Tuesday, July 19, 2022

ಮಳೆಯೆಂದು ಮರುಗಿದರೆ ಮಳೆಗಾಲ ಷಟ್ಪದಿಯಲ್ಲಿ ರಚನೆ

 

Google image source

ಕವನ : ಮಳೆಯೆಂದು ಮರುಗಿದರೆ...


ಇಳೆಯ ದಾಹ ನೀಗಲೆಂದು

ಮಳೆಯು ಬಿಡದೆ ಸುರಿಯುತಿರಲು

ಜಳಕಮಾಡಿ ಕೊಳೆಯತೊಳೆಯಿತಿಂದು ಮರಗಳು

ಎಳೆಯ ಚಿಗುರು ನಲುಗಿದಾಗ 

ಬಳಿಯಲಿರುವ ತರುಗಳೆಲ್ಲ

ಜಲದ ಭರವ ಕಂಡು ಭೀತಿಗೊಂಡು ನಿಂತವು ||


ಯಾರ ಶಾಪ ಯಾರ ಕೋಪ

ತೋರಿ ಬಂತು ಭಾರಿ ತಾಪ

ದಾರಿ ಯಾವುದೀಗವೆಮಗೆ ಜೀವವುಳಿಸಲು

ನೂರು ಕೊಳಗ ನೀರನೆತ್ತಿ

ಜೋರಿನಿಂದ ಸುರಿದ ಹಾಗೆ

ಧಾರೆಯಾಗಿ ಹರಿದು ಬರಲು ಸೂರು ಜಾರಿತು ||


ಜೀವಜಂತುಗಳಲಿ ತನಗೆ

ದೇವನಿತ್ತ ವರವಿದೆಂಬ

ಭಾವದಿಂದ ಮನುಜ ಮಾತ್ರ ಮೆರೆಯುತ್ತಿದ್ದನು

ಯಾವ ಭೂಮಿ ಗಾಳಿ ನೀರು

ಕಾವುದೆನ್ನನೆಂಬ ನಿಜವ

ನಾವ ನರನು ತಿಳಿದು ನಡೆವ ಬಾಳ ಪಥದಲಿ ||


ನೆಲವ ಬಗೆದ ಜಲವ ಕುಡಿದ

ಬೆಳೆದು ನಿಂತ ಮರವ ಕಡಿದ

ಛಲವ ತೊಟ್ಟು ಬೆಟ್ಟಗುಡ್ಡವನ್ನು ಕೊರೆದನು

ಒಲಿದ ಭೋಗ ಭಾಗ್ಯವೆಲ್ಲ

ನೆಲದ ಕರುಣೆಯೆಂಬ ಸತ್ಯ

ಮಲಿನ ಮನಕೆ ಹೊಳೆಯದಾಯ್ತು ಮಾಯೆಯಿಂದಲಿ ||


ತಾನು ಮಾಡಿದಂಥ ಕರ್ಮ

ಸೂನುಗಳನು ಕಾಡಲಿಹುದು

ಯಾನ ಗೈವ ವೇಳೆಯಲ್ಲಿ ನೋವನುಣಿಸುತ 

ನಾನು ನನ್ನದೆಂಬ ಮೋಹ

ಹಾನಿಗೊಳಿಸಿತಲ್ಲ ಬುವಿಯ

ಬಾನ ಮೋಡ ಕರಗಿ ಸುರಿಯೆ ನಿತ್ಯ ಸಂಕಟ ||


ಎಲ್ಲ ಬಲ್ಲ ಮನುಜನಿಲ್ಲ

ಸೊಲ್ಲನುಲಿಯೆ ಕೇಳನಲ್ಲ

ನಿಲ್ಲಿಸಯ್ಯವೆನಲು ಕಿವಿಯ ಮುಚ್ಚಿಕೊಳುವನು 

ಬಲ್ಲ ತಂತ್ರವನ್ನು ಬಳಸಿ

ಸಲ್ಲದಂಥ ಕಾರ್ಯವೆಸಗಿ 

ಮೆಲ್ಲ ತಾನು ತನ್ನ ಪತನ ತಂದುಕೊಳುವನು ||


ಕಂಡು ಕೇಳದಂಥ ಸೋನೆ

ಮೊಂಡು ಹಿಡಿದು ಕಾಡುತಿರಲು

ಚೆಂಡಿನಾಟದಲ್ಲಿ ಸೋಲು ಖಚಿತ ಮನುಜಗೆ 

ಉಂಡು ತಿಂದು ಸುಖವ ಹೊಂದಿ

ಭಂಡನಾಗಿ ಪುಂಡನಾಗಿ 

ಮಂಡೆ ಕೆಟ್ಟ ನರನ ಕರ್ಮ ಬೆನ್ನು ಹತ್ತಿದೆ ||


✍️ವಿಹಾರಿ

ಹರಿನರಸಿಂಹ ಉಪಾಧ್ಯಾಯ

No comments:

Post a Comment

ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...