Source image.
ತ್ರಿಪದಿಯಲ್ಲಿ ಕವನ ರಚನೆ ಸ್ಪರ್ಧೆಗಾಗಿ
ಬಯಕೆಯ ಬದುಕು
ಆಕಾಶದಾಗಿನ ಚಂದ್ರಾಮ ಕೈಯಾಗ ಸಿಕ್ಹಾಂಗ|
ಸಾಕಾಗಿ ಹೋದ ಸುಖದ್ಹಾಂಗ| ಈ ಜೀವ
ಬೇಕಾಗಿ ಬಯಸೀದ ಹುಳಿಹಾಂಗ||
ಊರಿನ ದಾರ್ಯಾಗ ಹೂವಿನ ಹಾಸ್ಹಂಗ|
ಮಾರಿ ಮ್ಯಾಲಿನ ಕುಂಕುಮ| ಹೊತ್ತೀನ
ಸೂರಪ್ಪ ಹಗಲೀನ ಕಣ್ಹಾಂಗ||
ಬಂಗಾರದ ತಾಟಿನ ಸಿರಿಮಂತರ ಊಟ|
ಸಿಂಗಾರ ಮಾಡೀದ ಹೆಣ್ಹಾಂಗ| ನಿಜರೂಪ
ಹೆಂಗಾರ ಮುಚ್ಚಿದರೂ ವಜ್ರಾನ||
ಅದ ಕೇಳಿ ತಿಂದರೂ ಇದ ಕೇಳಿ ತಿಂದರೂ|
ಮಾದಲಿ ರುಚಿಬರುದಿಲ್ಲ| ನಾಲೀಗಿ
ಹೋದಲ್ಲೆ ಬಂದಲ್ಲೆ ಕಲಿಸೀತ||
ಬಿದಗಿಯ ಚಂದ್ರನ ಬೆಳಕೀನ ದಾರ್ಯಾಗ|
ಹಾದಿಯ ಹುಡಕುವ ಕೆಲಸಾನ| ಬಿಡಬೇಕ
ಬದುಕೀನ ಬಸರೀನ ದುಕ್ಕಾನ||
ನಡದಾಕಿ ನಡದಾಳು ಹಡದಾಕಿ ಹಡದಾಳು|
ನಡನಡಕ ಬಯಕೀಯ ಊಟಾನ| ಬಯಸಿದರ
ಬಡದ್ಯಾಡಿ ಕೊಟ್ಟರೂ ಧರಮಾನ||
ಕೇಳಿದ್ದ ಕೊಟ್ಟಾರು ಹೇಳಿದ್ದ ತಂದಾರು|
ಬ್ಯಾಳೀಯ ಹುಗ್ಗೀಯ ಸಿಹಿಯೂಟ| ಹೊಟಿತುಂಬ
ಕೂಳೀನ ಇತಿಮೀತಿ ತಿಳದ್ಹಾಂಗ||
ಪ್ರಶಾಂತ ಪ. ಗೋಡಖಿಂಡಿ
ಬಾದಾಮಿ.
ಬಾಗಲಕೋಟ ಜಿಲ್ಲೆ
-----------
ಬತ್ತದ ತೊರೆ ಸ್ನೇಹಬಳಗ
ದಿನಾಂಕ-22-12-2021
ಬುಧವಾರ
ತಿಂಗಳ ಸ್ಪರ್ಧೆಗಾಗಿ ಜಾನಪದ ತ್ರಿಪದಿ ರಚನೆ.
ವಿಷಯ - ಬಸುರಿ ಬಯಕೆ
*************************
ಬಸುರಿ ಪಾರವ್ವನ ಬಯಕೆ
*************************
ಉದರದಿ/ಮಿಸುಕಾಡೊ/ಕದಲಾಡೊ/ಕಂದನ
ಮದರದಿ/ತಡವಿ/ಪಾರವ್ವ/ನಸುನಕ್ಕು
ಪದಳದ/ಸಮಯ/ನೆನೆದಾಳೊ
ತವರಲಿ/ಬೇಕಾದ/ಸವಿಭೋಗ/ನೆಲೆಸಿದ್ರು
ಕವಿದೈತಿ/ಚಿಂತಿ/ಮದವನ/ನೆನಪಾಗಿ
ಸವಿಯೂಟ/ಕೂಡ/ಕಹಿಯಾದೊ
ಮರುದಿನ/ಬೆಳಗಲಿ/ಪಾರುಗೆ/ಎರೆಯುತ
ಜರತಾರಿ/ಸೀರೆ/ಉಡಿಸ್ಯಾರು/ಸಖಿಯರು
ಹರಸ್ಯಾರು/ಹಸಿರು/ಬಳೆಕೊಟ್ಟು
ತಲಿತುಂಬಾ/ಕೇದಗಿ/ಚೆಲುವಾದ/ಸಂಪಿಗಿ
