Monday, May 9, 2022

ತಾಯಂದಿರ ದಿನಾಚರಣೆ ಅಂಗವಾಗಿ ಲೇಖನ

ಲೇಖನ: ತಾಯಿಯ ಆಯುರ್ ಹೆಚ್ಚಲಿ

ಲೇಖಕಿ: ಸಿಂಧು ಭಾರ್ಗವ ಬೆಂಗಳೂರು

ತಾಯಂದಿರ ದಿನಾಚರಣೆಯ ಅಂಗವಾಗಿ ಒಂದು ವಿಶೇಷ ಲೇಖನ



ಹೆಣ್ಣಿನ ಜನುಮ ಅಂದರೆ ಹಾಗೆನೇ. ತಾಯಿಯಾಗುವ ಖುಷಿ ಹೊಸ ಜೀವಕ್ಕೆ ಜನ್ಮನೀಡಿದಾಗ ಆಗುವ ಆನಂದ, ಆ ಅಮೃತಗಳಿಗೆ ಹೇಳಲು ಬರುವುದಿಲ್ಲ. ಸ್ವ-ಅನುಭವವಾಗಬೇಕು. ಹಾಲೂಡಿಸುವುದು,ಮೃದು ಹತ್ತಿ ಬಟ್ಟೆಯಿಂದ ಸುತ್ತಿಕಟ್ಟಿ ಮಲಗಿಸುವುದು, ಪೌಡರು ಕಾಡಿಗೆ ಹಚ್ಚಿ ಅಂದ ನೋಡುವುದು, ಎಳೆ ಮಗು ಪಿಳಿಪಿಳಿ ಕಣ್ಣುಗಳಿಂದ ತಾಯಿಯ ನೋಡುವಾಗ ಆಗುವ ಹರ್ಷ, ಗಂಡನಿಗೆ ತಂದೆಯಾದೆನೆಂಬ ಸಂತೋಷ ಅದನ್ನು ಎತ್ತಿ ಆಡಿಸುವಾಗ ಆಗುವ ಪುಳಕ. ತೊಟ್ಟಿಲಿನಲ್ಲಿ ಮಲಗಿದ ಮಗು ನಿದ್ದೆ ಕಣ್ಣಿನಲ್ಲಿ ನಗೆ ಬೀರುವುದು, ಹಾಲು ಕುಡಿಯುತ್ತಿರುವಂತೆ ಕನವರಿಸುವುದನ್ನು ನೋಡುವುದೇ ಸೊಬಗು. ಅದೊಂದು ಪುಟ್ಟ ಪ್ರಪಂಚ, ಆ ಗುಬ್ಬಿ ಗೂಡಿನಲ್ಲಿ ಪ್ರೀತಿಯೊಂದೇ ಸುಳಿಸಾಡುತ್ತ ಇರುತ್ತದೆ.



