಾಗುವ ಪ್ರಯತ್ನವನ್ನು ನಾನು ಮಾಡುತ್ತೇನೆ. ನಿಮ್ಮ ಕೈಲಾಗುವ ಪ್ರಯತ್ನಗಳನ್ನು ನೀವು ಮಾಡಿ". ಇಷ್ಟು ಹೇಳಿ ಸಿಂಹ ತನ್ನ ಸಭೆಯನ್ನು ವಿಸರ್ಜಿಸಿದನು. ತನ್ನ ಮಂತ್ರಿಯಾದ ಕಾವ್ಯರಾಜ ನರಿಯನ್ನು ಕರೆದು ಅವನ ಜೊತೆ ಅರಣ್ಯದ ಸಮಸ್ಯೆಗೆ ಪರಿಹಾರವನ್ನು ಯೋಚಿಸುತ್ತ ಕೂತನು. ಆಗ ಕಾವ್ಯರಾಜನಿಗೆ ಒಂದು ಉಪಾಯ ಹೊಳೆಯಿತು. ಅವನು ಚತುರಮತಿಗೆ ಹೇಳಿದ, "ಮಹಾರಾಜ, ನಾವು ನಮ್ಮ ಸಮಸ್ಯೆಗಳ ಬಗ್ಗೆ ಅನ್ಯ ವನದ ಪ್ರಾಣಿಗಳಿಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ತಿಳಿಸೋಣ. ಅವರಿಂದ ನಮಗೇನಾದರು ಪರಿಹಾರ ಸಿಗಬಹುದು". ಚತುರಮತಿಗೆ ನರಿಯ ಉಪಾಯ ಸೂಕ್ತವೇನಿಸಿತು. ಅವನು ತನ್ನ ಇನ್ಸ್ಟಾಗ್ರಾಮ್ ಹಾಗೂ ಫೇಸ್ ಬುಕ್ ನಲ್ಲಿ ತನ್ನ ಕಾಡಿನ ಸಮಸ್ಯೆಗಳ ಬಗ್ಗೆ ಪೋಸ್ಟ ಮಾಡಿದ. ಬೇರೆ ವನದ ಪ್ರಾಣಿಗಳು ಅವನ ಪೋಸ್ಟನ್ನು ಓದಿ ಅದಕ್ಕೆ ಪ್ರತಿಕ್ರಿಯೆಯಾಗಿ ಚತುರಮತಿಗೆ ಸಹಾಯ ಮಾಡಲು ಬುದ್ಧಿವನಕ್ಕೆ ಬಂದರು.
ಆ ಪ್ರಾಣಿಗಳು ಚತುರಮತಿಗೆ ಹೇಳಿದರು, " ಓ, ಬುದ್ಧಿವನದ ರಾಜನೇ, ನಾವೆಲ್ಲರು ನಿನ್ನ ಕಾಡಿನ ಪ್ರಾಣಿಗಳಿಗೆ ಸಹಾಯ ಮಾಡಲು ಬಂದಿದ್ದೇವೆ. ನಮ್ಮಿಂದ ನಿನಗೆ ಏನು ಸಹಾಯ ಬೇಕು?" ಚತುರಮತಿಯೆಂದ, "ಮಿತ್ರರೇ, ನಮ್ಮ ಕಾಡಿನ ಮರಗಳನ್ನು ಮನುಷ್ಯರು ಕಡಿಯುತ್ತಿದ್ದಾರೆ. ನಮ್ಮ ಕಾಡಿನ ಪ್ರಾಣಿಗಳನ್ನು ಬಳಸಿಕೊಂಡು ಅವರು ಲಾಭ ಪಡೆಯುತ್ತಿದ್ದಾರೆ. ಎಷ್ಟೊ ಪ್ರಾಣಿಗಳನ್ನು ಮಾನವರು ಬೇಟೆಯಾಡುತ್ತಿದ್ದಾರೆ. ಹೀಗೆ ನಡೆದರೆ ನಮ್ಮ ಕಾಡಿನ ಸಂಪತ್ತು ನಾಶವಾಗುತ್ತದೆ. ನಮ್ಮ ಕಾಡನ್ನು ಉಳಿಸಲು ನಾವು ಮನುಷ್ಯರ ದುಷ್ಕೃತ್ಯಗಳನ್ನು