ಹೊಳೆವಂತ/ನಗವ/ಮೈತುಂಬ/ತೊಡಿಸ್ಯಾರು
ಕಳೆಯಾಗಿ/ಮಡಿಲು/ತುಂಬ್ಯಾರು
ಬಾಡಿದ/ಮೊಗನೋಡಿ/ಕಡವರ/ಕೇಳ್ಯಾಳು
ಕಾಡುತ/ಗೆಳತಿ/ಛೇಡಿಸೆ/ಪಾರವ್ವ/
ಒಡೆಯನ/ಸನಿಹ/ಬಯಸ್ಯಾಳು
ನಕ್ಕರು/ಗೆಳೆತ್ಯಾರು/ಚಕ್ಕಡಿ/ಕಳಿಸ್ಯಾರು
ಪಕ್ಕದ/ಹಳ್ಳಿ/ಪಾರವ್ನ/ಒಡೆಯನ
ಪಕ್ಕನೆ/ಹೇಳಿ/ಕರೆಸ್ಯಾರು
ಇನಿಯನ/ಕರೆತಂದು/ಸನಿಹಕೆ/ಕೂಡಿಸೆ
ತನುಮನ/ಹಿಗ್ಗಿ/ನಲಿದಾಳು/ಪಾರವ್ನ
ಮನದಂತೆ/ಬಯಕೆ/ನಡೆದಿತ್ತು
ಶ್ರೀಮತಿ ವಿಜಯಾ ಜಿ ಶೆಟ್ಟಿ
ಸಿರ್ಸಿ (ಉತ್ತರ ಕನ್ನಡ )
ಮದರದಿ--ಸಂತೋಷದಿಂದ
ತಡವಿ--ಮುಟ್ಟಿ
ಪದಳದ--ಸುಖದ
ಮದವನ--ಗಂಡ
ನಗವ--ಆಭರಣವ
ಕಡವರ--ಬಯಕೆ
ಛೇಡಿಸೆ--ತಮಾಷೆ ಮಾಡಿ
-------------
ಬತ್ತದ ತೊರೆ ಸ್ನೇಹ ಬಳಗ
ತ್ರಿಪದಿಯಲ್ಲಿ ಕವನ ರಚನೆ ಸ್ಪರ್ಧೆಗಾಗಿ
ವಿಷಯ: ಹೇಮಂತ ಋತುವಿನ ಚಳಿ
ಶೀರ್ಷಿಕೆ: ಮಾಗಿಯ ಕಾಲದ ಚಿಗುರು
ಮಾಗಿಯ ಕಾಲಕ್ಕ ಹಸಿರೆಲೆ ಚಿಗುರೈತಿ
ಮಾಮರವೆಲ್ಲ ಹೂವ ಬಿಟ್ಟೈತಿ/ತಿಂಗಳದಾಗ
ಚೆಲುವೆಲ್ಲ ನಗನಗತಾ ನಿಂತೈತಿ
ಕುಕಿಲವು ಬಂದು ಇಂಪಾಗಿ ಹಾಡೈತಿ
ದುಂಬಿಯು ಸುಮವ ಮುತ್ತೈತಿ/ತಿರುತಿರುಗಿ
ಮಕರಂದವ ಹೀರಿ ನಲಿದೈತಿ
ಮೈ ಕೊರೆಯುವ ಚಳಿಯು ಬಂದೈತಿ
ಮೈಯೆಲ್ಲಾ ನಡುಗುತ್ತಾ ನಿಂತೈತಿ/ ನೋಡ
ರೈತನು ಹೊಲದತ್ತ ನಡದಾನ
ಸಂಕ್ರಾಂತಿ ಸುಗ್ಗಿ ಚಳಿಯಾಗ ಬಂದೈತಿ
ರಾಶಿಯ ಮಾಡುನು ಹಿರಿಹಿರಿ ಹಿಗ್ಗಿ/ ತಂಗಿ
ಸುಗ್ಗಿಯ ಕುಣಿತ ಕುಣಿಯೋಣ ಬಾರ
ಗಿಡದ ತುಂಬ ಹೂವು ಕಾಯಿ ತುಂಬೈತಿ
ಚೆಲುವಿನ ಭೂಮ್ತಾಯಿ ಹೊಳೆದಾಳ/ನೋಡವ್ವ
ಬಂಗಾರದ ಸಿರಿಯ ಹೊತ್ತೈತಿ
ಏನೆಂದು ಹೊಗಳಲಿ ಸೊಬಗಿನ ವೈಭವ
ನೋಡುವ ಕಣ್ಣ ರಂಗೇರ್ಯಾವ/ಮನವು
ಸುಳಿಯುತ್ತ ಹಾರ್ಯಾರಿ ತಿರುಗೈತಿ
ಶ್ರೀಮತಿ ಚೈತ್ರಾ ಆರ್ ಕೆ
--------------
ಸ್ಪರ್ಧೆಗಾಗಿ ತ್ರಿಪದಿ ಕವನ
ಬಸುರಿಯ ಬಯಕೆ
