ಕವಿ- ಕೃತಿ ಪರಿಚಯ / ಮಕ್ಕಳ ಸಾಹಿತ್ಯ ಕೃತಿಗಳ ವಿಮರ್ಶೆ ಅಭಿಪ್ರಾಯಗಳು
ಕೃತಿ: ಮಲೆನಾಡಿನ ಮಡಿಲಿನಲ್ಲಿ.. ಹೊರನಾಡಿನ ಹೊನಲಲ್ಲಿ
ಪ್ರಕಾರ : ಪ್ರಬಂಧ ಹಾಗೂ ಪ್ರವಾಸ ಕಥನ
ಲೇಖಕರು : ವೀಣಾ ಕೃಷ್ಣಮೂರ್ತಿ , ದಾವಣಗೆರೆ
ಪ್ರಕಾಶನ: ಸಂಸ್ಕೃತಿ ಪ್ರಕಾಶನ, ದಾವಣಗೆರೆ
ಕವಿಪರಿಚಯ ಹಾಗೂ ಪುಸ್ತಕ ಪರಿಚಯ ಮಾಡಿದವರು
ಲೇಖಕಿ : ಸಿಂಧು ಭಾರ್ಗವ ಬೆಂಗಳೂರು
ಶ್ರೀಮತಿ ವೀಣಾ ಕೃಷ್ಣಮೂರ್ತಿ ಅವರು ತಾವು ಹುಟ್ಟಿದ ಊರು, ಮಲೆನಾಡಿನ ಸುಂದರ ಚಿತ್ರಣವನ್ನು ಓದುಗರಿಗೆ ಉಣಬಡಿಸಿದ್ದಾರೆ. ಮಲೆನಾಡಿನ ನಿಸರ್ಗ ವೈಭವವನ್ನು ಕಣ್ಕಟ್ಟುವಂತೆ ನಮಗೆ ತಿಳಿಸಿಕೊಟ್ಟಿದ್ದಾರೆ. ಅಲ್ಲಿನ ಜನರ ಬದುಕು, ಆಚಾರ-ವಿಚಾರಗಳು, ಹಬ್ಬ ಹರಿದಿನಗಳು, ಬೆಳೆಯುವ ಬೆಳೆಗಳು, ಕಾಡಿನಲ್ಲಿ ಸಿಗುವ ಹಣ್ಣುಗಳು, ತೋಟದಲ್ಲಿ ಬೆಳೆವ ಬೆಳೆಗಳು ಮರಗಳು ವಿವಿಧ ಜಾತಿಯ ಹೂವುಗಳು, ಹಣ್ಣುಗಳು, ತರಕಾರಿ , ವಿವಿಧ ಜಾತಿಯ ಪ್ರಾಣಿಪಕ್ಷಿ ಗಳು, ಹೀಗೆ ಒಂದೂ ಬಿಡದೆ ಎಳೆಎಳೆಯಾಗಿ ತಿಳಿಸಿದ್ದಾರೆ. ಆಗಿನ ಕಾಲದ ಮದುವೆ, ಮನೆಯಲ್ಲಿಯೇ ಮಾಡುವ ಹಪ್ಪಳ ಸೆಂಡಿಗೆ, ಮಾವಿನಕಾಯಿ ಉಪ್ಪಿನಕಾಯಿ, ಕಾಯಿರಸ ಉಪ್ಪಿಗೆ ಹಾಕಿಡುವ ಹಲಸಿನ ಸೊಳೆ, ಮಾವಿನ ಮಿಡಿ. ನೆನಪಿಸಿಕೊಂಡರೆ ಬಾಯಲ್ಲಿ ನೀರೂರುತ್ತದೆ. ಓದುವಾಗಲ ನಮ್ಮ ಬಾಲ್ಯದ ನೆನಪುಗಳು ಕಣ್ಣ ಎದರು ಮೂಡುತ್ತದೆ.
ಈ ಪುಸ್ತಕದ ವಿಶೇಷವೇ ಹಾಗೆ. ನಗರದ ಕಡೆಗೆ ಮುಖ ಮಾಡಿದ ಮಕ್ಕಳಿಗೆ ಮೊಮ್ಮಕ್ಕಳಿಗೆ ಕೈಪಿಡಿಯಾಗಲೆಂದು ಹೊರ ತಂದ ಕೃತಿ ಇದಾಗಿದೆ. ಹಾಗಾಗಿ ಬಾಲ್ಯದ ನೆನಪುಗಳ ನೆನಪಿಸಿಕೊಂಡು ಬಹಳ ತಾಳ್ಮೆಯಿಂದ ಅಕ್ಷರ ರೂಪಕ್ಕಿಳಿಸಿದ್ದಾರೆ ಎನ್ನಬಹುದು.