ಮಗಳಿಗೆ ಯೋಗ್ಯ ವರನನ್ನು‌ ನೋಡಿ ಮದುವೆ ಮಾಡಿಸಿ ವರುಷದೊಳಗೆ ಮಡಿಲು ತುಂಬಲಿ ಎಂದು ಬಾಯಿ ತುಂಬಾ ಹಾರೈಸಿ ಕಳುಹಿಸುವ ಹೆತ್ತವರನ್ನು ನಾವು ಮೊದಲೆಲ್ಲ ಕಾಣುತ್ತಿದ್ದೆವು. ಅವರಿಗೆ ಮದುವೆಗೆ ಆದ ಖರ್ಚಿನ ಬಗ್ಗೆ ಯೋಚನೆಯಿರುವುದಿಲ್ಲ. ಮಗಳು ಬಸುರಿಯಾಗಿ ಸೀಮಂತ ಮುಗಿಸಿ ಏಳೆಂಟು ತಿಂಗಳಲ್ಲಿ ಬಾಣಂತನಕ್ಕೆ ಮತ್ತೆ ಬಂದಾಗ ಇನ್ನಷ್ಟು ಖರ್ಚಾಗುತ್ತದೆ ಎಂಬ ಭಾವನೆ ಮೂಡಿ ಮೂಗು ಮುರಿಯುವುದಿಲ್ಲ. ಕಷ್ಟಗಳಿದ್ದರೂ ತೋರಕೊಡುವುದಿಲ್ಲ. ಮೊಮ್ಮಗುವಿನ ಆಗಮನ ಆ ಸಂತೋಷದ ಎದುರು ಹಣವು ನಗಣ್ಯ ಎಂದೇ ಭಾವಿಸುತ್ತಾರೆ. ಅಳಿಯನನ್ನು ಮಗನಂತೆ ಭಾವಿಸಿ ಆದರದಿಂದ ನೋಡಿಕೊಳ್ಳುತ್ತಾರೆ. ಹಗಲು ರಾತ್ರಿ ನಿದಿರೆ ಬಿಟ್ಟು ತಾಯಿ ಮಗುವ ನೋಡುಕೊಳ್ಳುವ ಬಾಣಂತನ ಕೆಲಸ ತುಂಬಾ ಕಷ್ಟ ಆದರೂ ಬಹಳ ಪ್ರೀತಿಯಿಂದಲೇ ಮಾಡುತ್ತಾರೆ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಮಕ್ಕಳು 26 -28-30 ವರುಷದ ತನಕ ದುಡಿಯುತ್ತಲೇ ಇರುತ್ತಾರೆ. ಮದುವೆ ಎಂಬ ಹೆಸರು ಉಚ್ಚರಿಸಲು ಬಿಡುವುದಿಲ್ಲ. ನಂತರ ಹುಡುಗನ ಹುಡುಕಿ ಮದುವೆಯ ಬಂಧನಕ್ಕೆ ಒಳಗಾಗುತ್ತಾರೆ. ತದನಂತರದಲ್ಲಿ ಮಗುವು ಬೇಡ, ಸದ್ಯಕ್ಕೆ ಬೇಡ ಎಂಬ ರಾಗ.. ಎರಡು ಮೂರು ವರುಷ ಬೇಡ ಎಂದು ಮುಂದೂಡುತ್ತಾರೆ. ಇತ್ತೀಚೆಗೆ ಮದುವೆ ಮಾಡಿಸುವ ಪುರೋಹಿತರು ಸಹ "ಪುತ್ರ ಸಂತಾನ ಪ್ರಾಪ್ತಿರಸ್ತು" ಎಂದು ವರುಷದೊಳಗೆ ಗಂಡು ಮಗುವಿನ ಜನ್ಮ ನೀಡಿ ಎಂದು ಮನತುಂಬಿ ಆಶೀರ್ವಾದ ಮಾಡಲು ಸಹ ಹಿಂಜರಿಯುವ ಕಾಲ ಬಂದಿದೆ. ಕಾರಣ, ಎದುರಿಗೇ ಮುಖಕ್ಕೆ ಹೊಡೆದಂತೆ ಮಧುವರನ ಕಡೆಯವರು ಬೈಯುವರು ಎಂಬ ಭಯ. ಅಂತಹ ಘಟನೆಗಳ ನಡೆದಿವೆ ಕೂಡ. ವರುಷದೊಳಗೆ ಯಾಕೆ ಬೇಕು ಮಗು? ಅದೆಲ್ಲ ತಲೆಬಿಸಿ ಜವಾಬ್ದಾರಿ ಕೆಲಸ. ಹೊಸ ಮದು ಮಕ್ಕಳು, ಗಂಡಹೆಂಡತಿ ಒಂದಷ್ಟು ವರುಷ ಜಾಲಿಯಾಗಿರಲಿ.  ದುಡಿಯಲಿ, ಹಣ ಮಾಡಲಿ ಎಂಬುವುದಷ್ಟೆ ಅವರ ಅಭಿಪ್ರಾಯ.





ಅದೆಲ್ಲ ಒತ್ತಟ್ಟಿಗಿರಲಿ. 
 ಅಮ್ಮಾ... ನೀನಂತು ಬಾಣಂತನ ನೋಡಿಕೊಳ್ಳುವುದರಲ್ಲಿ ಪಿ.ಎಚ್.ಡಿ ಮಾಡಿಬಿಟ್ಟೆ. ಮೂರು ಹೆಣ್ಣುಮಕ್ಕಳ ಹಡೆದ ನೀವು (ಹೆತ್ತವರು) ಈಗ ಅರವತ್ತರ ನಿವೃತ್ತಿ ವಯಸ್ಸಿನಲ್ಲಿ  ಐದನೇ ಬಾಣಂತನ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದೀರಿ. ಎಂತಹ ಅದ್ಭುತ ಕಾರ್ಯ‌. ಅಮ್ಮ ನಿಮಗೆ ಇನ್ನಷ್ಟು ಶಕ್ತಿ ಬರಲಿ. ಹಗಲು ರಾತ್ರಿ ನಿದಿರೆ ಬಿಟ್ಟು ಆ ಎಳೆಶಿಶುವಿನ ಆರೈಕೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಬಾಣಂತಿಯ ಆರೈಕೆ, ಬಾಣಂತಿ ಮದ್ದು, ಅಡುಗೆ ಮಾಡುವುದು, ಮಗುವಿನ ಉಚ್ಚೆ ಕಕ್ಕ ಬಟ್ಟೆ ಒಗೆಯುವುದು, ಬಾಣಂತಿಯ ಸ್ನಾನ ಮಾಡಿಸುವುದು, ಎಳೆ ಬೆಣ್ಣೆ ಮಗುವಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುವುದು. ತನುವಿನಲ್ಲಿ ಶಕ್ತಿ ಕುಂದಿರುವ ಬಾಣಂತಿ ಮಗಳಿಗೆ ಧೈರ್ಯದ ಮಾತನ್ನು ಹೇಳುವುದು ಜೊತೆಗೆ ಇರುವುದು ಇಷ್ಟೆಲ್ಲದರ ನಡುವೆ ಪತಿಯ ಆರೈಕೆ ಮಾಡುವುದು. ಅಬ್ಬಾ...!! ಅಮ್ಮ, ಈ ಅನುಭವ ನಮಗೆಲ್ಲಿದೆ ?! ಹೇಳಿ.