ಮೂರು ಸಂಜೀಹೊತ್ತು ಅಂಗಳಕ ನೀರ್ಹಾಕಿ
ದೀಪ ಮುಡಿಸಿ,,ಕೈಮುಗಿದು ದೇವಂಗ
ಮಲ್ಲಿಗೆ ಮಂಚದಿ ಚಂದ್ರಾಮ ಅರಳ್ಯಾನ
ಆಸರಿಕೆ ಅಳದೀಡ ಬ್ಯಾಸರಿಕಿ ಬಳದೀಡ
ಮ್ಯಾರಿ ತೊಳಿಯೇಳ ಕಾಸೇನ ನಿನಗಾಗಿ
ಪಿರೂತಿ ತುಂಬೀದ ಕರದ ಹಾಲ
ಉಂಡರ ಉಣ ಏಳ ಒಣ ರೊಟ್ಟಿ ನಿನಗ್ಯಾಕ
ಬಿಸಿ ಬಾನ ಕೆನಿ ಮೊಸರ ಮಾಡಿ ನಾ ಬಡಿಸೇನ
ಶಿವ ಒಲಿದು ಕೊಡತಾನ ಗಂಡ ಮಗನ
ಮೂರು ತಿಂಗಳಾತು ನೀ ಏನಬಯಸೀದಿ
ಮಾವಿನಕಾಯಿ ಮಿಡಿ ಉಪ್ಪಿನಕಾಯಿ ತಂದು
ಬಯಕೆ ತೀರಿಸೇನ,ಮಗಬರಲೀ
,ಮಾಗಿದ ಮಾವಿನ ಹಣ್ಣು ಬೆಣ್ಣಿ ಕಾಸಿದ ತುಪ್ಪ,
ಸಂಡಿಗಿ ಹಪ್ಪಳ ಕರಗಾಯಿ ಕರಿದು
ಮಾವಿನ ತ್ವಾಟದ ನರಳಾಗ ಉಣಬಾರ
ಹಸಿರು ಸೀರಿಉಟ್ಟು ,ಕೆಂಪ ಕುಬಸ ತೊಟ್ಟು
ಮಲ್ಲಿಗೆ ದಂಡಿನ ತುರುಬ ಮೂಗಿನ್ಯಾಗ ನತ್ತು,
ತವರೂರ ಸಿರಿಯ ಬಯಸ್ಯಾಳ
ಆರತಿ ಎತ್ತಾಗ ಬಾಡಿದ ಮೊಗ ಯಾಕ
ಮನದಾಗನ ಬಯಸಿ ಮನ ತೊಳಲಾಡಿದಾಗ,
ಮನದಿನಿಯನ ಕಂಡು ಬಯಕೆ ತೀರ್ಯಾವ
ಚಿನ್ಮಯಿ ಎಮ್ ಪಾಟೀಲ
ಧಾರವಾಡ
-------------
ಶೀರ್ಷಿಕೆ: ಬಸುರಿಯ ಬಯಕೆ
ಬಯಕೆ ಹತ್ಯಾವ ಎನಗ|ಬಯಸಿ ಬಂದೇನ ತಾಯಿ|
ಮಾಯದ ಕೈತುತ್ತು ಉಣಿಸವ್ವ | ಹಗಲೆಲ್ಲಾ|
ಬಯಕೆ ಕಾಡತಾವ ಹಡೆದವ್ವಾ||
ಗಸಗಸಿ ಪಾಯಸ| ಹಸನುಳ್ಳ ಜಹಂಗಿರ|
ಬಿಸಿ ಹೂರಣ ಹೋಳಿಗಿ ನೀ ಮಾಡ | ಹಡೆದವ್ವಾ|
ಹಸಿಮಾವು ತರಿಸಿ ತಿನಿಸವ್ವಾ||
ಯಾಲಕ್ಕಿ ಬಾದಾಮಿ| ಹಾಲ್ಹಾಕಿ ಕುದಿಸವ್ವಾ|
ಕಲ್ಲು ಸಕ್ಕರೆಯ ಬೆರೆಸವ್ವಾ | ಹದಮಾಡಿ|
ಮೆಲ್ಲಗೆ ತಂದು ಕುಡಿಸವ್ವಾ||
ಎಣ್ಣೆ ಬದನೆಕಾಯಿ| ಕೆನೆಮೊಸರು ಹುಳಿಬಾನ|
ಬೆಣ್ಣೆಯ ರೊಟ್ಟಿ ಸಿಹಿಬಾಳ | ಹಡೆದವ್ವಾ|
ಹುಣಸೆಯ ಬಯಕೆ ತೀರಿಸ||
ಅಲ್ಲ ಮಾಗಣಿ ಬೇರ| ಬೆಲ್ಲ ಬಳವಲ ಕಾಯಿ|
ನೆಲ್ಲಿಯಕಾಯಿ ಬಯಸೇತಿ |ನನ್ನಜೀವ|
ತಲೆ ತುಂಬಾ ಮಲ್ಲಿಗೆ ಮುಡಿಸವ್ವಾ||
ಕುಂತರ ಆಕಳಕಿ| ನಿಂತರ ತೂಕಡಿಕಿ|