"ಘಮ್" ಎನ್ನುವ ಎಸಳುಗಳಿಂದ ಕೂಡಿದ ಕೆಂಡ ಸಂಪಿಗೆ ಎಂದರೂ ತಪ್ಪಾಗಲಾರದು.ಕಅಡಿನೊಳಗೋ, ತೋಟದಲ್ಲೋ ಆಗಸದೆತ್ತರಕ್ಕೆ ಬೆಳೆದು ನಿಂತ ಕೆಂಡಸಂಪಿಗೆ ಮರದಲ್ಲಿ ಒಂದೆರಡು ಹೂವರಳಿದರೂ ಸಾಕು, ಅದರ ಕಂಪು ನಾಸಿಕಕ್ಕೆ ಬಂದು ಹೊಡೆಯುತ್ತದೆ. ನಾವು ಅದರ ಜಾಡು ಹಿಡಿದು ಹೋಗುತ್ತೇವೆ. ಇದು ಕೂಡ ಹಾಗೆಯೇ. ಅದೇ ತರಹ ಈ ಪುಸ್ತಕ ಎನ್ನಬಹುದು. ಕರಾವಳಿ ಮತ್ತು ಮಲೆನಾಡು ಅವಳಿ ಜವಳಿಯರಂತೆ. ಎಲ್ಲ ಆಚರಣೆಗಳು, ಆಹಾರಕ್ರಮ, ಬೆಳೆಗಳು, ಹಬ್ಬ ಹಾಡಿ ದೀಪಾವಳಿ, ಯುಗಾದಿ ಹಬ್ಬಗಳು ಸೇರಿದಂತೆ ನಿಸರ್ಗ ಸೌಂದರ್ಯವನ್ನು ನಾವು ಕಣ್ತುಂಬಿಸಿಕೊಳ್ಳಬಹುದು. ಇಂತಹ ಪುಣ್ಯಭೂಮಿಯಲ್ಲಿ ಬಾಲ್ಯವನ್ನು ಕಳೆಯುವ ಭಾಗ್ಯ ಸಿಕ್ಕಿರುವುದೇ ಒಂದು ಸುಕೃತ. ತಮ್ಮ ಅಜ್ಜಿ ಮನೆಯ ಅನುಭವಗಳು, ಬಾಲ್ಯದಲ್ಲಿ ಹಿರಿಯರಿಂದ ದೊರೆತ ಸಂಸ್ಕಾರ, ಅಭಿರುಚಿ ಆಸಕ್ತಿಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ಇದನ್ನು ಓದಿದ ಪ್ರತಿಯೊಬ್ಬರೂ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳದೇ ಇರಲಾರರು. ಲೇಖಕಿ ವೀಣಾ ಕೃಷ್ಣಮೂರ್ತಿಯವರು ಚಿಕ್ಕಂದಿನಿಂದಲೂ ಸುಧಾ ಬಾಲಮಿತ್ರ ಚಂದಮಾಮದಲ್ಲಿ ಬರುವ ಕತೆ ಕವನಗಳ ಓದುವ ಅಭ್ಯಾಸ ಮಾಡಿಕೊಂಡಿದ್ದರು. ದಾವಣಗೆರೆಗೆ ಮದುವೆ ಆಗಿ ಬಂದರೂ, ಪತಿಯ ಕಾಯಕದ ನಿಮಿತ್ತ ಹತ್ತಾರು ಊರು ಸುತ್ತಿ, ನಿವೃತ್ತಿ ನಂತರ ಈಗ ದಾವಣಗೆರೆಗೆ ವಾಪಾಸಾಗಿದ್ದಾರೆ. ಇದರ ನಡುವೆ ಬರೆಯುವುದನ್ನು ಹವ್ಯಾಸವಾಗಿಸಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಕತೆ ಕವನ, ಲೇಖನಗಳನ್ನು ಚುಟುಕು ಹನಿಗವನಗಳನ್ನು ಬರೆಯುತ್ತಾರೆ. ಪ್ರಸ್ತುತ ದಾವಣಗೆರೆಯಲ್ಲಿ ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಂತರದ ಭಾಗವಾಗಿ ಪ್ರವಾಸ ಕಥನವನ್ನು ಕೈಗೆತ್ತಿಕೊಂಡಿರುವ ಲೇಖಕಿ ಮೊದಲ ಮಗಳ ಹೆರಿಗೆಗೆಂದು ನ್ಯೂಯಾರ್ಕ್ ನಗರದ ಕಡೆಗೆ ಪ್ರಯಾಣ ಬೆಳೆಸಿದ ಬಗ್ಗೆ ಸವಿವರವಾಗಿ ಬರೆದಿದ್ದಾರೆ. ದೊಡ್ಡಣ್ಣ ಎಂದೇ ಹೆಸರಾದ ಅಮೇರಿಕಾದಲ್ಲಿ ತಾವು ಕಂಡಂತೆ ತಮ್ಮ ಮೊದಲ ವಿಮಾನ ಯಾನದ ಅನುಭವ, ಮಗಳ ಮನೆಯಲ್ಲಿನ ಅನುಭವ ಹಾಗೂ ಅಲ್ಲಿನ ಪರಿಸರ ಜನರ ಆತ್ಮೀಯತೆ, ನಗರದ ರಸ್ತೆಯಲ್ಲಿನ ಸ್ವಚ್ಛತೆ, ಅಲ್ಲಿನ ಭಾರತೀಯರ ಲೋಕವನ್ನನು ತೆರೆದಿಟ್ಟಿದ್ದಾರೆ. ಅಷ್ಟೆ ಅಲ್ಲ ನಮ್ಮೆಲ್ಲ ದೇವರುಗಳು ದೇವಾಲಯ ಕಟ್ಟಿಸಿಕೊಂಡು ಅಮೇರಿಕಾದಲ್ಲಿ ಕೂಡ ನೆಲೆಸಿದ್ದಾರೆ. ಅಲ್ಲನ ಜನರ ಭಕ್ತಿ, ಆಧ್ಯಾತ್ಮಿಕ ಜೀವನಕ್ಕೆ ಒಗ್ಗಿಕೊಂಡ ಬಗೆ ಹೀಗೆ ಎಲ್ಲವನ್ನೂ ವಿಸ್ತಾರವಾಗಿ ಬರೆದಿದ್ದಾರೆ. ನಂತರದಲ್ಲಿ ಎರಡನೇ ಮಗಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ (ಎಂ.ಎಸ್) ಅದೇ ಅಮೇರಿಕಾಕ್ಕೆ ಬೊಫೆಲೋ ಯೂನಿವರ್ಸಿಟಿ ಗೆ ಸೇರಿದಾಗ ಮತ್ತೆ ಅಮೇರಿಕಾಗೆ ಹೋಗುವ ಅವಕಾಶ ದೊರಕಿದಾಗ ಭೇಟಿ ನೀಡಿ ಅನೇಕ ಸ್ಥಳಗಳನ್ನು ಪರಿಚಯಿಸಿದ್ದಾರೆ.
ಹಾಗೆ ಅಲ್ಲಿ ಕಂಡ ನಿಸರ್ಗ, ಉದ್ಯಾನವನ, ಜಲಪಾತ, ವರ್ಣಮಯ ಪಟಾಕಿ ಸಿಡಿಸುವ ಬಗೆ, ಮಾರುಕಟ್ಟೆ, ಮಾಲ್ ಗಳು ಅಲ್ಲಿ ಕೂಡ ನಮ್ಮ ದೇಶದ ತರಕಾರಿಗಳು, ಹಣ್ಣುಗಳು, ವಿವಿಧ ಬಗೆಯ ತಿನಿಸುಗಳು ಸಿಗುವುದು ಅಚ್ಚರಿ ಮೂಡಿಸಿತು ಎನ್ನುವರು. ವಿದೇಶಕ್ಕೆ ಹೋಗಿ ಬರುವ ಪ್ರತಿಯೊಬ್ಬರೂ ಹೇಳುವ ಮಾತು " ವಿದೇಶದಲ್ಲಿ ದುಡ್ಡು ಕೊಟ್ಟರೆ ನಮ್ಮ ದೇಶದಲ್ಲಿರುವ ಎಲ್ಲವೂ ಸಿಗುತ್ತದೆ. ತಂದೆ ತಾಯಿಯನ್ನು ಬಿಟ್ಟು..." ಎಂದು.
ಹೀಗೆ ತಮ್ಮ ಹತ್ತು ಹಲವು ಅನುಭವಗಳನ್ನು ಬರೆದು ಪುಸ್ತಕ ರೂಪ ನೀಡಿ ನಮಗೂ ಓದಲು ಅವಕಾಶ ಮಾಡಿದ ಲೇಖಕಿ ವೀಣಾ ಕೃಷ್ಣಮೂರ್ತಿ ಅವರಿಗೆ ಶುಭಹಾರೈಕೆಗಳು💐
No comments:
Post a Comment
ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...