ಅಮ್ಮ ನಿಜಕ್ಕೂ ನಿಮ್ಮಂತಹ ಹೆತ್ತವರ ಪಡೆದ ನಾವೇ ಭಾಗ್ಯವಂತರು. ಅಮ್ಮ ನಿನಗೆ ಇತ್ತೀಚಿಗೆ ಧೈರ್ಯ ಸಾಕಾಗುತ್ತಿಲ್ಲ. ಇಳಿವಯಸ್ಸಿನವಳಾದ ಕಾರಣ ಎದೆಯೊಳಗೆ ಪುಕಪುಕ ಶುರುವಾಗುತ್ತಿದೆ. ಬಾಣಂತಿಗೆ ಏನಾದರು ಆದರೆ ಎಂದು ಭಯ ಪಡುವೆ. ಅಧಿಕ ರಕ್ತದೊತ್ತಡ, ಮಧುಮೇಹ, ಥೈರಾಯ್ಡ್ ಹೀಗೆ ಒಂದಷ್ಟು ಖಾಯಿಲೆಗಳು ಮೈತುಂಬ ಅಂಟಿಕೊಂಡಿವೆ. ಅದಕ್ಕೆ ಇರಬಹುದು. ದೇಹದಲ್ಲಿ ಶಕ್ತಿ ಕುಂದಿಹೋಗಿದೆ. ನಿನ್ನನ್ನೆ ನೋಡಿಕೊಳ್ಳಲು ಒಬ್ಬರ ಸಹಾಯಬೇಕು. ನೆನಪಿನ ಶಕ್ತಿಯೂ ಕಡಿಮೆಯಾಗಿದೆ. ಆದರೆ ಯಾವುದನ್ನು ತೋರಿಸಿಕೊಳ್ಳದೇ ಉತ್ಸಾಹದಿಂದ ಬಹಳ ಪ್ರೀತಿಯಿಂದಲೇ ಮಗಳ ಬಾಣಂತನ ನೋಡಿಕೊಳ್ಳುತ್ತಿರುವೆ. ಅವಳಿಗೆ ಏನೇನು ಮಾಡಬೇಕು ಎಂದು ಅಕ್ಕಪಕ್ಕದವರ ಹತ್ತಿರ ಕೇಳಿ ತಿಳಿದುಕೊಳ್ಳುವೆ. ನಿನ್ನ ಸಹಾಯಕ್ಕೆ ನಾನು ಅಕ್ಕ ಇಬ್ಬರೂ ಇದ್ದೇವೆ. ನೀನು ಹೆದರಬೇಡ. ನಮ್ಮ ತಂಗಿಯ ಬಾಣಂತನ ಜವಾಬ್ದಾರಿ ನಮ್ಮದೂ ಆಗಿದೆ. ನಾವೆಲ್ಲರೂ ಬಹಳ ಕಾಳಜಿ ಪ್ರೀತಿ ವಿಶ್ವಾಸದಿಂದ ಮುಂದೆಯೂ ಬಾಳುತ್ತೇವೆ. ದ್ವೇಷ, ಅಸೂಯೆಗೆ ಎಡೆಮಾಡಿಕೊಡದೆ ಒಬ್ಬರ ಕಷ್ಟಕ್ಕೆ ಒಬ್ಬರು ಸ್ಪಂದಿಸಿ ಒಗ್ಗಟ್ಟಿನಿಂದ ಇರುತ್ತೇವೆ. ಹಣಕ್ಕಿಂತ ಗುಣವೇ ಮೇಲು ಎಂದು ನೀವೇ ನಮಗೆ ಹೇಳಿಕೊಟ್ಟಿದ್ದೀರಿ.

- ಸಿಂಧು ಭಾರ್ಗವ ಬೆಂಗಳೂರು

ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಜನಮಿಡಿತ ದಿನಪತ್ರಿಕೆ ಹಾಗೂ ಪ್ರತಿನಿಧಿ ದಿನಪತ್ರಿಕೆ ಗೆ ವಂದನೆಗಳು🌹



No comments:

Post a Comment

ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...