ಒಂತರಾ ನನಗ ವಾಕರಿಕಿ | ಬರತೈತಿ|
ಅಂತಾದ ನನಗೇನಾಗೇತಿ||
ಬಣ್ಣದ ಚಾದರ|ಉಣ್ಣೆಗಂಬಳಿ ಹೊಚ್ಚ|
ಕಣ್ತುಂಬ ನಿದ್ದೆ ಮಾಡೇನ |ಹಡೆದವ್ವ|
ಹೊನ್ನದಾಭರಣ ಬೇಕೆನಗ||
✍️ ಬಾಹುಬಲಿ ಬಿರಾದಾರ ಪಾಟೀಲ ಜಮಖಂಡಿ
-----------
ಬಸುರಿಯ ಬಯಕೆ
ಗಂಡನ ಮನಿಯಾಗ ಗರತೀಯ ನೋಡವ್ವ/
ಬಯಸ್ಯಾಳ ಮಾವು ಕಸಗಾಯಿ/ ತಿನಲಾಕ
ಬಸರೀಗೆ ಆಸೆ ಕಾಡ್ಯಾವ//
ಪ್ರಕೃತಿ ಮಡಿಲಾಗ ಹಸಿರುಟ್ಟು ಬನದಾಗ/
ಪತಿರಾಯ ಬಂದು ಮಲ್ಲಿಗೆ/ ಮುಡಿಸ್ಯಾನ
ಪತ್ನೀಯ ಬಯಕೆ ಅರಿತಾನ//
ಅತ್ತೀಯ ಮನಿಯಾಗ ಮತ್ತೇನ ಬಯಸ್ಯಾಳ/
ಮುತ್ತಿನ ಪೆಂಡಿ ಕಾಲಾಗ/ ಇಡುವಂತ
ಕಂದನ ಬೇಡಿ ನಮಿಸ್ಯಾಳ//
ಸಜ್ಜೀಯ ರೊಟ್ಟಿ ಬಾನಣ್ಣ ಎಣಿಗಾಯಿ/
ಗುರೆಳ್ಳು ಚಟ್ನಿ ಕೆನಿಮೊಸರ/ ಬುತ್ತೀಯ
ತವರೀನ ದಾರಿ ನೋಡ್ಯಾಳ//
ನಿಸರ್ಗ ಸಿರಿಸುಖವ ಮನದಾಗ ನೆನೆದಾಳ/
ಗಂಗವ್ವನ ಝರಿ ಧುಮ್ಮಿಕ್ಕಿ/ ಹರಿದಾಗ
ಜಲಪಾತ ನೋಡಿ ನಲಿದಾಳ//
ಬೆಟ್ಟದ ಮ್ಯಾಲಿನ ಬಸವನ ಗುಡಿಚಂದ/
ಕರಕೊಂಡ ಹೋಗು ನನರಾಯ/ ದರುಶನಕ
ಹರಕೀಯ ಹೊತ್ತು ಬರೋಣ//
ಒಂಬತ್ತು ತಿಂಗಳಿಗೆ ಹಡೆದವ್ವನ ಬಯಸ್ಯಾಳ/
ಜೋಡೆತ್ತಿನ ಬಂಡಿ ಹೂಡೆಂದು/ ತವರೀಗೆ
ಕಳುಯೆಂದು ರಾಯಗ ಅರುಹ್ಯಾಳ//
ಶ್ರೀಮತಿ ಗಿರಿಜಾ ಹಿರೇಮಠ
-------------
ವಿಷಯ:-ಮುದ್ದು ಮಾದಯ್ಯ( ಭಕ್ತಿಭಾವ)
ಶೀರ್ಷಿಕೆ:-ಏಳುಮಲೆ ಒಡೆಯ
ಮಲ್ಲಿಗೆ ಹೂವಂತ ಮನಸುಳ್ಳ ಮಾದೇವ
ಹುಲಿಯ ಮೇಲೇರಿ ಬರುತಾನೆ//ಮಾದಪ್ಪ
ಚೆಲುವಿನ ನಗೆಬೀರಿ ನಿಂತಾವ್ನೆ//
ಏಳುಮಲೆ ಮೇಲೆ ಏಳ್ತಾನೆ ಶಿವಪ್ಪ
ಬೆಳ್ಳೀಯ ಹೊಂಬೆಳಕ ಸುರಿಸುತ್ತ//ಮಾದೇವ
ಬಾಳನ್ನು ಬೆಳಗಲು ಬಂದಾವ್ನೆ//
ಅಂದಾದ ಮಾದಪ್ಪ ಚೆಂದಾಗಿ ನಿಂತಾವ್ನೆ
ಬಂದಾನೊ ನೋಡು ಭುವಿಗಿಳಿದು//ಮಾದಯ್ಯ
ತಂದಾನೋ ಹರುಷ ಜನಕ್ಕೆಲ್ಲಾ//
ಹೊನ್ನಿನ ಮಂಟಪ ಚಿನ್ನದ ಹೂ ಕಳಸ
ಚೆನ್ನಾಗಿ ಹೊಳೆದಾವ್ನೆ ಮಾದೇವ//ನಮಗೆ
ಇನ್ನೂ ನೋಡೊಕೆ ಮನಸೈತೆ//
ಗಿರಿಯಿಂದ ಇಳಿದು ಸಿರಿಯನ್ನು ತರುತಾನೆ
ಮರೆಯದೇ ಬರುತೀನಿ ಜಾತ್ರೆಗೆ//ಮಾದಪ್ಪ
ನೊರೆವಾಲು ಎಡೆಯ ತರುತೀನಿ//
ಜೋಡೆತ್ತ ಬಂಡೀಲಿ ನೋಡಯ್ಯ ಹೂಹಣ್ಣು
ಓಡಿಬಾರಯ್ಯ ಗಿರಿಯಿಂದ//ಮಾದೇವ
ನೀಡಯ್ಯಾ ನಮಗೆಲ್ಲಾ ಸುಖವನ್ನ//
ಆನಂದಜಲ,ಶಿಕ್ಷಕಿ ತುರುವೇಕೆರೆ
---------------
ಬಸುರಿಯ ಹಂಬಲ
----------------------
ಬಸುರಿಗೆ ನೂರೆಂಟು ಬಯಕೆಯು ತಂಗ್ಯವ್ವ
ಹುಳಿಮಾವಲಿ ಆಸೆಯು ಮೂಡಿದೆ/ಅವಳಿಗೆ
ಹಸಿಮಣ್ಣಲಿ ಕಣ್ಣು ನೆಟ್ಟಿದೆ
ತವರಿನ ನೆನಪು ಕಾಡಿದೆ ಮನದಾಗೆ
ಅವ್ವಾನ ಆರೈಕೆ ಬಯಸಿದೆ/ಮನವು
ಪ್ರೀತಿಯ ಆಸರೆ ಬೇಡಿದೆ
ಹಗುರಾದ ಹಸಿರಿನ ಪಟ್ಟಿಯ ಸೀರೆಯು
ಕುಸುರಿಯ ಮಾಡಿದ ಬಳೆಗಳು/ಚೆಲುವಾಗಿ
ಮಲ್ಲಿಗೆ ದಂಡೆಯು ಮುಡಿಯಲ್ಲಿ
ಅಂಬೋಡೆ ಹೋಳಿಗೆ ಸವಿಯಲು
ಸೊಗಸು
ಬಗೆ ಬಗೆ ತಿನಿಸಿನ ಆಸೆಯು/ಬಸುರಿಗೆ
ಮಮತೆಯ ಕೈತುತ್ತಿನ ಬಯಕೆಯು
ಜೊತೆಯಾಗಿ ಇರಬೇಕು ತನ್ನವನು ಎಂದಿಗೂ
ಪ್ರೀತಿಯ ಹೊಳೆಯನ್ನು ಹರಿಸುತ್ತಾ/ಎಂದಳು
ಕೂಸಿನ ಕನಸನ್ನು ಕಾಣುತ್ತಾ
ಬೆಳೆದಿದೆ ಕೂಸು ದಿನದಿನಕೂ ಬಸಿರಲ್ಲಿ
ಮನಸಿನ ಕನ್ನಡಿ ಕಂಡಿದೆ/ಒಳಗಿಂದ
ಹಿಗ್ಗುತ್ತಾ ಸಡಗರ ಪಡುತಿದೆ
ದಿನ ತುಂಬಿದ ಬಸುರಲ್ಲಿ ಕನಸಿನ ಗೋಪುರ
ಕರುಳಿನ ಕುಡಿಗಾಗಿ ಕಾತರ/ಕಂದನ
ನಗುವಲ್ಲಿ ನಗುವಾಗೋ ಆತುರ
ಉಷಾ ದಿನೇಶ್
ಶಿವಮೊಗ್ಗ
--------------
ಶೀರ್ಷಿಕೆ : ಮಾಗಿಯ ಚಳಿಯಲಿ ತವರಲಿ ಮಡದಿ
ಹರಯಕ್ಕೆ ಬಿಸಿಬಿಸಿ ಹಿರಿಮಂದಿ ಕಸಿವಿಸಿ
ಧರೆಯಲಿ ಚಳಿಯು ಬಂದೈತೆ//ಮಾಗಿಯ
ಮರಗುಟ್ಟೋ ಚಳಿಯು ಬಿದೈತೆ.
ಚುಮುಚುಮು ಚಳಿಯಲ್ಲಿ ರಮಣೀಯ ಗಿಡಬಳ್ಳಿ
ಸುಮನವು ಅಲ್ಲಿ ನಗುತೈತಿ //ಮಡದಿಯ
ಗಮನದಿ ಮನಸು ಮುಳುಗೈತಿ.