ತಡೆಯಬೇಕು. ಅದಕ್ಕಾಗಿ ನಾವೇನೆಲ್ಲವನ್ನು ಮಾಡಬಹುದೆಂದು ತಾವು ನನಗೆ ಸೂಚಿಸಿ". ಆಗ ಗಿಳಿಗಳ ಕಾಡಿನ ರಾಜನಾದ ತೋತಾರಾಮನೆಂದ, "ಚತುರಮತಿ ಮಹಾರಾಜರೇ ನಾವು ಮನುಜರು ಮರ ಕಡಿಯಲು ಬಂದಾಗ ಅವರು ಕಡಿಯುವ ಮರವನ್ನು ಅಪ್ಪಿಕೊಳ್ಳೊಣ ಆಗ ಅವರಿಗೆ ನಮ್ಮನ್ನು ದಾಟಿದ ಮೇಲೆ ತರುಗಳನ್ನು ಕಡಿಯಬೇಕಾಗಿ ಬರುತ್ತದೆ. ಈ ಕೆಲಸವನ್ನು ನಾವು ಆನೆಗಳಿಗೆ ಹಾಗೂ ಕಾಡೆಮ್ಮೆಗಳಿಗೆ ವಹಿಸೋಣ". ತೋತಾರಾಮನ ಮಾತಿಗೆ ಅನ್ಯ ಪಶುಗಳು ಸಹಮತಿ ನೀಡಿದರು. ನಂತರ ಗಿಡುಗಗಳ ಅಧಿಪತಿಯಾದ ಗೃಧ್ರಪತಿಯೆಂದ, "ನಾನು ನನ್ನ ಬಾಂಧವರಾದ ರಣಹದ್ದುಗಳಿಗೆ ಮತ್ತು ಹದ್ದುಗಳಿಗೆ ಪ್ರಾಣಿಗಳನ್ನು ಹಿಡಿಯಲು ಬರುವ ಮನುಷ್ಯರ ಮೇಲೆ ಕೊಕ್ಕು ಮತ್ತು ರೆಕ್ಕೆಗಳಿಂದ ಪ್ರಹಾರ ಮಾಡಲು ಹೇಳುತ್ತೇನೆ".
"ನಾವು ಪ್ರಾಣಿಗಳನ್ನು ಬೇಟೆಯಾಡಲು ಬರುವ ಮನುಜರನ್ನು ಕಚ್ಚಿ ಕಚ್ಚಿ ಕೊಲ್ಲುತ್ತೇವೆ. ನನ್ನ ವನದಲ್ಲಿರುವ ದೊಡ್ಡ ಹೆಬ್ಬಾವುಗಳು ಯಾರನ್ನಾದರು ನುಂಗುವುದರಲ್ಲಿ ನಿಪುಣರು. ಕಾಳಿಂಗ ಸರ್ಪಗಳು ಕಡಿದರೆ ಮತ್ತೆ ಆ ವ್ಯಕ್ತಿಯು ಬದುಕುವುದು ಸಾಧ್ಯವೇ ಇಲ್ಲ" ಎಂದ ಉರಗಾರಣ್ಯದ ನೃಪನಾದ ವ್ಯಾಳೇಶ. ಚತುರಮತಿಯು ಅವನ ಕಾಡಿನ ಜನರು ಈ ಎಲ್ಲ ಪ್ರಾಣಿಗಳ ಉಪಾಯವನ್ನು ಸ್ವೀಕರಿಸಿ ತಮ್ಮ ವನದ ಸಂಪತ್ತನ್ನು ಹಾಳು ಮಾಡಲು ಬರುವ ಮಾನವರ ಜೊತೆ ಹೋರಾಡಲು ಸಿದ್ಧರಾದರು.
ಮುಂದುವರೆಯುವುದು........
ಅರವಿಂದ ಬಾಯಿರಿ,
ಎಂಟನೇ ತರಗತಿ,
ಕಾರ್ಮೆಲ್ ಕಾನ್ವೆಂಟ್ ಸ್ಕೂಲ್,
ಕಾರ್ಮೆಲಾರಾಂ, ಬೆಂಗಳೂರು -೩೫.
No comments:
Post a Comment
ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...