ತಣ್ಣನೆ ಮೈಯಿಗೆ ನನ್ನಾಕೆ ಅಪ್ಪುಗೆ
ಇನ್ನಿಲ್ಲ ದಂತೆ ಕಾಡಿತ್ತು//ಹೇಗಿರಲಿ
ಕಣ್ಣಿಗೆ ನಿದ್ದೆ ಬರದೆಂದೂ
ಅತ್ತೆಯ ಮಗಳನ್ನು ಮತ್ತೊಮ್ಮೆ ನೋಡೋಕೆ
ಮೆತ್ತನೆ ನಾನು ಹೊರಟಿದ್ದೆ/ರಾತ್ರಿಲಿ
ಕತ್ತನ್ನು ಕೆಳಗೆ ಹಾಕೊಂಡು
ಹಿತ್ತಲ ದಾರಿಲಿ ಮುತ್ತಂತ ಇಬ್ಬನಿ
ಮತ್ತಲ್ಲಿ ನೋಡಿ ನಗುತಿತ್ತು//ನನಗಂತೂ
ಸುತ್ತೆಲ್ಲ ಚಂದ ಕಾಣ್ತಿತ್ತು
ದಾರಿಯ ಸವೆಸಿದ್ದೆ ಇರುಳಿನ ಚಳಿಯಲ್ಲಿ
ನಾರಿಯೇ ಎಂದು ಕರೆದಾಗ // ನನ್ನಾಕೆ
ಹಾರುತ್ತ ಒಡನೆ ಬಂದಳು
ಮಬ್ಬಿನ ನಸುಕಲ್ಲಿ ಕಬ್ಬಿನ ಗದ್ದೆಲಿ
ಇಬ್ಬರ ಕಣ್ಣೋಟ ಬೆರೆತೈತೆ // ಮದುವೆಯು
ಹಬ್ಬದ ಸೊಗಸು ತಂದೈತೆ
ಲತಾಗೌಡ , ಭಟ್ಕಳ
--------------
ಶೀರ್ಷಿಕೆ : ಪಡಿಯಚ್ಚು
ಗಂಡ ಹೆಂಡಿರ ನಡುವೆ ಇದ್ದಂತ ಪ್ರೇಮವು|
ಪಡಿಯಚ್ಚು ರೂಪ ಪಡೆದೈತೆ| ಕೇಳವ್ವ
ನಮ್ಮನೆ ಸಿಂಗಾರಿ ಬಸುರೀಯೋ||
ತಿಂದದ್ದು ಉಂಡದ್ದು ಕಕ್ಕಿಹೋದರ ಕೂಡ|
ತಿನ್ನುವ ಆಸೆ ಬಸುರೀಗೇ| ಕೇಳವ್ವ
ಬೇಕಾದ್ದು ಕೊಡುವೆ ತಿನ್ನೂ ಬಾ||
ಎರಡು ಜೀವಗಳು ಒಂದಾದ ಫಲವೀಗ|
ಹುಳಿ ತಿಂದು ಜೀವ ಎರಡಾಗ್ಲಿ| ಬಾರವ್ವ
ಹುಳಿಮಾವು ಉಪ್ಪು ಬೆರೆಸಿವ್ನಿ||
ಏನೇ ತಿನ್ನುವ ಬಯಕೆ ಬಂದರೆ ನೀ ಹೇಳು|
ತಂದು ಕೊಡುತಾನೆ ನಿನ್ನ ಗಂಡ| ನಿನಗಂತ
ಆಸೆ ಅಡಗಿಸಬ್ಯಾಡ ನೀನೀಗ ||
ನಿನ್ನ ಬಯಕೆ ಹಾಗೇ ಉಳಿಕೊಂಡರೆ ಕೇಳು|
ಹಸುಗೂಸ ಬಾಯಾಗೆ ಜೊಲ್ಲಂತೆ| ಬ್ಯಾಡವ್ವ
ನಿನ್ನಾಸೆ ತಡೆದೂ ನಿಲಬ್ಯಾಡ||
ಬಟ್ಟೆ ಬಂಗಾರ ಎಂದೂ ಬಯಸಲೆ ಇಲ್ಲ|
ಗಂಡನ ಮಡಿಲೇ ಸರ್ವಸ್ವವೂ| ನಿನಗೆ
ಅವನಾ ಮಡಿಲಲ್ಲೇ ಮಲಗವ್ವಾ||
ಮೊದಲ ಮಗುವನ್ನ ತವರಲ್ಲೇ ಹಡಿಬೇಕು|
ನಿನ್ನ ತವರು ಬಂದೈತೆ ಕರೆಯಾಕ| ಹೋಗವ್ವ
ಮುದ್ದಾದ ಮಗುಹೆತ್ತಿ ಬಾರವ್ವ||
--ಪ್ರೀತಿ ಮಣಿಕಂಠ ನಾಯ್ಕ
ಬಾಸೊಳ್ಳಿ, ಕುಮಟಾ
--------------
ಹೇಮಂತ ಋತುವಿನ ಚಳಿ
ಛಂದೋಬದ್ಧ ತ್ರಿಪದಿಯಲ್ಲಿ : ಹೇಮಂತನಾಗಮನ
ಚಳಿರಾಯ ಬಂದಾಗ ಬಳಿಯಲ್ಲಿ ಕಂಬಳಿ
ಸುಳಿಗಾಳಿ ಬೀಸಿ ಹೊಡೆದಾಗ| ಮೈಯಲ್ಲಿ|
ಚಳಿಯಿಂದ ನಡುಕ ಹೆಚ್ಚಾತು||
ಹೇಮಂತನಾಗಮ ಧಾಮಂತ ಹೆಚ್ಚಾಗಿ
ಭಾಮಿನಿ ಮನದಿ ಯೋಚನೆ| ಮಾಡುತ
ಕಾಮಾರಿ ಶಿವನ ನೆನೆದಾಳ||
ಕರೆಗಾಳಿ ಬೀಸಲು ಕೊರೆಯುವ ಮೈಚಳಿ
ಬೆರಗಿನ ಬೆಳಕ ಕಿರಣಕೆ| ಮನಸೋತು|
ಭರಪೂರ ಕೆಲಸ ಮಾಡ್ಯಾಳ||
ಬೋಳಾದ ಗಿಡಮರ ಢಾಳಾಗಿ ಚಿಗುರಲು
ನಾಳೆಯ ದಿನದಿ ಫಲಬಿಟ್ಟು ಮಾಗಿರಲು
ಬಾಳೆಲ್ಲಾ ಹಸನು ಕಂಡಾವ ||
ಚೈತ್ರದ ಮಾಸದಿ ಛತ್ರದಿ ಸಂಭ್ರಮ
ಮಿತ್ರರು ಕೂಟ ಸೇರುತ | ಜೊತೆಗೂಡಿ|
ಪತ್ರದಿ ಕುಶಲ ಕೇಳ್ಯಾರ||
ಬಿಸಿಲನ್ನು ಬರಮಾಡಿ ಕುಸಿಯದೆ ಬಾಳಲ್ಲಿ
ಹುಸಿನಗೆ ಬೀರಿ ಮಾತಾಡಿ | ಬೆರೆಯುತ|
ತುಸುವೊತ್ತು ಕಾಲ ಕಳೆದಾಗ||
ಹಂಡೆಯ ನೀರಿನ ಕೆಂಡದ ಮಜ್ಜನ
ಕಂಡಾಗ ಮನವು ಹಿಗ್ಗುತ | ತಾಸ್ಹೊತ್ತು|
ಥಂಡಿಯ ಕಳೆದ ಸಂತsಸ||
ಲಕ್ಷ್ಮೀ ವಿ ಭಟ್
ಮಂಜೇಶ್ವರ.
--------------
ವಿಷಯ : ಬಸುರಿ ಬಯಕೆ
ಶೀರ್ಷಿಕೆ :ನನ್ನ ತಂಗ್ಯಮ್ಮ
====================
ಸೀಮಂತ ಸಡಗರ ಮನೀಗಿ ಬಂದೈತಿ
ಮನೆಯಲ್ಲಿ ಹೆಂಗಳೆಯರು ತುಂಬ್ಯಾರ /ನನ ತಂಗಿ
ನಗು ನಗುತಾ ಮಾತಲ್ಲಿ ಹರಟ್ಯಾಳ
ಮನೆಮಂದಿ ಸಡಗರದಿ ಕುಣಿದಾರ
ತೊಳೆದು ಒಪ್ಪ ಓರಣ ಮಾಡ್ಯಾರ /ಚೆಲುವಿ
ನನ ತಂಗಿ ಕಣ್ತುಂಬಿ ನಿಂತ್ಯಾಳ
ಹಸಿರ ಸೀರೆಯ ಉಟ್ಯಾಳ
ಚೆಲುವಿಂದ ಅರಳಿ ನಿಂತ್ಯಾಳಾ /ತಂಗ್ಯಮ್ಮ
ಊರಿಗೆ ಸುಂದರಿ ಆದ್ಯಾಳ
ಹೋಳಿಗೆ ಚಕ್ಲಿ ಸಿಹಿ ಕಡುಬು ಬಡಿಸ್ಯಾರ
ಮುತ್ತೈದೆಯರೆಲ್ಲ ಹಳದಿ ಕುಂಕುಮ ಹಚ್ಯಾರ /ಚೆಲುವಿ
ನನ ತಂಗಿ ಸಂತಸದಿ ಕೂಡ್ಯಾಳ
ಊರ ಮುತ್ತೈದೆಯರೆಲ್ಲ ಸೇರಿ ಆರತಿ ಬೆಳಗ್ಯಾರ
ಲಕ ಲಕನೆ ಸೋಂಪಾಗಿ ಹೊಳೆದ್ಯಾಳ /ನನ ತಂಗಿ
ನಗು ನಗುತಾ ತಿಂಡಿಯ ಸವಿದ್ಯಾಳ
ಹೆಂಗಳೆಯರೆಲ್ಲ ಸೋಬಾನೇ ಹಾಡ್ಯಾರ
ಬಸುರಿ ಬಯಕೆಯ ತೀರಿಸ್ಯಾರ /ಚೆಲುವಿ
ನನ ತಂಗಿ ತುಂಬಾ ಖುಷಿ ಪಟ್ಟಾಳ
ಗಂಡನ ಮನೆಯಿಂದ ತವರಿಗೆ ಹೊರಟ್ಯಾಳ
ಬಸುರಿ ಬಯಕೆಯಲಿ ಮಿಂದ್ಯಾಳ/ತಂಗ್ಯಮ್ಮ
ಚಂದಾಕಿ ಮಗುವ ಹೆರಲು ಹೊರಟ್ಯಾಳ
✍️ ಪುಷ್ಪ ಪ್ರಸಾದ್ ಉಡುಪಿ
--------------
ವಿಷಯ: ಹೇಮಂತ ಋತುವಿನ ಚಳಿ
ಹೊಂದಿಸುತ ಬದುಕನ್ನು
ಆಗಸದ ತುಂಬೆಲ್ಲ ಹೊಗೆಯಂತೆ ಕಾಣುತಿದೆ
ಸಾಗದೆಯೆ ಹಿಡಿದು ಹೆಣಗಿದರೆ ಜೊತೆಯಲಿ/
ಸಾಗುತಲೆ ಬರದು ಹೊಂಬಿಸಿಲು//
ಗಡಗಡನೆ ನಡುಗುತಲಿ ದೇಹವನು ಮುಚ್ಚುತಲಿ
ದಡಬಡನೆ ಎದ್ದು ನೋಡ್ಯಾರ ದಿನಕರನ/
ಸಡಗರದಿ ಜಳಕ ಮಾಡ್ಯಾರ//
ಬಿಸಿಯಾದ ಪಾನೀಯ ಕುಡಿಯುತ್ತ ಚಳಿಗಾಗಿ
ಕಸಿವಿಸಿಲಿ ರೊಟ್ಟಿ ಮೆಲ್ಲುತಲಿ ರೈತಾರು/
ಮುಸುಮುಸುನೆ ನಗುತ ಹೊಂಟಾರು//
ಮಾಗಿಯಲಿ ತೂಗುತಲಿ ಬಾಗುತಲಿ ಜನರೆಲ್ಲ
ತೇಗುವರು ಎಣ್ಣೆ ತಿಂಡಿಯನು ತಿನ್ನುತಲಿ/
ಸಾಗುವರು ನರರು ಸಂತಸದಿ//
ತಾಯವ್ವ ಗಿಂಡಿಯೊಳು ನೀರನ್ನು ಹಿಡಕೊಂಡು
ಕಾಯಕವ ನೆನೆದು ಹಟ್ಟಿಯಾ ಕಪಿಲೆಯನು/
ಮಾಯಕದ ಹಾಲ ಹಿಂಡ್ಯಾಳ//
ತಂಪಾದ ನೊರೆಹಾಲ ನಾಗನಿಗೆ ಎರೆದಾರ
ಸೊಂಪಾಗಿ ಬಿರಿದ ಸಂಪಿಗೆಯ ಮುಡಿಗಿಟ್ಟು/
ಇಂಪಾಗಿ ಹಾಡು ಹಾಡ್ಯಾರ//
ಕಾಲಕ್ಕೆ ಸರಿಯಾಗಿ ಹೊಂದಿಸಿ ಬದುಕನ್ನು
ತಾಳುತಲಿ ನಾವು ಕಟ್ಟೋಣ ಜೀವನವ/
ಸಾಲವನು ಬಿಟ್ಟು ಬಾಳೋಣ//
✍️ರತ್ನಾ ಕೆ.ಭಟ್ ತಲಂಜೇರಿ
ದ.ಕನ್ನಡ,ಬಂಟ್ವಾಳ
--------------
ಜನಪದ ಶೈಲಿಯ ತ್ರಿಪದಿಯಲ್ಲಿ ಕವನ ರಚನೆ
ವಿಷಯ :ಬಸುರಿಯ ಬಯಕೆ
ಶೀರ್ಷಿಕೆ :ಕನಸಿನ ಕೂಸು
ಬಸುರಿಯ ಬಯಕೆ ಹುಳಿಕಾಯಿ ತಿನ್ನೋಕೆ
ಆಸೆಯ ಹುಟ್ಟಿತು ಮನಕೆ ಅಣ್ಣಯ್ಯ
ಬಂದಾನು ಮಿಡಿಕಾಯಿ ನೆಲ್ಲಿಕಾಯಿ ತಂದಾನು
ಒಂದೊಂದು ತಿಂಗಳು ಆಕೆಯ ಕನಸಿನ
ಜಗದೋಳು ಹೆಜ್ಜೆಯ ಇಟ್ಟಳು ಗೆಜ್ಜೆಯ
ಸದ್ದಿಗೆ ಕನಸನು ಕಟ್ಯಾಳು ಗೌರವ್ವ
ಅಮ್ಮನ ಮಡಿಲಲ್ಲಿ ಮಗುವಾಗಿ ಬಯಕೆಯ
ಹೇಳುವೆ ತಾಯ್ತನ ಕೇಳುತ್ತಾ ಹೇಳುತ್ತಾ
ಆನಂದಿಸಿ ಅನುಭವಿಸುವೆ ಬಸುರಿಯಾಗಿ
ಪತಿರಾಯನ ಕರೆದಳು ನಾಚುತ್ತ ನುಡಿದಳು
ಮೆಲ್ಲಗೆ ಕೇಳುವಳು ಮಲ್ಲಿಗೆ ಮುಡಿಸುವೆಯಾ
ಕಂದನ ಜೊತೆ ಮಾತನಾಡುವೆಯ ಪತಿದೇವ
ಹಸಿರು ಸೀರೆಯ ಉಡುವ ಕಾತುರ
ಬಸುರಿ ಸೀಮಂತಗೆ ಹಸಿರು ಬಳೆಯ
ಕೈತುಂಬಾ ಆಸೆಯ ಬುತ್ತಿ ಮನ ತುಂಬಾ
ಕೂಸು ಹುಟ್ಟುವ ಮುನ್ನವೆ ಹೆಸರಿಡುವ
ಕಾತುರ ಏನೆಂದು ಹೆಸರಿಡಲಿ ನನ್ನ ಕಂದನಿಗೆ
ಕನಸಿನ ರೆಕ್ಕೆಯ ಕಟ್ಟಿ ಗೌರಿಯು ನಿಂದಾಳ
ಬಸುರಿ ಬಯಕೆಗೆ ಕೊನೆಯಿಲ್ಲ ಆಸೆಗೆ ತವರು
ಮನೆಯ ಗೌರವಿಸಿ ಗಂಡನ ಮನೆಯ ಬೆಳಗಿಸಿ
ಎಲ್ಲರ ಕನಸನ್ನು ನನಸಾಗಿಸ್ಯಾಳು
ನವ್ಯ ಪ್ರಸಾದ್ ನೆಲ್ಯಾಡಿ
ಅಣ್ಣುಗುಂಡಿ
No comments:
Post a Comment
ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...